ಕೇರಳ ಫಿಲ್ಮ್ ಫೆಸ್ಟಿವಲ್: ಪ್ಯಾಲೆಸ್ತೀನ್ ಸಿನಿಮಾಗಳು ಸೇರಿ 19 ಚಿತ್ರಗಳ ಪ್ರದರ್ಶನಕ್ಕೆ ಕೇಂದ್ರದ ತಡೆ?

ರಷ್ಯಾದ ಪ್ರಸಿದ್ಧ ನಿರ್ದೇಶಕ ಸೆರ್ಗೆಯ್ ಐಸೆನ್‌ಸ್ಟೈನ್ ಅವರ 100 ವರ್ಷಗಳ ಹಳೆಯ ಕ್ಲಾಸಿಕ್ ಸಿನಿಮಾ 'ಬ್ಯಾಟಲ್​ಶಿಪ್ ಪೊಟೆಮ್​ಕಿನ್' ಪ್ರದರ್ಶನವನ್ನು ರದ್ದುಗೊಳಿಸಲಾಗಿದೆ ಎಂದು ಐಎಫ್‌ಎಫ್‌ಕೆ (IFFK) ಅಧಿಕೃತವಾಗಿ ತಿಳಿಸಿದೆ.

Update: 2025-12-16 04:41 GMT

ಕೇರಳ ಫಿಲ್ಮ್ ಫೆಸ್ಟಿವಲ್

Click the Play button to listen to article

ತಿರುವನಂತಪುರದಲ್ಲಿ ನಡೆಯುತ್ತಿರುವ 30ನೇ ಆವೃತ್ತಿಯ ಕೇರಳ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (IFFK- 2025) ಪ್ಯಾಲೆಸ್ತೀನ್ ಸಂಘರ್ಷದ ಕುರಿತಾದ ಚಿತ್ರಗಳು ಹಾಗೂ ವಿಶ್ವವಿಖ್ಯಾತ ಕ್ಲಾಸಿಕ್ ಸಿನಿಮಾ 'ಬ್ಯಾಟಲ್​ಶಿಪ್ ಪೊಟೆಮ್​ಕಿನ್' (Battleship Potemkin) ಸೇರಿದಂತೆ ಸುಮಾರು 19 ಚಿತ್ರಗಳ ಪ್ರದರ್ಶನ ಅನಿಶ್ಚಿತತೆಯಲ್ಲಿದೆ. ಈ ಚಿತ್ರಗಳಿಗೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದಿಂದ ಇನ್ನು ಅಧಿಕೃತವಾಗಿ ಸೆನ್ಸಾರ್ ವಿನಾಯಿತಿ (Censor Exemption) ಸಿಗದಿರುವುದೇ ಇದಕ್ಕೆ ಕಾರಣ ಎಂದು ಮೂಲಗಳು ತಿಳಿಸಿವೆ.

ಡಿಸೆಂಬರ್ 12 ರಿಂದ 19 ರವರೆಗೆ ನಡೆಯುತ್ತಿರುವ ಈ ಸಿನಿಮೋತ್ಸವದಲ್ಲಿ ಪ್ರದರ್ಶನಗೊಳ್ಳಬೇಕಿದ್ದ ಈ ಚಿತ್ರಗಳಿಗೆ ಅನುಮತಿ ಪಡೆಯಲು ಫೆಸ್ಟಿವಲ್ ಆಯೋಜಕರು ಕೇಂದ್ರ ಸಚಿವಾಲಯದೊಂದಿಗೆ ಉನ್ನತ ಮಟ್ಟದ ಮಾತುಕತೆ ನಡೆಸುತ್ತಿದ್ದಾರೆ.

ಶತಮಾನದ ಶ್ರೇಷ್ಠ ಸಿನಿಮಾ ಪ್ರದರ್ಶನ ರದ್ದು

ರಷ್ಯಾದ ಪ್ರಸಿದ್ಧ ನಿರ್ದೇಶಕ ಸೆರ್ಗೆಯ್ ಐಸೆನ್‌ಸ್ಟೈನ್ ಅವರ 100 ವರ್ಷಗಳ ಹಳೆಯ ಕ್ಲಾಸಿಕ್ ಸಿನಿಮಾ 'ಬ್ಯಾಟಲ್​ಶಿಪ್ ಪೊಟೆಮ್​ಕಿನ್' ಪ್ರದರ್ಶನವನ್ನು ರದ್ದುಗೊಳಿಸಲಾಗಿದೆ ಎಂದು ಐಎಫ್‌ಎಫ್‌ಕೆ (IFFK) ಅಧಿಕೃತವಾಗಿ ತಿಳಿಸಿದೆ. ಡಿಸೆಂಬರ್ 15 ರಂದು ಸಂಜೆ 6.30ಕ್ಕೆ 'ಶ್ರೀ' ಚಿತ್ರಮಂದಿರದಲ್ಲಿ ಈ ಸಿನಿಮಾ ಪ್ರದರ್ಶನಗೊಳ್ಳಬೇಕಿತ್ತು. 1905ರ ನೌಕಾ ದಂಗೆಯನ್ನು ಆಧರಿಸಿದ ಈ ಸಿನಿಮಾ, ಕ್ರಾಂತಿಕಾರಿ ಮತ್ತು ಪ್ರತಿರೋಧದ ಸಂಕೇತ ಎಂದೇ ಜಾಗತಿಕವಾಗಿ ಗುರುತಿಸಿಕೊಂಡಿದೆ. ಸಿನಿಮಾದ 100ನೇ ವರ್ಷದ ಸಂಭ್ರಮದ ಪ್ರಯುಕ್ತ ಇದನ್ನು 'ರಿಸ್ಟೋರ್ಡ್ ಕ್ಲಾಸಿಕ್ಸ್' ವಿಭಾಗದಲ್ಲಿ ಆಯ್ಕೆ ಮಾಡಲಾಗಿತ್ತು.

ಪ್ಯಾಲೆಸ್ತೀನ್ ಕಥೆಗೂ ಸಿಗದ ಅನುಮತಿ

ಕೇವಲ ಹಳೆಯ ಕ್ಲಾಸಿಕ್ ಅಷ್ಟೇ ಅಲ್ಲ, ಪ್ಯಾಲೆಸ್ತೀನ್ ಸಂಘರ್ಷದ ಕಥಾಹಂದರ ಹೊಂದಿರುವ 'ಆಲ್ ದಟ್ಸ್ ಲೆಫ್ಟ್ ಆಫ್ ಯೂ' (All That's Left of You) ಚಿತ್ರದ ಪ್ರದರ್ಶನವನ್ನೂ ರದ್ದುಪಡಿಸಲಾಗಿದೆ. 1988ರ ಇಂತಿಫಾದಾ ಚಳವಳಿಯ ಸಮಯದಲ್ಲಿ ನೂರ್ ಎಂಬ ಬಾಲಕ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮೃತಪಡುವ ಹೃದಯಾಘಾತಕ ಕಥೆಯನ್ನು ಈ ಸಿನಿಮಾ ಹೊಂದಿದೆ. 98ನೇ ಆಸ್ಕರ್ ಪ್ರಶಸ್ತಿಗೆ ಜೋರ್ಡಾನ್ ದೇಶದಿಂದ ಈ ಚಿತ್ರ ಆಯ್ಕೆಯಾಗಿತ್ತು ಎಂಬುದು ವಿಶೇಷ.

ಹೆಸರಿನಲ್ಲೇ ಗೊಂದಲ: 'ಬೀಫ್' ಚಿತ್ರಕ್ಕೂ ತಡೆ?

ಸ್ಪೇನ್ ಮೂಲದ 'ಬೀಫ್' (Beef) ಎಂಬ ಹೆಸರಿನ ಸಿನಿಮಾಗೂ ಅನುಮತಿಗಾಗಿ ಕಾಯಲಾಗುತ್ತಿದೆ. ಈ ಸಿನಿಮಾದ ಹೆಸರಿಗೂ ಅದರ ಕಥೆಗೂ ಯಾವುದೇ ಸಂಬಂಧವಿಲ್ಲ. ಬಾರ್ಸಿಲೋನಾದ ಹೊರವಲಯದಲ್ಲಿ ವಾಸಿಸುವ ಲಟಿ ಎಂಬ ಯುವತಿ, ತಂದೆಯ ಮರಣದ ನಂತರ ಎದುರಿಸುವ ಲಿಂಗ ತಾರತಮ್ಯ ಮತ್ತು ದುಃಖವನ್ನು 'ರಾಪ್' (Rap) ಹಾಡುಗಳ ಮೂಲಕ ಹೇಗೆ ಎದುರಿಸುತ್ತಾಳೆ ಎಂಬುದು ಚಿತ್ರದ ಕಥೆ. ಆದರೂ ಈ ಚಿತ್ರದ ಪ್ರದರ್ಶನಕ್ಕೂ ಅನುಮತಿ ಸಿಕ್ಕಿಲ್ಲ.

ಈ ಎಲ್ಲಾ ಚಿತ್ರಗಳ ಸೆನ್ಸಾರ್ ವಿನಾಯಿತಿಗಾಗಿ ಕೇಂದ್ರ ಸಚಿವಾಲಯಕ್ಕೆ ಮೊದಲೇ ಅರ್ಜಿ ಸಲ್ಲಿಸಲಾಗಿತ್ತು ಎಂದು ಆಯೋಜಕರು ತಿಳಿಸಿದ್ದು, ಸದ್ಯ ಅನುಮತಿಗಾಗಿ ಮಾತುಕತೆ ಮುಂದುವರಿದಿದೆ. ಡಿಸೆಂಬರ್ 12 ರಂದು ಕೇರಳದ ಸಾಂಸ್ಕೃತಿಕ ಸಚಿವ ಸಜಿ ಚೆರಿಯನ್ ಅವರು ಈ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿದ್ದರು

Tags:    

Similar News