ಲೈಂಗಿಕ ದೌರ್ಜನ್ಯ ಕೇಸ್- ಮಲಯಾಳಂ ನಟ ದಿಲೀಪ್ ಭವಿಷ್ಯ ನಾಳೆ ನಿರ್ಧಾರ!
ಮಲಯಾಳಂ ಚಿತ್ರರಂಗ ಸ್ಟಾರ್ ನಟ ದಿಲೀಪ್ ನಟಿ ಮೇಲೆ ದೌರ್ಜನ್ಯ ಎಸಗಿದ್ದರೆ ಇಲ್ಲವೇ ಎಂಬ ಪ್ರಶ್ನೆಗೆ ನಾಳೆ ಹೊರ ಬೀಳಲಿರುವ ತೀರ್ಪಿನಲ್ಲಿ ಉತ್ತರ ಸಿಗಲಿದೆ.
ಸುಮಾರು ಎಂಟು ವರ್ಷಗಳ ಹಿಂದೆ ದೇಶಾದ್ಯಂತ ಸುದ್ದಿ ಮಾಡಿದ್ದ ಮಲಯಾಳಂ ನಟ ದಿಲೀಪ್ ವಿರುದ್ಧದ ದೌರ್ಜನ್ಯ ಪ್ರಕರಣದ ತೀರ್ಪು ನಾಳೆ ಹೊರಬೀಳಲಿದೆ. ಮಲಯಾಳಂ ಚಿತ್ರರಂಗ ಸ್ಟಾರ್ ನಟ ದಿಲೀಪ್ ನಟಿ ಮೇಲೆ ದೌರ್ಜನ್ಯ ಎಸಗಿದ್ದರೆ ಇಲ್ಲವೇ ಎಂಬ ಪ್ರಶ್ನೆಗೆ ನಾಳೆ ಹೊರ ಬೀಳಲಿರುವ ತೀರ್ಪಿನಲ್ಲಿ ಉತ್ತರ ಸಿಗಲಿದೆ.
ಈ ಘಟನೆ ಮಲಯಾಳಂ ಚಿತ್ರರಂಗವನ್ನೇ ತಲ್ಲಣಿಸಿತ್ತು. ಇದಾದ ನಂತರ ಸಿನಿಮಾ ರಂಗ ಮಹಿಳಾ ಕಲಾವಿದರ ಗೌರವ, ಹಕ್ಕುಗಳ ರಕ್ಷಣೆಗಾಗಿ ಹಲವಾರು ನಿಯಮಗಳನ್ನು ಜಾರಿಗೊಳಿಸಿತು. ಇದೇ ಘಟನೆ ಮುಂದೆ ಮೀಟೂ ಮೂಮೆಂಟ್ ಶುರುವಾಗಲೂ ಕಾರಣವಾಯಿತು. ಇದಾದ ನಂತರ ಸಿನಿಮಾದಲ್ಲಿ ಮಹಿಳೆಯರ ಸಂಘಟನೆ(WCC)ಯೂ ಪ್ರಾರಂಭವಾಗಿತ್ತು. WCCಯ ಸ್ಥಾಪನಾ ಸದಸ್ಯರು ಕೇರಳ ಮುಖ್ಯಮಂತ್ರಿಯನ್ನು ಭೇಟಿಯಾಗಿ ಚಿತ್ರರಂಗದಲ್ಲಿರುವ ಮಹಿಳೆಯರು ಎದುರಿಸುತ್ತಿರುವ ಸವಾಲುಗಳನ್ನು ಅಧ್ಯಯನ ಮಾಡಲು ಸಮಿತಿ ರಚಿಸುವಂತೆ ಮನವಿ ಮಾಡಿದ್ದರು.
ಪ್ರಕರಣದ ಹಿನ್ನೆಲೆ
ಫೆ.17, 2017ರ ರಾತ್ರಿ ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಿದ್ದ ಖ್ಯಾತ ನಟಿಯನ್ನು ಅಪಹರಿಸಿದ್ದ ಕಿಡಿಗೇಡಿಗಳು ಸುಮಾರು ಎರಡು ಗಂಟೆಗಳ ಕಾಲ ಕಾರಿನಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದರು. ನಂತರ ಕಾರು ಮತ್ತು ನಟಿಯನ್ನು ಅಲ್ಲೇ ಬಿಟ್ಟು ಕೊಚ್ಚಿಗೆ ಎಸ್ಕೇಪ್ ಆಗಿದ್ದರು. ಈ ಕೃತ್ಯದ ಹಿಂದೆ ನಟ ದಿಲೀಪ್ ಕೈವಾಡ ಇರುವ ಬಗ್ಗೆ ಆರೋಪ ಕೇಳಿ ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸುನೀಲ್ ಎನ್.ಎಸ್. ಮಾರ್ಟೀನ್ ಆಂಟನಿ, ಮಣಿಕಂಠನ್ ಬಿ., ವಿಜೇಶ್ ವಿ.ಪಿ. ಸಲೀಮ್ ಎಚ್. ಪ್ರದೀಪ್, ಚಾರ್ಲೀ, ದಿಲೀಪ್, ಸನೀಲ್ ಕುಮಾರ್ ಮತ್ತು ಶರತ್ ಹೀಗೆ ಒಟ್ಟು 10ಜನರ ವಿರುದ್ಧ ಕೇಸ್ ದಾಖಲಾಗಿತ್ತು.
ಈ ಹತ್ತು ಜನ ಆರೋಪಿಗಳ ಅಪಹರಣ, ಸಾಮೂಹಿಕ ಅತ್ಯಾಚಾರ, ಮಹಿಳಾ ಗೌರವಕ್ಕೆ ಧಕ್ಕೆ ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ.
ದಿಲೀಪ್ ಅರೆಸ್ಟ್
ಘಟನೆಗೆ ಸಂಬಂಧಿಸಿದಂತೆ 2017ರಲ್ಲಿ ಏಳು ಜನರ ವಿರುದ್ಧ ಪೊಲೀಸರು ಮೊದಲ ಚಾರ್ಜ್‌ಶೀಟನ್ನು ದಾಖಲಿಸಿದ್ದರು.ತನಿಖೆ ಮುಂದುವರಿಸಿದ ಪೊಲೀಸರಿಗೆ ಪ್ರಕರಣದ ಪ್ರಮುಖ ಆರೋಪಿ ಸುನಿಲ್, ನಟ ದಿಲೀಪ್‌ಗೆ ಜೈಲಿನಿಂದ ಪತ್ರ ಬರೆದಿರುವ ಬಗ್ಗೆ ತಿಳಿಯುತ್ತದೆ. ಹೀಗಾಗಿ ಜು.10ರಂದು ದಿಲೀಪ್ ಅವರನ್ನು ಅರೆಸ್ಟ್ ಮಾಡಿದರು. ಅ.3, 2017ರಲ್ಲಿ ದಿಲೀಪ್‌ಗೆ ಜಾಮೀನು ಸಿಕ್ಕಿತ್ತು. 2017ರಲ್ಲಿ ದಿಲೀಪ್ ಸೇರಿದಂತೆ ಏಳು ಮಂದಿ ಆರೋಪಿಗಳ ವಿರುದ್ಧ ಪೂರಕ ದೋಷಾರೋಪ ಪಟ್ಟಿ ದಾಖಲಿಸಿದ್ದರು.
ನಟಿ ಮತ್ತು ದಿಲೀಪ್ ನಡುವೆ ನಡೆದಿತ್ತು ಭಾರೀ ಜಗಳ
ಸಂತ್ರಸ್ತ ನಟಿ ಮತ್ತು ದಿಲೀಪ್ ನಡುವೆ ಮೊದಲ ಹಲವು ಬಾರಿ ಜಗಳ ನಡೆಯುತ್ತಲೇ ಇತ್ತು. ದಿಲೀಪ್‌ಗೆ ಮತ್ತೊರ್ವ ನಟಿ ಜೊತೆ ಪ್ರೇಮ ಸಂಬಂಧ ಇರುವ ಬಗ್ಗೆ ಆತನ ಮೊದಲ ಪತ್ನಿ ಮಂಜು ವಾರಿಯರ್‌ಗೆ ಈ ನಟಿ ತಿಳಿಸಿದ್ದರು. ಇದರಿಂದ ಇಬ್ಬರ ನಡುವೆ ಭಾರೀ ಜಗಳ ನಡೆಯುತ್ತಿತ್ತು. ಈ ಜಗಳ ಶೂಟಿಂಗ್ ಸೆಟ್‌ನಲ್ಲಿ ಎಲ್ಲರ ಎದುರೇ ನಡೆಯುವ ಮಟ್ಟಿಗೆ ಮುಂದುವರಿದಿತ್ತು. ಕೊಚ್ಚಿಯಲ್ಲಿ 2016ರಲ್ಲಿ ನಡೆದ ಜಗಳದ ನಂತರ ಆಕೆ ಮೇಲಿನ ದಾಳಿಗೆ ಸಂಚು ರೂಪಿಸಲಾಗಿತ್ತು ಎಂದು ಸಂತ್ರಸ್ತೆ ಪರ ವಕೀಲರು ಕೋರ್ಟ್‌ಗೆ ತಿಳಿಸಿದ್ದರು.
ಪ್ರಕರಣ ವಿಚಾರಣೆಯಲ್ಲಿ ವಿಳಂಬ
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಕೋರಿ 2019ರಲ್ಲಿ ದಿಲೀಪ್ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಅವರ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿತ್ತು. 2019ರಲ್ಲಿ ವಿಚಾರಣೆಯನ್ನು ಆರು ತಿಂಗಳಲ್ಲಿ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಅಂತಿಮವಾಗಿ 2020ರಲ್ಲಿ ವಿಚಾರಣೆ ಪುನಾರಂಭಗೊಂಡಿತ್ತು.
ದಿಲೀಪ್ ವಿರುದ್ಧ ಮತ್ತಷ್ಟು ಪ್ರಕರಣ ದಾಖಲು
ನಂತರದ ದಿನಗಳಲ್ಲಿ ದಿಲೀಪ್ ವಿರುದ್ಧ ಮತ್ತಷ್ಟು ಕೆಲವು ಪ್ರಕರಣ ದಾಖಲಾಗಿತ್ತು. ಸಂತ್ರಸ್ತೆಯ ಅಶ್ಲೀಲ ವಿಡಿಯೊ ದಿಲೀಪ್ ಜೊತೆಗಿದೆ ಎಂದು ನಿರ್ದೇಶಕ ಬಿ.ಬಾಲಚಂದ್ರ ಕುಮಾರ್ ಆರೋಪಿಸಿದ್ದರು. ಆ ಅರೋಪದ ಬೆನ್ನಲ್ಲೇ ಪೊಲೀಸರು ಮತ್ತೊಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದರು. ತನಿಖಾಧಿಕಾರಿ ಮೇಲಿನ ಹಲ್ಲೆ ಪ್ರಕರಣವೂ ದಿಲೀಪ್ ಮತ್ತು ಇತರ ಐವರ ವಿರುದ್ಧ ದಾಖಲಿಸಲಾಗಿತ್ತು.