ಎರಡು ದೊಡ್ಡ ಚಿತ್ರಗಳು ಬಿಡುಗಡೆ ಆಗುತ್ತಿರುವುದರಿಂದ ಚಿತ್ರಮಂದಿರದವರು ಖುಷಿಯಾಗಿದ್ದಾರೆ: ಸುದೀಪ್‍

Update: 2025-12-08 11:36 GMT
ಕಿಚ್ಚ ಸುದೀಪ್‌ ಪತ್ರಿಕಾಗೋಷ್ಠಿಯಲ್ಲಿ
Click the Play button to listen to article

ಸುದೀಪ್‍ ಅಭಿನಯದ ‘ಮಾರ್ಕ್’ ಚಿತ್ರವು ಕ್ರಿಸ್ಮಸ್‍ ಪ್ರಯುಕ್ತ ಡಿ. 25ರಂದು ಬಿಡುಗಡೆಯಾಗುತ್ತಿದೆ. ಅದೇ ದಿನ ಶಿವರಾಜಕುಮಾರ್, ಉಪೇಂದ್ರ ಮತ್ತು ರಾಜ್‍ ಬಿ. ಶೆಟ್ಟಿ ಅಭಿನಯದ ‘45’ ಚಿತ್ರ ಬಿಡುಗಡೆಯಾಗುತ್ತಿದೆ.

ಒಂದು ಕಡೆ ಒಂದೇ ದಿನ ಕನ್ನಡದ ಎರಡು ಬಹುನಿರೀಕ್ಷಿತ ಚಿತ್ರಗಳು ಬಿಡುಗಡೆಯಾಗುತ್ತಿರುವುದು ಒಂದು ಕಡೆಯಾದರೆ, ಇನ್ನೊಂದು ಕಡೆ ಇದರಿಂದ ಚಿತ್ರಮಂದಿರಗಳ ಕೊರತೆ ಎದುರಾಗುವ ಅಪಾಯವೂ ಇದೆ. ಅಷ್ಟೇ ಅಲ್ಲ, ಒಂದೇ ದಿನ ಎರಡು ದೊಡ್ಡ ಚಿತ್ರಗಳು ಕ್ಲಾಶ್‍ ಆಗುತ್ತಿರುವುದರಿಂದ, ಪ್ರೇಕ್ಷಕರಿಗೂ ಯಾವುದನ್ನು ನೋಡಬೇಕು ಎಂಬ ಗೊಂದಲವೂ ಸಹಜ.

ಆದರೆ, ಎರಡು ದೊಡ್ಡ ಚಿತ್ರಗಳು ಬಿಡುಗಡೆಯಾಗುತ್ತಿರುವುದರಿಂದ ಯಾವುದೇ ಸಮಸ್ಯೆ ಇಲ್ಲ ಎಂದು ಸುದೀಪ್‍ ಹೇಳಿದ್ದಾರೆ. ಭಾನುವಾರ, ‘ಮಾರ್ಕ್’ ಚಿತ್ರದ ಟ್ರೇಲರ್‍ ಬಿಡುಗಡೆ ಆಗಿದೆ. ಈ ಸಂದರ್ಭದಲ್ಲಿ ಸುದೀಪ್‍ ಎರಡು ಚಿತ್ರಗಳ ಕ್ಲಾಶ್‍ ಬಗ್ಗೆ ಮಾತನನಾಡಿದ್ದಾರೆ.

ಡಿ. 25ರಂದು ಎರಡು ಸಿನಿಮಾಗಳು ಬಿಡುಗಡೆಯಾಗುತ್ತಿರುವ ಕುರಿತು ಮಾತನಾಡಿರುವ ಅವರು, ‘ಇದರಿಂದ ಯಾರಿಗೂ ಯಾವುದೇ ಸಮಸ್ಯೆ ಇಲ್ಲ. ದೀಪಾವಳಿ ಬಂದರೆ ಎಲ್ಲರ ಮನೆಯಲ್ಲೂ ಹಬ್ಬ ನಡೆಯುತ್ತದೆ. ಎಲ್ಲರಿಗೂ ತರಕಾರಿ ಸಿಗುತ್ತದೆ. ಎಲ್ಲರ ಮನೆಯಲ್ಲೂ ಒಬ್ಬಟ್ಟು ಊಟ ಇರುತ್ತದೆ. ಯಾವತ್ತೂ ತರಕಾರಿ, ಅಡುಗೆ ಕಡಿಮೆ ಆಗಿಲ್ಲ. ಊಟಕ್ಕೇ ಕಡಿಮೆಯಾಗಿಲ್ಲ ಎಂದರೆ, ಸಿನಿಮಾ ಟಿಕೆಟುಗಳಿಗೆ ಮತ್ತು ಸೀಟುಗಳಿಗೆ ಯಾಕೆ ಕಡಿಮೆ ಆಗುತ್ತೆ ಹೇಳಿ? ಜನ ಖಂಡಿತಾ ಬಂದು ಸಿನಿಮಾ ನೋಡುತ್ತಾರೆ ಎಂಬ ನಂಬಿಕೆ ಇದೆ. ಚಿತ್ರಮಂದಿರಗಳ ಸಮಸ್ಯೆ ಆಗಿದ್ದರೆ, ನಾವು ಆ ದಿನ ಬರುತ್ತಿರಲಿಲ್ಲ. ಚಿತ್ರಮಂದಿರಗಳ ಸಮಸ್ಯೆ ಏನೂ ಆಗುವುದಿಲ್ಲ. ಪ್ರದರ್ಶಕರನ್ನು ಕೇಳಿಯೇ ಈ ತೀರ್ಮಾನಕ್ಕೆ ಬಂದಿದ್ದೇವೆ. ಅವರು ಸಹ ಬಹಳ ಖುಷಿಯಾಗಿದ್ದಾರೆ. ಆ ಖುಷಿ ನೋಡೋದಕ್ಕಾದರೂ, ಪ್ರತಿ ಡಿಸೆಂಬರ್‍ ತಿಂಗಳಲ್ಲಿ, ಸ್ಟಾರ್‍ ನಟರು ಚಿತ್ರ ಬಿಡುಗಡೆ ಮಾಡಲೇಬೇಕು’ ಎನ್ನುತ್ತಾರೆ.

ಮೊದಲೇ ಬಿಡುಗಡೆ ದಿನಾಂಕ ಫಿಕ್ಸ್ ಮಾಡಿ ಚಿತ್ರೀಕರಣಕ್ಕೆ ಹೋಗುವುದು ಒತ್ತಡಕ್ಕಿಂತ ಸವಾಲಿನ ಕೆಲಸ ಎನ್ನುವ ಅವರು, ‘ಇಂಥಾ ದಿನ ಬಿಡುಗಡೆ ಎಂದು ಮೊದಲೇ ನಿಗದಿ ಮಾಡಿ ಕೆಲಸ ಮಾಡಿದರೆ, ಶಿಸ್ತಿನಿಂದ ಕೆಲಸ ಮಾಡಬಹುದು. ಚಿತ್ರ ಕಡಿಮೆ ಸಮಯದಲ್ಲಿ ತಯಾರಾಗಿದೆ ಎಂದರೆ, ಇಬ್ಬರಿಗೆ ಧನ್ಯವಾದ ಸಲ್ಲಿಸಬೇಕು. ಅದು ನಿರ್ದೇಶಕ ವಿಜಯ್‍ ಕಾರ್ತಿಕೇಯ ಮತ್ತು ಛಾಯಾಗ್ರಾಹಕ ಚಂದ್ರು. ಇಬ್ಬರೂ ಮಲಗೇ ಇಲ್ಲ. ಸತತವಾಗಿ ಕೆಲಸ ಮಾಡಿದ್ದಾರೆ. ಹೀಗೆ ಕಡಿಮೆ ಸಮಯದಲ್ಲಿ ಚಿತ್ರ ಮಾಡುವ ಅವಶ್ಯಕತೆ ಹೆಚ್ಚಿತೆ. ಬಜೆಟ್‍ ಹೆಚ್ಚುತ್ತಿದೆ. ಚಿತ್ರೀಕರಣ ಮಾಡುವ ಸಮಯ ಸಹ ಜಾಸ್ತಿಯಾಗುತ್ತಿದೆ. ಇನ್ನು, ಯಾವುದೇ ಕಲಾವಿದರ ಹತ್ತಿರ ಹೋಗಿ ದುಡ್ಡು ಕಡಿಮೆ ತೆಗೆದುಕೊಳ್ಳಿ ಎಂದು ಹೇಳೋದು ಕಷ್ಟ. ಯಾವುದೇ ಸೌಲಭ್ಯಕ್ಕೂ ರಾಜಿ ಮಾಡಿಕೊಳ್ಳುವುದು ಕಷ್ಟ. ಆದರೆ, ನಾವು ಸಮಯದಲ್ಲಿ ಚಿತ್ರ ಮಾಡಬಹುದು. ಹಾಗಾಗಿ ಇಂಥ ಸಮಯದಲ್ಲಿ ಮಾಡೋಣ ಎಂದಾಗ, ನನ್ನ ಮಾತಿಗೆ ದೃಢವಾಗಿ ಮತ್ತು ಬಲವಾಗಿ ನಿಂತಿರೋದು ನನ್ನ ಇಡೀ ತಂಡ. ಕಲಾವಿದರು ಮತ್ತು ತಂತ್ರಜ್ಞರು. ಪ್ರತಿಯೊಬ್ಬರೂ ಒಂದೇ ಉದ್ದೇಶದಲ್ಲಿ ಪ್ರತಿ ದಿನ ಏಳುತ್ತಿದ್ದರು. ಹಾಗಾಗಿ, ಕಡಿಮೆ ಸಮಯದಲ್ಲಿ ಚಿತ್ರ ಮಾಡುವುದು ಸಾಧ್ಯವಾಯಿತು. ಡೇಟ್‍ ಫಿಕ್ಸ್ ಮಾಡೋದು ಸಮಸ್ಯೆಯಲ್ಲ. ಅದೊಂದು ಸವಾಲು. ನಮ್ಮ ತಂಡದ ಸಹಕಾರದಿಂದ ಸಾಧ್ಯವಾಯಿತು’ ಎನ್ನುತ್ತಾರೆ ಸುದೀಪ್‍.

ಮಾನವ ಕಳ್ಳಸಾಗಣಿಕೆ ಕುರಿತಾದ ಈ ಚಿತ್ರಕ್ಕೆ ವಿಜಯ್‍ ಕಾರ್ತಿಕೇಯ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಸುದೀಪ್‍ ಅಜಯ್‍ ಮಾರ್ಕಂಡೇಯ ಅಲಿಯಾಸ್‍ ಮಾರ್ಕ್ ಎಂಬ ಪೊಲೀಸ್‍ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಅವರ ಜೊತೆಗೆ ಪ್ರತಾಪ್‍ ನಾರಾಯಣ್, ಅರ್ಚನಾ ಕೊಟ್ಟಿಗೆ, ರೋಶನಿ ಪ್ರಕಾಶ್‍, ಯೋಗಿ ಬಾಬು, ನವೀನ್ ಚಂದ್ರ, ಗುರು ಸೋಮಸುಂದರಂ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಅಜನೀಶ್‍ ಲೋಕನಾಥ್‍ ಸಂಗೀತ ಮತ್ತು ಶೇಖರ್‍ ಚಂದ್ರು ಛಾಯಾಗ್ರಹಣವಿದ್ದು, ಚಿತ್ರವನ್ನು ಸತ್ಯಜ್ಯೋತಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ. ಸುದೀಪ್ ಕೂಡಾ ಚಿತ್ರದ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ

Tags:    

Similar News