Vivek Katju

ಭಾರತ-ರಷ್ಯಾ ಶೃಂಗಸಭೆ: ಶಕ್ತ ಜಗತ್ತು ರೂಪಿಸುವ ಕಡೆಗೆ ದಿಗ್ಗಜರ ಮುನ್ನೋಟ


ಭಾರತ-ರಷ್ಯಾ ಶೃಂಗಸಭೆ: ಶಕ್ತ ಜಗತ್ತು ರೂಪಿಸುವ ಕಡೆಗೆ ದಿಗ್ಗಜರ ಮುನ್ನೋಟ
x
ಸಾಮಾನ್ಯ ಶಿಷ್ಟಾಚಾರದ ಅಗತ್ಯಗಳನ್ನೂ ಮೀರಿ ನಡೆದುಕೊಳ್ಳುವ ಮೂಲಕ ಪ್ರಧಾನಿ ಮೋದಿ ಅವರು ಭಾರತದ ಪಾಲಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಮಹತ್ವದ ಮಿತ್ರ ಎಂಬುದನ್ನು ತೋರಿಸಿಕೊಟ್ಟರು.

ರಷ್ಯಾದ ಇಂಧನ ಪೂರೈಕೆಗೆ ಅಡೆತಡೆಗಳಿಲ್ಲ ಎಂಬ ಘೋಷಣೆಯನ್ನೂ ಪುಟಿನ್ ಮಾಡಿದ್ದಾರೆ. ರಷ್ಯಾದಿಂದ ತೈಲ ರಫ್ತು ಮಾಡುವುದನ್ನು ಮೊಟಕುಗೊಳಿಸಬೇಕು ಎಂಬ ಟ್ರಂಪ್ ಬೇಡಿಕೆಯಿಂದ ಪುಟಿನ್ ವಿಚಲಿತರಾಗಿಲ್ಲ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಡಿಸೆಂಬರ್ 4-5ರಂದು 23ನೇ ವಾರ್ಷಿಕ ಭಾರತ-ರಷ್ಯಾ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಭೇಟಿ ನೀಡಿದ್ದು ಉಭಯ ರಾಷ್ಟ್ರಗಳ ದೃಷ್ಟಿಯಿಂದಲೂ ಮಹತ್ವದ್ದಾಗಿದೆ. ಪುಟಿನ್ ಅವರು ಐರೋಪ್ಯ ಒಕ್ಕೂಟದಿಂದ ಬಹುತೇಕ ದೂರವೇ ಆಗಿರುವ ಈ ನಿರ್ಣಾಯಕ ಹೊತ್ತಿನಲ್ಲಿ ಈ ಭೇಟಿ ನಡೆದಿರುವುದು ಇನ್ನೊಂದು ಮಹತ್ವದ ಸಂಗತಿಯಾಗಿದೆ. ಹೀಗಿದ್ದರೂ ಅವರು ಉಕ್ರೇನ್ ಯುದ್ಧಕ್ಕೆ ಸಂಪೂರ್ಣ ಇತ್ಯರ್ಥವನ್ನು ಕಂಡುಕೊಳ್ಳಲು ಸಾಧ್ಯವಾಗದೇ ಇದ್ದರೂ ಕನಿಷ್ಠ ಪಕ್ಷ ಕದನ ವಿರಾಮವನ್ನಾದರೂ ಖಚಿತಪಡಿಸಿಕೊಳ್ಳುವ ದೆಸೆಯಿಂದ ಅಮೆರಿಕದ ಜೊತೆ ಸೂಕ್ಷ್ಮ ಮಾತುಕತೆಯನ್ನು ಮುಂದುವರಿಸಿದ್ದಾರೆ.

ಯುದ್ಧ ಭೂಮಿಯಲ್ಲಿ ರಷ್ಯಾ ಅನುಕೂಲಕರ ಸ್ಥಾನದಲ್ಲಿ ಇರುವುದರಿಂದ ಪುಟಿನ್ ಅವರು 2022ರ ಫೆಬ್ರುವರಿಯಲ್ಲಿ ಯುದ್ಧವನ್ನು ಆರಂಭಿಸಲು ಕಾರಣವಾದ ಕೆಲವು ಮುಖ್ಯ ಉದ್ದೇಶಗಳನ್ನು ಸಾಧಿಸಲು ಕಠಿಣ ಮಾತುಕತೆಯಲ್ಲಿ ತೊಡಗಿದ್ದಾರೆ. ಇನ್ನು ರಾಜಕೀಯ ಮತ್ತು ಆರ್ಥಿಕ ರಂಗದಲ್ಲಿ ಭಾರತದ ಬಳಿ ಪ್ರಮುಖವಾದ ರಾಜತಾಂತ್ರಿಕ ಅವಕಾಶಗಳಿವೆ ಎಂಬುದನ್ನು ಅಮೆರಿಕಕ್ಕೆ ತೋರಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಶೃಂಗಸಭೆಯು ಒಂದು ಅಪೂರ್ವ ಅವಕಾಶವಾಗಿತ್ತು. ಭಾರತ ಮತ್ತು ಅಮೆರಿಕ ವಾಣಿಜ್ಯ ಒಪ್ಪಂದ ಇನ್ನೂ ಅಂತಿಮಗೊಂಡಿಲ್ಲ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತೀಯ ರಫ್ತುಗಳ ಮೇಲೆ ವಿಧಿಸಿದ್ದ ಶೇ.50ರಷ್ಟು ಸುಂಕಗಳನ್ನು ಕಡಿಮೆ ಮಾಡಿಲ್ಲದೇ ಇರುವ ಸಂದರ್ಭದಲ್ಲಿ ತಮ್ಮ ಈ ನಡೆ ಅನಿವಾರ್ಯ ಎಂಬ ಸ್ಪಷ್ಟ ಭಾವನೆ ಮೋದಿ ಅವರದ್ದಾಗಿದೆ.

ಸಿಂಗರಿಸಿ ಕುಳಿತ ಪ್ರಧಾನಿ ನಿವಾಸ

ರಷ್ಯಾದ ನಾಯಕನನ್ನು ಸ್ವಾಗತಿಸುವ ವಿಚಾರದಲ್ಲಿ ಶಿಷ್ಟಾಚಾರದ ಅಗತ್ಯಗಳನ್ನೂ ಮೀರಿ ನಡೆದುಕೊಳ್ಳುವ ಮೂಲಕ ಪ್ರಧಾನಿ ಮೋದಿ ಅವರು ಭಾರತದ ಪಾಲಿಗೆ ಪುಟಿನ್ ಅತ್ಯಂತ ಮಹತ್ವದ ಮಿತ್ರ ಎಂಬುದನ್ನು ತೋರಿಸಿಕೊಟ್ಟರು. ವಿಮಾನ ನಿಲ್ದಾಣದಲ್ಲಿ ಪುಟಿನ್ ಅವರನ್ನು ಬರಮಾಡಿಕೊಂಡ ಮೋದಿ ಅವರು ತಕ್ಷಣವೇ ತಮ್ಮ ನಿವಾಸದಲ್ಲಿ ಖಾಸಗಿ ಭೋಜನ ಕೂಟವನ್ನು ಏರ್ಪಡಿಸಿದರು. ಈ ಸಂದರ್ಭದಲ್ಲಿ ರಷ್ಯಾ ನಾಯಕನನ್ನು ಸ್ವಾಗತಿಸಲು ಪ್ರಧಾನಿ ನಿವಾಸವನ್ನು ಹಿಂದೆಂದೂ ಕಂಡಿರದ ರೀತಿಯಲ್ಲಿ ಅಲಂಕರಿಸಲಾಗಿತ್ತು.

ರಷ್ಯಾ ಒಂದು ಪ್ರಮುಖ ರಾಷ್ಟ್ರ ಮತ್ತು ಭಾರತ-ರಷ್ಯಾ ನಡುವಿನ ಸಂಬಂಧಗಳು ಭಾರತದ ಹಿತಾಸಕ್ತಿಗಳಿಗೆ ಅದರಲ್ಲೂ ವಿಶೇಷವಾಗಿ ರಕ್ಷಣಾ ಸಾಮಗ್ರಿಗಳ ಪೂರೈಕೆ, ನಾಗರಿಕ ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಅತ್ಯಂತ ನಿರ್ಣಾಯಕ. ಆದರೆ ವಾಸ್ತವದ ನೆಲೆಗಟ್ಟಿನಿಂದ ನೋಡಿದರೆ ಭಾರತದ ಹಿತಾಸಕ್ತಿಗಳಿಗೆ ಅಮೆರಿಕಾ ಸಂಬಂಧವು ಕೂಡ ಅಷ್ಟೇ ಮಹತ್ವದ್ದಾಗಿದೆ. ಹಾಗಂತ ಇದರರ್ಥ ಭಾರತವು ರಷ್ಯಾದ ಜೊತೆ ತಾನು ಹೊಂದಿರುವ ವಿಶೇಷ ಪಾಲುದಾರಿಕೆಯನ್ನು ಇನ್ನಷ್ಟು ಉತ್ತಮಗೊಳಿಸಲು ಶ್ರಮಿಸಬಾರದು ಎಂದೇನೂ ಅಲ್ಲ.

ಯುರೋಪ್ ನಿರೀಕ್ಷೆ ದೊಡ್ಡದು

‘ಇಡೀ ಜಗತ್ತೇ ಪುಟಿನ್ ಅವರ ಭಾರತ ಭೇಟಿಯನ್ನು ಕುತೂಹಲದಿಂದ ಗಮನಿಸುತ್ತಿದೆ’ ಎಂದು ಭಾರತದ ವಿಶ್ಲೇಷಣೆಕಾರರು ಬರೆಯುತ್ತಿದ್ದಾರೆ. ಆದರೆ ಜಾಗತಿಕ ವಿಶ್ಲೇಷಕರು, ಅದರಲ್ಲೂ ಮುಖ್ಯವಾಗಿ ಯುರೋಪ್ ಮತ್ತು ಅಮೆರಿಕದಲ್ಲಿರುವ ವೀಕ್ಷಕರು ಕಾಯುತ್ತಿದ್ದುದು ಉಕ್ರೇನ್ ಯುದ್ಧದ ವಿಚಾರದಲ್ಲಿ ಪುಟಿನ್ ಅವರಿಂದ ಬರಬಹುದಾದ ಸಂಕೇತಗಳ ಬಗ್ಗೆ. ಆದರೆ ಅವರು ಈ ಭೇಟಿಯಲ್ಲಿ ಯುದ್ಧದ ಬಗ್ಗೆ ಪ್ರಸ್ತಾಪವನ್ನೇ ಮಾಡಲಿಲ್ಲ. ಇಷ್ಟು ಮಾತ್ರವಲ್ಲದೆ ಯುದ್ಧವನ್ನು ಕೊನೆಗೊಳಿಸುವ ಅಗತ್ಯದ ಬಗ್ಗೆ ಮೋದಿ ಅವರು ಪುಟಿನ್ ಅವರಿಗೆ ಏನು ಸಂದೇಶವನ್ನು ಕೊಡಬಹುದು ಎಂಬ ನಿರೀಕ್ಷೆಯಲ್ಲಿ ಈ ವೀಕ್ಷಕರಿದ್ದರು. ಭಾರತದ ಹಿತಾಸಕ್ತಿಯು ಈ ಸಂಘರ್ಷ ಅಂತ್ಯಗೊಳ್ಳುವುದರಲ್ಲಿ ಅಡಗಿದೆ ಎಂಬುದರಲ್ಲಿ ಅನುಮಾನವಿಲ್ಲ.

ಪ್ರಧಾನಿ ಮೋದಿ ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೀಗೆ ಹೇಳಿದರು: “ಉಕ್ರೇನ್ ಪರಿಸ್ಥಿತಿಗೆ ಸಂಬಂಧಿಸಿದಂತೆ, ಆರಂಭದಿಂದಲೂ ಭಾರತವು ಸತತ ಶಾಂತಿಗಾಗಿ ಪ್ರತಿಪಾದಿಸುತ್ತ ಬಂದಿದೆ. ಈ ವಿಷಯದಲ್ಲಿ ಶಾಂತಿಯುತ ಮತ್ತು ಶಾಶ್ವತ ಪರಿಹಾರಕ್ಕಾಗಿ ಕೈಗೊಳ್ಳುತ್ತಿರುವ ಎಲ್ಲ ಪ್ರಯತ್ನಗಳನ್ನು ನಾವು ಸ್ವಾಗತಿಸುತ್ತೇವೆ. ಭಾರತವು ಯಾವಾಗಲೂ ಕೊಡುಗೆ ನೀಡಲು ಸಿದ್ಧವಾಗಿತ್ತು ಮತ್ತು ಸದಾ ಸಿದ್ಧವಾಗಿರುತ್ತದೆ." ವ್ಲಾಡಿಮಿರ್ ಪುಟಿನ್ ಅವರು ತಮ್ಮ ಕಡೆಯಿಂದ, ತಾವೂ ಮತ್ತು ಮೋದಿ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ಚರ್ಚಿಸಿದ್ದೇವೆ ಎಂದು ಮಾತ್ರ ಹೇಳಿದರು.

ಭಾರತ-ರಷ್ಯಾ ಜಂಟಿ ಹೇಳಿಕೆಯಲ್ಲಿ ಅಡಕವಾಗಿರುವ "ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಸಮಸ್ಯೆಗಳು" ಎಂಬ ವಿಭಾಗದಲ್ಲಿಯೂ ಕೂಡ ಉಕ್ರೇನ್ ಪರಿಸ್ಥಿತಿಯ ಬಗ್ಗೆ ಎಲ್ಲಿಯೂ ಉಲ್ಲೇಖ ಮಾಡಲಾಗಿಲ್ಲ. ಇದು ರಷ್ಯಾದ ಸಮಾಲೋಚಕರು ಉಕ್ರೇನ್ ವಿಷಯದ ಪ್ರಸ್ತಾಪವನ್ನು ಒಪ್ಪಲು ಸಿದ್ಧರಿರಲಿಲ್ಲ ಅಥವಾ ಉಭಯ ಪಕ್ಷದವರು ಪರಸ್ಪರ ಸ್ವೀಕಾರಾರ್ಹವಾದ ಒಂದು ಸೂತ್ರವನ್ನು ಕಂಡುಕೊಳ್ಳಲು ಸಾಧ್ಯವಾಗಲಿಲ್ಲ ಎಂಬುದನ್ನು ಕೂಡ ಸೂಚಿಸುತ್ತದೆ.

ಬದ್ಧತೆಯ ಪ್ರತಿಪಾದನೆ

ಈ ವಿಭಾಗವು ಮುಖ್ಯವಾಗಿ ಅಫ್ಘಾನಿಸ್ತಾನ, ಪಶ್ಚಿಮ ಏಷ್ಯಾದ ಪರಿಸ್ಥಿತಿಗಳನ್ನು ಒಳಗೊಂಡಿದೆ ಮತ್ತು ಈ ವಿಷಯಗಳ ಕುರಿತು ಹೀಗೆ ಹೇಳುತ್ತದೆ: "ಎರಡೂ ಕಡೆಯವರು ಮಧ್ಯಪ್ರಾಚ್ಯ/ಪಶ್ಚಿಮ ಏಷ್ಯಾದಲ್ಲಿ ಶಾಂತಿ ಮತ್ತು ಸ್ಥಿರತೆಗೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಅವರು ಸಂಯಮ, ನಾಗರಿಕರ ರಕ್ಷಣೆ ಮತ್ತು ಅಂತರರಾಷ್ಟ್ರೀಯ ಕಾನೂನುಗಳ ಅನುಸರಣೆಗಾಗಿ ಕರೆ ನೀಡಿದರು. ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸಿ ಪ್ರಾದೇಶಿಕ ಸ್ಥಿರತೆಯನ್ನು ಹಾಳುಮಾಡುವ ಯಾವುದೇ ಕ್ರಮಗಳಿಂದ ದೂರವಿರಬೇಕಾದ ಅಗತ್ಯವನ್ನು ಪ್ರತಿಪಾದಿಸಿದರು. ಇರಾನ್ ಪರಮಾಣು ಸಮಸ್ಯೆಯನ್ನು ಮಾತುಕತೆಯ ಮೂಲಕ ಪರಿಹರಿಸುವ ಮಹತ್ವವನ್ನು ಅವರು ಒತ್ತಿ ಹೇಳಿದರು. ಗಾಜಾದಲ್ಲಿನ ಮಾನವೀಯ ಪರಿಸ್ಥಿತಿಯ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು ಮತ್ತು ಸಂಘರ್ಷದ ನಿಲುಗಡೆ, ಮಾನವೀಯ ನೆರವು ಹಾಗೂ ಸುಸ್ಥಿರ ಶಾಂತಿಗಾಗಿ ಸಂಬಂಧಪಟ್ಟ ಎಲ್ಲ ಪಕ್ಷಗಳು ತಮ್ಮ ನಡುವೆ ತಲುಪಿರುವ ಒಪ್ಪಂದಗಳು ಮತ್ತು ತಿಳುವಳಿಕೆಗಳಿಗೆ ಬದ್ಧವಾಗಿರಬೇಕು ಎಂಬುದರ ಮಹತ್ವವನ್ನು ಬಲವಾಗಿ ಪ್ರತಿಪಾದಿಸಿದರು."

ವ್ಯಂಗದ ಸಂಗತಿ ಎಂದರೆ, ಪಶ್ಚಿಮ ಏಷ್ಯಾದಲ್ಲಿ ಅಂತಾರಾಷ್ಟ್ರೀಯ ಕಾನೂನನ್ನು ಪಾಲಿಸಬೇಕು ಎಂಬುದನ್ನು ರಷ್ಯಾ ಒಪ್ಪಿಕೊಂಡಿತ್ತು. ಆದರೆ ಅದೇ ಕಾನೂನು ಉಕ್ರೇನ್ ಪರಿಸ್ಥಿತಿಗೂ ಅನ್ವಯವಾಗಬೇಕು ಎಂಬುದನ್ನು ಅದು ಮರೆಯುತ್ತದೆ. ಶಕ್ತ ರಾಷ್ಟ್ರಗಳ ಪಾಲಿಗೆ, ಅಂತಾರಾಷ್ಟ್ರೀಯ ಕಾನೂನಿನ ಬಳಕೆಯು ಅದು ಆಯ್ದುಕೊಂಡ ರೀತಿಯಲ್ಲಿರುತ್ತದೆ ಮತ್ತು ಅವರ ಹಿತಾಸಕ್ತಿಗಳಿಗೆ ಅನುಗುಣವಾಗಿರುತ್ತದೆ ಎಂಬುದಕ್ಕೆ ಇದು ಮತ್ತೊಂದು ಮಹತ್ವದ ನಿದರ್ಶನವಾಗಿದೆ.

ಭಾರತ ಮತ್ತು ರಷ್ಯಾ, ಕುಶಲ ಕಾರ್ಮಿಕರ ಚಲನಶೀಲತೆ ಮತ್ತು ಮಧ್ಯ ಏಷ್ಯಾ ವಲಯದಲ್ಲಿ ಆರ್ಥಿಕ ಸಹಕಾರ ಸೇರಿದಂತೆ ಹೊಸ ಕ್ಷೇತ್ರಗಳಲ್ಲಿ ತಮ್ಮ ಸಂಬಂಧಗಳನ್ನು ವಿಸ್ತರಿಸಲು ನಿರ್ಧರಿಸಿರುವುದು ಉತ್ತಮ ಬೆಳವಣಿಗೆ. ಸಹಜವಾಗಿ, ಉಭಯ ದೇಶಗಳು ಸಹಕಾರದ ಸಾಂಪ್ರದಾಯಿಕ ಕ್ಷೇತ್ರಗಳಾದ ರಕ್ಷಣೆ, ಇಂಧನ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಬಾಹ್ಯಾಕಾಶದ ಮೇಲೆಯೂ ಗಮನಹರಿಸಿದವು. ರಷ್ಯಾದ ಇಂಧನ ಪೂರೈಕೆಗೆ ಯಾವುದೇ ಅಡೆತಡೆಗಳಿಲ್ಲ ಎಂಬ ಘೋಷಣೆಯನ್ನೂ ಪುಟಿನ್ ಮಾಡಿದರು.

ಟ್ರಂಪ್ ಕುಟುಕಿಗೆ ವಿಚಲಿತರಾಗದ ಪುಟಿನ್

ರಷ್ಯಾದಿಂದ ತೈಲ ರಫ್ತು ಮಾಡಿಕೊಳ್ಳುವುದನ್ನು ಮೊಟಕುಗೊಳಿಸಬೇಕು ಎಂಬ ಟ್ರಂಪ್ ಅವರ ಬೇಡಿಕೆಯಿಂದ ಪುಟಿನ್ ವಿಚಲಿತರಾಗಿಲ್ಲ ಎಂಬುದಕ್ಕೆ ಇದು ಸ್ಪಷ್ಟ ಸೂಚನೆಯಾಗಿದೆ. ಭಾರತವು ರಷ್ಯಾದ ತೈಲವನ್ನು ಖರೀದಿಸುವುದನ್ನು ಮುಂದುವರಿಸಬೇಕೆಂದು ಪುಟಿನ್ ಬಯಸುವುದು ಅಚ್ಚರಿಯೇನೂ ಅಲ್ಲ. ಆದಾಗ್ಯೂ, ವರದಿಗಳ ಪ್ರಕಾರ, ಭಾರತವು ರಷ್ಯಾದಿಂದ ತೈಲವನ್ನು ಖರೀದಿಸುವುದನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡಿದೆ. ಮೋದಿಯವರ ಪ್ರಥಮ ಆದ್ಯತೆಯೆಂದರೆ ಭಾರತೀಯ ರಫ್ತುಗಳ ಮೇಲಿನ ಟ್ರಂಪ್ ಅವರ ಸುಂಕಗಳನ್ನು ಕಡಿಮೆ ಮಾಡುವುದು. ರಷ್ಯಾದ ತೈಲ ಖರೀದಿಗೆ ಸಂಬಂಧಿಸಿದಂತೆ ಭಾರತವು ಟ್ರಂಪ್ ಬಯಸಿದ ಕ್ರಮಗಳನ್ನು ತೆಗೆದುಕೊಂಡಿರುವುದರಿಂದ, ಈ ವಿಷಯದಲ್ಲಿ ಭಾರತದ ಮೇಲೆ ವಿಧಿಸಲಾದ ಶೇ.25ರ ಸುಂಕವನ್ನು ಟ್ರಂಪ್ ಹಿಂತೆಗೆದುಕೊಳ್ಳಬಹುದು ಎಂಬ ಆಶಯ ಅವರದ್ದಾಗಿದೆ. ಆದರೆ, ಅದು ಇನ್ನೂ ಜಾರಿಗೆ ಬಂದಿಲ್ಲ.

ಇತ್ತ ಆರ್ಕ್ಟಿಕ್ ಮಂಜುಗಡ್ಡೆ ಕರಗುತ್ತಿರುವುದರಿಂದ, ಭವಿಷ್ಯದಲ್ಲಿ ಧ್ರುವೀಯ ಹಡಗು ಮಾರ್ಗವೇ ಪ್ರಮುಖವಾಗುವ ಸಾಧ್ಯತೆಯಿದೆ. ಈ ಮಾರ್ಗವನ್ನು ಬಳಸಲು ಸಾಧ್ಯವಾಗುವಂತಹ ಹಡಗುಗಳನ್ನು ತಯಾರಿಸಲು ಭಾರತ ಮತ್ತು ರಷ್ಯಾ ಸಹಕರಿಸಲು ನಿರ್ಧರಿಸಿವೆ. ಇದೊಂದು ಉತ್ತಮ ನಿರ್ಧಾರ, ಏಕೆಂದರೆ ಭಾರತದ ಹಿತಾಸಕ್ತಿಗಳು ಭವಿಷ್ಯದ ಕಡೆಗೆ ದೃಷ್ಟಿ ನೆಟ್ಟಿವೆ. ಭಾರತವು ಒಂದು ಪ್ರಮುಖ ರಕ್ಷಣಾ ಉದ್ಯಮವನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿರುವಾಗ, ರಷ್ಯಾ ಒಂದು ಮುಖ್ಯ ಪಾಲುದಾರನಾಗಬಹುದು.

ಆದಾಗ್ಯೂ, ಭಾರತವು ರಷ್ಯಾದಿಂದ ಬರುವ ತಂತ್ರಜ್ಞಾನದ ಒಳಹರಿವಿನ ಮೇಲಿನ ಅವಲಂಬನೆಯನ್ನು ಮೀರಿ ಬೆಳೆಯಬೇಕಾದುದು ವಾಸ್ತವ. ಭವಿಷ್ಯದ ಯುದ್ಧಗಳಿಗೆ ಶಸ್ತ್ರಾಸ್ತ್ರಗಳನ್ನು ಉತ್ಪಾದಿಸುವ ಸಾಮರ್ಥ್ಯವಿರುವ ಸ್ವತಂತ್ರ ಮೂಲವನ್ನು ನಿರ್ಮಿಸಿದಾಗ ಮಾತ್ರ ಅದು ನಿಜವಾದ ರಕ್ಷಣಾ ಉದ್ಯಮವನ್ನು ಅಭಿವೃದ್ಧಿಪಡಿಸಿದೆ ಎಂದು ಹೇಳಲು ಸಾಧ್ಯವಾಗುತ್ತದೆ.

ಭಾರತ-ಚೀನಾ ಸಂಬಂಧ: ಪುಟಿನ್ ವ್ಯಾಖ್ಯಾನ

ಅಮೆರಿಕ ಹೇಗೆ ಭಾರತ-ರಷ್ಯಾ ಸಂಬಂಧವನ್ನು ರೂಪಿಸುತ್ತದೆಯೋ, ಅದೇ ರೀತಿ ಚೀನಾ ಕೂಡ ಒಂದು ನಿರ್ಣಾಯಕ ಅಂಶ. ಪುಟಿನ್ ಅವರು ಒಂದು ಸಂದರ್ಶನದಲ್ಲಿ, ಭಾರತ-ರಷ್ಯಾ ಸಂಬಂಧಗಳು ರಷ್ಯಾ-ಚೀನಾ ಸಂಬಂಧಗಳಂತಿರಬೇಕು ಎಂದು ಬಯಸುವುದಾಗಿ ಹೇಳಿದ್ದನ್ನು ಇಲ್ಲಿ ಗಮನಿಸಬಹುದು. ವಾಸ್ತವವಾಗಿ ಇದು ಸಾಧ್ಯವಿಲ್ಲ, ಯಾಕೆಂದರೆ ರಷ್ಯಾವು ಚೀನಾದ ಮೇಲೆ ಹೆಚ್ಚು ಅವಲಂಬಿತವಾಗಿದೆ. ಅಲ್ಲದೆ, ಚೀನಾವು ಹಲವಾರು ರಂಗಗಳಲ್ಲಿ ರಷ್ಯಾವನ್ನು ಹಿಂದಿಕ್ಕಿದೆ. ಅಮೆರಿಕ ಮತ್ತು ಸೋವಿಯತ್ ಒಕ್ಕೂಟದ ನಡುವಿನ ಹಿಂದಿನ ಜಾಗತಿಕ ಪೈಪೋಟಿಯ ಯುಗವು, ಈಗ ಅಮೆರಿಕ ಮತ್ತು ಚೀನಾದ ನಡುವಿನ ಹೊಸ ಸ್ಪರ್ಧಾ ಕಣವನ್ನು ತೆರೆಯುವಂತೆ ಮಾಡಿದೆ. ಆದ್ದರಿಂದ, ಪುಟಿನ್ ಅವರ ಮಾತುಗಳು ಪ್ರಸ್ತುತ ಜಾಗತಿಕ ಶಕ್ತಿ ಸಮೀಕರಣದ ವಾಸ್ತವ ಸಂಗತಿಯನ್ನು ಪ್ರತಿಬಿಂಬಿಸುವುದಿಲ್ಲ.

ಪ್ರಧಾನಿ ಮೋದಿ ಅವರು ಯಾವತ್ತೂ ಭಾರತದ ಆಯ್ಕೆಗಳನ್ನು ತೆರೆದಿಡಲು ಬಯಸುತ್ತಾರೆ ಎಂಬುದಕ್ಕೆ ಈ ಶೃಂಗಸಭೆಯು ಒಂದು ನಿದರ್ಶನವಾಗಿದೆ. ರಾಜತಾಂತ್ರಿಕವಾಗಿ ಇದು ಶ್ಲಾಘನೀಯ. ಆದರೆ ಅಮೆರಿಕ ಭಾರತದ ಹಿತಾಸಕ್ತಿಗಳಿಗೆ ಹಾನಿ ಮಾಡುವ ಸಾಮರ್ಥ್ಯ ಹೊಂದಿರುವ ವಿಶ್ವದ ಅಗ್ರಗಣ್ಯ ಶಕ್ತಿಯಾಗಿ ಈಗಲೂ ಮುಂದುವರಿದಿದೆ ಎಂಬ ಸತ್ಯವನ್ನು ಇದು ಮರೆಮಾಡಲು ಸಾಧ್ಯವಿಲ್ಲ.


Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ದ ಫೆಡರಲ್‌ನ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್‌' ಇಂಗ್ಲಿಷ್‌ ಜಾಲತಾಣದಲ್ಲಿ ಪ್ರಕಟವಾಗಿದೆ.

Next Story