ʻಡೆವಿಲ್‌ʼ ಎಂಟ್ರಿಗೆ ಕೌಂಟ್‌ಡೌನ್‌ ಶುರು; ಜೈಲಿನಿಂದಲೇ ʻಸೆಲೆಬ್ರಿಟಿʼಗಳಿಗೆ ದರ್ಶನ್‌ ಪತ್ರ

ಡೆವಿಲ್‌ ಚಿತ್ರ ಬಿಡುಗಡೆಗೆ ಕೌಂಟ್‌ಡೌನ್‌ ಶುರುವಾಗುತ್ತಿದ್ದಂತೆ ದರ್ಶನ್ ಜೈಲಿನಿಂದಲೇ ತಮ್ಮ ಅಭಿಮಾನಿಗಳಿಗೆ ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದಾರೆ.

Update: 2025-12-10 04:45 GMT
ನಟ ದರ್ಶನ್‌
Click the Play button to listen to article

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ 'ಡೆವಿಲ್' ಸಿನಿಮಾ ನಾಳೆ ( ಡಿ. 11) ಬಿಡುಗಡೆಗೆ ಸಿದ್ದತೆಯಾಗಿದ್ದು, ಈ ನಡುವೆ, ನಟ ದರ್ಶನ್ ಅವರು ತಮ್ಮ ಅಭಿಮಾನಿಗಳಿಗೆ ವಿಶೇಷ ಪತ್ರವೊಂದನ್ನು ಬರೆದಿದ್ದು, ಅದನ್ನು ಅವರ ಪತ್ನಿ ವಿಜಯಲಕ್ಷ್ಮೀ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ದರ್ಶನ್ ಅವರು ಈ ಪತ್ರದಲ್ಲಿ ತಮ್ಮ ಹೃದಯಪೂರ್ವಕ ಸಂದೇಶವನ್ನು ಅಭಿಮಾನಿಗಳಿಗೆ ತಲುಪಿಸಿದ್ದಾರೆ. ತಮ್ಮ ಅನುಪಸ್ಥಿತಿಯಲ್ಲಿಯೂ ಅಭಿಮಾನಿಗಳು ತೋರಿಸುತ್ತಿರುವ ಪ್ರೀತಿ, ಕಾಳಜಿ, ಬೆಂಬಲ ಮತ್ತು ಸಿನಿಮಾ ಪ್ರಚಾರದ ಬಗ್ಗೆ ವಿಜಯಲಕ್ಷ್ಮೀ ಮೂಲಕ ತಿಳಿದು ತಮಗೆ ಸಂತೋಷವಾಗಿದೆ ಎಂದಿದ್ದಾರೆ. ದೂರವಿದ್ದರೂ ಪ್ರತಿಕ್ಷಣವೂ ಅಭಿಮಾನಿಗಳ ಉಪಸ್ಥಿತಿಯನ್ನು ತಾವು ಅನುಭವಿಸುವುದಾಗಿ ತಿಳಿಸಿದ್ದಾರೆ.

ಯಾರೇ ಏನು ಹೇಳಿದರೂ ಅದನ್ನು ಮನಸ್ಸಿಗೆ ಹಚ್ಚಿಕೊಳ್ಳದೆ, ಯಾವುದೇ ವದಂತಿ ಅಥವಾ ನಕಾರಾತ್ಮಕ ಸುದ್ದಿ ತಮ್ಮ ಮನಸ್ಸನ್ನು ಕಲಕಲು ಬಿಡಬಾರದು. ಅಭಿಮಾನಿಗಳೇ ತಮ್ಮ ಶಕ್ತಿ, ಕುಟುಂಬ ಮತ್ತು ತಾನು ನಿಲ್ಲಲು ಕಾರಣವಾದ ನಂಬಿಕೆ ಎಂದು ದರ್ಶನ್ ಪ್ರೀತಿಯಿಂದ ಹೇಳಿದ್ದಾರೆ. ತಮ್ಮ ಜೀವನದ ಈ ಸವಾಲಿನ ಸಮಯದಲ್ಲಿ ಅಭಿಮಾನಿಗಳೇ ತಮ್ಮ ದೊಡ್ಡ ಬಲ ಎಂದು ಅವರು ತಮ್ಮ ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದಾರೆ. 

ಈ ಸಂದರ್ಭದಲ್ಲಿ 'ಡೆವಿಲ್' ಚಿತ್ರದ ಯಶಸ್ಸಿನ ಮೇಲೆ ಮಾತ್ರ ಗಮನ ಹರಿಸುವಂತೆ ದರ್ಶನ್ ಕೋರಿದ್ದಾರೆ. ತಮ್ಮ ಮೇಲಿರುವ ಪ್ರೀತಿಯನ್ನು ಈ ಚಿತ್ರಕ್ಕೂ ತೋರಿಸಬೇಕು. ತಮ್ಮ ಪರವಾಗಿ ಅಭಿಮಾನಿಗಳು ಯಾವುದೇ ಪ್ರಶ್ನೆ, ಅನುಮಾನಗಳಿಗೆ ಬರಿ ಮಾತಿನಿಂದಲ್ಲದೆ, ಚಿತ್ರದ ಭರ್ಜರಿ ಯಶಸ್ಸಿನ ಮೂಲಕ ಉತ್ತರಿಸಬೇಕು ಎಂದು ಬಯಸಿದ್ದಾರೆ.

ಸಿನಿಮಾಗಾಗಿ ಅಭಿಮಾನಿಗಳು ಮಾಡುತ್ತಿರುವ ಪ್ರಚಾರ, ಶ್ರಮ ಮತ್ತು ಅವರ ಒಗ್ಗಟ್ಟಿನ ಬಗ್ಗೆ ಕೇಳಿ ತಮಗೆ ಹೆಮ್ಮೆ ಮತ್ತು ಭಾವನಾತ್ಮಕವಾಗಿದೆ ಎಂದು ದರ್ಶನ್ ತಿಳಿಸಿದ್ದಾರೆ. ಅಭಿಮಾನಿಗಳನ್ನು ಮತ್ತೆ ಭೇಟಿಯಾಗುವ ದಿನಕ್ಕಾಗಿ ತಾವು ಕಾತರದಿಂದ ಕಾಯುತ್ತಿರುವುದಾಗಿ ಹೇಳಿದ್ದಾರೆ. ಗೋಡೆಯಂತೆ ತಮ್ಮ ಸುತ್ತ ನಿಂತಿದ್ದಕ್ಕಾಗಿ ಧನ್ಯವಾದ ತಿಳಿಸಿರುವ ದರ್ಶನ್, ಅಭಿಮಾನಿಗಳ ನಂಬಿಕೆ ತಮಗೆ ದೊಡ್ಡದು ಎಂದಿದ್ದಾರೆ. ಕೊನೆಯಲ್ಲಿ, ಸತ್ಯವನ್ನು ಮತ್ತು ಎಲ್ಲದಕ್ಕೂ ಉತ್ತರವನ್ನು ಕಾಲವೇ ನೀಡುತ್ತದೆ. ಅಲ್ಲಿಯವರೆಗೂ ತಲೆಯೆತ್ತಿ, ಹೃದಯವನ್ನು ಬಲವಾಗಿಟ್ಟುಕೊಂಡು, ಪ್ರೀತಿಯನ್ನು ಅಚಲವಾಗಿ ಕಾಪಾಡಿಕೊಳ್ಳಿ ಎಂದು ಸಂದೇಶದೊಂದಿಗೆ ತಮ್ಮ ಪತ್ರವನ್ನು ಮುಗಿಸಿದ್ದಾರೆ.

'ಡೆವಿಲ್' ಸಿನಿಮಾದ ಟ್ರೈಲರ್ ಈಗಾಗಾಲೇ ಬಿಡುಗಡೆಯಾಗಿದ್ದು, ಮಾಸ್ ಡೈಲಾಗ್‌ಗಳಿಂದಲೇ ಗಮನ ಸೆಳೆದಿದೆ. ಟ್ರೇಲರ್‌ನಲ್ಲಿ ದರ್ಶನ್ ಅವರನ್ನು ಅತ್ಯಂತ ಸ್ಟೈಲಿಷ್ ಆಗಿ ತೋರಿಸಲಾಗಿದೆ. ಸಿನಿಮಾ ಮಾಸ್ ಕಥಾನಕವನ್ನು ಹೊಂದಿರುವ ಕಾರಣ, ಟ್ರೈಲರ್‌ನಲ್ಲಿ ನಾಯಕಿಯರಾದ ಶರ್ಮಿಳಾ ಮಾಂಡ್ರೆ ಮತ್ತು ರಚನಾ ರೈ ಅವರ ಪಾತ್ರಗಳಿಗೆ ಕಡಿಮೆ ಜಾಗ ದೊರಕಿದೆ. ಬದಲಾಗಿ, ದರ್ಶನ್ ಅವರ ಮಾಸ್ ಹೀರೋ ಪಾತ್ರವೇ ಪ್ರೇಕ್ಷಕರನ್ನು ಆವರಿಸಿಕೊಂಡಿದೆ.

ಬಿಗ್​ಬಾಸ್ ವಿನಯ್ ಗೌಡ, ಗಿಲ್ಲಿ ನಟ ಸೇರಿದಂತೆ ಅಚ್ಯುತ್ ಕುಮಾರ್, ಶೋಭರಾಜ್, ಮಹೇಶ್ ಮಾಂಜ್ರೇಕರ್, ಶ್ರೀನಿವಾಸ್ ಪ್ರಭು, ತುಳಸಿ ಶಿವಮಣಿ, ರೋಜರ್ ನಾರಾಯಣ್ ಸೇರಿದಂತೆ ಇತರ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

'ಡೆವಿಲ್' ಚಿತ್ರವನ್ನು ಮಿಲನ ಪ್ರಕಾಶ್ ಅವರು ನಿರ್ದೇಶನ ಮಾಡಿದ್ದಾರೆ. ದರ್ಶನ್ ಜೊತೆ ಈ ಹಿಂದೆ 'ತಾರಕ್' ಚಿತ್ರ ಮಾಡಿದ್ದ ಪ್ರಕಾಶ್ ಅವರೇ ಈ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆ ಒದಗಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮತ್ತು ಸುಧಾಕರ್ ಎಸ್.ರಾಜ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ವೈಷ್ಣೋ ಸ್ಟುಡಿಯೋಸ್ ಮತ್ತು ಜೈ ಮಾತಾ ಕಾಂಬೈನ್ಸ್ ನಿರ್ಮಿಸಿರುವ ಈ ಚಿತ್ರವು 30 ರಿಂದ 40 ಕೋಟಿ ಬಜೆಟ್‌ನಲ್ಲಿ ಸಿದ್ಧಗೊಂಡಿದೆ. ಈ ಸಿನಿಮಾ ಡಿಸೆಂಬರ್ 11 ರಂದು ರಾಜ್ಯದ ಬಹುತೇಕ ಥಿಯೇಟರ್‌ಗಳಲ್ಲಿ 'ಡೆವಿಲ್' ಸಿನಿಮಾ ರಿಲೀಸ್ ಆಗಲು ಸಜ್ಜಾಗಿದೆ.

Tags:    

Similar News