ದ್ವಿಪಾತ್ರಗಳಲ್ಲಿ ‘ದಿ ಡೆವಿಲ್’ ದರ್ಶನ
‘ದಿ ಡೆವಿಲ್’ ನಿಜಕ್ಕೂ ದರ್ಶನ್ ಅಭಿಮಾನಿಗಳಿಗೆ ಒಂಥರಾ ಹಬ್ಬ ಎಂದರೆ ತಪ್ಪಿಲ್ಲ. ಏಕೆಂದರೆ, ಇಲ್ಲಿ ಅವರು ಚಿತ್ರದ ಹೀರೋ ಮಾತ್ರವಲ್ಲ, ವಿಲನ್ ಸಹ ಅವರೇ. ‘ನವಗ್ರಹ’ ಚಿತ್ರದ ನಂತರ ದರ್ಶನ್ ಪೂರ್ಣಪ್ರಮಾಣದಲ್ಲಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ.
ದರ್ಶನ್
‘ಕಾಟೇರ’ ಚಿತ್ರದ ನಂತರ ದರ್ಶನ್ ಅಭಿನಯದ ಯಾವೊಂದು ಚಿತ್ರವೂ ಬಿಡುಗಡೆ ಆಗರಲಿಲ್ಲ. ಹಾಗಾಗಿ, ‘ದಿ ಡೆವಿಲ್’ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ, ಅದರಲ್ಲೂ ದರ್ಶನ್ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಇತ್ತು. ‘ದಿ ಡೆವಿಲ್’ ಚಿತ್ರೀಕರಣ ಸಂದರ್ಭದಲ್ಲಿ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಬಂಧನ, ಬಿಡುಗಡೆ, ಮರುಬಂಧನ … ಇವೆಲ್ಲದರಿಂದ ಚಿತ್ರ ವಿಳಂಬವಾಗಿದ್ದಷ್ಟೇ ಅಲ್ಲ, ನಿರೀಕ್ಷೆ ಸಹ ಹೆಚ್ಚಿತ್ತು. ಈ ಚಿತ್ರವು ದರ್ಶನ್ ಅವರ ಹಿಂದಿನ ಚಿತ್ರಗಳ ದಾಖಲೆಯನ್ನು ಮುರಿಯಬಹುದು ಎಂಬ ಅಂದಾಜಿತ್ತು. ನಿಜಕ್ಕೂ ‘ದಿ ಡೆವಿಲ್’ ಆ ದಾಖಲೆಗಳನ್ನು ಮುರಿಯಬಹುದಾ? ನೀವೇ ನೋಡಿ.
‘ದಿ ಡೆವಿಲ್’ ನಿಜಕ್ಕೂ ದರ್ಶನ್ ಅಭಿಮಾನಿಗಳಿಗೆ ಒಂಥರಾ ಹಬ್ಬ ಎಂದರೆ ತಪ್ಪಿಲ್ಲ. ಏಕೆಂದರೆ, ಇಲ್ಲಿ ಅವರು ಚಿತ್ರದ ಹೀರೋ ಮಾತ್ರವಲ್ಲ, ವಿಲನ್ ಸಹ ಅವರೇ. ‘ನವಗ್ರಹ’ ಚಿತ್ರದ ನಂತರ ದರ್ಶನ್ ಪೂರ್ಣಪ್ರಮಾಣದಲ್ಲಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ. ಈಗ ‘ದಿ ಡೆವಿಲ್’ ಚಿತ್ರದಲ್ಲಿ ಅವರು ‘ದಿ ಡೆವಿಲ್’ ಆಗಿಯೇ ಕಾಣಿಸಿಕೊಂಡಿದ್ದಾರೆ. ಆದರೆ, ಒಂದ ಸಾಧಾರಣ ಚಿತ್ರಕಥೆಯಿಂದ ಚಿತ್ರ ಪೇಲವವಾಗಿ ಮೂಡಿಬಂದಿದೆ.
‘ದಿ ಡೆವಿಲ್’, ರಾಜಕೀಯದ ಕುರಿತಾದ ಚಿತ್ರ. ಇಲ್ಲಿ ಮುಖ್ಯಮಂತ್ರಿ ರಾಜಶೇಖರ್ (ಮಹೇಶ್ ಮಂಜ್ರೇಕರ್) ಭ್ರಷ್ಟಾಚಾರದ ಆರೋಪ ಹೊತ್ತು ಜೈಲು ಸೇರುತ್ತಾರೆ. ಅವರ ಪದವಿಯನ್ನು ಹೊಡೆಯುವುದಕ್ಕೆ ದೊಡ್ಡ ಷಡ್ಯಂತ್ರವೇ ನಡೆಯುತ್ತಿರುತ್ತದೆ. ಇನ್ನೊಂದು ಕಡೆ, ರಾಜಶೇಖರ್ ಅವರ ಮಗ ಧನುಶ್‍ನನ್ನು (ದರ್ಶನ್) ಮುಖ್ಯಮಂತ್ರಿ ಮಾಡುವ ಪ್ರಯತ್ನಕ್ಕೆ ಐಎಎಸ್ ಅಧಿಕಾರಿ ನಂಬಿಯಾರ್ (ಅಚ್ಯುತ್ ಕುಮಾರ್) ಮುಂದಾಗುತ್ತಾರೆ. ಆದರೆ, ಅದು ಅಷ್ಟು ಸುಲಭದ ಕೆಲಸವಲ್ಲ. ವಿದೇಶದಲ್ಲಿರುವ ಧನುಶ್, ಈಗ ಬರೀ ಧನುಶ್ ಆಗಿ ಉಳಿದಿಲ್ಲ. ಆತ ‘ದಿ ಡೆವಿಲ್’ ಆಗಿದ್ದಾನೆ. ಹೆಣ್ಣು, ಡ್ರಗ್ಸ್, ಕ್ರೈಮ್‍ನಲ್ಲಿ ಮುಳುಗಿದ್ದಾನೆ. ಮನುಷ್ಯನಾಗಿದ್ದವನು ರಾಕ್ಷಸನಾಗಿದ್ದಾನೆ. ಅವನನ್ನು ಮುಖ್ಯಮಂತ್ರಿ ಮಾಡಿದರೆ ರಾಜ್ಯ ಮತ್ತು ತಂದೆಗೆ ಕಳಂಕ ಎಂದು ಅರ್ಥ ಮಾಡಿಕೊಳ್ಳುವ ನಂಬಿಯಾರ್, ಧನುಶ್ ತರಹವೇ ಇರುವ ಕೃಷ್ಣನನ್ನು (ದರ್ಶನ್), ಧನುಶ್ ಎಂದು ನಂಬಿಸಿ ಜನತೆಯ ಮುಂದೆ ನಿಲ್ಲಿಸುತ್ತಾರೆ. ಕೃಷ್ಣ ಸಹ ಧನುಶ್ ಆಗಿ ಚುನಾವಣೆ ಗೆಲ್ಲಬೇಕು ಎನ್ನುವಷ್ಟರಲ್ಲಿ ವಿದೇಶದಿಂದ ನಿಜವಾದ ಧನುಶ್ ಬರುತ್ತಾನೆ. ರಿಯಲ್ ಮತ್ತು ರೀಲ್ ಧನುಶ್ ನಡುವೆ ಯಾರು ಮುಖ್ಯಮಂತ್ರಿ ಆಗುತ್ತಾರೆ ಎನ್ನುವುದೇ ಚಿತ್ರದ ಕಥೆ.
ಒಬ್ಬನ ಜಾಗದಲ್ಲಿ ಅದೇ ತರಹ ಇರುವ ಇನ್ನೊಬ್ಬನನ್ನು ಕೂರಿಸುವ ಕಥೆಗಳು ಹೊಸದೇನಲ್ಲ. ‘ಅಂತ’ದಿಂದ ಅಂತಹ ಸಾಕಷ್ಟು ಕಥೆಗಳು ಬಂದಿವೆ. ಕಥೆ ಹಳೆಯದಾದರೂ, ಚಿತ್ರಕಥೆಯಲ್ಲಿ ಚಿತ್ರವನ್ನು ವಿಭಿನ್ನವಾಗಿ ಕಟ್ಟಿಕೊಡುವ ಸಾಧ್ಯತೆ ಇತ್ತು. ಆದರೆ, ಇಲ್ಲಿ ಪ್ರಕಾಶ್ ಮತ್ತು ಅವರ ಬರಹಗಾರರ ತಂಡ ಅದೇ ಶೈಲಿಗೆ ಅಂಟಿಕೊಂಡಿದ್ದಾರೆ. ಇಲ್ಲಿ ಯಾವುದೇ ಹೊಸ ಸರ್‍ಪ್ರೈಸ್ ಅಥವಾ ವಿಶೇಷತೆಗಳಿಲ್ಲ. ಪ್ರೇಕ್ಷಕ ಊಹಿಸಿದಂತೆಯೇ ನಡೆಯುತ್ತದೆ. ಇನ್ನು, ಇಂಥದ್ದೊಂದು ಪೊಲಿಟಿಕಲ್ ಥ್ರಿಲ್ಲರ್‍ಗೆ ಇರಬೇಕಾದ ವೇಗ ಮತ್ತು ಥ್ರಿಲ್‍ಗಳು ಸಹ ಕಡಿಮೆಯೇ. ಹಾಗಾಗಿ, ಚೆನ್ನಾಗಿ ಶುರುವಾಗುವ ಚಿತ್ರ, ಕ್ರಮೇಣ ನಿಧಾನವಾಗುತ್ತದೆ. ಅಲ್ಲೊಂದು ಇಲ್ಲೊಂದು ಸನ್ನಿವೇಶಗಳನ್ನು ಹೊರತುಪಡಿಸಿ ಪೇಲವವಾಗಿಯೇ ಸಾಗುತ್ತದೆ.
ಇದು ಒಂದು ಕಡೆಯಾದರೆ, ಮಹಿಳೆಯರನ್ನು ತೋರಿಸಿರುವ ಮತ್ತು ನೆಗೆಟಿವಿಯನ್ನು ಪ್ರಚೋದಿಸುವ ದೃಶ್ಯಗಳು ಸಹ ಚಿತ್ರಕ್ಕೆ ದೊಡ್ಡ ಮೈನಸ್ ಆಗಿವೆ. ಇಲ್ಲಿ ದರ್ಶನ್ ಅವರ ಪಾತ್ರ ಬರೀ ನೆಗೆಟಿವ್ ಅಷ್ಟೇ ಅಲ್ಲ, ಕುಡುಕ, ಡ್ರಗ್ಸ್ ವ್ಯಸನಿ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ರೇಪಿಸ್ಟ್ ಆಗಿ ಕಾಣಿಸಿಕೊಂಡಿದ್ದಾರೆ. ನಾಯಕಿ ಸೇರಿದಂತೆ ಮಹಿಳಾ ಪಾತ್ರಗಳನ್ನು ಎಳೆದಾಡುವ, ಹಿಂಸೆ ಕೊಡುವ ಕೆಲವು ದೃಶ್ಯಗಳು ನಿಜಕ್ಕೂ ಅವರ ಅಭಿಮಾನಿಗಳು ಕಿರಿಕಿರಿ ಎಂದನಿಸಬಹುದು. ಇದೆಲ್ಲವನ್ನೂ ದಾಟಿಕೊಂಡು ಕ್ಲೈಮ್ಯಾಕ್ಸ್ ಕಡೆಗೆ ಬಂದರೆ, ಅಲ್ಲೊಂದು ಸ್ಪಷ್ಟತೆ ಇಲ್ಲ. ಇಷ್ಟಕ್ಕೂ ಮುಖ್ಯಮಂತ್ರಿ ಆಗಿದ್ದು ಯಾರು? ಪ್ರಕಾಶ್ ಏನಾದರೂ ಮುಂದಿನ ಭಾಗಕ್ಕೆ ಸೂಚನೆ ಕೊಟ್ಟಿದ್ದಾರಾ? ಎಂಬ ಪ್ರಶ್ನೆಗಳೊಂದಿಗೆ ಪ್ರೇಕ್ಷಕರು ಚಿತ್ರಮಂದಿರದಿಂದ ಹೊರಬರುತ್ತಾರೆ.
ಇಡೀ ಚಿತ್ರದ ತುಂಬ ದರ್ಶನ್ ಆವರಿಸಿಕೊಂಡಿದ್ದಾರೆ. ದೊಡ್ಡ ನಟನಾಗಿ ಕಟೌಟ್ ಹಾಕಿಸಿಕೊಳ್ಳಬೇಕೆಂದು ಕನಸು ಕಾಣುವ ಸಾತ್ವಿಕ ಕೃಷ್ಣನಾಗಿ ಅವರು ಇಷ್ಟವಾದರೆ, ಇನ್ನೊಂದು ಕಡೆ ‘ದಿ ಡೆವಿಲ್’ ಆಗಿ ಅಬ್ಬರಿಸಿದ್ದಾರೆ. ಖಳನಟನಾಗಿ ಅವರ ಮ್ಯಾನರಿಸಂ, ಸಂಭಾಷಣೆ ಹೇಳುವ ಶೈಲಿಗೆ ಅಭಿಮಾನಿಗಳು ಶಿಳ್ಳೆ ಹೊಡೆಯುತ್ತಾರೆ. ರಚನಾ ರೈ ಚಿತ್ರದ ತುಂಬಾ ಇದ್ದಾರೆ ಎಂಬುದು ಬಿಟ್ಟರೆ ಹೆಚ್ಚು ಕೆಲಸವಿಲ್ಲ. ದರ್ಶನ್ ಬಿಟ್ಟು ಹೆಚ್ಚು ಸ್ಕೋಪ್ ಇರುವುದು ಅಚ್ಯುತ್ ಕುಮಾರ್ ಪಾತ್ರಕ್ಕೆ. ಅಚ್ಯುತ್ ಎಂದಿನಂತೆ ತಮ್ಮ ಅಭಿನಯದಿಂದ ಇಷ್ಟವಾಗುತ್ತಾರೆ. ಮಿಕ್ಕಂತೆ ಚಿತ್ರದಲ್ಲಿ ಗಿಲ್ಲಿ ನಟ, ಹುಲಿ ಕಾರ್ತಿಕ್, ಶೋಭರಾಜ್, ತುಳಸಿ, ಶ್ರೀನಿವಾಸ ಪ್ರಭು ಸೇರಿದಂತೆ ಹಲವು ಕಲಾವಿದರಿದ್ದಾರೆ. ಅವರ್ಯಾರಿಗೂ ಹೆಚ್ಚು ಕೆಲಸವಿಲ್ಲ. ಮಹೇಶ್ ಮಂಜ್ರೇಕರ್ ಮಾಡಿದ ಪಾತ್ರವನ್ನು ಕನ್ನಡಿಗರಿಂದಲೇ ಮಾಡಿಸಿದ್ದರೆ, ಇನ್ನಷ್ಟು ಆಪ್ತವಾಗುತ್ತಿತ್ತು. ಮಹೇಶ್ ಅಭಿನಯ, ತುಟಿಚಲನೆ ಯಾವುದೂ ಪಾತ್ರಕ್ಕೆ ಒಪ್ಪುವುದಿಲ್ಲ.
ಬರವಣಿಗೆ ವಿಷಯದಲ್ಲಿ ಚಿತ್ರ ಬಹಳ ಹಿಂದುಳಿದರೂ, ತಾಂತ್ರಿಕವಾಗಿ ಶ್ರೀಮಂತವಾಗಿದೆ. ಸುಧಾಕರ್ ರಾಜ್ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ, ರಾಮ್ ಲಕ್ಷ್ಮಣ್ ಮತ್ತು ವಿನೋದ್ ಅವರ ಸಾಹಸ ನಿರ್ದೇಶನ … ಎಲ್ಲವೂ ಗಮನಸೆಳೆಯುತ್ತದೆ. ಹೊಡೆದಾಟದಲ್ಲಿ ವಿಲನ್‍ಗಳು ಗಾಳಿಯಲ್ಲಿ ಹಾರಾಡುವ ದೃಶ್ಯಗಳು ಕೆಲವೊಮ್ಮೆ ಅತಿರೇಕವೆನಿಸಿದರೂ, ಪ್ರೇಕ್ಷಕರಿಗೆ ಇಷ್ಟವಾಗುವಂತೆ ಕಟ್ಟಿಕೊಡಲಾಗಿದೆ.
‘ದಿ ಡೆವಿಲ್’, ದರ್ಶನ್ ಅವರ ಅಭಿಮಾನಿಗಳಿಗೆ ಒಂದು ಮಟ್ಟಕ್ಕೆ ಖುಷಿಕೊಡಬಹುದು. ಆದರೆ, ಚಿತ್ರದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಪ್ರಮುಖವಾಗಿ ಬರವಣಿಗೆ ವಿಷಯದಲ್ಲಿ ಪ್ರಕಾಶ್ ಮತ್ತು ತಂಡ ಇನ್ನಷ್ಟು ಕಾಳಜಿ ವಹಿಸಬಹುದಿತ್ತು. ಅವರ ಕಲ್ಪನೆ ಚೆನ್ನಾಗಿದೆಯಾದರೂ, ಒಂದು ಚಿತ್ರವಾಗಿ ಪ್ರೇಕ್ಷಕರಿಗೆ ನಿರಾಸೆ ಜಾಸ್ತಿ.