ಕಾಮಿಡಿ ಕಿಲಾಡಿ ಖ್ಯಾತಿಯ ಗಿಲ್ಲಿ ನಟನ 'ಸೂಪರ್ ಹಿಟ್' ಚಿತ್ರದ ಟೀಸರ್ ಬಿಡುಗಡೆಗೆ ಸಜ್ಜು
ವಿಜಯಾನಂದ್ ನಿರ್ದೇಶನದ 'ಸೂಪರ್ ಹಿಟ್' ಚಿತ್ರದ ಟೀಸರ್ ಬಿಡುಗಡೆಗೆ ಸಿದ್ಧತೆ ನಡೆದಿದೆ. ಬ್ಲಾಕ್ಬಸ್ಟರ್ 'ಸು ಫ್ರಂ ಸೋ' ನಂತರ ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಕಾಮಿಡಿ ಸಿನಿಮಾ ಸಂಚಲನ ಸೃಷ್ಟಿಸುವ ಸುಳಿವು ನೀಡಿದೆ. ʼಸೂಪರ್ ಹಿಟ್ʼ ಚಿತ್ರಕ್ಕೆ 'ರನ್ನಿಂಗ್ ಸಕ್ಸಸ್‌ಫುಲಿ' ಎಂಬ ಆಕರ್ಷಕ ಟ್ಯಾಗ್ ಲೈನ್ ಕೂಡ ಇದೆ.
ಸೂಪರ್ ಹಿಟ್ ಸಿನಿಮಾ
ಕಾಮಿಡಿ ಕಿಲಾಡಿ ಖ್ಯಾತಿಯ ಗಿಲ್ಲಿ ನಟ ನಟನೆಯ ಬಹುನಿರೀಕ್ಷಿತ ಚಿತ್ರ 'ಸೂಪರ್ ಹಿಟ್' ಬಿಡುಗಡೆಗೆ ಸಿದ್ಧವಾಗಿದೆ. ಕಾಮಿಡಿ ಶೋಗಳ ಮೂಲಕ ಗುರುತಿಸಿಕೊಂಡು ಪ್ರಸ್ತುತ 'ಬಿಗ್ ಬಾಸ್' ಕನ್ನಡದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಗಿಲ್ಲಿ ನಟನ ಈ ಚಿತ್ರದ ಟೀಸರ್ ಇತ್ತೀಚೆಗೆ ಅನಾವರಣಗೊಂಡಿದೆ.
ವಿಜಯಾನಂದ್ ನಿರ್ದೇಶನದ 'ಸೂಪರ್ ಹಿಟ್' ಚಿತ್ರವು ಬ್ಲಾಕ್ಬಸ್ಟರ್ 'ಸು ಫ್ರಂ ಸೋ' ನಂತರ ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಕಾಮಿಡಿ ಸಿನಿಮಾವಾಗಿ ಸಂಚಲನ ಸೃಷ್ಟಿಸಲಿದೆ ಎಂಬುದು ಈಗಾಗಲೇ ಟೀಸರ್‌ನಿಂದ ಗೊತ್ತಾಗಿದೆ. ʼಸೂಪರ್ ಹಿಟ್ ಚಿತ್ರʼಕ್ಕೆ 'ರನ್ನಿಂಗ್ ಸಕ್ಸಸ್‌ಫುಲಿ' ಎಂಬ ಆಕರ್ಷಕ ಟ್ಯಾಗ್ ಲೈನ್ ಕೂಡ ಇದೆ.
ಶೀರ್ಷಿಕೆ ಹಿಂದಿದೆ ನಿರ್ಮಾಪಕರ ಕನಸು
ಸಿನಿಮಾ ಬಿಡುಗಡೆಯ ನಂತರ 'ಸೂಪರ್ ಹಿಟ್' ಆಗುವುದು ವಾಡಿಕೆ. ಆದರೆ, ಈ ಚಿತ್ರದ ಶೀರ್ಷಿಕೆಯೇ 'ಸೂಪರ್ ಹಿಟ್'. ಈ ಟೈಟಲ್ ಹುಟ್ಟಿದ್ದರ ಹಿಂದಿನ ಇಂಟ್ರೆಸ್ಟಿಂಗ್ ಸಂಗತಿಯನ್ನು ನಿರ್ದೇಶಕ ವಿಜಯಾನಂದ್ ಹಂಚಿಕೊಂಡಿದ್ದಾರೆ. ಒಂದಷ್ಟು ಏಳುಬೀಳುಗಳನ್ನು ಕಂಡಿದ್ದ ನಿರ್ಮಾಪಕ ಜಿ.ಉಮೇಶ್ ಅವರು 'ಸೂಪರ್ ಹಿಟ್' ಸಿನಿಮಾ ನಿರ್ಮಾಣ ಮಾಡಬೇಕು ಎಂಬ ಕನಸು ಕಂಡಿದ್ದರಂತೆ. ಕಥೆಗೂ ಹೊಂದಿಕೆಯಾಗುವುದರಿಂದ ನಿರ್ದೇಶಕರು ಅದನ್ನೇ ಶೀರ್ಷಿಕೆಯಾಗಿ ಇಟ್ಟಿರುವುದಾಗಿ ತಿಳಿಸಿದ್ದಾರೆ.
ಥ್ರಿಲ್ಲರ್ ಕಾಮಿಡಿ ಜಾನರ್‌ನಲ್ಲಿ ಹೊಸ ಪ್ರಯತ್ನ
ಈ ಚಿತ್ರದಲ್ಲಿ ಆರಂಭದಿಂದ ಕೊನೆಯವರೆಗೂ ಪ್ರತಿ 10 ನಿಮಿಷಕ್ಕೊಮ್ಮೆ ಪ್ರೇಕ್ಷಕರನ್ನು ಬೆರಗಾಗಿಸುವ ಅಂಶಗಳು ಮತ್ತು ತಿರುವುಗಳು ಇರಲಿವೆ. ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ಥ್ರಿಲ್ಲರ್ ಕಾಮಿಡಿ ಜಾನರ್‌ನಲ್ಲಿ ಭಿನ್ನ ಪ್ರಯತ್ನ ಮಾಡಿರುವುದಾಗಿ ನಿರ್ದೇಶಕರು ಸುಳಿವು ನೀಡಿದ್ದಾರೆ.
ತಾರಾಬಳಗ
ಸೋಶಿಯಲ್ ಮೀಡಿಯಾದಿಂದ ಕಾಮಿಡಿ ಸ್ಟಾರ್ ಎನಿಸಿಕೊಂಡಿರುವ ಗೌರವ್ ಶೆಟ್ಟಿ ಮತ್ತು ಗಿಲ್ಲಿ ನಟ ನಾಯಕರಾಗಿ ನಟಿಸಿದ್ದು, ಶ್ವೇತಾ ನಾಯಕಿಯಾಗಿ ಜೋಡಿಯಾಗಿದ್ದಾರೆ. ಉಳಿದಂತೆ, ಡ್ರ್ಯಾಗನ್ ಮಂಜು, ಸಾಧು ಕೋಕಿಲ, ಸೀನು ಭಾಯ್, ನಾಗವರ್ಧನ್, ಪ್ರಮೋದ್ ಶೆಟ್ಟಿ, ಜೀಜಿ, ಗಿರಿ, ಟೆನ್ನಿಸ್ ಕೃಷ್ಣ, ಕರಿಸುಬ್ಬು, ಸೋಮಶೇಖರ್, ವಂಶಿ, ಮಂಜಣ್ಣ, ಬಿ.ಎನ್ ಮಂಗಳ, ಅಶ್ವಿನಿ ರಾವ್, ಸ್ವಪ್ನ ಶೆಟ್ಟಿಗಾರ್, ಮಂಗಳೂರು ಮೀನನಾಥ ಮತ್ತು ವಿ.ನಾಗೇಂದ್ರ ಪ್ರಸಾದ್ ಕೂಡ ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದಾರೆ.
ವಿಜಯಲಕ್ಷ್ಮಿ ಎಂಟರ್‌ಪ್ರೈಸಸ್ ಬ್ಯಾನರ್ನಡಿ ಜಿ.ಉಮೇಶ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಆರ್.ಡಿ.ನಾಗಾರ್ಜುನ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ, ಹಾಗೂ ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಮತ್ತು ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.
ಖ್ಯಾತ ಸಿನಿಮಾ ಸಾಹಿತಿ ನಾಗೇಂದ್ರ ಪ್ರಸಾದ್ ಅವರ ಸಹೋದರನಾದ ನಿರ್ದೇಶಕ ವಿಜಯಾನಂದ್, 'ಸು ಫ್ರಂ ಸೋ' ಚಿತ್ರಕ್ಕೆ ಸಿಕ್ಕ ಅಭೂತಪೂರ್ವ ಯಶಸ್ಸಿನ ನಂತರ ಕಮರ್ಷಿಯಲ್ ದಾಟಿಯಲ್ಲಿ, ಹಾಸ್ಯವನ್ನು ಪ್ರಧಾನವಾಗಿಟ್ಟುಕೊಂಡು ಈ ಸಿನಿಮಾ ರೂಪಿಸಿದ್ದಾರೆ. ಚಿತ್ರದ ಎಲ್ಲಾ ಕೆಲಸ ಕಾರ್ಯಗಳೂ ಮುಕ್ತಾಯಗೊಂಡಿದ್ದು, ಸೂಕ್ತ ಸಮಯ ನೋಡಿ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧವಾಗಿದೆ.