ಆಸ್ಕರ್ ನಾಮಿನೇಶನ್ ರೇಸ್‌ನಲ್ಲಿ ಜಾನ್ವಿ ಕಪೂರ್-ಇಶಾನ್ ನಟನೆಯ ʻಹೋಮ್‌ಬೌಂಡ್ʼ
ಜಾನ್ವಿ ಕಪೂರ್, ಇಶಾನ್ ಜೊತೆಗೆ ವಿಶಾಲ್ ಜೇಥಾ ನಟಿರುವ ನೀರಜ್ ಘಯ್ಯಾನ್ ನಿರ್ದೇಶಿಸಿರುವ 'ಹೋಮ್‌ಬೌಂಡ್' ಸಿನಿಮಾ ಆಸ್ಕರ್ ನಾಮಿನೇಶನ್‌ಗೆ ಶಾರ್ಟ್‌ಲಿಸ್ಟ್ ಆಗಿದೆ.
ʼಹೋಮ್‌ಬೌಂಡ್ʼ ಸಿನಿಮಾದ ದೃಶ್ಯ
ಬಾಲಿವುಡ್ ನಟಿ ಜಾನ್ವಿ ಕಪೂರ್, ಇಶಾನ್ ಖಟ್ಟರ್ ಜೊತೆಯಾಗಿ ಮತ್ತೆ ತೆರೆ ಮೇಲೆ ಕಾಣಿಸಿಕೊಂಡಿರುವ 'ಹೋಮ್‌ಬೌಂಡ್' (Homebound) ಸಿನಿಮಾ ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಮನ್ನಣೆ ಗಳಿಸಿದೆ. ಇದೀಗ ಈ ಸಿನಿಮಾ ಆಸ್ಕರ್ ರೇಸ್‌ನಲ್ಲೂ ಇದೆ. ಜಾನ್ವಿ, ಇಶಾನ್ ಜೊತೆಗೆ ವಿಶಾಲ್ ಜೇಥಾ ನಟಿರುವ ಈ ಚಿತ್ರವನ್ನು ನೀರಜ್ ಘಯ್ಯಾನ್ ನಿರ್ದೇಶಿಸಿದ್ದಾರೆ. 'ಹೋಮ್‌ಬೌಂಡ್' (Homebound) ಸಿನಿಮಾ 98ನೇ ಅಕಾಡೆಮಿ ಪ್ರಶಸ್ತಿಗಳಿಗೆ ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ಆಯ್ಕೆಯಾಗಿದೆ. ಇದೀಗ ಆಸ್ಕರ್ ಅಂಗಳದಲ್ಲಿ ಕೂಡ ಈ ಚಿತ್ರಕ್ಕೆ ಮನ್ನಣೆ ಸಿಗಲಿದೆ ಎನ್ನಲಾಗುತ್ತಿದೆ.
ಇಬ್ಬರು ಗ್ರಾಮೀಣ ಪ್ರದೇಶದ ಸ್ನೇಹಿತರು ಮತ್ತು ಅವರ ಆಕಾಂಕ್ಷೆಗಳ ಕಥಾ ಹಂದರವಿರುವ ಈ ಚಿತ್ರ 14 ಚಿತ್ರಗಳ ಜೊತೆಗೆ ಆಸ್ಕರ್ ನಾಮಿನೇಶನ್‌ಗೆ ಶಾರ್ಟ್‌ಲಿಸ್ಟ್ ಆಗಿದೆ. ಇನ್ನು ಈ ಚಿತ್ರ ಅತ್ಯುತ್ತಮ ಅಂತರರಾಷ್ಟ್ರೀಯ ವೈಶಿಷ್ಟ್ಯ ವಿಭಾಗದಲ್ಲಿ ಆಯ್ಕೆಯಾಗಿದೆ.
ಕರಣ್ ಜೋಹರ್ ಸಂತಸ
ಇನ್ನು ತಮ್ಮ ನಿರ್ಮಾಣದ ಚಿತ್ರ ಆಸ್ಕರ್ ರೇಸ್‌ನಲ್ಲಿರುವ ವಿಚಾರ ನಿರ್ಮಾಪಕ ಕರಣ್ ಜೋಹರ್ ಖುಷಿ ತಂದಿದೆ. ಈ ಬಗ್ಗೆ ಅವರು ಪೋಸ್ಟ್ ಮಾಡಿದ್ದು, 'ಹೋಮ್‌ಬೌಂಡ್ ಸಿನಿಮಾದ ಪ್ರಯಾಣದ ಬಗ್ಗೆ ನಾನು ಎಷ್ಟು ಹೆಮ್ಮೆಪಡುತ್ತಿದ್ದೇನೆ ಎಂಬುದು ನನಗೆ ಮಾತ್ರ ಗೊತ್ತು.. ತುಂಬಾ ಉತ್ಸುಕನಾಗಿ ಚಂದ್ರನ ಮೇಲೆ ಇದ್ದೇನೆ ಎನಿಸುತ್ತಿದೆ. ಇದು ಹೆಮ್ಮೆಯ ಕ್ಷಣ. ನಮ್ಮ ಹಲವು ಕನಸುಗಳನ್ನು ನನಸಾಗಿಸಿದ ನೀರಜ್ ಘಯ್ಯಾನ್ ಅವರಿಗೆ ಧನ್ಯವಾದಗಳು. ಕೇನ್ಸ್ ನಿಂದ ಆಸ್ಕರ್ ಕಿರುಪಟ್ಟಿಯಲ್ಲಿ ಸ್ಥಾನ ಪಡೆಯುವವರೆಗೆ ಇದು ತುಂಬಾ ಅಗಾಧವಾದ ಪ್ರಯಾಣವಾಗಿವೇ ಆಗಿದೆ. ಈ ವಿಶೇಷ ಚಿತ್ರದ ಸಂಪೂರ್ಣ ಪಾತ್ರವರ್ಗ ಮತ್ತು ಸಿಬ್ಬಂದಿ ಮತ್ತು ತಂಡಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಸದ್ಯದಲ್ಲೇ 'ಹೋಮ್‌ಬೌಂಡ್' ಚಿತ್ರವು 'ನೆಟ್‌ಫ್ಲಿಕ್ಸ್'ನಲ್ಲಿ ಪ್ರಸಾರವಾಗಲಿದೆ" ಎಂದು ತಿಳಿಸಿದ್ದಾರೆ.
ನಾಮಿನೇಶನ್‌ಗೆ ಶಾರ್ಟ್‌ಲಿಸ್ಟ್ ಆದ ಸಿನಿಮಾಗಳು
ಹೋಮ್‌ಬೌಂಡ್ ಸಿನಿಮಾದ ಜೊತೆಗೆ ಇತರ ೧೪ ಸಿನಿಮಾಗಳು ನಾಮಿನೇಶನ್ ಆಗಿವೆ. ಜಪಾನ್‌ನ "ಕೊಕುಹೊ", ಜೋರ್ಡಾನ್‌ನ "ಆಲ್ ದಟ್ಸ್ ಲೆಫ್ಟ್ ಆಫ್ ಯು", ನಾರ್ವೆಯ "ಸೆಂಟಿಮೆಂಟಲ್ ವ್ಯಾಲ್ಯೂ", ಪ್ಯಾಲೆಸ್ಟೈನ್‌ನ "ಪ್ಯಾಲೆಸ್ಟೈನ್ 36", ದಕ್ಷಿಣ ಕೊರಿಯಾದ ಹಿಟ್ "ನೋ ಅದರ್ ಚಾಯ್ಸ್", ಸ್ಪೇನ್‌ನ "ಸಿರಾಟ್", ಸ್ವಿಟ್ಜರ್ಲೆಂಡ್‌ನ "ಲೇಟ್ ಶಿಫ್ಟ್", ತೈವಾನ್‌ನ "ಲೆಫ್ಟ್-ಹ್ಯಾಂಡೆಡ್ ಗರ್ಲ್" ಮತ್ತು ಟುನೀಷಿಯನ್ ನಾಟಕ "ದಿ ವಾಯ್ಸ್ ಆಫ್ ಹಿಂದ್ ರಜಬ್" ಈ ಪಟ್ಟಿಯಲ್ಲಿವೆ.
ಚಿತ್ರದ ಟ್ರೇಲರ್ ಇಲ್ಲಿದೆ
ಸಿನಿಮಾ ಕಥಾಹಂದರ
'ಹೋಮ್‌ಬೌಂಡ್ ಈ ಚಿತ್ರವು ಪತ್ರಕರ್ತ ಬಶರತ್ ಪೀರ್ ಅವರ "ಟೇಕಿಂಗ್ ಅಮೃತ್ ಹೋಮ್" ಎಂಬ ದಿ ನ್ಯೂಯಾರ್ಕ್ ಟೈಮ್ಸ್ ಲೇಖನದಿಂದ ಸ್ಫೂರ್ತಿ ಪಡೆದಿದೆ. ಹಾಲಿವುಡ್ ದಂತಕಥೆ ಮಾರ್ಟಿನ್ ಸ್ಕಾರ್ಸೆಸೆ ಈ ಚಿತ್ರದಲ್ಲಿ ಕಾರ್ಯನಿರ್ವಾಹಕ ನಿರ್ಮಾಪಕರಾಗಿ ನಟಿಸಿದ್ದಾರೆ. ಇದು ಮುಸ್ಲಿಂ ಮತ್ತು ದಲಿತ ಹುಡುಗರ ನಡುವಿನ ಬಾಲ್ಯದ ಸ್ನೇಹವನ್ನು ಚಿತ್ರಿಸುತ್ತದೆ. ದೀರ್ಘಕಾಲದಿಂದ ತಮ್ಮ ಸಮುದಾಯಗಳಿಗೆ ನಿರಾಕರಿಸಲ್ಪಟ್ಟಿರುವ ಘನತೆಯನ್ನು ತಂದುಕೊಡಬೇಕೆಂಬ ಉದ್ದೇಶದಿಂದ ಅವರು ಪೊಲೀಸ್ ಕೆಲಸವನ್ನು ಪಡೆಯಬೇಕು ಎಂಬ ಆಸೆಯೊಂದಿಗೆ ಪ್ರಯತ್ನಿಸುವುದು, ಆ ಹಾದಿಯಲ್ಲಿ ಅವರಿಗೆ ಎದುರಾಗುವ ಅಡ್ಡಿ-ಆತಂಕಗಳನ್ನು ಸಿನಿಮಾದಲ್ಲಿ ತೋರಿಸಲಾಗಿದೆ.
ನಾಮನಿರ್ದೇಶಿತ ಚಿತ್ರಗಳ ಪಟ್ಟಿ ಯಾವಾಗ ರಿಲೀಸ್?
98 ನೇ ಆಸ್ಕರ್ ಅಕಾಡೆಮಿ ಪ್ರಶಸ್ತಿಗಳಿಗೆ ನಾಮನಿರ್ದೇಶನಗಳನ್ನು ಜನವರಿ 22, 2026 ರಂದು ಘೋಷಿಸಲಾಗುವುದು. 98 ನೇ ಆಸ್ಕರ್‌ನಲ್ಲಿ ಇಪ್ಪತ್ನಾಲ್ಕು ವಿಭಾಗಗಳಲ್ಲಿ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಪ್ರತಿ ವಿಭಾಗವು ಐದು ನಾಮನಿರ್ದೇಶಿತರನ್ನು ಹೊಂದಿದೆ. 98 ನೇ ಆಸ್ಕರ್ ಪ್ರಧಾನ ಸಮಾರಂಭ ಮಾರ್ಚ್ 15, 2026 ರ ಭಾನುವಾರದಂದು ಓವೇಶನ್ ಹಾಲಿವುಡ್‌ನಲ್ಲಿರುವ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯಲಿದ್ದು, ಎಬಿಸಿಯಲ್ಲಿ ಮತ್ತು ಪ್ರಪಂಚದಾದ್ಯಂತ 200 ಕ್ಕೂ ಹೆಚ್ಚು ಪ್ರದೇಶಗಳಲ್ಲಿ ನೇರ ಪ್ರಸಾರವಾಗಲಿದೆ.