ʻಪಡೆಯಪ್ಪʼ ರೀ ರಿಲೀಸ್|ಮಹಿಳಾ ಸ್ವಾಭಿಮಾನ ಕೆಣಕುವಂತಿದೆಯೇ ರಜನಿ ಸಿನಿಮಾ?
ಇಡೀ ತಮಿಳು ಚಿತ್ರರಂಗದ ಹೆಗ್ಗುರುತು ಆಗಿರುವ ಪಡೆಯಪ್ಪ ಸಿನಿಮಾ ಇಂದು ತಮಿಳುನಾಡು, ಕರ್ನಾಟಕ ಸೇರಿದಂತೆ ಹಲವೆಡೆ ಮರು ಬಿಡುಗಡೆಯಾಗಿದೆ.
ಸೂಪರ್‌ಸ್ಟಾರ್ ರಜನಿಕಾಂತ್ ಅವರ 75ನೇ ವರ್ಷದ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಇಂದು ಅವರ ಐಕಾನಿಕ್ ಸಿನಿಮಾ ಪಡೆಯಪ್ಪ ಮರು ಬಿಡುಗಡೆಯಾಗಿದೆ. ತಮ್ಮ ವಿಭಿನ್ನ ಶೈಲಿ ಮೂಲಕವೇ ಅಭಿಮಾನಿಗಳನ್ನು ಮೋಡಿ ಮಾಡಿರುವ ತಲೈವಾ ಅವರಿಗೆ ʼಭಾಷಾʼ ನಂತರ ಹೆಚ್ಚು ಉತ್ತಮ ಹೆಸರು ತಂದುಕೊಟ್ಟ ಚಿತ್ರ ಪಡೆಯಪ್ಪ. ರಜನಿಕಾಂತ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪಡೆಯಪ್ಪ ಸಿನಿಮಾ ಇಂದು ತಮಿಳುನಾಡು, ಕರ್ನಾಟಕ ಸೇರಿದಂತೆ ಹಲವೆಡೆ ರೀ ರಿಲೀಸ್ ಆಗಿದೆ. 26 ವರ್ಷಗಳ ನಂತರವೂ ರಜಿನಿಯ ಗೆಟಪ್, ವಿಭಿನ್ನ ಶೈಲಿ ಹಾಗೂ ನಟನಾ ಚತುರತೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
1999 ರಲ್ಲಿ ಕೆ.ಎಸ್. ರವಿಕುಮಾರ್ ನಿರ್ದೇಶಿಸಿದ ಬ್ಲಾಕ್‌ಬಸ್ಟರ್ ಚಿತ್ರ 'ಪಡೆಯಪ್ಪ'ದಲ್ಲಿ ರಜನಿ ಮುಖ್ಯ ಪಾತ್ರದಲ್ಲಿ ನಟಿಸಿದರೆ, ದಿವಂಗತ ನಟ ಶಿವಾಜಿ ಗಣೇಶನ್, ಬಹುಭಾಷಾ ನಟಿಯರಾದ ಲಕ್ಷ್ಮೀ ಮತ್ತು ಸೌಂದರ್ಯ ಅವರು ನಟಿಸಿದ್ದರು.
ಇನ್ನು ಈ ಚಿತ್ರದಲ್ಲಿ ನಾಯಕ ನಟನಿಗೆ ಸರಿ ಸಮನಾಗಿ ನಿಲ್ಲುವ ಇನ್ನೊಂದು ಪಾತ್ರವೆಂದರೆ ನೀಲಾಂಬರಿ. ಈ ಖಳ ನಾಯಕಿ ಪಾತ್ರವೇ ಚಿತ್ರದ ಹೈಲೈಟ್. ದುರಹಂಕಾರ, ಹಠ, ದ್ವೇಷ, ಧೈರ್ಯದ ಜೊತೆ ಚೆಲುವು ತುಂಬಿದ ನೀಲಾಂಬರಿ ಪಾತ್ರಕ್ಕೆ ನಟಿ ರಮ್ಯಾಕೃಷ್ಣ ಅವರು ನ್ಯಾಯ ಒದಗಿಸಿದ್ದರು. ಆ ಪಾತ್ರದಲ್ಲಿ ಬೇರೆ ಯಾರನ್ನೂ ಊಹಿಸಿಕೊಳ್ಳಲು ಸಾಧ್ಯವೇ ಇರಲಿಲ್ಲ. ಮೊಟ್ಟ ಮೊದಲ ಬಾರಿಗೆ ಸೂಪರ್ ಸ್ಟಾರ್ ಇರುವ ಚಿತ್ರದಲ್ಲಿ ಮಹಿಳಾ ಪಾತ್ರಕ್ಕೆ ಅಷ್ಟೊಂದು ದೊಡ್ಡ ಮಟ್ಟದ ಮನ್ನಣೆ ಸಿಕ್ಕಿತ್ತು.
ಇಷ್ಟೆಲ್ಲಾ ಅದ್ದೂರಿ ಸ್ಕ್ರೀನ್ ಪ್ಲೇ, ಕಥಾ ಹಂದರ ಒಳಗೊಂಡಿದ್ದ ಈ ಚಿತ್ರವು ಈಗ ಮತ್ತೊಮ್ಮೆ ಮರು ಬಿಡುಗಡೆ ಆಗುವ ಮೂಲಕ ಅಭಿಮಾನಿಗಳನ್ನು ಸೆಳೆಯುತ್ತಿದೆ. ಮಹಿಳಾವಾದಿಗಳು ಈ ಸಿನಿಮಾಕ್ಕೆ ಆಕ್ಷೇಪ ಎತ್ತುವರೇ ಎಂಬ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ಅದಕ್ಕೆ ಮುಖ್ಯ ಕಾರಣ ಸಿನಿಮಾದಲ್ಲಿರುವ ಹೆಣ್ಣಿನ ಸ್ವಾಭಿಮಾನ ಕೆಣಕುವ ಸಂಭಾಷಣೆ.
ವಿವಾದಕ್ಕೀಡಾಗುತ್ತಾ ಆ ಒಂದು ಡೈಲಾಗ್?
ಚಿತ್ರದಲ್ಲಿ ರಮ್ಯಾ ಕೃಷ್ಣ ನಿರ್ವಹಿಸಿದ ನೀಲಾಂಬರಿ ಪಾತ್ರವು ಕೋಪ, ಹಠ, ಅಹಂಕಾರದ ಸಾಕ್ಷಾತ್ ರೂಪ ಎಂಬಂತಿದೆ. ಪಡೆಯಪ್ಪ ಮತ್ತು ನೀಲಾಂಬರಿ ಮುಖಾಮುಖಿಯಾಗುವ ಸನ್ನಿವೇಶವೊಂದರಲ್ಲಿ ಬರುವ ಸಂಭಾಷಣೆ ಈಗ ಮಾತ್ರವಲ್ಲ ಆಗಿನ ಕಾಲಕ್ಕೂ ಅಪ್ರಸ್ತುತ ಎಂಬಂತಿದೆ ಎಂಬುದು ಹಲವರ ವಾದ.
ಅಲ್ಲಿ ಹೆಣ್ಣು ಹೇಗಿರಬೇಕು, ಹೇಗೆ ನಡೆದುಕೊಂಡರೆ ಚಂದ ಎಂಬುದನ್ನು ಪಡೆಯಪ್ಪ (ರಜನಿಕಾಂತ್) ನೀಲಾಂಬರಿಗೆ ವಿವರಿಸುತ್ತಾನೆ. “ಹೆಣ್ಣೆಂದರೆ ತಾಳ್ಮೆ ಇರಬೇಕು. ಮೌನವಾಗಿರಬೇಕೆ ಹೊರತು ದರ್ಪ ತೋರಬಾರದು. ತಗ್ಗಿ ಬಗ್ಗಿ ನಡೆಯುತ್ತಿರಬೇಕು. ಭಯ-ಭಕ್ತಿಯಿಂದ ಇರಬೇಕೇ ಹೊರತು ಬಜಾರಿಯಂತೆ ಇರಬಾರದು. ಒಟ್ಟಿನಲ್ಲಿ ಹೆಣ್ಣು ಹೆಣ್ಣಾಗಿರಬೇಕು. ಹೆಚ್ಚು ದುರಾಸೆ ಪಟ್ಟ ಗಂಡು, ಹೆಚ್ಚು ಕೋಪಗೊಳ್ಳುವ ಹೆಣ್ಣು ಉತ್ತಮ ಜೀವನ ನಡೆಸಿದ ಇತಿಹಾಸವೇ ಇಲ್ಲ” ಎಂಬ ಮಾಸ್ ಡೈಲಾಗ್ ಒಂದಿದೆ. ಸಾಕಷ್ಟು ಪ್ರೇಕ್ಷಕರಿಂದ ಶಿಳ್ಳೆ ಗಿಟ್ಟಿಸಿಕೊಂಡ ಸಂಭಾಷಣೆ ಇದು. ಹಳೆಯ ಸಿನಿಮಾಗಳಲ್ಲಿ ಇಂತಹ ಡೈಲಾಗ್‌ಗಳು ಸರ್ವೇ ಸಾಮಾನ್ಯ.
ಇಂತಹ ಸಂಭಾಷಣೆಗೆ ವಿರೋಧ ವ್ಯಕ್ತಪಡಿಸುವಂತಹ ಮನಸ್ಥಿತಿ ಅಂದಿನ ಆಗಿನ ಸಾಮಾಜಿಕ ವ್ಯವಸ್ಥೆಗಿರಲಿಲ್ಲ. ಆದರೆ 26 ವರ್ಷಗಳ ನಂತರ ಅದೇ ಮನಸ್ಥಿತಿಯಲ್ಲಿಈ ಚಿತ್ರವನ್ನು ಸ್ವೀಕರಿಸುತ್ತಾರೆ ಎಂಬುದು ಸುಳ್ಳು. ಸಿನಿಮಾವನ್ನು ನೋಡುವ, ಅರ್ಥ ಮಾಡಿಕೊಳ್ಳುವ ಪ್ರವೃತಿ ಈಗ ಸಂಪೂರ್ಣವಾಗೊಗಿ ಬದಲಾಗಿದೆ. ಹೀಗಿರುವಾಗ ʻಪಡೆಯಪ್ಪʼ ಅಂತಹ ಪ್ರೇಕ್ಷಕರಿಂದ ಟೀಕೆಗೆ ಗುರಿಯಾಗಲ್ಲ ಎನ್ನುವುದು ಮಾತ್ರ ಸುಳ್ಳು.
ʻದ ಫೆಡರಲ್ʼ ಈ ವಿಷಯದ ಕುರಿತು ಹಿರಿಯ ಪತ್ರಕರ್ತೆ ಕವಿತಾ ಮುರಳೀಧರನ್ ಅವರೊಂದಿಗೆ ಮಾತುಕತೆ ನಡೆಸಿದೆ. ಈ ಬಗ್ಗೆ ಮಾತನಾಡಿದ ಕವಿತಾ ಮುರಳೀಧರನ್, ಪಡೆಯಪ್ಪ ಚಿತ್ರದ ಕುರಿತು ಈಗ ಅಲ್ಲ, ಈ ಹಿಂದೆಯೇ ಚರ್ಚಿಸಬೇಕಾಗಿತ್ತು. ಸ್ತ್ರೀ ಸಮಾನತಾವಾದ ದ್ವೇಷಿಸುವ ಮೊದಲ ಚಿತ್ರವೇನಲ್ಲ ಇದು. ತಮಿಳು ಮಾತ್ರವಲ್ಲದೇ ಭಾರತೀಯ ಚಿತ್ರರಂಗದ ಎಲ್ಲಾ ಸಿನಿಮಾಗಳಲ್ಲೂ ನಾಯಕ ನಟನಿಗೆ ಪ್ರಾಮುಖ್ಯತೆ ಎಲ್ಲೂ ಕಡಿಮೆಯಾಗಬಾರದೆಂಬ ನಿಟ್ಟಿನಲ್ಲಿ ಮಹಿಳಾ ಪಾತ್ರಗಳ ಇಮೇಜ್‌ನಲ್ಲಿ ವರ್ಕೌಟ್ ಮಾಡಿರುವುದು ಸ್ಪಷ್ಟವಾಗಿ ಕಾಣುತ್ತದೆ.
ಪಡೆಯಪ್ಪ ಸಿನಿಮಾ ತಮಿಳು ಚಿತ್ರರಂಗದ ಹೆಗ್ಗುರುತು ಎಂಬ ಕಾರಣಕ್ಕೆ ಅದನ್ನು ಕ್ಷಮಿಸಲು ಸಾಧ್ಯವಿದೆಯೇ? ಆ ವಾದ ಒಪ್ಪಲು ಸಾಧ್ಯವೇ ಇಲ್ಲ. ಸ್ತ್ರೀಯರ ಗೌರವಕ್ಕೆ ಚ್ಯುತಿ ತರುವ ಯಾವುದೇ ವಿಚಾರವಾದರೂ ಅದನ್ನು ತಕ್ಷಣ ವಿರೋಧಿಸಬೇಕು. ಸ್ತ್ರೀ ಸಮ್ಮಾನ ವಿಚಾರಗಳು ಎಂದಿಗೂ ಅಪ್ರಸ್ತುತ ಅಲ್ಲವೇ ಅಲ್ಲ. ಆದ್ದರಿಂದ ಈ ಚರ್ಚೆಗಳು ಮುಂದುವರಿಯಬೇಕು. ಚಿತ್ರ ಮರು-ಬಿಡುಗಡೆಯಾಗುತ್ತಿದ್ದರೆ ಮತ್ತು ಇಂದಿಗೂ ಅದೇ ರೀತಿಯ ಕ್ರೇಜ್ ಆ ಚಿತ್ರಕ್ಕಿದೆ ಎನ್ನುವುದಾದರೆ ಅದರಲ್ಲಿರುವ ಸಮಸ್ಯೆಗಳು ಅಥವಾ ಹಿಂದೆ ಚರ್ಚಿಸದ ಸಮಸ್ಯೆಗಳ ಬಗ್ಗೆ ನಾವು ಏಕೆ ಚರ್ಚಿಸಬಾರದು? ಎಂದು ಅವರು ಪ್ರಶ್ನಿಸಿದ್ದಾರೆ.
ಇನ್ನು ಚಿತ್ರದಲ್ಲಿ ಒಂದು ಹೆಣ್ಣು ಸೇಡು ತೀರಿಸಿಕೊಳ್ಳಲು 25ವರ್ಷಗಳ ಕಾಲ ತನ್ನನ್ನು ತಾನು ಕೋಣೆಯಲ್ಲಿ ಬಂಧಿಸಿಕೊಂಡು ಕೂರುವುದು, ನಂತರ ಸೇಡು ತೀರಿಸಿಕೊಳ್ಳಲು ಮುಂದಾಗುವುದು ಹೀಗೆ ಹೆಣ್ಣಿನ ಸೇಡಿನ ಕಥೆಯನ್ನು ಉತ್ಪ್ರೇಕ್ಷಿಸಿ ತೋರಿಸಲಾಗಿದೆ. ಇಂದು ವಾಸ್ತವಕ್ಕೆ ಎಷ್ಟು ದೂರವಾದ ಸಂಗತಿ ಎಂದು ಕವಿತಾ ಅಭಿಪ್ರಾಯಪಟ್ಟಿದ್ದಾರೆ.
ಹಾಗಂತ ಪ್ರೇಕ್ಷಕರು ಈ ಸಿನಿಮಾವನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತಾರೆ ಅಂತಾ ಹೇಳುತ್ತಿಲ್ಲ. ಆದರೆ ಜನ ಪ್ರಶ್ನೆ ಎತ್ತುತ್ತಾರೆ ಎಂದು ನಾನು ಭಾವಿಸುತ್ತೇನೆ. ಹೆಚ್ಚು ಪ್ರಗತಿಪರ ವಿಚಾರಗಳನ್ನು ಬೆಂಬಲಿಸುವ YouTube ಕಾಮೆಂಟ್‌ಗಳನ್ನು ನಾನು ಈಗಾಗಲೇ ನೋಡಿದ್ದೇನೆ, ಹೀಗಿರುವಾಗ ಜನ ಕೇವಲ ಮನರಂಜನೆ ರೂಪದಲ್ಲಿ ಮಾತ್ರವಲ್ಲದೇ ಅದರಲ್ಲಿರುವ ಕೆಲವೊಂದು ಆಕ್ಷೇಪಾರ್ಹ ಸಂಗತಿಗಳನ್ನು ಪ್ರಶ್ನಿಸುತ್ತಾರೆ ಎಂಬುದು ಸ್ಪಷ್ಟವಾಗಿದೆ ಎಂದು ಕವಿತಾ ತಿಳಿಸಿದ್ದಾರೆ.