'ಅಖಂಡ 2' ಟಿಕೆಟ್ ದರ ಹೆಚ್ಚಳ|ಬೆಂಗಳೂರಿನಲ್ಲೂ ಗನನಕ್ಕೇರಿದ ಟಿಕೆಟ್ ದರ
ಬೆಂಗಳೂರಿನಲ್ಲಿ ಇಂದು ರಾತ್ರಿಯಿಂದಲೇ 'ಅಖಂಡ 2' ಪ್ರೀಮಿಯರ್ ಶೋ ಪ್ರದರ್ಶಿಸಲಾಗುತ್ತಿದ್ದು, ಪ್ರೀಮಿಯರ್ ಶೋ ಟಿಕೆಟ್ ದರಗಳು ಗಗನ ಮುಟ್ಟಿವೆ. ಕೆಲ ಮಲ್ಟಿಪ್ಲೆಕ್ಸ್ಗಳಲ್ಲಿ 900-1000 ರೂಪಾಯಿಗಳಿಗೆ ಟಿಕೆಟ್ ಮಾರಾಟ ಮಾಡಲಾಗುತ್ತಿದೆ.
ನಂದಮೂರಿ ಬಾಲಕೃಷ್ಣ
ನಟ ನಂದಮೂರಿ ಬಾಲಕೃಷ್ಣ ಅವರ ಬಹುನಿರೀಕ್ಷಿತ ಚಿತ್ರ 'ಅಖಂಡ 2' ಬಿಡುಗಡೆಗೂ ಮುನ್ನವೇ ಭಾರಿ ಸದ್ದು ಮಾಡುತ್ತಿದೆ. ಆಂಧ್ರಪ್ರದೇಶ ಸರ್ಕಾರವು ಈ ಚಿತ್ರದ ಟಿಕೆಟ್ ದರಗಳನ್ನು ಹೆಚ್ಚಿಸಲು ಅಧಿಕೃತವಾಗಿ ಅನುಮತಿ ನೀಡಿದ್ದು, ಸರ್ಕಾರದ ಈ ನಿರ್ಧಾರದಿಂದಾಗಿ ಆಂಧ್ರಪ್ರದೇಶದಾದ್ಯಂತ ಸಿನಿಮಾ ಟಿಕೆಟ್‌ಗಳು ಸಾಮಾನ್ಯ ದರಕ್ಕಿಂತ ಹೆಚ್ಚಾಗಿ ಮಾರಾಟವಾಗಲಿವೆ. ಈ ಟಿಕೆಟ್ ದರ ಹೆಚ್ಚಳದ ಪರಿಣಾಮ ಕೇವಲ ಆಂಧ್ರಕ್ಕಷ್ಟೇ ಸೀಮಿತವಾಗಿಲ್ಲದೆ, ಗಡಿ ಮೀರಿ ಬೆಂಗಳೂರಿನ ಚಿತ್ರಮಂದಿರಗಳ ಮೇಲೂ ಬೀರಿದೆ.
ಬೆಂಗಳೂರಿನ ಪ್ರಮುಖ ಮಲ್ಟಿಪ್ಲೆಕ್ಸ್‌ಗಳು ಮತ್ತು ಕೆಲವು ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಲ್ಲಿ 'ಅಖಂಡ 2' ಚಿತ್ರದ ಟಿಕೆಟ್ ದರಗಳು ದುಬಾರಿಯಾಗಿವೆ. ಬೆಂಗಳೂರಿನ ತೆಲುಗು ಪ್ರೇಕ್ಷಕರು ಮತ್ತು ಬಾಲಕೃಷ್ಣ ಅಭಿಮಾನಿಗಳು ಹೆಚ್ಚಿರುವ ಕಾರಣ, ಇಲ್ಲಿಯೂ ಕೂಡ ಚಿತ್ರದ ಟಿಕೆಟ್‌ಗಳಿಗೆ ಬೇಡಿಕೆ ಹೆಚ್ಚಿದೆ.
ಆಂಧ್ರದಲ್ಲಿ ಸಿನಿಮಾದ ಪ್ರೀಮಿಯರ್ ಶೋಗಳಿಗೆ 600 ರೂಪಾಯಿ ಟಿಕೆಟ್ ದರ ನಿಗದಿಪಡಿಸಲಾಗಿದ್ದರೆ, ಬಿಡುಗಡೆ ದಿನದ ಸಾಮಾನ್ಯ ಶೋಗಳಿಗೆ 375 ರಿಂದ 275 ರೂಪಾಯಿಗಳ ದರವನ್ನು ನಿಗದಿಪಡಿಸಲಾಗಿದೆ. ಸಿಂಗಲ್ ಸ್ಕ್ರೀನ್ ಮತ್ತು ಟೈರ್ 2 ನಗರಗಳಲ್ಲಿ 200 ರಿಂದ 175 ರೂಪಾಯಿಗಳಿಗೆ ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ.
ಇಂದು ರಾತ್ರಿಯಿಂದಲೇ ಪ್ರೀಮಿಯರ್ ಶೋ
ಆದರೆ ಬೆಂಗಳೂರಿನಲ್ಲಿ ಇಂದು ರಾತ್ರಿಯಿಂದಲೇ ಪ್ರೀಮಿಯರ್ ಶೋ ಪ್ರದರ್ಶಿಸಲಾಗುತ್ತಿದ್ದು, ಪ್ರೀಮಿಯರ್ ಶೋ ಟಿಕೆಟ್ ದರಗಳು ಗಗನ ಮುಟ್ಟಿವೆ. ಕೆಲ ಮಲ್ಟಿಪ್ಲೆಕ್ಸ್ಗಳಲ್ಲಿ 900 ರಿಂದ 1000 ರೂಪಾಯಿಗಳಿಗೆ ಟಿಕೆಟ್ ಮಾರಾಟ ಮಾಡಲಾಗುತ್ತಿದ್ದರೆ, ಬೆಂಗಳೂರಿನ ಒಂದು ಮಲ್ಟಿಪ್ಲೆಕ್ಸ್ನಲ್ಲಿ 1950 ರೂಪಾಯಿಗೆ ಟಿಕೆಟ್ ಮಾರಾಟ ಮಾಡುತ್ತಿದೆ. ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿಯೂ ಸಹ 400 ರಿಂದ 500 ರೂಪಾಯಿಗೆ ಟಿಕೆಟ್ ಮಾರಾಟ ಮಾಡಲಾಗುತ್ತಿದೆ.
ಡಿಸೆಂಬರ್ 05ರ ಶೋಗಳ ಟಿಕೆಟ್ ಬೆಲೆಗಳು ಇನ್ನಷ್ಟು ಹೆಚ್ಚಾಗಿದ್ದು, ಹಲವು ಮಲ್ಟಿಪ್ಲೆಕ್ಸ್ಗಳಲ್ಲಿ 750 ರಿಂದ 500ರ ವರೆಗೆ ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ. ಶನಿವಾರ ಮತ್ತು ಭಾನುವಾರ ಈ ದರಗಳು ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. ಊರ್ವಶಿ, ಸಿದ್ದಲಿಂಗೇಶ್ವರ ಅಂಥಹ ಚಿತ್ರಮಂದಿರಗಳಲ್ಲಿಯೂ ಸಹ 600 ರಿಂದ 500 ರೂಪಾಯಿ ಟಿಕೆಟ್ ದರ ಇದೆ.