ರಣವೀರ್ ಸಿಂಗ್ ನಟನೆಯ ʻಧುರಂಧರ್ʼ ಸಿನಿಮಾ 6 ರಾಷ್ಟ್ರಗಳಲ್ಲಿ ಬ್ಯಾನ್!
ಪಾಕಿಸ್ತಾನ ವಿರೋಧಿ ಕಥಾ ಹಂದರ ಹೊಂದಿದೆ ಎಂಬ ಕಾರಣಕ್ಕೆ ಬಾಲಿವುಡ್‌ನ ಧುರಂಧರ್ ಸಿನಿಮಾವನ್ನು ಆರು ಗಲ್ಫ್ ದೇಶಗಳಲ್ಲಿ ನಿಷೇಧಿಸಲಾಗಿದೆ.
ಬಾಲಿವುಡ್‌ನ ರಣವೀರ್ ಸಿಂಗ್ ನಟನೆಯ ಸ್ಪೈ ಥ್ರಿಲ್ಲರ್ 'ಧುರಂಧರ್'ಕ್ಕೆ ದೇಶಾದ್ಯಂತ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ರಿಲೀಸ್ ಆದ ಒಂದು ವಾರಕ್ಕೆ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಕಾಣುತ್ತಿರುವ ಈ ಚಿತ್ರಕ್ಕೆ ಆರಂಭದಿಂದಲೂ ಕೆಲವೊಂದು ವಿಘ್ನಗಳು ಎದುರಾಗುತ್ತಲೇ ಇವೆ. ಮೊದಲಿಗೆ ಈ ಚಿತ್ರ ಮೇಜರ್ ಮೋಹಿತ್ ಶರ್ಮಾ ಅವರ ಜೀವನಾಧಾರಿತವಾಗಿದ್ದು, ಕುಟುಂಬಸ್ಥರ ಅನುಮತಿ ಪಡೆಯದೇ ಈ ಸಿನಿಮಾವನ್ನು ನಿರ್ಮಿಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಇದೀಗ ಮತ್ತೊಂದು ಸಮಸ್ಯೆ ಈ ಚಿತ್ರ ಎದುರಾಗಿದ್ದು, ಬರೋಬ್ಬರಿ ಆರು ದೇಶಗಳಲ್ಲಿ ಈ ಸಿನಿಮಾದ ಮೇಲೆ ನಿಷೇಧ ಹೇರಲಾಗಿದೆ. ಪಾಕಿಸ್ತಾನ ವಿರೋಧಿ ಕಥಾ ಹಂದರ ಹೊಂದಿದೆ ಎಂಬ ಕಾರಣಕ್ಕೆ ಆರು ಗಲ್ಫ್ ದೇಶಗಳಲ್ಲಿ ಸಿನಿಮಾವನ್ನು ಬ್ಯಾನ್ ಮಾಡಲಾಗಿದೆ.
ಯಾವ ರಾಷ್ಟ್ರಗಳಲ್ಲಿ ನಿಷೇಧ?
ಬಹ್ರೇನ್, ಕುವೈತ್, ಓಮನ್, ಕತಾರ್, ಸೌದಿ ಅರೇಬಿಯಾ ಮತ್ತು ಯುಎಇಗಳಲ್ಲಿ ಈ ಸಿನಿಮಾಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಅಧಿಕಾರಿಗಳು ಕೂಡ ಚಿತ್ರದ ರಾಜಕೀಯ ನಿಲುವಿಗೆ ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಆ ರಾಷ್ಟ್ರಗಳಲ್ಲಿ ಧುರಂಧರ್ ಸಿನಿಮಾವನ್ನು ಬ್ಯಾನ್ ಮಾಡಲಾಗಿದೆ.
ವರದಿಗಳ ಪ್ರಕಾರ, ಚಲನಚಿತ್ರ ನಿರ್ಮಾಪಕರು ಬಾಲಿವುಡ್‌ಗೆ ನಿರ್ಣಾಯಕ ಮಾರುಕಟ್ಟೆಯಾದ ಗಲ್ಫ್‌ನಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯನ್ನು ಪಡೆಯಲು ಪ್ರಯತ್ನಿಸಿದರು. ಆದರೆ ಪ್ರತಿ ದೇಶದಲ್ಲೂ ಅನುಮತಿ ನಿರಾಕರಿಸಲಾಯಿತು. ಚಿತ್ರವನ್ನು 'ಪಾಕಿಸ್ತಾನ ವಿರೋಧಿ' ಎಂದು ನೋಡಲಾಗುತ್ತಿರುವುದರಿಂದ ಇದು ನಡೆದೇ ನಡೆಯುತ್ತದೆ ಎಂಬ ಆತಂಕ ಮೊದಲೇ ಎದುರಾಗಿತ್ತು. ಆದಾಗ್ಯೂ ಚಿತ್ರತಂಡವು ಮತ್ತಷ್ಟು ಪ್ರಯತ್ನ ಮಾಡಿತು. ಆದರೆ ಅದು ಕೇವಲ ವಿಫಲ ಪ್ರಯತ್ನವಾಯಿತು.
ಪದೇ ಪದೆ ಬ್ಯಾನ್!
ಇದೇನು ಮೊದಲ ಬಾರಿಗೆ ನಡೆಯುತ್ತಿರುವುದಲ್ಲ. ಬಾಲಿವುಡ್‌ನ ಹಲವು ಚಿತ್ರಗಳಿಗೆ ಗಲ್ಫ್ ರಾಷ್ಟ್ರಗಳಲ್ಲಿ ಇದೇ ರೀತಿಯ ನಿರ್ಬಂಧ ಹೇರಲಾಗಿತ್ತು. ಇತ್ತೀಚಿನ ವರ್ಷಗಳಲ್ಲಿ, ಫೈಟರ್, ಸ್ಕೈ ಫೋರ್ಸ್, ದಿ ಡಿಪ್ಲೊಮ್ಯಾಟ್, ಆರ್ಟಿಕಲ್ 370, ಟೈಗರ್ 3, ಮತ್ತು ದಿ ಕಾಶ್ಮೀರ್ ಫೈಲ್ಸ್ ನಂತಹ ಸಿನಿಮಾಗಳು ಮಧ್ಯಪ್ರಾಚ್ಯದ ಕೆಲವು ಭಾಗಗಳಲ್ಲಿ ಇದೇ ರೀತಿಯ ನಿರ್ಬಂಧಗಳನ್ನು ಎದುರಿಸಿವೆ. ಆರಂಭದಲ್ಲಿ ಯುಎಇಯಲ್ಲಿ ಬಿಡುಗಡೆಯಾದ ಫೈಟರ್ ಅನ್ನು ಸಹ ಒಂದು ದಿನದೊಳಗೆ ಹಿಂತೆಗೆದುಕೊಳ್ಳಲಾಯಿತು.
ಧುರಂಧರ್ ಭರ್ಜರಿ ಕಲೆಕ್ಷನ್
ಗಲ್ಫ್‌ನಲ್ಲಿ ಹಿನ್ನಡೆ ಅನುಭವಿಸಿದರೂ ಧುರಂಧರ್ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಲೇ ಇದೆ. ಈ ಚಿತ್ರವು ಒಂದು ವಾರದೊಳಗೆ ದೇಶೀಯವಾಗಿ 200 ಕೋಟಿ ರೂ. ನಿವ್ವಳ ಗಳಿಕೆಯನ್ನು ದಾಟಿದೆ ಮತ್ತು ಗಲ್ಫ್ ಮಾರುಕಟ್ಟೆಗಳನ್ನು ಹೊರತುಪಡಿಸಿ ವಿದೇಶಗಳಲ್ಲಿ 44.5 ಕೋಟಿ ರೂ. ಗಳಿಸಿದೆ.
ನಿರ್ದೇಶನದಿಂದ ಆರು ವರ್ಷಗಳ ಬ್ರೇಕ್ ಪಡೆದ ನಂತರ, ಆದಿತ್ಯ ಧರ್ ಧುರಂಧರ್‌ನೊಂದಿಗೆ ಕಂಬ್ಯಾಕ್ ಮಾಡಿದ್ದಾರೆ. ಇದು 2019 ರ ಹಿಟ್ ಉರಿ: ದಿ ಸರ್ಜಿಕಲ್ ಸ್ಟ್ರೈಕ್ ನಂತರದ ಅವರ ಮೊದಲ ಚಿತ್ರವಾಗಿದೆ. ಇದು ಮೇಜರ್ ಮೋಹಿತ್ ಶರ್ಮಾ ಅವರ ಜೀವಾನಾಧಾರಿತ ಚಿತ್ರವಾಗಿದೆ ಎಂಬ ಊಹಾಪೋಹ ಸೃಷ್ಟಿಯಾಗಿತ್ತು. ಆದರೆ ಆದಿತ್ಯಾ ಧರ್ ಇದನ್ನು ತಳ್ಳಿಹಾಕಿದ್ದರು. ಈ ಚಿತ್ರವು ಪಾಕಿಸ್ತಾನದಲ್ಲಿನ ಆಪರೇಷನ್ ಲಿಯಾರಿ ಮತ್ತು ಭಾರತೀಯ ಗುಪ್ತಚರ ಇಲಾಖೆಗೆ ಸಂಬಂಧಿಸಿದ ಘಟನೆಗಳಿಂದ ಸ್ಫೂರ್ತಿ ಪಡೆಯುತ್ತದೆ. ರಣವೀರ್ ಸಿಂಗ್ ಜೊತೆಗೆ ಸಂಜಯ್ ದತ್, ಅಕ್ಷಯ್ ಖನ್ನಾ, ಆರ್ ಮಾಧವನ್ ಮತ್ತು ಅರ್ಜುನ್ ರಾಂಪಾಲ್ ನಟಿಸಿದ್ದಾರೆ.