ಮ್ಯಾನ್ಮಾರ್‌ನಲ್ಲಿ ಸೈಬರ್ ಗುಲಾಮಗಿರಿ: ನರಕದಿಂದ ಪಾರಾಗಿ ಬಂದ ಏಳು ಭಾರತೀಯರು

ಮೀರಾ ಭಯಂದರ್ ವಸೈ ವಿರಾರ್ (ಎಂಬಿವಿವಿ) ಕ್ರೈಂ ಬ್ರಾಂಚ್ ನಡೆಸಿದ ತನಿಖೆ ಮತ್ತು ಭಾರತೀಯ ರಾಯಭಾರ ಕಚೇರಿಯ ಸಹಕಾರದಿಂದ ಈ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿದೆ.

Update: 2025-12-21 05:06 GMT

ಸಾಂದರ್ಭಿಕ ಚಿತ್ರ

Click the Play button to listen to article

ಉದ್ಯೋಗದ ಆಸೆ ತೋರಿಸಿ ಮ್ಯಾನ್ಮಾರ್‌ಗೆ ಕರೆದೊಯ್ದು, ಅಲ್ಲಿ 'ಸೈಬರ್ ಗುಲಾಮ'ರನ್ನಾಗಿ ಮಾಡಿಕೊಂಡಿದ್ದ ಜಾಲದಿಂದ ಏಳು ಭಾರತೀಯರನ್ನು ರಕ್ಷಿಸಿ ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಗಿದೆ. ಮ್ಯಾನ್ಮಾರ್‌ನ ಕುಖ್ಯಾತ 'ಕೆಕೆ ಪಾರ್ಕ್' ಸ್ಕ್ಯಾಮ್ ಸೆಂಟರ್‌ನಲ್ಲಿ ಇವರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡು ಅಂತಾರಾಷ್ಟ್ರೀಯ ಆರ್ಥಿಕ ವಂಚನೆಗಳನ್ನು ನಡೆಸಲು ಒತ್ತಾಯಿಸಲಾಗುತ್ತಿತ್ತು ಎಂದು ಪೊಲೀಸ್ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಮೀರಾ ಭಯಂದರ್ ವಸೈ ವಿರಾರ್ (ಎಂಬಿವಿವಿ) ಕ್ರೈಂ ಬ್ರಾಂಚ್ ನಡೆಸಿದ ತನಿಖೆ ಮತ್ತು ಭಾರತೀಯ ರಾಯಭಾರ ಕಚೇರಿಯ ಸಹಕಾರದಿಂದ ಈ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿದೆ.

ಮೀರಾ ರೋಡ್ ನಿವಾಸಿಗಳಾದ ಸೈಯದ್ ಇರ್ತೀಸ್ ಫಜಲ್ ಅಬ್ಬಾಸ್ ಹುಸೇನ್ ಮತ್ತು ಅಮ್ಮಾರ್ ಅಸ್ಲಂ ಲಕ್ಡಾವಾಲಾ ಎಂಬುವವರು ಹೇಗೋ ತಪ್ಪಿಸಿಕೊಂಡು ಬಂದು ನಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ನಂತರ ಈ ದಂಧೆ ಬೆಳಕಿಗೆ ಬಂದಿದೆ.

"ಜುಲೈ ಮತ್ತು ಸೆಪ್ಟೆಂಬರ್ 2025ರ ನಡುವೆ ಬ್ಯಾಂಕಾಕ್‌ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ನಮ್ಮನ್ನು ಮ್ಯಾನ್ಮಾರ್‌ಗೆ ಕರೆದೊಯ್ಯಲಾಯಿತು. ಅಲ್ಲಿ UU8 ಎಂಬ ಕಂಪನಿಯಲ್ಲಿ ಸ್ಟೀವ್, ಅನ್ನಾ ಮತ್ತು ಲಿಯೋ ಎಂಬುವವರ ವಶಕ್ಕೆ ನಮ್ಮನ್ನು ನೀಡಲಾಯಿತು. ಹಲ್ಲೆಯ ಬೆದರಿಕೆ ಹಾಕಿ ವಿದೇಶಿ ಪ್ರಜೆಗಳಿಗೆ ಆರ್ಥಿಕ ವಂಚನೆ ಮಾಡಲು ನಮ್ಮನ್ನು ಒತ್ತಾಯಿಸಲಾಗುತ್ತಿತ್ತು," ಎಂದು ಸಂತ್ರಸ್ತರು ತಿಳಿಸಿದ್ದಾರೆ. ಇದನ್ನು ನಿರಾಕರಿಸಿದಾಗ ಬಿಡುಗಡೆಗೆ ಪ್ರತಿಯೊಬ್ಬರಿಂದ ತಲಾ 6 ಲಕ್ಷ ರೂಪಾಯಿ ಸುಲಿಗೆಗೆ ಬೇಡಿಕೆ ಇಡಲಾಗಿತ್ತು ಎಂದು ಸಹಾಯಕ ಪೊಲೀಸ್ ಆಯುಕ್ತ ಮದನ್ ಬಲ್ಲಾಳ್ ಮಾಹಿತಿ ನೀಡಿದ್ದಾರೆ.

ರಕ್ಷಣಾ ಕಾರ್ಯಾಚರಣೆ ಹೇಗೆ ನಡೆಯಿತು?

ಈ ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಕ್ರೈಂ ಬ್ರಾಂಚ್, ಮೀರಾ ಭಯಂದರ್ ಮತ್ತು ವಸೈ-ವಿರಾರ್ ಭಾಗದ ಹಲವು ಯುವಕರು ಈ ಜಾಲದಲ್ಲಿ ಸಿಲುಕಿರುವುದು ಪತ್ತೆಯಾಯಿತು. ಪಾಸ್‌ಪೋರ್ಟ್ ಸಂಖ್ಯೆಗಳು, ಮ್ಯಾನ್ಮಾರ್ ಮೂಲದ ಐಪಿ ವಿಳಾಸಗಳು ಮತ್ತು ಮೊಬೈಲ್ ಡೇಟಾವನ್ನು ವಿಶ್ಲೇಷಿಸಿ ಸಂತ್ರಸ್ತರನ್ನು ಪತ್ತೆ ಹಚ್ಚಲಾಯಿತು.

ನವದೆಹಲಿಯ ಇಂಡಿಯನ್ ಸೈಬರ್ ಕ್ರೈಂ ಕೋಆರ್ಡಿನೇಷನ್ ಸೆಂಟರ್ (I4C) ಮೂಲಕ ಯಾಂಗೋನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿತ್ತು. ಈ ಮಾಹಿತಿಯ ಆಧಾರದ ಮೇಲೆ ಅಕ್ಟೋಬರ್ 21ರಂದು ಮ್ಯಾನ್ಮಾರ್ ಸೇನೆಯು ಕೆಕೆ ಪಾರ್ಕ್ ಮೇಲೆ ದಾಳಿ ನಡೆಸಿತು ಎಂದು ಹಿರಿಯ ಇನ್ಸ್‌ಪೆಕ್ಟರ್ ಸುಶೀಲ್ ಕುಮಾರ್ ಶಿಂಧೆ ತಿಳಿಸಿದ್ದಾರೆ.

ಈ ವಾರ ಮ್ಯಾನ್ಮಾರ್ ಅಧಿಕಾರಿಗಳ ಸಹಕಾರದೊಂದಿಗೆ ಒಟ್ಟು ಏಳು ಭಾರತೀಯರನ್ನು (ನಾಲ್ವರು ಎಂಬಿವಿವಿ ವ್ಯಾಪ್ತಿಯವರು) ರಕ್ಷಿಸಿ ಭಾರತಕ್ಕೆ ಕರೆತರಲಾಗಿದೆ.

ನಾಲ್ವರು ಆರೋಪಿಗಳ ಬಂಧನ

ಈ ಮಾನವ ಕಳ್ಳಸಾಗಣೆ ಜಾಲಕ್ಕೆ ಸಂಬಂಧಿಸಿದಂತೆ ಗುಜರಾತ್‌ನ ಸೂರತ್, ಆಂಧ್ರಪ್ರದೇಶದ ವಿಶಾಖಪಟ್ಟಣಂ ಮತ್ತು ಮೀರಾ ಭಯಂದರ್‌ನಿಂದ ನಾಲ್ವರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ. ಇವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯಡಿ ಮಾನವ ಕಳ್ಳಸಾಗಣೆ, ಸುಲಿಗೆಗಾಗಿ ಅಪಹರಣ ಮತ್ತು ವಂಚನೆ ಪ್ರಕರಣಗಳನ್ನು ದಾಖಲಿಸಲಾಗಿದೆ.

Tags:    

Similar News