DDLJಗೆ 30 ವರ್ಷ| ಲಂಡನ್‌ನಲ್ಲಿ ರಾಜ್-ಸಿಮ್ರಾನ್‌ನ ಕಂಚಿನ ಪ್ರತಿಮೆ ಅನಾವರಣ

1995 ರಲ್ಲಿ ಬಿಡುಗಡೆಯಾದ 'ಡಿಡಿಎಲ್‌ಜೆ' 102.5 ಕೋಟಿ ಗಳಿಸಿ ಆ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರವಾಗಿ ಹೊರಹೊಮ್ಮಿತು. ಕಾಲಾನಂತರದಲ್ಲಿ, ಇದು ಕೇವಲ ಹಿಟ್ ಚಿತ್ರವಾಗಿ ಉಳಿಯದೆ, ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ಅತ್ಯಂತ ಯಶಸ್ವಿ ಮತ್ತು ಅಜರಾಮರ ಚಿತ್ರಗಳಲ್ಲಿ ಒಂದಾಯಿತು.

Update: 2025-12-05 08:07 GMT

SRK-ಕಾಜೋಲ್ ಕಂಚಿನ ಪ್ರತಿಮೆ

Click the Play button to listen to article

ಬಾಲಿವುಡ್‌ನ ಐಕಾನಿಕ್ ಪ್ರೇಮಕಥೆಯಾದ 'ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ' ಸಿನಿಮಾ ಬಿಡುಗಡೆಯಾಗಿ ಈಗ ಮೂವತ್ತು ವರ್ಷಗಳು ಸಂದಿವೆ. ಶಾರುಖ್ ಖಾನ್, ಕಾಜೊಲ್‌ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಸಿನಿಮಾ ಮುಂಬೈನ ಮರಾಠಾ ಮಂದಿರದಲ್ಲಿ ಅಕ್ಟೋಬರ್ 20, 1995 ರಂದು ಬಿಡುಗಡೆಯಾದ ದಿನದಿಂದಲೂ ಈ ಚಿತ್ರವು ಪ್ರತಿದಿನ ಪ್ರದರ್ಶನಗೊಳ್ಳುತ್ತಾ ತನ್ನ ದಾಖಲೆಯನ್ನು ಜೀವಂತವಾಗಿರಿಸಿದೆ. ಆದರೆ ಈ ವರ್ಷ, ಈ ಗೌರವವು ಹೊಸ ಇತಿಹಾಸವನ್ನೇ ಸೃಷ್ಟಿಸಿದೆ.

ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ಮೊದಲ ಬಾರಿಗೆ, ಒಂದು ಚಿತ್ರದ ಪ್ರಮುಖ ಪಾತ್ರಗಳಿಗೆ ಲಂಡನ್‌ನ ಐಕಾನಿಕ್ ಲೆಸ್ಟರ್ ಸ್ಕ್ವೇರ್‌ನಲ್ಲಿ ಪೂರ್ಣ ಗಾತ್ರದ ಕಂಚಿನ ಪ್ರತಿಮೆಯ ಗೌರವ ಸಿಕ್ಕಿದೆ. ಚಿತ್ರದ ಸಿಗ್ನೇಚರ್ ಪೋಸ್‌ನಲ್ಲಿರುವ ರಾಜ್ ಮತ್ತು ಸಿಮ್ರಾನ್ ಪ್ರತಿಮೆಯನ್ನು  ಶಾರುಖ್ ಖಾನ್ ಮತ್ತು ಕಾಜೋಲ್ ಅವರು ಸ್ವತಃ ಲಂಡನ್‌ನಲ್ಲಿ ಅನಾವರಣಗೊಳಿಸಿದರು. ಈ ಅದ್ಭುತ ಕ್ಷಣದ ಫೋಟೋಗಳು ಮತ್ತು ವಿಡಿಯೋಗಳು ಕ್ಷಣಾರ್ಧದಲ್ಲಿ ವೈರಲ್ ಆಗಿವೆ.

ಅನಾವರಣ ಸಮಾರಂಭಕ್ಕೆ, ಕಾಜೋಲ್ ಅವರು ಕಡಲ ನೀಲಿ ಸೀರೆಯಲ್ಲಿ ಕಂಗೊಳಿಸಿದರೆ, ಶಾರುಖ್ ಖಾನ್ ಕ್ಲಾಸಿಕ್ ಕಪ್ಪು ಸೂಟ್‌ನಲ್ಲಿ ಗಮನ ಸೆಳೆದರು.

ಚಿತ್ರದ ಈ ಮೈಲಿಗಲ್ಲಿನ ಬಗ್ಗೆ ಶಾರುಖ್ ಖಾನ್ ಅವರು 'X' ನಲ್ಲಿ ತಮ್ಮ ಸಂತೋಷ ವ್ಯಕ್ತಪಡಿಸಿ "ಬಡೇ ಬಡೇ ದೇಶೋನ್ ಮೇ, ಐಸಿ ಛೋಟೀ ಛೋಟೀ ಬಾತೇಂ ಹೋತೀ ರೆಹತೀ ಹೈಂ, ಸೆನೋರಿಟಾ! 'ಡಿಡಿಎಲ್‌ಜೆ' 30 ವರ್ಷಗಳನ್ನು ಆಚರಿಸಲು ಲಂಡನ್‌ನ ಲೆಸ್ಟರ್ ಸ್ಕ್ವೇರ್‌ನಲ್ಲಿ ರಾಜ್ ಮತ್ತು ಸಿಮ್ರಾನ್ ಅವರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲು ರೋಮಾಂಚನಗೊಂಡಿದ್ದೇನೆ! 'ಸೀನ್ಸ್ ಇನ್ ದಿ ಸ್ಕ್ವೇರ್' ಪಥದಲ್ಲಿ ಪ್ರತಿಮೆಯ ಗೌರವಕ್ಕೆ ಪಾತ್ರವಾದ ಮೊದಲ ಭಾರತೀಯ ಚಿತ್ರ ಡಿಡಿಎಲ್‌ಜೆ ಎಂಬುದು ಅತೀವ ಸಂತೋಷ ತಂದಿದೆ. ಇದನ್ನು ಸಾಧ್ಯವಾಗಿಸಿದ ಯುಕೆ ಜನತೆಗೆ ದೊಡ್ಡ ಧನ್ಯವಾದ. ನೀವು ಲಂಡನ್‌ಗೆ ಬಂದಾಗ ರಾಜ್ ಮತ್ತು ಸಿಮ್ರಾನ್ ಅವರನ್ನು ಭೇಟಿ ಮಾಡಿ...ಎಂದು ಬರೆದಿದ್ದಾರೆ.

1995 ರಲ್ಲಿ ಬಿಡುಗಡೆಯಾದ 'ಡಿಡಿಎಲ್‌ಜೆ' 102.5 ಕೋಟಿ ಗಳಿಸಿ ಆ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರವಾಗಿ ಹೊರಹೊಮ್ಮಿತು. ಕಾಲಾನಂತರದಲ್ಲಿ, ಇದು ಕೇವಲ ಹಿಟ್ ಚಿತ್ರವಾಗಿ ಉಳಿಯದೆ, ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ಅತ್ಯಂತ ಯಶಸ್ವಿ ಮತ್ತು ಅಜರಾಮರ ಚಿತ್ರಗಳಲ್ಲಿ ಒಂದಾಯಿತು. ಇದು 'ನೀವು ಸಾಯುವ ಮೊದಲು ನೋಡಲೇಬೇಕಾದ 1001 ಚಲನಚಿತ್ರಗಳು' ಪಟ್ಟಿಯಲ್ಲಿರುವ ಮೂರು ಹಿಂದಿ ಚಲನಚಿತ್ರಗಳಲ್ಲಿ ಒಂದಾಗಿದೆ. ಅಲ್ಲದೇ ಬ್ರಿಟಿಷ್ ಫಿಲ್ಮ್ ಇನ್‌ಸ್ಟಿಟ್ಯೂಟ್‌ನ 'ಸಾರ್ವಕಾಲಿಕ ಟಾಪ್ ಇಂಡಿಯನ್ ಫಿಲ್ಮ್ಸ್' ಪಟ್ಟಿಯಲ್ಲಿ ಹನ್ನೆರಡನೇ ಸ್ಥಾನದಲ್ಲಿದೆ.

ಅಮೆರಿಕ ಅಧ್ಯಕ್ಷರ ಮೆಚ್ಚುಗೆ 

ಮಾಜಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಡೊನಾಲ್ಡ್ ಟ್ರಂಪ್ ಇಬ್ಬರೂ ಬಹುತೇಕ ಯಾವುದೇ ವಿಷಯದಲ್ಲಿ ಒಪ್ಪಿಗೆ ಸೂಚಿಸದಿದ್ದರೂ, 'ಡಿಡಿಎಲ್‌ಜೆ' ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದು ಈ ಸಿನಿಮಾದ ವಿಶಿಷ್ಟ ಸ್ಥಾನಕ್ಕೆ ಸಾಕ್ಷಿಯಾಗಿದೆ. 2015ರಲ್ಲಿ ಭಾರತಕ್ಕೆ ಭೇಟಿ ನೀಡಿದಾಗ, ಒಬಾಮಾ ಅವರು ಐತಿಹಾಸಿಕ ಸಿರಿ ಫೋರ್ಟ್‌ನಲ್ಲಿ ಮಾಡಿದ ಭಾಷಣದಲ್ಲಿ ಸಿನಿಮಾದ ಜನಪ್ರಿಯ ಹಿಂದಿ ಡೈಲಾಗ್ ಅನ್ನು ಉಲ್ಲೇಖಿಸಿ, ಪ್ರೇಕ್ಷಕರನ್ನು ರೋಮಾಂಚನಗೊಳಿಸಿದ್ದರು. ಐದು ವರ್ಷಗಳ ನಂತರ ಟ್ರಂಪ್ ಅವರು ಭಾರತದ ಸಿನಿಮಾದ ಉತ್ಕೃಷ್ಟತೆ ಮತ್ತು ಸಾಂಸ್ಕೃತಿಕ ಸೃಜನಶೀಲತೆಗೆ 'ಡಿಡಿಎಲ್‌ಜೆ' ಸಾಕ್ಷಿ ಎಂದು ಉಲ್ಲೇಖಿಸಿದ್ದರು.

ಕಥಾವಸ್ತು ಏನು? 

ಲಂಡನ್‌ನಲ್ಲಿ ವಾಸಿಸುವ ಇಬ್ಬರು ಯುವ ಭಾರತೀಯರಾದ ಸಿಮ್ರಾನ್ (ಕಾಜೋಲ್) ಮತ್ತು ರಾಜ್ (ಶಾರುಖ್ ಖಾನ್) ಯುರೋಪ್ ಪ್ರವಾಸದ ವೇಳೆ ಪ್ರೀತಿಸುತ್ತಾರೆ. ಆದರೆ, ಅವರ ಮದುವೆಗೆ ಸಿಮ್ರಾನ್ ಅವರ ಸಂಪ್ರದಾಯವಾದಿ ಮತ್ತು ಒಪ್ಪಿಗೆ ನೀಡದ ತಂದೆಯ ಮನವೊಲಿಸುವುದು ಕಥೆಯ ತಿರುಳು. ನಿರ್ದೇಶಕ ಆದಿತ್ಯ ಚೋಪ್ರಾ ಅವರ ಈ ಚಿತ್ರವು ತೆರೆಗೆ ಬಂದ ತಕ್ಷಣವೇ ಭಾರತದ ಶ್ರೇಷ್ಠ ಚಲನಚಿತ್ರಗಳ ಪಟ್ಟಿಗೆ ಸೇರಿತು. 'ಕಮ್... ಫಾಲ್ ಇನ್ ಲವ್' ಎಂಬ ಟ್ಯಾಗ್‌ಲೈನ್, ಸಂಭಾಷಣೆ, ಮ್ಯೂಸಿಕ್ ಮತ್ತು ಅಂತಾರಾಷ್ಟ್ರೀಯ ಚಿತ್ರೀಕರಣದ ಸ್ಥಳಗಳು ಇದನ್ನು ಜಾಗತಿಕ ವಿದ್ಯಮಾನವಾಗಿಸಿದವು.

 

ದಾಖಲೆ ಬರೆದ ಸಿನಿಮಾ 

'ಡಿಡಿಎಲ್‌ಜೆ'ಯ ಪ್ರಭಾವವು ದೇಶ-ವಿದೇಶಗಳಲ್ಲಿ ಇಂದಿಗೂ ಗೋಚರಿಸುತ್ತದೆ. ಭಾರತದ ಸಿನಿಮಾ ರಾಜಧಾನಿಯಾದ ಮುಂಬೈನಲ್ಲಿರುವ ಮರಾಠಾ ಮಂದಿರ್ ಚಿತ್ರಮಂದಿರದಲ್ಲಿ, ಬಿಡುಗಡೆಯಾದ ಮೂವತ್ತು ವರ್ಷಗಳ ನಂತರವೂ ಪ್ರತಿದಿನ ಈ ಚಿತ್ರ ಪ್ರದರ್ಶನಗೊಳ್ಳುತ್ತಿದೆ. ಇದು ವಿಶ್ವದ ಸಿನಿಮಾ ಇತಿಹಾಸದಲ್ಲಿ ಒಂದು ಅಪ್ರತಿಮ ದಾಖಲೆಯಾಗಿದೆ. ಚಿತ್ರದ ಬಹುತೇಕ ಭಾಗಗಳನ್ನು ಚಿತ್ರೀಕರಿಸಿದ ಸ್ವಿಟ್ಜರ್ಲೆಂಡ್, ಭಾರತೀಯ ಪ್ರೇಕ್ಷಕರಿಗೆ ಪ್ರಣಯದ ಸಂಕೇತವಾಯಿತು. ಭಾರತದಿಂದ ಪ್ರವಾಸೋದ್ಯಮ ಹೆಚ್ಚಳಕ್ಕೆ ಈ ಚಿತ್ರ ಕಾರಣವಾಯಿತು ಮತ್ತು ಚಿತ್ರದಿಂದ ಪ್ರೇರಿತವಾದ ವಿಶೇಷ ರೈಲು ಮಾರ್ಗಗಳು ಮತ್ತು ಪ್ರಚಾರ ಅಭಿಯಾನಗಳು ಹುಟ್ಟಿಕೊಂಡವು. ಅಮೆರಿಕಾದಲ್ಲಿ ಈ ಚಿತ್ರ ಒಂದು ಬ್ರಾಡ್‌ವೇ ಮ್ಯೂಸಿಕಲ್, ನೆಟ್‌ಫ್ಲಿಕ್ಸ್ ಸಾಕ್ಷ್ಯಚಿತ್ರಗಳು ಮತ್ತು ಜಾಗತಿಕ ಸಾಂಸ್ಕೃತಿಕ ವಿದ್ಯಮಾನವಾಗಿ ಅದರ ಪ್ರಭಾವವನ್ನು ಅಧ್ಯಯನ ಮಾಡುವ ವಿಶ್ವವಿದ್ಯಾಲಯ ಕೋರ್ಸ್‌ಗಳಿಗೆ ಸ್ಫೂರ್ತಿ ನೀಡಿದೆ.

ಈ ಚಿತ್ರವು ಆಧುನಿಕ, ಆದರೆ ನೈತಿಕ ಮತ್ತು ಕುಟುಂಬ ಹಾಗೂ ಸಂಸ್ಕೃತಿಯಲ್ಲಿ ಬೇರೂರಿರುವ ಭಾರತದ ಚಿತ್ರಣವನ್ನು ನೀಡಿತ್ತು. ರಾಜ್ ಸಿಮ್ರಾನ್‌ನೊಂದಿಗೆ ಓಡಿಹೋಗದೆ, ಆಕೆಯ ತಂದೆಯ ಆಶೀರ್ವಾದವನ್ನು ಪಡೆಯಲು ಪ್ರಯತ್ನಿಸಿದಾಗ, ಪಾಶ್ಚಾತ್ಯ ಸ್ವಾತಂತ್ರ್ಯ ಮತ್ತು ಭಾರತೀಯ ಭಕ್ತಿ ಮೌಲ್ಯಗಳ ನಡುವಿನ ಸಮತೋಲನವನ್ನು ಸಾಧಿಸಲಾಗಿತ್ತು. ಪ್ರಗತಿ ಮತ್ತು ಪ್ರೀತಿಯನ್ನು ದಂಗೆಯಿಲ್ಲದೆ ಸಾಧಿಸಬಹುದು ಎಂದು ಸಾರಿತು, ಇದು ಸಂಪ್ರದಾಯ ಮತ್ತು ಆಧುನಿಕತೆಯು ಒಂದನ್ನೊಂದು ಬಲಪಡಿಸುತ್ತದೆ ಎಂದು ತೋರಿಸಿತ್ತು. ಪ್ರಪಂಚದಾದ್ಯಂತ ನೆಲೆಸಿರುವ ಕೋಟ್ಯಂತರ ಅನಿವಾಸಿ ಭಾರತೀಯರಿಗೆ ಈ ಚಿತ್ರವು ವಿಶೇಷವಾಗಿ ಆಪ್ತವಾಯಿತು.

ವಿದೇಶದಲ್ಲಿ ಜನಿಸಿ, ಇಂಗ್ಲಿಷ್ ಮಾತನಾಡಿದರೂ, ಸಂಪೂರ್ಣವಾಗಿ ಭಾರತೀಯರಾಗಿ ಉಳಿಯಬಹುದು ಎಂಬ ಸಾಂಸ್ಕೃತಿಕ ದೃಢೀಕರಣವನ್ನು ಈ ಸಿನಿಮಾ ನೀಡಿತು. 'ಡಿಡಿಎಲ್‌ಜೆ' ವಿಶ್ವದ ಮುಂದೆ ಭಾರತವನ್ನು ಬಡತನ ಮತ್ತು ಅತೀಂದ್ರಿಯತೆಯ ದೃಷ್ಟಿಕೋನದಿಂದ ಬದಲಾಯಿಸಿ, ಸಂಪತ್ತು, ಘನತೆ ಮತ್ತು ಭಾವನಾತ್ಮಕ ಆಳವನ್ನು ಹೊಂದಿರುವ ಸಂಸ್ಕೃತಿಯಾಗಿ ಪ್ರಸ್ತುತಪಡಿಸಿತು. ಮೂವತ್ತು ವರ್ಷಗಳ ನಂತರವೂ, ಈ ಸಿನಿಮಾ ಭಾರತದ ಅತ್ಯಂತ ಪ್ರಮುಖ ಸಾಂಸ್ಕೃತಿಕ ರಾಯಭಾರಿಯಾಗಿ ಮುಂದುವರೆದಿದೆ.

ಆದಿತ್ಯ ಚೋಪ್ರಾ ಅವರ ಚೊಚ್ಚಲ ನಿರ್ದೇಶನದ ಈ ಚಿತ್ರ, ಬಾಲಿವುಡ್ ಪ್ರೇಮಕಥೆಯನ್ನೇ ಮರು-ನಿರೂಪಿಸಿ, ಒಂದು ಇಡೀ ಪೀಳಿಗೆಯ ಪ್ರಣಯ ಕಲ್ಪನೆಯನ್ನು ರೂಪಿಸಿತು ಮತ್ತು ಅಂತರರಾಷ್ಟ್ರೀಯ ಸಾಂಸ್ಕೃತಿಕ ಮಾನದಂಡವಾಗಿ ಹೊರಹೊಮ್ಮಿತು.

Tags:    

Similar News