ಡೇರ್ ಇದ್ದರೆ ಮಾತ್ರ ಡೆವಿಲ್ ನೋಡಿ..!

ಹೀಗಾಗಿಯೇ ಚಿತ್ರದ ಹೆಸರಲ್ಲಿ ಡೆವಿಲ್ ಇದ್ದರೂ ಅದರಲ್ಲೊಂದು ಫ್ಯಾಮಿಲಿ ಸೆಂಟಿಮೆಂಟ್ ಇರಬಹುದೆನ್ನುವ ನಿರೀಕ್ಷೆ ಎಲ್ಲರಲ್ಲೂ ಇತ್ತು. ಆದರೆ ಇಲ್ಲಿ ಹೆಸರಿಗೆ ಎರಡೆರಡು ಫ್ಯಾಮಿಲಿಗಳೇನೋ ಇವೆ. ಸೆಂಟಿಮೆಂಟ್ ಮಾತ್ರ ಮಾರು ದೂರ. ಇರುವುದೊಂದೇ. ಅದು ಡೆವಿಲ್ ಅಬ್ಬರ.

Update: 2025-12-15 10:09 GMT

 ಡೆವಿಲ್

Click the Play button to listen to article

ದರ್ಶನ್ ವೃತ್ತಿ ಬದುಕಿನಲ್ಲಿ ದಿ ಡೆವಿಲ್ ಸಿನಿಮಾಗೆ ಪ್ರಮುಖ‌ ಸ್ಥಾನ. ಇದಕ್ಕೆ ಕಾರಣ ದರ್ಶನ್ ಇಂದು ಎದುರಿಸುತ್ತಿರುವ ಪರಿಸ್ಥಿತಿ. ‌ಕನ್ನಡದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಾಗಿ ಗುರುತಿಸಿಕೊಂಡವರು ದರ್ಶನ್. ಇಂಥ ಸ್ಟಾರ್ ಕೊಲೆ ಆರೋಪದಲ್ಲಿ ಜೈಲು ಸೇರಿರುವಾಗ ಅವರದೊಂದು ಸಿನಿಮಾ ತೆರೆಕಂಡರೆ ಏನಾಗಬಹುದು? ದರ್ಶನ್ ಅಭಿಮಾನಿಗಳು ಯಾವತ್ತೂ ಕೈ ಬಿಟ್ಟವರೇ ಅಲ್ಲ. ಅದು ದಶಕದ ಹಿಂದೆ ಇಂಥದೇ ಪರಿಸ್ಥಿತಿಯಲ್ಲಿ ಜೈಲು ಸೇರಿದಾಗಲೂ ಅಭಿಮಾನಿಗಳೇ 'ಸಾರಥಿ' ಚಿತ್ರವನ್ನು ಗೆಲ್ಲಿಸಿದ್ದರು. ಆದರೆ ಅಂದು ತೆರೆಕಂಡ ಸಾರಥಿ ಎಲ್ಲ ಮಾದರಿಯ ಮಾಸ್ ಮಸಾಲೆ ಅಂಶಗಳ‌ ಜತೆಯಲ್ಲೇ ಕೌಟುಂಬಿಕ ವಿಚಾರಗಳನ್ನು ಬೆರೆಸಿದ್ದಂಥ ಚಿತ್ರವಾಗಿತ್ತು. ಆದರೆ 'ದಿ ಡೆವಿಲ್' ಕೂಡ ಅದೇ ಮಾದರಿಯ ಚಿತ್ರವೇನಾ? ಉತ್ತರಿಸಲು ಯೋಚಿಸಲೇಬೇಕಿದೆ.

ನಿರ್ದೇಶಕ ಪ್ರಕಾಶ್ 'ಮಿಲನ'ದಂಥ ಮನ‌ಮಿಡಿಯುವ ಚಿತ್ರ ನೀಡಿದವರು. ದರ್ಶನ್ ಕೂಡ ಅದೆಷ್ಟೇ ರೌಡಿಸಮ್ ಸಿನಿಮಾ ಮಾಡಿದರೂ ಕೌಟುಂಬಿಕ ಟಚ್ ಕಾಪಾಡಿಕೊಂಡೇ ಬಂದವರು.

ಹೀಗಾಗಿಯೇ ಚಿತ್ರದ ಹೆಸರಲ್ಲಿ ಡೆವಿಲ್ ಇದ್ದರೂ ಅದರಲ್ಲೊಂದು ಫ್ಯಾಮಿಲಿ ಸೆಂಟಿಮೆಂಟ್ ಇರಬಹುದೆನ್ನುವ ನಿರೀಕ್ಷೆ ಎಲ್ಲರಲ್ಲೂ ಇತ್ತು. ಆದರೆ ಇಲ್ಲಿ ಹೆಸರಿಗೆ ಎರಡೆರಡು ಫ್ಯಾಮಿಲಿಗಳೇನೋ ಇವೆ. ಸೆಂಟಿಮೆಂಟ್ ಮಾತ್ರ ಮಾರು ದೂರ. ಇರುವುದೊಂದೇ. ಅದು ಡೆವಿಲ್ ಅಬ್ಬರ.

ಡೆವಿಲ್ ಅಲಿಯಾಸ್ ಧನುಷ್

ಕೈಯಲ್ಲಿ ಸದಾ ಗನ್. ಸುಡುವುದೇ ಇವನಿಗೆ ಫನ್. ಹುಡುಗಿ ಇಷ್ಟವಾದರೆ ಅವಳನ್ನು ಬಳಸುವುದು ಫ್ಯಾಷನ್. ಒಟ್ಟಲ್ಲಿ ಇವನೊಬ್ಬ ವಿಲನ್. ಇದು ಡೆವಿಲ್ ಎಂದೆನಿಸಿಕೊಂಡ ಧನುಷ್ ಕ್ಯಾರೆಕ್ಟರ್.

ಕೃಷ್ಣ

ಲಂಡನ್ ನಲ್ಲಿರುವ ಧನುಷ್ ಪಾತ್ರದ ಪರಿಚಯ ಮಾಡುತ್ತಿರುವ ಹಾಗೆಯೇ ಬೆಂಗಳೂರಿನ ಜೆ.ಪಿ‌ ನಗರದಲ್ಲಿ ಹೋಟೆಲ್ ನಡೆಸುವ ಕೃಷ್ಣನನ್ನೂ ಪರಿಚಯಿಸಲಾಗುತ್ತದೆ. ಕೃಷ್ಣನಿಗೆ ಸಿನಿಮಾ ನಟನೆಯ ಹುಚ್ಚು. ಮಾತಿನ ಮಧ್ಯೆ ಒಮ್ಮೊಮ್ಮೆ ಒಬ್ಬೊಬ್ಬ ಕಲಾವಿದರಂತೆ ವರ್ತಿಸುತ್ತಾನೆ. ಕೃಷ್ಣನ ಈ ಕಲಾವಂತಿಕೆಯೇ ಮುಂದೆ ಸಿ.ಎಂ‌ ಕ್ಯಾಂಡಿಡೇಟ್ ಧನುಷ್ ನಂತೆ ವರ್ತಿಸುವ ಅವಕಾಶ ತಂದುಕೊಡುತ್ತದೆ. ಇಷ್ಟಕ್ಕೂ ಲಂಡನ್ ನಲ್ಲಿದ್ದ ಧನುಷ್ ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸುವುದು ಯಾಕೆ? ಧನುಷ್ ತದ್ರೂಪಿ ಕೃಷ್ಣನಿಗೆ ಧನುಷ್ ಸ್ಥಾನದಲ್ಲಿ ಸ್ಪರ್ಧೆಗೆ ಅವಕಾಶ ಸಿಗುವುದು ಹೇಗೆ? ಕೃಷ್ಣ ಚುನಾವಣಾ ಅಖಾಡದಲ್ಲಿರುವಾಗಲೇ ಧನುಷ್ ಕೂಡ ಎಂಟ್ರಿಯಾದರೆ ಪರಿಸ್ಥಿತಿ ಏನಾದೀತು? ಈ ಎಲ್ಲ ಸಂದೇಹಗಳಿಗೆ 'ದಿ ಡೆವಿಲ್' ನಲ್ಲಿ ಉತ್ತರವಿದೆ.

ಈ ಚಿತ್ರ ಇಷ್ಟವಾಗೋದು ಯಾಕೆ?

ಕಳೆದೆರಡು ದಿನಗಳಿಂದ ಚಿತ್ರಮಂದಿರಕ್ಕೆ ನುಗ್ಗಿ ಬರುತ್ತಿರುವ ಪ್ರೇಕ್ಷಕರಿಗೆ ದರ್ಶನ್ ಮಾತ್ರ ಕಾರಣ. ಹಾಗಾಗಿಯೇ ಚಿತ್ರ ಇಷ್ಟವಾಗಿದ್ದರೆ ಅದಕ್ಕೆ ದರ್ಶನ್ ಮೇಲಿನ‌ ಅಭಿಮಾನ ಮೊದಲ ಕಾರಣ. ಎರಡನೆಯದಾಗಿ ದರ್ಶನ್ ಈ ಚಿತ್ರವನ್ನು ತಮ್ಮ ಸಂದಿಗ್ಧ ಪರಿಸ್ಥಿತಿಯಲ್ಲಿ ಪೂರ್ತಿಗೊಳಿಸಿದ್ದಾರೆ ಎನ್ನುವ ಭಾವುಕತೆ. ಮೂರನೆಯದಾಗಿ ಅಂಥ ಪರಿಸ್ಥಿತಿಯಲ್ಲೂ ಅದ್ಭುತವಾಗಿ ಎರಡು ವ್ಯತ್ಯಸ್ತ ನಟನೆಯನ್ನು ತೋರಿಸಿರುವ ರೀತಿ. ಇದರಾಚೆ ಚಿತ್ರದಲ್ಲಿರುವ ಹೊಸ ಸಂಗತಿಗಳೇನು?

ರಾಜ್, ವಿಷ್ಣು, ಅಂಬಿ.. ಅದೆಷ್ಟು ಗೆಟಪ್‌ಗಳು?

ಡೆವಿಲ್ ನಲ್ಲಿ ದರ್ಶನ್ ವಿಷ್ಣುವರ್ಧನ್ ಅವರ ಬೆಟ್ಟಪ್ಪನ ವೇಷದಲ್ಲಿರುವ ವಿಡಿಯೋ ತುಣುಕು ಈಗಾಗಲೇ ಎಲ್ಲೆಡೆ ವೈರಲ್ ಆಗಿವೆ. ಅಂಬರೀಷ್ ನಟನೆಯ ಅಂತದ ಲುಕ್ ಈ ಚಿತ್ರದ ಬಿಡುಗಡೆಗೆ ಮೊದಲೇ ಹಂಚಿಕೊಳ್ಳಲಾಗಿತ್ತು. ಆದರೆ ದರ್ಶನ್ ರಾಜ್ ಕುಮಾರ್ ಲುಕ್ ನಲ್ಲಿದ್ದ ಬಗ್ಗೆ ಮಾತ್ರ ಯಾರೂ ಅಷ್ಟಾಗಿ ಗಮನಿಸಿಲ್ಲ. ಹೇಳಿ ಕೇಳಿ ದರ್ಶನ್ ವಜ್ರೇಶ್ವರಿ ಸಂಸ್ಥೆಯ ಮೂಲಕವೇ ಚಿತ್ರರಂಗಕ್ಕೆ ಕಾಲಿಟ್ಟವರು ಎನ್ನುವುದು ಎಲ್ಲರಿಗೂ ಗೊತ್ತು. ಸಹಜವಾಗಿ ಡಾ.ರಾಜ್ ಕುಮಾರ್ ಮತ್ತು ಕುಟುಂಬದ ಬಗ್ಗೆ ಸದಾ ಗೌರವದ ಮಾತುಗಳನ್ನೇ ಆಡುತ್ತಿರುತ್ತಾರೆ. ಆದರೆ ಕೆಲವು ಅಭಿಮಾನಿಗಳು ತಾರೆಯರ ನಡುವೆ ತಂದಿಕ್ಕುವಲ್ಲೇ ಖುಷಿ ಕಾಣುತ್ತಾರೆ.‌ ಈ ಹಿಂದೆ ಕೂಡ ನೇರವಾಗಿ ಹಾಗೂ ಸಿನಿಮಾದೊಳಗಿನ ದೃಶ್ಯದಲ್ಲಿ, ಹಾಡುಗಳಲ್ಲಿ ಸೌಹಾರ್ದತೆ ಸಾರಿರುವ ದರ್ಶನ್ ಈ ಬಾರಿಯೂ ಅದನ್ನೇ ಮಾಡಿದ್ದಾರೆ.

ಕೃಷ್ಣನ ಹೋಟೆಲ್ ಮುಂದೆ ಒಂದಷ್ಟು ಪ್ರಮುಖ ನಟರುಗಳ ಲುಕ್ ನಲ್ಲಿ ದರ್ಶನ್ ಕಾಣಿಸಿಕೊಂಡ ದೊಡ್ಡ ದೊಡ್ಡ ಫೋಟೋಗಳಿವೆ. ಮೊದಲನೆಯದಾಗಿ ಸೆಳೆಯುವುದೇ ಮಯೂರ ಲುಕ್ ನಲ್ಲಿರುವ ದರ್ಶನ್ ಫೊಟೊ. ಮಾತ್ರವಲ್ಲ ಕೃಷ್ಣ‌ನ ಹೋಟೆಲ್ ಗೋಡೆಯ ತುಂಬ ಹಿರಿಯ ಸಿನಿಮಾ ಕಲಾವಿದರ ಫೋಟೋಗಳನ್ನು ನೇತು ಹಾಕಲಾಗಿರುತ್ತದೆ. ಕರ್ನಾಟಕದಲ್ಲಿ ಸಿನಿಮಾ ಕಲಾವಿದರ ಹೆಸರು ಹೇಳಬೇಕಾದರೆ ಡಾ. ರಾಜಕುಮಾರ್ ಹೆಸರಿನಿಂದಲೇ ಶುರು ಮಾಡಬೇಕಾಗುತ್ತದೆ. ಹಾಗಾಗಿ ಸ್ಪಷ್ಟವಾಗಿ ತೋರಿಸದಿದ್ದರೂ ಮೈಸೂರು ಪೇಟ ಧರಿಸಿರುವ ರಾಜ್ ಕುಮಾರ್ ಫೊಟೊ ಗೋಡೆಯಲ್ಲಿರುವುದನ್ನು ಗುರುತಿಸಬಹುದಾಗಿದೆ.

ಇವೆಲ್ಲದರ ಜತೆಗೆ ಕೃಷ್ಣ ಚಿತ್ರದ ನಾಯಕಿ ರುಕ್ಕುವಿನಲ್ಲಿ ಆಕೆಯ

ರುಕ್ಕು ಸಾಲವನ್ನು ವಾಪಸು ಮಾಡುವಾಗ ಹೊಡೆಯುವ ಡೈಲಾಗ್ ಕೂಡ ರಾಜ್ ಸಿನಿಮಾದ್ದೇ. "ಋಣ ಅಂತೆ ಋಣ ಯಾವ ನಾಯಿಗೆ ಬೇಕು ನಿನ್ನ ಋಣ" ಎನ್ನುವ 'ಸಂಪತ್ತಿಗೆ ಸವಾಲ್' ಸಂಭಾಷಣೆಯನ್ನು ದರ್ಶನ್ ರಾಜಕುಮಾರ್ ಶೈಲಿಯಲ್ಲಿಯೇ ಹೊಡೆದಿದ್ದಾರೆ. ಈ ಡೈಲಾಗ್ ಯಾಕೆ ಹೊಡೆದೆ ಎಂದು ರುಕ್ಕು ಕೇಳಿದಾಗ "ಹಣ ಕೊಡುವಾಗ ನಾನು ಸಂಪತ್ತಿಗೆ ಸವಾಲ್ ಲೆವೆಲ್ ನಲ್ಲಿದ್ದೆ. ಈಗ ನನ್ನ ಪರಿಸ್ಥಿತಿ ಕಸ್ತೂರಿ ನಿವಾಸದ ಕ್ಲೈಮಾಕ್ಸ್ ನಂತಾಗಿದೆ" ಎನ್ನುವ ಕೃಷ್ಣನ ಮಾತಿಗೆ ಥಿಯೇಟರ್ ನಲ್ಲಿ ಸಿಳ್ಳೆ ಬೀಳುತ್ತದೆ. ಹೇಳಿ ಕೇಳಿ ನಿರ್ದೇಶಕ ಪ್ರಕಾಶ್ ಅವರು ರಾಜ್ ಕುಮಾರ್ ಕುಟುಂಬದಿಂದಲೇ ಬಂದವರು. ಹೀಗಾಗಿ ಇದೆಲ್ಲ ಸಹಜ ಎಂದುಕೊಳ್ಳಬೇಡಿ. ಪ್ರಸ್ತುತ ಸಂದರ್ಭದಲ್ಲಿ ದರ್ಶನ್ ಅವರು ರಾಜ್ ಕುಮಾರ್ ಗೆಟಪ್ ನಲ್ಲಿ ಕಾಣಿಸಿರುವುದು ಮತ್ತು ರಾಜ್ ಸಿನಿಮಾದ ಸಂಭಾಷಣೆಗಳನ್ನು ಹೇಳಿರುವುದು ತಾರೆಯರ ಒಗ್ಗಟ್ಟು ಬಯಸದೆ ಬೇಯುವವರ ಬೆಂಕಿಗೆ ತಣ್ಣೀರು ಸುರಿದಂತಾಗಿದೆ.

ಇವಷ್ಟೇ ಅಲ್ಲದೆ ನಿರ್ದೇಶಕರು ದರ್ಶನ್ ಅವರಿಂದ ಶಂಕರ್ ನಾಗ್, ರವಿಚಂದ್ರನ್ ಶೈಲಿಯಲ್ಲೂ ಸಂಭಾಷಣೆ ಹೇಳಿಸಿದ್ದಾರೆ. "ಕೃಷ್ಣನ್ ಮೆಸ್ಸು ಫೇಮಸ್ಸು" ಎನ್ನುವ ಸಂಭಾಷಣೆಯಲ್ಲಿ ರವಿಚಂದ್ರನ್ ಅವರ ಶೈಲಿಯ ಪ್ರಾಸ ಮತ್ತು ಬಾಡಿ ಲ್ಯಾಂಗ್ವೇಜ್ ಇದೆ.

ದರ್ಶನ್ ಎರಡು ಲುಕ್ ನಲ್ಲಿ ಹೆಚ್ಚು ಸೊಗಸು ಯಾವುದು?

ಅಭಿಮಾನಿಗಳ ಪಾಲಿಗೆ ಎರಡೂ ಸೊಗಸೇ. ಆದರೆ ಮಹಾ ಖಳ‌ನಟನ ಪುತ್ರನೋರ್ವ ಸ್ವತಃ ಸ್ಟಾರ್ ಪಟ್ಟಕ್ಕೇರಿದ ಮೇಲೆ ಖಳನಾಗಿ ನಟಿಸಿದ್ದಾರೆ. ಹೀಗಾಗಿ ಆ ತಾರತಮ್ಯ ಗಮನಿಸಲು ದರ್ಶನ್ ಡೆವಿಲ್ ಖದರ್ ನೋಡಲೇ ಬೇಕು. ಗೆಟಪ್ ವಿಚಾರಕ್ಕೆ ಬಂದರೆ ದರ್ಶನ್ ಗೆ ಕೋಟು ಸೂಟು ಹೊಂದುತ್ತದೆ ಎನ್ನುವುದು ಎಂದೋ ಸಾಬೀತಾಗಿದೆ. ಈ ಹಿಂದೆ 'ದತ್ತ' ಚಿತ್ರದಲ್ಲಿನ ನಡಿಗೆ ಇಲ್ಲಿನ ಖಳನ ಲುಕ್ ಗೆ ಸಮರ್ಪಿತವಾಗಿದೆ. ಅದನ್ನೂ ಮೆಚ್ಚಬಹುದು.‌ ಮಾತ್ರವಲ್ಲ ವಿಲನ್ ಪಾತ್ರಕ್ಕೆ ತಕ್ಕಂತೆ ತಮ್ಮ ಧ್ವನಿಯಲ್ಲಿ ಗೊಗ್ಗರು ತನ ಮೂಡಿಸಿದ್ದಾರೆ. ನಟನೆ ವಿಚಾರದಲ್ಲಿ ಅದೆಷ್ಟೇ ಮೆಚ್ಚಿಕೊಂಡರೂ ಕೂಡ ಮೆಚ್ಚಿನ ನಟ ಖಳನಾಗುವುದು ಅಭಿಮಾನಿಗಳಿಗೂ ಆತಂಕವೇ. ಆದರೆ ಇಲ್ಲಿ‌ನ ನಾಯಕನೂ ದರ್ಶನ್ ಎನ್ನುವ ಕಾರಣದಿಂದ ಮಾತ್ರ ಸಮಾಧಾನ ಸಹಜ.

ಕೃಷ್ಣ ಧನುಷ್ ವೇಷದಲ್ಲಿ ಬಂದಾಗ ನೋಟದಲ್ಲಿ ಕಾಣಿಸುವ ಧೀಮಂತಿಕೆ, ವ್ಯಕ್ತಿತ್ವದಲ್ಲಿ ತೋರುವ ಗಂಭೀರತೆ, ಹಳ್ಳಿಗರಲ್ಲಿ ಪ್ರದರ್ಶಿಸುವ ಆತ್ಮೀಯತೆ ಎಲ್ಲವೂ ಹೃದಯಂಗಮ. ನಾಯಕ ಯಾವತ್ತಿದ್ದರೂ ನಾಯಕನೇ.

ಸಿನಿಮಾ‌ ಎಡವಿರುವುದೆಲ್ಲಿ?

ಸಿನಿಮಾಗಳಲ್ಲಿ ದ್ವಿಪಾತ್ರ ಎಂದೊಡನೆ ಎರಡು ವಿಭಿನ್ನ ಗುಣಗಳಲ್ಲೇ ತೋರಿಸುತ್ತಿರುತ್ತಾರೆ. ಅವರಿಬ್ಬರನ್ನು

ಅದಲು ಬದಲು ಮಾಡುವ ಉದ್ದೇಶ ಇಟ್ಟುಕೊಂಡೇ ಕಥೆಗಾರ ಒಂದೇ ರೂಪ‌ ನೀಡಿರುತ್ತಾನೆ. ಆದರೆ ಒಂದೇ ಒಂದು ಮಚ್ಚೆಯನ್ನೋ, ಮೀಸೆಯನ್ನೋ ಸೃಷ್ಟಿಸಿ ಹೋಲಿಕೆ ತೋರಿಸಲು ಇದೇನು ಹಳೇ ಜಮಾನದ ಚಿತ್ರವಲ್ಲವಲ್ಲ? ಮಾತ್ರವಲ್ಲ ತದ್ರೂಪಿಗಳಾಗಿರಲು ಅವಳಿ ಜವಳಿಗಳೂ ಅಲ್ಲ. ಇಂಥ ಸಂಧರ್ಭದಲ್ಲಿ ಯಾವೊಂದು ಪ್ಲಾಸ್ಟಿಕ್ ಸರ್ಜರಿಯಂಥ ಪ್ರಯತ್ನಗಳನ್ನೂ‌ ನಡೆಸದೇ ವಿಧಾನ ಸೌಧದಿಂದ ಕೇವಲ 11ಕಿ.ಮೀ ದೂರದ ಜೆ.ಪಿ ನಗರದಲ್ಲಿ ಹೋಟೆಲ್ ನಡೆಸುತ್ತಿರುವ ಒಬ್ಬಾತನನ್ನು ಮಾಜಿ ಸಿ.ಎಮ್ ಪುತ್ರ ಎಂದು ಕಣಕ್ಕಿಳಿಸುತ್ತಾರೆ. ಪಕ್ಕದಲ್ಲೇ ಬಂದು ಕೈ ಹಿಡಿದರೂ ಈತ ತನ್ನ ಮಗನಲ್ಲ ಎನ್ನುವ ಸಂದೇಹ ಆ ತಂದೆಗೆ ಬರುವುದೇ ಇಲ್ಲ!

ಹೋಟೆಲ್ ಮಾಲೀಕ ಕೃಷ್ಣ ಅಡುಗೆಯೂ ಮಾಡಬಲ್ಲ, ಬಡಿಸುತ್ತಲೂ ಇರುತ್ತಾನೆ. ಚುನಾವಣೆಗೆ ನಿಂತ ಧನುಷ್ ಕೂಡ ಕೃಷ್ಣನನ್ನು ಹೋಲುವುದಷ್ಟೇ ಅಲ್ಲ ಆತನಂತೆ ಅಡುಗೆಯನ್ನೂ ಮಾಡುತ್ತಾನೆ, ಬಡಿಸುವ ಶೈಲಿಯೂ ಅದೇನೇ! ಇದನ್ನೆಲ್ಲ ಟಿವಿಯಲ್ಲಿ ಕಂಡರೂ ಕೃಷ್ಣನ ಪ್ರೇಯಸಿಯ ಹೊರತು, ಆ ಹೋಟೆಲ್ ನಲ್ಲಿ ಉಂಡಿದ್ದ ಯಾರಿಗೂ ಸಂದೇಹ ಹುಟ್ಟುವುದಿಲ್ಲ. ಧನುಷ್ ಗೆಟಪ್ ನಲ್ಲಿ ಪ್ರಚಾರ ನಡೆಸುವಾಗ ಕೃಷ್ಣ ತನ್ನ ಅಭಿಮಾನಿಯ ಹೆಣ್ಣು ಮಗುವಿಗೆ 'ರುಕ್ಮಿಣಿ' ಎಂದು ತನ್ನ ಪ್ರೇಯಸಿಯ ಹೆಸರಿಡುತ್ತಾನೆ. ಸದಾ ಆತನ ಬೆನ್ನ ಹಿಂದೆಯೇ ಇರುವ ಮಾಧ್ಯಮದಲ್ಲಿ ಆತನಿಟ್ಟ ಈ ಹೆಸರು ಸುದ್ದಿಯಾಗದೇ ಹೋದೀತೇ? ರುಕ್ಮಿಣಿಗೂ ಧನುಷ್ ಗೂ ಕೃಷ್ಣನಿಗೂ ಇರುವ ಸಂಬಂಧ ಚರ್ಚೆಯಾಗದಿದ್ದೀತೇ?

ರಾಜ್ಯದಲ್ಲಿ ತನ್ನ ತದ್ರೂಪಿ ಪ್ರಚಾರ ನಡೆಸುತ್ತಿರುವುದನ್ನು

ವಿದೇಶದಲ್ಲಿರುವ ಧನುಷ್ ಈ ಟಿ.ವಿ ನೋಡಿ ಅರಿಯುತ್ತಾನೆ! ಊರಿನಿಂದ ಯಾವೊಬ್ಬ ಸ್ನೇಹಿತರೂ ಆತನನ್ನು ಸಂಪರ್ಕಿಸಲಾರರೇ? ಧನುಷ್ ವಿದೇಶದಿಂದ ಮರಳುವಾಗ ಪಾಸ್‌ಪೋರ್ಟ್ ಪರಿಶೀಲನೆ ನಡೆಯುವುದಿಲ್ಲವೇ? ಕ್ಲೈಮ್ಯಾಕ್ಸ್ ನಲ್ಲಿ ಮಾಜಿ ಸಿ.ಎಂ ತನ್ನ ಪುತ್ರನ ನಕಲಿಯನ್ನು ಕೊಲ್ಲುವ ತೀರ್ಮಾನಕ್ಕೆ ಬರುತ್ತಾನೆ. ಆದರೆ ಆಗಲೂ ಅಸಲಿ ಯಾರು ಎಂದು ಅರಿಯದೆ ಪರದಾಡುತ್ತಾನೆ. ಇಬ್ಬರೂ ತನ್ನ ಕಸ್ಟಡಿಯಲ್ಲೇ ಇದ್ದಾರೆ. ಹಾಗಿದ್ದ ಮೇಲೆ ಡಿ.ಎನ್.ಎ ಅಲ್ಲವಾದರೂ ಕನಿಷ್ಟ ರಕ್ತ ಪರೀಕ್ಷೆ ಮೂಲಕವಾದರೂ ಸತ್ಯ ತಿಳಿಯಬಹುದಿತ್ತಲ್ಲವೇ? ಧನುಷ್ ಕೈಗೆ ಗನ್ ಎತ್ತಿಕೊಂಡು ಮಾಡುವ ಕೊಲೆಗಳಿಗೆ ಲೆಕ್ಕವಿಲ್ಲ. ಇದಕ್ಕೆ ಯಾವ ಅಧಿಕಾರದ ಶಕ್ತಿಯೂ ಇಲ್ಲ. ಬೇರೆ ಸಮಜಾಯಿಷಿಗಳೂ ಇಲ್ಲ. ಎಲ್ಲವನ್ನು ಹಣದ ಬಲದಿಂದಲೇ ಮುಗಿಸಿ ಆರೋಪಿಯಾಗಿಯೂ ಗುರುತಿಸದಿರಲು ಸಾಧ್ಯವೇ? ಭಾರತಕ್ಕೆ ಬಂದ ಮೇಲೆ ಕೂಡ ತನ್ನ ಅತ್ತೆಯ ಮಗ ಸೇರಿದಂತೆ ಪಕ್ಷದ ಮಹಿಳಾ ವಿಭಾಗದ ಮುಖ್ಯಸ್ಥೆಯನ್ನೂ ಕೊಲ್ಲುತ್ತಾನೆ. ಆದರೆ ಯಾವುದೂ ಕೊಲೆಯೆನ್ನುವ ಸಂದೇಹವನ್ನೇ ಮೂಡಿಸುವುದಿಲ್ಲ. ಉತ್ತರದ ರಾಜ್ಯಗಳಲ್ಲಿ ಇಂಥ ಪರಿಸ್ಥಿತಿ ಇದೆಯೇನೋ. ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳ‌ ಮನೆಯಲ್ಲಿ ಇಂಥ ಘಟನೆಗಳು ಸಾಧ್ಯವೇ?

ಚಿತ್ರದಲ್ಲಿ ಕಂಠಪೂರ್ತಿ ಕುಡಿದು "ಅಂಬರೀಷಣ್ಣ ಇನ್ನೂ ಬದುಕಿದ್ದಾರೆ" ಎಂದು ನಂಬಿರುವ ಗಿಲ್ಲಿ ನಟನ ಪಾತ್ರವೊಂದಿದೆ. ಪ್ರೇಕ್ಷಕರ ಪರಿಸ್ಥಿತಿಯೂ ಇದೇ ರೀತಿ ಇದ್ದಲ್ಲಿ ಮಾತ್ರ ಇಂಥ ಲಾಜಿಕ್ ರಹಿತ ಕಥೆಯನ್ನು ಸಂಭ್ರಮಿಸಲು ಸಾಧ್ಯ.

ಮನಮುಟ್ಟುವಂಥ ಸಂಬಂಧಗಳೇ ಇಲ್ಲಿಲ್ಲ!

ರಕ್ತ ಸಂಬಂಧಗಳಿಂದ ಹಿಡಿದು ಪ್ರೇಮ ಸಂಬಂಧಗಳ ತನಕ ಇಲ್ಲಿನ ಯಾವ ಬಂಧುತ್ವ ಕೂಡ ಮನಮುಟ್ಟುವುದಿಲ್ಲ. ಕೃಷ್ಣನಿಗೆ ಕೌಟುಂಬಿಕ ಹಿನ್ನೆಲೆ ಇಲ್ಲ. ಹೋಟೆಲ್ ನಲ್ಲಿ ಸಹಾಯಕನಾಗಿರುವ ನಾಣಿ ಜತೆಗೆ ಆಪ್ತ ಸ್ನೇಹ ಪ್ರದರ್ಶಿಸುವ ದೃಶ್ಯಗಳಿಲ್ಲ. ಸಾಲ ಕೊಟ್ಟು ಪ್ರೇಮ ಪಡೆಯಲೆತ್ನಿಸುವ ರುಕ್ಮಿಣಿಯ ಪಾತ್ರ ಪೋಷಕ ನಟಿಯಂತೆ ಎಂಟ್ರಿ ಕೊಡುತ್ತದೆ. "ಹೆಣ್ಣು ಬಂದು ಎಲ್ಲಾನೂ ಬದಲಾಯಿಸ್ತಾಳೆ" ಎನ್ನುವ ಸಂಭಾಷಣೆ ಏನೋ ಇದೆ. ಆದರೆ ಆಕೆಯ ಪಾತ್ರವೇ ಇಬ್ಬರ ಮಧ್ಯೆ ಆಟದ ವಸ್ತುವಂತಾಗಿದೆ. ಹುಡುಗನ ಜತೆ ಓಡಿ‌ಹೋಗುವುದಾಗಿ ಮನೆ ಬಿಟ್ಟು ಹೋಗುವವಳು ಮಕ್ಕಳು ಕಣ್ಣಾಮುಚ್ಚಾಲೆ ಆಡುವಷ್ಟೇ ಸಲೀಸಾಗಿ ಮನೆಗೆ ವಾಪಾಸಾಗಬಲ್ಲಳು.‌ ಇನ್ನು ಮಾಜಿ ಮುಖ್ಯಮಂತ್ರಿಯ ಮನೆಯಲ್ಲೂ ಅಷ್ಟೇ. ಪತ್ನಿಯನ್ನು ಖುದ್ದಾಗಿ ಕೊಂದಿರುವಂಥ ವ್ಯಕ್ತಿ.

ಒಬ್ಬ ತಂಗಿ ಮತ್ತು ಅಧಿಕಾರದ ಆಸೆಯಲ್ಲಿರುವ ಇಬ್ಬರು ಮಕ್ಕಳ ಜತೆಗೆ ಬಂಧ ಬೆರೆಯುವುದೇ ಇಲ್ಲ. ಹೀಗೆ ಮನಮುಟ್ಟುವಂಥ ಯಾವ ಯಾವ ಸಂಬಂಧಗಳೂ‌ ಇಲ್ಲಿಲ್ಲ ಎನ್ನುವುದು ಸತ್ಯ. ಹೀಗಾಗಿಯೇ ಮಿಲನ, ರಿಷಿ, ತಾರಕ್ ಚಿತ್ರಗಳ ನಿರ್ದೇಶಕರೇ ಈ ಚಿತ್ರ ನಿರ್ದೇಶಿಸಿರುವುದಾ ಅಂತ ಸಂದೇಹ ಮೂಡಬಲ್ಲದು.

ನೆನಪುಳಿಯದ ಪಾತ್ರ, ಹಾಡುಗಳ ಶಾಸ್ತ್ರ!

ಚಿತ್ರದಲ್ಲಿ ಮಹೇಶ್ ಮಾಂಜ್ರೇಕರ್, ಅಚ್ಯುತ್ ಕುಮಾರ್, ಹುಲಿ ಕಾರ್ತಿಕ್, ಗಿಲ್ಲಿನಟ, ಶರ್ಮಿಳಾ‌ ಮಾಂಡ್ರೆ, ಕಿರುತೆರೆ ನಟ ಚಂದು ಗೌಡ, ಶೋಭರಾಜ್, ಶ್ರೀನಿವಾಸ ಪ್ರಭು, ತುಳಸಿ ಶಿವಮಣಿ, ವಿನಯ್ ಗೌಡ, ರೋಜರ್ ನಾರಾಯಣ್ ಮೊದಲಾದವರಿದ್ದಾರೆ. ಆದರೆ ಥಿಯೇಟರ್ ನಿಂದ ಹೊರಗೆ ಬರುವಾಗ ತಮ್ಮ ನಟನೆಯ ಕಾರಣದಿಂದ ನೆನಪಲ್ಲಿ ಉಳಿಯುವವರು ದರ್ಶನ್ ಮತ್ತು ಮಹೇಶ್ ಮಾಂಜ್ರೇಕರ್ ಮಾತ್ರ. ಇಷ್ಟೊಂದು ದೊಡ್ಡ ತಾರಾಗಣವಿದ್ದರೂ ಹೆಚ್ಚಿನ ಕಲಾವಿದರ ಪಾತ್ರಗಳಿಗೆ ಯಾವ ಪ್ರಾಮುಖ್ಯತೆಯೂ ಸಿಕ್ಕಿಲ್ಲ ಎನ್ನುವುದು ವಿಪರ್ಯಾಸ. ರಿಯಾಲಿಟಿ ಶೋಗಳಿಂದ ಹೆಸರಾದ ಗೊಬ್ರಗಾಲ, ರಾಘವೇಂದ್ರ, ಜಗಪ್ಪ ಒಂದು ಹಾಡಲ್ಲಿ ಮಾತ್ರ ಬಂದು ಕಂಡು ಕಾಣದಂತೆ ಮಾಯವಾಗುತ್ತಾರೆ.

ದರ್ಶನ್ ಸಿನಿಮಾಗಳು ತೆರೆಗೆ ಬರುವ ಮೊದಲೇ ಹಾಡುಗಳು ಆಕರ್ಷಣೆ ಮೂಡಿಸಿರುತ್ತವೆ. ಆದರೆ ಈ ಬಾರಿ ಹಾಡುಗಳು ಅಂಥ ಕ್ರೇಜ್ ಸೃಷ್ಟಿಸುವಲ್ಲಿ ಸೋತಿವೆ. ದರ್ಶನ್ ಸಂಭಾಷಣೆಯೇ ಹಾಡಿನ ಪಲ್ಲವಿಯಾದ 'ಇದ್ರೆ ನೆಮ್ಮದಿಯಾಗಿರಬೇಕ್ ' ಸ್ವಲ್ಪ ಸದ್ದು ಮಾಡಿದೆ. ಉಳಿದವು ಶಾಸ್ತ್ರಕ್ಕೆಂಬಂತೆ ಬಂದು ಹೋಗಿವೆ!

ರಾಮ್ ಲಕ್ಷ್ಮಣ್ ಅವರಂಥ ದಿಗ್ಗಜರ ಸಾಹಸ ನಿರ್ದೇಶನ ಇದ್ದರೂ ಫೈಟ್ ಕೂಡ ವಿಶೇಷತೆ ಕಾಯ್ದುಕೊಳ್ಳುವಲ್ಲಿ ಸೋತಿದೆ. ದ್ವಿಪಾತ್ರಗಳಿಗೆ ಹೊಡೆದಾಟದ ಚಿತ್ರೀಕರಣ ನಡೆಸುವುದು ಎಷ್ಟು ದೊಡ್ಡ ಚಾಲೆಂಜ್ ಎನ್ನುವುದು ಗೊತ್ತು. ಆದರೆ ಕ್ಲೈಮ್ಯಾಕ್ಸ್ ಹಿಂದಿನ ಹೊಡೆದಾಟದಲ್ಲಿ ಇಬ್ಬರಿಗೂ ಬೇರೆ ಬೇರೆ ಶೈಲಿ ನೀಡಬೇಕಿತ್ತು. ಇಬ್ಬರೂ ಒಂದೇ ‌ಮಾದರಿಯಲ್ಲಿ ಹೊಡೆದಾಡಿಕೊಂಡಿರುವುದು ಅರ್ಥಹೀನವಾಗಿತ್ತು.

ಚಿತ್ರದ ಆರಂಭದಲ್ಲಿ ಒಂದಷ್ಟು ಸಂಭಾಷಣೆಗಳು ಪಂಚಿಂಗ್ ಆಗಿವೆ. ಇನ್ನು ಕೆಲವು ಕಡೆ ಮಾರ್ಮಿಕ ಅನಿಸುವಂತಿದೆ. ಆದರೆ "ಪಂಕ್ಚರ್ ಆಗೋದಿಕ್ಕೆ ನಾನು ಕಾಂಜಿ ಪೀಜಿ ಟೈರ್ ಅಲ್ಲ ಬುಲ್ಡೋಜರ್ ಟೈರ್" ಎನ್ನುವ ಸಂಭಾಷಣೆ ನಾಯಕನ ಬಾಯಲ್ಲಿ ಬಿಲ್ಡಪ್ ಬದಲು ತಮಾಷೆಯಂತೆ ಕಾಣಿಸುತ್ತದೆ. "ಹಣದಿಂದ ಪೊಲೀಸ್ ಕಾನೂನು ಎರಡನ್ನೂ ಕೊಳ್ಳಬಹುದು" ಎನ್ನುವ ಮಾತನ್ನು ಡೆವಿಲ್ ಹೇಳುತ್ತಾನೆ. ಆದರೆ ಅಂತಿಮವಾಗಿ ಡೆವಿಲ್ ಪರಿಸ್ಥಿತಿ ಏನಾಗುತ್ತದೆ ಎನ್ನುವುದನ್ನು ನೀವೇ ಚಿತ್ರಮಂದಿರದಲ್ಲಿ ನೋಡಬಹುದು.

Tags:    

Similar News