ಟಿಎಂಸಿಯಿಂದ ಅಮಾನತು; ಹೊಸ ಪಕ್ಷ ಸ್ಥಾಪಿಸಿದ ಪಶ್ಚಿಮ ಬಂಗಾಳ ಶಾಸಕ ಕಬೀರ್
ಬೆಲ್ದಂಗಾದ ಸಭೆಯಲ್ಲಿ ಮಾತನಾಡಿದ ಕಬೀರ್ ಅವರು ತಮ್ಮ ಪಕ್ಷದಿಂದ ಎಂಟು ಅಭ್ಯರ್ಥಿಗಳನ್ನು ಪ್ರಕಟಿಸಿದ್ದಾರೆ. ಸ್ವತಃ ಮುರ್ಷಿದಾಬಾದ್ ಜಿಲ್ಲೆಯ ರೆಜಿನಗರ ಮತ್ತು ಬೆಲ್ದಂಗಾ ಸೇರಿದಂತೆ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.
ಟಿಎಂಸಿಯಿಂದ ಅಮಾನತುಗೊಂಡ ಶಾಸಕರಾದ ಹುಮಾಯೂನ್ ಕಬೀರ್ ಸೋಮವಾರ ಹೊಸ ರಾಜಕೀಯ ಪಕ್ಷದ ಜನತಾ ಉನ್ನಯನ್ ಪಾರ್ಟಿ ಸ್ಥಾಪಿಸಿರುವುದಾಗಿ ಘೋಷಿಸಿದ್ದಾರೆ. ಮುರ್ಷಿದಾಬಾದ್ ಜಿಲ್ಲೆಯ ರೆಜಿನಗರದಲ್ಲಿ ಬಾಬ್ರಿ ಶೈಲಿಯ ಮಸೀದಿ ಅಡಿಗಲ್ಲು ಇಟ್ಟ ಹಿನ್ನೆಲೆಯಲ್ಲಿ ಪಕ್ಷದಿಂದ ಅಮಾನತುಗೊಂಡಿದ್ದ ಕಬೀರ್, ಹೊಸ ಪಕ್ಷದ ಮೂಲಕ 2026ರ ವಿಧಾನಸಭಾ ಚುನಾವಣೆಗೆ ಸಜ್ಜಾಗಿದ್ದಾರೆ.
ಬೆಲ್ದಂಗಾದ ಸಭೆಯಲ್ಲಿ ಮಾತನಾಡಿದ ಕಬೀರ್ ಅವರು ತಮ್ಮ ಪಕ್ಷದಿಂದ ಎಂಟು ಅಭ್ಯರ್ಥಿಗಳನ್ನು ಪ್ರಕಟಿಸಿದ್ದಾರೆ. ಸ್ವತಃ ಮುರ್ಷಿದಾಬಾದ್ ಜಿಲ್ಲೆಯ ರೆಜಿನಗರ ಮತ್ತು ಬೆಲ್ದಂಗಾ ಸೇರಿದಂತೆ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.
“ನಾವು ಎಷ್ಟು ಸ್ಥಾನಗಳಲ್ಲಿ ಸ್ಪರ್ಧಿಸುತ್ತೇವೆ ಎಂಬುದನ್ನು ಮುಂದೆ ತಿಳಿಸುತ್ತೇವೆ,” ಎಂದು ಕಬೀರ್ ಹೇಳಿದ್ದಾರೆ. ಮುಖ್ಯ ಗುರಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಅಧಿಕಾರದಿಂದ ಇಳಿಸುವುದು. ಅವರು ಈಗ ಜನರಿಂದ ದೂರ ಸರಿದು ಬದಲಾಗಿದ್ದಾರೆ,” ಎಂದು ಆರೋಪಿಸಿದ್ದಾರೆ.
ಬಿಜೆಪಿ ಈ ಬೆಳವಣಿಗೆಯನ್ನು ಟೀಕಿಸಿದೆ. “ಕಬೀರ್ ಮತ್ತೆ ಟಿಎಂಸಿಗೆ ಸಹಾಯ ಮಾಡುತ್ತಿದ್ದಾನೆ. ಅವರ ಹೊಸ ಪಕ್ಷಕ್ಕೂ ಜನ ಬೆಂಬಲ ನೀಡುವುದಿಲ್ಲ,” ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಹೇಳಿದ್ದಾರೆ. “ಬಾಂಗ್ಲಾದೇಶದ ಇತ್ತೀಚಿನ ಪರಿಸ್ಥಿತಿಯ ನಡುವೆ ಬಂಗಾಳದ ಜನರು ಧಾರ್ಮಿಕ ಮೂಲಭೂತವಾದವನ್ನು ಎದುರಿಸಲು ರಾಷ್ಟ್ರೀಯತಾವಾದಿ ಪಕ್ಷವಾದ ಬಿಜೆಪಿ ಜತೆ ನಿಲ್ಲಲಿದ್ದಾರೆ,” ಎಂದರು.
ಟಿಎಂಸಿಯಿಂದ ಅಧಿಕೃತ ಪ್ರತಿಕ್ರಿಯೆ ಇಲ್ಲ
ಡಿಸೆಂಬರ್ 4ರಂದು ಕಬೀರ್ ಅವರ ಬಾಬ್ರಿ ಶೈಲಿಯ ಮಸೀದಿ ಯೋಜನೆಯ ಘೋಷಣೆಯ ಬಳಿಕ ಟಿಎಂಸಿಯಿಂದ ಅಮಾನತುಗೊಂಡಿದ್ದರು. ಆದರೂ, ಡಿಸೆಂಬರ್ 6ರಂದು ಬಾಬ್ರಿ ಮಸೀದಿ ಧ್ವಂಸವಾದ ದಿನದಂದೇ ಕಬೀರ್ ರೆಜಿನಗರದಲ್ಲಿ ಆ ಮಸೀದಿಯ ಅಡಿಗಲ್ಲು ಹಾಕಿದ್ದರು.
ಹಿಂದಿನ ದಶಕದಲ್ಲಿ ಕಬೀರ್ ಹಲವು ಪಕ್ಷಗಳಲ್ಲಿ ತಿರುಗಾಡಿದ್ದಾರೆ. 2015ರಲ್ಲಿ ಟಿಎಂಸಿಯಿಂದ ಅಮಾನತುಗೊಂಡ ಅವರು ನಂತರ ಸ್ವತಂತ್ರ ಅಭ್ಯರ್ಥಿಯಾಗಿ 2016ರ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು ಬಳಿಕ ಕಾಂಗ್ರೆಸ್ ಸೇರಿ, 2019ರ ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಸೇರಿ ಮುರ್ಷಿದಾಬಾದ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ನಂತರ ಮತ್ತೆ ಟಿಎಂಸಿ ಸೇರಿ 2021ರಲ್ಲಿ ಭಾರತಪುರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಈಗ ಅವರು ಮತ್ತೆ ಹೊಸ ಪಕ್ಷದೊಂದಿಗೆ ರಾಜಕೀಯ ಕಣಕ್ಕೆ ಕಾಲಿಟ್ಟಿದ್ದಾರೆ.