'ಬಾರ್ಡರ್ 2' ಚಿತ್ರೀಕರಣ ಮುಗಿಸಿದ ಅಹಾನ್ ಶೆಟ್ಟಿ : ಭಾವುಕ ಪತ್ರ
ಅಹಾನ್ ಹಂಚಿಕೊಂಡಿರುವ ಚಿತ್ರಗಳಲ್ಲಿ ಒಂದು, ಅವರು ಸಹನಟರಾದ ವರುಣ್ ಧವನ್ ಮತ್ತು ದಿಲ್ಜಿತ್ ದೋಸಾಂಜ್ ಅವರೊಂದಿಗೆ ಮಾತುಕತೆ ನಡೆಸುತ್ತಿರುವುದನ್ನು ತೋರಿಸುತ್ತದೆ.
ಸಿನಿತಂಡದೊಂದಿಗೆ ಅಹಾನ್ ಶೆಟ್ಟಿ
ಖ್ಯಾತ ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಪುತ್ರ ಅಹಾನ್ ಶೆಟ್ಟಿ ಅವರು ತಮ್ಮ ಬಹುನಿರೀಕ್ಷಿತ ಸಿನಿಮಾ 'ಬಾರ್ಡರ್ 2' ಚಿತ್ರೀಕರಣ ಮುಕ್ತಾಯಗೊಳಿಸಿದ್ದಾರೆ. ಈ ಕುರಿತು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಚಿತ್ರತಂಡ ಮತ್ತು ಸಹನಟರೊಂದಿಗೆ ತೆಗೆದ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸನ್ನಿ ಡಿಯೋಲ್ ಮತ್ತು ಸುನೀಲ್ ಶೆಟ್ಟಿ ಅವರ ಐಕಾನಿಕ್ ವಾರ್ ಡ್ರಾಮಾ 'ಬಾರ್ಡರ್' ಚಿತ್ರದ ಮುಂದುವರಿದ ಭಾಗವಾಗಿರುವ 'ಬಾರ್ಡರ್ 2' ಜನವರಿ 23ರಂದು ಬಿಡುಗಡೆಯಾಗಲಿದೆ.
ಅಹಾನ್ ಹಂಚಿಕೊಂಡಿರುವ ಚಿತ್ರಗಳಲ್ಲಿ ಒಂದು, ಅವರು ಸಹನಟರಾದ ವರುಣ್ ಧವನ್ ಮತ್ತು ದಿಲ್ಜಿತ್ ದೋಸಾಂಜ್ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಚಿತ್ರದಲ್ಲಿ, ಅಹಾನ್, ಸನ್ನಿ ಡಿಯೋಲ್, ವರುಣ್ ಮತ್ತು ದಿಲ್ಜಿತ್ ಜೊತೆ ನಗುತ್ತಾ ಪೋಸ್ ನೀಡಿದ್ದಾರೆ. ಅಲ್ಲದೆ, ಕೆಲವು ಸೇನಾಧಿಕಾರಿಗಳೊಂದಿಗೆ ತೆಗೆದ ಫೋಟೋವನ್ನು ಸಹ ಅವರು ಹಂಚಿಕೊಂಡಿದ್ದಾರೆ.
ಭಾವನಾತ್ಮಕ ಪತ್ರ
'ಬಾರ್ಡರ್ 2' ಚಿತ್ರೀಕರಣದ ಅನುಭವದ ಬಗ್ಗೆ ಒಂದು ಭಾವನಾತ್ಮಕ ಪತ್ರವನ್ನು ಹಂಚಿಕೊಂಡಿರುವ ಅಹಾನ್, ಇಂದು ಸೆಟ್‌ನಿಂದ ಹೊರಬರುವುದು ನಾನು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಕಷ್ಟ ಎನಿಸಿತು. ಈ ಚಿತ್ರ ನನಗೆ ಸವಾಲು ಹಾಕಿತ್ತು ಮತ್ತು ನಾನು ಎಂದಿಗೂ ಮರೆಯಲಾಗದ ಕ್ಷಣಗಳನ್ನು ನೀಡಿತ್ತು ಎಂದು ಬರೆದಿದ್ದಾರೆ. ಸಶಸ್ತ್ರ ಪಡೆಗಳ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸಿದ ಅವರು, 'ಬಾರ್ಡರ್ 2' ಕೇವಲ ಒಂದು ಚಲನಚಿತ್ರವಲ್ಲ, ಇದು ನಿಜವಾದ ಕಥೆಗಳು, ನಿಜವಾದ ಧೈರ್ಯ ಮತ್ತು ಪರದೆಯಾಚೆಗೂ ಜೀವಂತವಾಗಿರುವ ದೇಶಭಕ್ತಿಯ ಭಾರವನ್ನು ಹೊತ್ತುಕೊಂಡಿದೆ ಎಂದು ಹೇಳಿದ್ದಾರೆ. ಈ ಸಿನಿಮಾ ನನ್ನೊಂದಿಗೆ ಶಾಶ್ವತವಾಗಿ ಉಳಿಯಲಿದೆ ಎಂದೂ ಅವರು ಸೇರಿಸಿದ್ದಾರೆ.
ಅಹಾನ್ ಅವರ ತಂದೆ, ನಟ ಸುನೀಲ್ ಶೆಟ್ಟಿ, ಈ ಪೋಸ್ಟ್‌ಗೆ ಮೊದಲಿಗರಾಗಿ ಪ್ರತಿಕ್ರಿಯಿಸಿದ್ದಾರೆ. ‘ಬಾರ್ಡರ್’ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಸುನೀಲ್, ಹೃದಯ, ಚಪ್ಪಾಳೆ, ಬೆಂಕಿ ಮತ್ತು ದೃಷ್ಟಿದೋಷ ನಿವಾರಕ ಎಮೋಜಿಗಳನ್ನು ಬಳಸಿಕೊಂಡು ತನ್ನ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ವರುಣ್ ಧವನ್ ‘ಬೇಗ ಸಿಗೋಣ ಜವಾನ್’ ಎಂದು ಕಾಮೆಂಟ್ ಮಾಡಿದರೆ, ಮಿಜಾನ್ ಜಾಫ್ರಿ ‘ನಿರೀಕ್ಷೆಯಲ್ಲಿದ್ದೇನೆ ಸಹೋದರ, ಫುಲ್ ಪವರ್’ ಎಂದು ಬರೆದಿದ್ದಾರೆ.
'ಕೇಸರಿ' ಸಿನಿಮಾ ಖ್ಯಾತಿಯ ಅನುರಾಗ್ ಸಿಂಗ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ದಿಲ್ಜಿತ್ ದೋಸಾಂಜ್, ಸೋನಮ್ ಬಾಜ್ವಾ, ಸನ್ನಿ ಡಿಯೋಲ್, ವರುಣ್ ಧವನ್, ಅಹಾನ್ ಶೆಟ್ಟಿ ಮತ್ತು ಮೋನಾ ಸಿಂಗ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ, ಟಿ-ಸೀರೀಸ್ ಮತ್ತು ಜೆಪಿ ಫಿಲ್ಮ್ಸ್ ದಿಲ್ಜಿತ್ ದೋಸಾಂಜ್ ಅವರ ಮೊದಲ ನೋಟವನ್ನು ಬಿಡುಗಡೆ ಮಾಡಿದ್ದವು. ದಿಲ್ಜಿತ್ ಅವರು ಏರ್ ಫೋರ್ಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದು, ಆ ಪಾತ್ರದ ಒಂದು ನೋಟದ ವೀಡಿಯೊವನ್ನು ಸಹ ಹಂಚಿಕೊಂಡಿದ್ದರು. ಕಳೆದ ನವೆಂಬರ್‌ನಲ್ಲಿ ವರುಣ್ ಧವನ್ ಅವರ 'ಬಾರ್ಡರ್ 2' ಚಿತ್ರದ ಮೊದಲ ನೋಟವನ್ನು ಸಹ ಬಹಿರಂಗಪಡಿಸಲಾಗಿತ್ತು. ಅವರು ಚಿತ್ರದಲ್ಲಿ ಹೋಶಿಯಾರ್ ಸಿಂಗ್ ದಹಿಯಾ ಅವರ ಪಾತ್ರವನ್ನು ನಿರ್ವಹಿಸಲಿದ್ದಾರೆ.
'ಬಾರ್ಡರ್ 2' ಚಿತ್ರದ ಕಥಾವಸ್ತುವನ್ನು ಸದ್ಯಕ್ಕೆ ಗೌಪ್ಯವಾಗಿ ಇಡಲಾಗಿದೆ. ಗಣರಾಜ್ಯೋತ್ಸವ ವಾರಾಂತ್ಯದ ಮುನ್ನ ಜನವರಿ 23, 2026 ರಂದು ಈ ಸಿನಿಮಾ ಬಿಡುಗಡೆಯಾಗಲಿದೆ.