‘ಕೆಜಿಎಫ್ 2’ ಸಹ-ನಿರ್ದೇಶಕನ ಮಗ ಲಿಫ್ಟ್‌ನಲ್ಲಿ ಸಿಲುಕಿ ದಾರುಣ ಸಾವು
ಕನ್ನಡ ಚಿತ್ರರಂಗದ ಭರವಸೆಯ ನಿರ್ದೇಶಕ ಕೀರ್ತನ್ ನಾಡಗೌಡ ಅವರ ನಾಲ್ಕೂವರೆ ವರ್ಷದ ಏಕೈಕ ಪುತ್ರ ಚಿರಂಜೀವಿ ಸೋನಾರ್ಷ್ ಲಿಫ್ಟ್‌ನಲ್ಲಿ ಸಿಲುಕಿ ಮೃತಪಟ್ಟಿದ್ದಾನೆ.
ಕೀರ್ತನ್ ನಾಡಗೌಡ ಪುತ್ರ ಲಿಫ್ಟ್ ನಲ್ಲಿ ಸಿಲುಕಿ ಸಾವು
ಕನ್ನಡ ಚಿತ್ರರಂಗದ ಭರವಸೆಯ ನಿರ್ದೇಶಕ ಕೀರ್ತನ್ ನಾಡಗೌಡ ಅವರ ಕುಟುಂಬದಲ್ಲಿ ಶೋಕ ಸಾಗರ ಆವರಿಸಿದೆ. ಕೀರ್ತನ್ ಅವರ ನಾಲ್ಕೂವರೆ ವರ್ಷದ ಪುಟ್ಟ ಮಗ ಚಿರಂಜೀವಿ ಸೋನಾರ್ಷ್ ಕೆ. ನಾಡಗೌಡ, ಲಿಫ್ಟ್‌ನಲ್ಲಿ ಸಿಲುಕಿ ಅಕಾಲಿಕ ಮರಣಕ್ಕೀಡಾಗಿದ್ದಾನೆ. ಕೀರ್ತನ್ ನಾಡಗೌಡ ಮತ್ತು ಸಮೃದ್ಧಿ ಪಟೇಲ್ ದಂಪತಿಯ ಏಕೈಕ ಪುತ್ರನನ್ನು ಕಳೆದುಕೊಂಡಿದ್ದಾರೆ.
ಕೀರ್ತನ್ ನಾಡಗೌಡ ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ದಾಖಲೆ ಬರೆದ ʻಕೆಜಿಎಫ್ʼ ಚಾಪ್ಟರ್ 2 ಸಿನಿಮಾಗೆ ಸಹ-ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಕನ್ನಡ ಚಿತ್ರರಂಗದಲ್ಲಿ ಹಲವು ಚಿತ್ರಗಳ ನಿರ್ದೇಶನ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಇದೀಗ ಅವರು ನಿರ್ದೇಶಕರಾಗಿ ಡೆಬ್ಯೂ ಮಾಡಲು ಸಿದ್ದವಾಗಿದ್ದು, ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್‌ನಲ್ಲಿ ಪ್ರಶಾಂತ್ ನೀಲ್ ಅವರೊಂದಿಗೆ ಹಾರರ್ ಚಿತ್ರವೊಂದನ್ನು ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ನಡೆಯುತ್ತಿದೆ. ಹೀಗಾಗಿ, ಶೀಘ್ರದಲ್ಲೇ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಚೊಚ್ಚಲ ಪ್ರಯತ್ನ ಮಾಡಲಿದ್ದರು. ಈ ಮಧ್ಯೆ ಅವರಿಗೆ ದೊಡ್ಡ ಆಘಾತವೇ ಎದುರಾಗಿದೆ.
ಪವನ್ ಕಲ್ಯಾಣ್ ಆಘಾತ
ಈ ದುರಂತಕ್ಕೆ ಚಿತ್ರರಂಗದ ಹಲವು ಪ್ರಮುಖರು ಮತ್ತು ರಾಜಕೀಯ ವ್ಯಕ್ತಿಗಳು ಸಂತಾಪ ಸೂಚಿಸಿದ್ದಾರೆ. ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಿದ್ದಾರೆ. ನಿರ್ದೇಶಕ ಕೀರ್ತನ್ ನಾಡಗೌಡ ಅವರ ಮಗನ ಅಕಾಲಿಕ ಮರಣ ತೀವ್ರ ದುಃಖ ತಂದಿದೆ. ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ನಿರ್ದೇಶಕರಾಗಿ ಪರಿಚಯವಾಗುತ್ತಿರುವ ಕೀರ್ತನ್ ನಾಡಗೌಡ ಅವರ ಕುಟುಂಬದಲ್ಲಿ ಸಂಭವಿಸಿದ ಈ ದುರಂತ ನಮ್ಮನ್ನ ತೀವ್ರವಾಗಿ ನೋಯಿಸಿದೆ.
ಲಿಫ್ಟ್‌ನಲ್ಲಿ ಸಿಕ್ಕಿಹಾಕಿಕೊಂಡು ದುರಂತಕ್ಕೀಡಾದ ಚಿರಂಜೀವಿ ಸೋನಾರ್ಷ್.ಕೆ ನಾಡಗೌಡ ಅವರ ಕುಟುಂಬಕ್ಕೆ ಈ ದುಃಖವನ್ನ ತಾಳಲು ಭಗವಂತ ಶಕ್ತಿ ನೀಡಲಿ ಎಂದು ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.