Abid Shah

ಮತ್ತೊಂದು ಬಾಬರಿ ಮಸೀದಿಗೆ ಸಿದ್ದತೆ: ಮುಸ್ಲಿಮರ ಶ್ರಮದ ಸಂಯಮಕ್ಕೆ ಕಿಚ್ಚು ಹಚ್ಚಲು ಕಬೀರ್ ಪ್ರಯತ್ನ


ಮತ್ತೊಂದು ಬಾಬರಿ ಮಸೀದಿಗೆ ಸಿದ್ದತೆ: ಮುಸ್ಲಿಮರ ಶ್ರಮದ ಸಂಯಮಕ್ಕೆ ಕಿಚ್ಚು ಹಚ್ಚಲು ಕಬೀರ್ ಪ್ರಯತ್ನ
x
ಮತ್ತೊಂದು ಬಾಬರಿ ಮಸೀದಿ ನಿರ್ಮಾಣ ಮಾಡುವುದಾಗಿ ಟಿಎಂಸಿ ಶಾಸಕ ಹುಮಾಯೂನ್ ಕಬೀರ್ ಅವರು ಹೇಳಿರುವ ಹಿನ್ನೆಲೆಯಲ್ಲಿ ಡಿಸೆಂಬರ್ ಆರರಂದು ಪಶ್ಚಿಮ ಬಂಗಾಲದ ಮುರ್ಷಿದಾಬಾದ್ ಜಿಲ್ಲೆಯ ರೇಜಿನಗರ್ ಎಂಬಲ್ಲಿ ಅಯೋಧ್ಯೆಯ ಬಾಬರಿ ಮಸೀದಿಯ ಮಾದರಿಯಲ್ಲಿ ಮಸೀದಿ ನಿರ್ಮಾಣ ಮಾಡುವ ಉದ್ದೇಶದಿಂದ ಇಟ್ಟಿಗೆಗಳನ್ನು ಹೊತ್ತೊಯ್ಯುತ್ತಿರುವ ಜನ.
Click the Play button to hear this message in audio format

ಹುಮಾಯೂನ್ ಕಬೀರ್ ಅವರು ತಳೆದಿರುವ ಏಕಪಕ್ಷೀಯವಾದ ನಡೆ ಕಾನೂನು ಮಾರ್ಗವನ್ನು ಕಡೆಗಣಿಸುತ್ತದೆ. ಸಮಾನತೆಗಾಗಿ ವಿಶಾಲ ಸಮುದಾಯದ ಪ್ರಯತ್ನಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಬಿಜೆಪಿಯ ದ್ರುವೀಕರಣ ರಾಜಕೀಯಕ್ಕೆ ಸಾಥ್ ನೀಡುತ್ತದೆ.)

ಮುರ್ಷಿದಾಬಾದ್‌ನಲ್ಲಿ ಮತ್ತೊಂದು ಬಾಬರಿ ಮಸೀದಿ ನಿರ್ಮಾಣ ಮಾಡುವ ಮಾತನಾಡಿದ್ದಾರೆ ಪಶ್ಚಿಮ ಬಂಗಾಲದ ಶಾಸಕ ಹುಮಾಯೂನ್ ಕಬೀರ್. ಇದೊಂದು ತೀರಾ ಸಮಸ್ಯಾತ್ಮಕ ನಿಲುವು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಯಾಕೆಂದರೆ ಈ ಕುತೂಹಲಕಾರಿ ಹೆಜ್ಜೆಯನ್ನು ಇಡುವ ಮೂಲಕ ನಿರುದ್ದಿಶ್ಯವಾಗಿ ಬಿಜೆಪಿ ಕಾರ್ಯತಂತ್ರವನ್ನೇ ಅವರು ಅನುಸರಿಸಿದಂತಾಗುತ್ತದೆ.

ಬಿಜೆಪಿಯಂತೆಯೇ, ಕಬೀರ್ ಅವರ ಯೋಜನೆ ಮತ್ತು ಕ್ರಮಗಳು ರಾಜಕೀಯಕ್ಕಿಂತ ಇತಿಹಾಸಕ್ಕೆ, ವಿಮೋಚನೆಗಿಂತ ಸಂಕುಚಿತತೆಗೆ, ಮತ್ತು ಸಮಾನತಾ ಸಿದ್ಧಾಂತಕ್ಕಿಂತ ಗುರುತಿನ ರಾಜಕಾರಣಕ್ಕೆ ಪ್ರಾಮುಖ್ಯತೆಯನ್ನು ನೀಡುತ್ತವೆ. ಇದು ಸಮಸ್ಯೆಗಳನ್ನು ಮಸುಕಾಗಿಸುವ ಅಥವಾ ಗೊಂದಲಕ್ಕೆ ಒಳಪಡಿಸುವ ಮತ್ತು ಕಾನೂನಿನ ವ್ಯವಸ್ಥೆಯನ್ನು ತಬ್ಬಿಬ್ಬುಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಪರಿಸ್ಥಿತಿಯು ಈಗಾಗಲೇ ಸಾರ್ವಜನಿಕ ವಲಯದಲ್ಲಿ ಕಳವಳವನ್ನು ಹುಟ್ಟುಹಾಕಿದೆ.

ಮಂದಿರ-ಮಸೀದಿ ವಿವಾದವು ಈಗಾಗಲೇ ಅತಿಯಾಗಿ ಬಳಕೆಯಾಗಿ ಸವಕಲಾಗಿ ಹೋಗಿದೆ. ಈ ಹೊಸ ಆಕ್ರಮಣದ ಹಿಂದಿನ ಉದ್ದೇಶವು ಬಹುಸಂಖ್ಯಾತರ ಕಾಲದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳನ್ನು ಪ್ರತಿಪಾದಿಸುವ ಉದ್ದೇಶವಾಗಿ ಕಂಡುಬಂದರೂ ಇದು ದೇಶವನ್ನು ನ್ಯಾಯರಹಿತ ಸ್ಥಿತಿಗೆ ತಳ್ಳುವ ಸಾಧ್ಯತೆ ದಟ್ಟವಾಗಿದೆ. ಅದು ಕೇವಲ ಮುಸ್ಲಿಂ ಸಮುದಾಯದವರಿಗೆ ಮಾತ್ರವಲ್ಲ, ಇಡೀ ಸಮಾಜಕ್ಕೂ ಅದರಲ್ಲೂ ಮುಖ್ಯವಾಗಿ ತಳ ಸಮುದಾಯದವರಿಗೆ ಅನ್ಯಾಯ ಉಂಟುಮಾಡಬಹುದು.

ಸಂಯಮ ತೋರಿದ ಸಮುದಾಯ

ಮಂಡಲ್ ಚಳವಳಿಯನ್ನು ಹತ್ತಿಕ್ಕುವ ಉದ್ದೇಶದಿಂದ ಹುಟ್ಟಿಕೊಂಡ ಮಂದಿರ ಆಂದೋಲನವು ಕಳೆದ ಮೂರು ದಶಕಗಳ ಅವಧಿಯಲ್ಲಿ ಸಾಗಿದ ಹಾದಿ ದೊಡ್ಡದು. ಇದರಲ್ಲಿ ಹಿಂದುತ್ವದ ಕೋಮುವಾದಿ ತೋಪಿಗೆ ಮುಸ್ಲಿಮರನ್ನು ಆಹಾರವಾಗಿ ಮಾಡಲಾಯಿತು. ಆದರೂ ಮುಸ್ಲಿಮರು ಈ ಎಲ್ಲ ಸಂದರ್ಭಗಳಲ್ಲಿ ಅಸಾಧಾರಣವಾದ ಸಂಯಮವನ್ನು ತೋರಿಸಿದ್ದಾರೆ.

ಪರಿಸ್ಥಿತಿಗಳು ಮನುಷ್ಯನಿಗೆ ದೊಡ್ಡ ಪಾಠ ಕಲಿಸಿದರೂ ಮುಸ್ಲಿಂ ಸಮುದಾಯದ ನೇರ ಪ್ರತಿಕ್ರಿಯೆ ಇದ್ದುದು ನ್ಯಾಯಾಲಯಗಳಲ್ಲಿನ ಕಾನೂನು ಹೋರಾಟಗಳಿಗೆ. ಹಾಗಿದ್ದೂ ಸಾಮಾಜಿಕ ಮಟ್ಟದಲ್ಲಿ ಅವರು ಶಿಕ್ಷಣದ ಕಡೆಗೆ ಹೆಚ್ಚು ಆದ್ಯತೆಯನ್ನು ನೀಡಿದರು ಮತ್ತು ತಮ್ಮ ಮಕ್ಕಳಿಗೆ ಹಿಂದೆಂದಿಗಿಂತೂ ಜ್ಞಾನವನ್ನು ನೀಡುವ ಮೂಲಕ ಪರಿಹಾರ ಕಂಡುಕೊಳ್ಳುವ ಪ್ರುಯತ್ನ ನಡೆಸಿದರು.

ಇದು ಅವರ ವಿರೋಧಿಗಳ ಗಮನವನ್ನು ಸೆಳೆಯದೇ ಇರಲಿಲ್ಲ. ಮುಸ್ಲಿಂ ಅಲ್ಪಸಂಖ್ಯಾತರು ಹಿಂದೆಂದಿಗಿಂತಲೂ ಹೆಚ್ಚು ಯಶಸ್ಸು ಮತ್ತು ಪ್ರಭಾವವನ್ನು ಗಳಿಸಲು ಮಾಡಿದ ಶ್ರಮಕ್ಕೆ ‘ಐಎಎಸ್ ಜಿಹಾದ್’ ಎಂಬ ಹಣೆಪಟ್ಟಿ ಕಟ್ಟಲಾಯಿತು. ಇದಕ್ಕೆ ಮುಖ್ಯ ಕಾರಣ ಹಿಂದಿನ ಕೆಲವು ವರ್ಷಗಳಿಗಿಂತ ಈ ಬಾರಿ ಹೆಚ್ಚು ಮಂದಿ ಮುಸ್ಲಿಂ ಅಭ್ಯರ್ಥಿಗಳು ಯು.ಪಿ.ಎಸ್.ಸಿ. ಯಶಸ್ವಿ ಅಭ್ಯರ್ಥಿಗಳ ಪಟ್ಟಿಗೆ ಅರ್ಹತೆ ಪಡೆದಿದ್ದು.

ಭರವಸೆಯ ನೋಟ

ಇಷ್ಟು ಮಾತ್ರವಲ್ಲದೆ ಇತ್ತೀಚನ ಕೆಲವು ವಿದ್ಯಮಾನಗಳಲ್ಲಿ, ಕೆಲವೊಂದು ಗಣ್ಯ ಹಿನ್ನೆಲೆಯಿರುವ 'ಶ್ವೇತವರ್ಣದ ಜಿಹಾದಿಗಳು' ಅತ್ಯಂತ ಘೋರ ಘಟನೆಗಳಿಗೆ ಕಾರಣರಾಗಿದ್ದಾರೆ ಎಂದು ಕಾನೂನು ಜಾರಿ ಸಂಸ್ಥೆಗಳನ್ನು ಉಲ್ಲೇಖಿಸಿ ಹೆಚ್ಚಿನ ಮಾಧ್ಯಮಗಳು ಪದೇ ಪದೇ ವರದಿ ಮಾಡುತ್ತಿವೆ. ಇಂತಹ ಸಾಮೂಹಿಕ ಕಳಂಕವನ್ನು ಹೆಚ್ಚಿನ ಮುಸ್ಲಿಮರು ಮೌನವಾಗಿ ಸಹಿಸಿಕೊಳ್ಳುತ್ತಿದ್ದಾರೆ. ಈಗಿನ ಅಂಧಾಭಿಮಾನದಿಂದ ತಮ್ಮ ಭವಿಷ್ಯದ ಮೇಲೆ ಸಂಭವನೀಯ ಪ್ರತಿಕೂಲ ಪರಿಣಾಮ ಉಂಟುಮಾಡುತ್ತದೆ ಎಂಬ ಆತಂಕ ಅವರದ್ದಾಗಿದೆ. ಅಂತಿಮವಾಗಿ ಜಾತಿ, ಮತ ಮತ್ತು ಸಮುದಾಯವನ್ನು ಲೆಕ್ಕಿಸದೆ ಎಲ್ಲರಲ್ಲಿ ಉತ್ತಮ ತಿಳುವಳಿಕೆ ನೆಲೆಸುತ್ತದೆ, ಮೇಲುಗೈ ಸಾಧಿಸುತ್ತದೆ ಮತ್ತು ಮತ್ತಷ್ಟು ದ್ವೇಷ ಹಾಗೂ ಸಂಘರ್ಷ ಸೃಷ್ಟಿಯಾಗುವುದನ್ನು ತಡೆಯುತ್ತದೆ ಎಂಬ ಭರವಸೆಯೊಂದಿಗೆ ಅವರು ಅವುಡುಗಚ್ಚಿಕೊಂಡು ಸುಮ್ಮನಿದ್ದಾರೆ.

ಈ ಎಲ್ಲ ಹಿನ್ನೆಲೆಯಲ್ಲಿ ಗಮನಿಸಿದರೆ ಒಟ್ಟಾರೆ ಕೋಮುವಾದವನ್ನು ಸೋಲಿಸಿ, ಸೌಹಾರ್ದತೆ ಮತ್ತು ಕೋಮು ಸಾಮರಸ್ಯವನ್ನು ಮರಳಿ ದಕ್ಕಿಸಿಕೊಳ್ಳುವ ವಿಶಾಲ ಮುಸ್ಲಿಂ ಸಮುದಾಯದ ಒಟ್ಟಾರೆ ಆಶಯದ (ಅದು ವ್ಯಕ್ತವಾಗದೇ ಇದ್ದರೂ ಕೂಡ) ವಿರುದ್ಧ ಕಬೀರ್ ಅವರು ಹೆಜ್ಜೆಯಿಟ್ಟಿದ್ದಾರೆ.

ಬಾಬರಿ ಮಸೀದಿಯ ನಷ್ಟ ಮತ್ತು ಅದನ್ನು ಸರಿಪಡಿಸಲು ಪಶ್ಚಿಮ ಬಂಗಾಳದ ಶಾಸಕರು ಇನ್ನೊಂದು ಸ್ಥಳದಲ್ಲಿ ಮತ್ತೊಂದು ಮಸೀದಿಯನ್ನು ನಿರ್ಮಿಸುವ ಪ್ರಯತ್ನಕ್ಕೆ ಬದಲಾಗಿ ಅವರು ಅಥವಾ ಅವರ ಸಂಗಡಿಗರು ಯಾರಾದರೂ, ನ್ಯಾಯಾಲಯದಲ್ಲಿ ದಾವೆ ಹೂಡಬಹುದಿತ್ತು.

ಕಾನೂನು ಪರಿಹಾರದ ಮಾರ್ಗ

ಸುಪ್ರೀಂ ಕೋರ್ಟ್ನ 2019ರ ತೀರ್ಪಿನ ಪ್ರಕಾರ ಅಯೋಧ್ಯೆ ನಗರ ಕೇಂದ್ರದಿಂದ ಹೊರಗೆ ಗುರುತಿಸಲಾದ ಸ್ಥಳದಲ್ಲಿ ಮಸೀದಿ ನಿರ್ಮಾಣವನ್ನು ತ್ವರಿತಗೊಳಿಸುವುದಕ್ಕೆ ಸಂಬಂಧಿಸಿದಂತೆ ಕಾನೂನು ಪರಿಹಾರಕ್ಕಾಗಿ ಸುಲಭವಾಗಿ ಮೊಕದ್ದಮೆ ಹೂಡಬಹುದಾಗಿತ್ತು. ಅಯೋಧ್ಯೆಯ ಸಮೀಪದ ಧನ್ನೀಪುರ ಗ್ರಾಮದಲ್ಲಿ ಕೆಡವಲಾದ ಮಸೀದಿಗೆ ಬದಲಾಗಿ ನೀಡಲಾದ ಆ ಜಮೀನು ಇನ್ನೂ ಖಾಲಿ, ನಿರ್ಜನ ಮತ್ತು ಪಾಳುಬಿದ್ದ ಸ್ಥಿತಿಯಲ್ಲಿದೆ.

ಬಾಬರಿ ಮಸೀದಿ ನಿಂತಿದ್ದ ಸ್ಥಳದಲ್ಲಿ ರಾಮ ಮಂದಿರದ ನಿರ್ಮಾಣವು ಇತ್ತೀಚೆಗೆ ಪೂರ್ಣಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, ಮತ್ತು ಇತರ ಉನ್ನತ ವ್ಯಕ್ತಿಗಳು ಸೇರಿಕೊಂಡ ವಾಸ್ತವವಾಗಿ ಸರ್ಕಾರಿ ಪ್ರಾಯೋಜಿತ ಪ್ರದರ್ಶನಗಳ ಮೂಲಕ ಭವ್ಯ ಸಮಾರಂಭಗಳನ್ನು ನಡೆಸಿ ಗುರುತಿಸಲಾಗಿದ್ದರೂ ಸಹ ಪರಿಸ್ಥಿತಿ ಬದಲಾಗಿಲ್ಲ.

ಈ ದೃಷ್ಟಿಕೋನದಲ್ಲಿ ನೋಡಿದಾಗ, ಕಬೀರ್ ಅವರ ನಡೆಯು ತಪ್ಪು ಕಲ್ಪನೆಯಿಂದ ಕೂಡಿದೆ ಎಂಬುದು ಸ್ಪಷ್ಟವಾಗುತ್ತದೆ. ಇದು, ದೇಶದ ಉನ್ನತ ನ್ಯಾಯಾಲಯದ 2019ರ ಸ್ಪಷ್ಟವಾದ ತೀರ್ಪಿನ ಮತ್ತು ಇನ್ನೂ ಮುಂದುವರಿದಿರುವ ಅನುಷ್ಠಾನದ ಕೊರತೆಯಿಂದ ಗಮನವನ್ನು ಬೇರೆಡೆಗೆ ಸೆಳೆಯಬಹುದು. ಆ ತೀರ್ಪು, 1992ರ ಡಿಸೆಂಬರ್ 6 ರಂದು ಉನ್ಮತ್ತ ಗುಂಪಿನಿಂದ ಮಸೀದಿಯನ್ನು ಕೆಡವಿದ ನಂತರವೂ, ಮಸೀದಿಯ ಮೇಲಿನ ಮುಸ್ಲಿಮರ ಹಕ್ಕನ್ನು ಎತ್ತಿಹಿಡಿದಿತ್ತು. ಮಸೀದಿಯನ್ನು ನಿರ್ಮಿಸುವ ಮೂಲಕ ನಷ್ಟವನ್ನು ತುಂಬಿಕೊಡಲು ಮುಸ್ಲಿಮರಿಗೆ ಪರ್ಯಾಯ ಸ್ಥಳವನ್ನು ನೀಡಬೇಕೆಂದು ನ್ಯಾಯಾಲಯ ಆದೇಶ ನೀಡಿತ್ತು.

ವಾಜಪೇಯಿ ಅವರ ಸಮಾನತೆ ಸಂದೇಶ

“ವಿಷಯ ಬಾಬರಿ (ಮಸೀದಿ) ಅಲ್ಲ, ಬರಾಬರಿ (ಸಮಾನತೆ)” ಎಂದು ಹೇಳಿದವರು ಬೇರೆ ಯಾರೂ ಅಲ್ಲ, ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರು. 1996ರಷ್ಟು ಹಿಂದೆಯೇ, ಅವರು ಹೀಗೆ ಹೇಳಿದ್ದರು. ಅವರ ಮಾತಿನ ಅರ್ಥ ಅಕ್ಷರಶಃ ಸರಿಯಾಗಿದ್ದರೂ, ಅವರ ಮತ್ತು ಅವರ ಪಕ್ಷದ ಸಮಾನತೆಯ ಅರಿವು ಹಿಂದೆಯೂ ಭಿನ್ನವಾಗಿತ್ತು ಮತ್ತು ಈಗಲೂ ಭಿನ್ನವಾಗಿಯೇ ಮುಂದುವರೆದಿದೆ.

ಬಿಪಿ ಮಂಡಲ್ ಆಯೋಗದ ವರದಿಯನ್ನು ಅಳವಡಿಸಿಕೊಂಡ ನಂತರ ಹಿಂದುಳಿದ ಜಾತಿಗಳಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಒದಗಿಸುವ ವಿಚಾರದಲ್ಲಿ ಜಾತಿ ವಿಭಜನೆ ತೀವ್ರವಾಗಿತ್ತು. ಇಂತಹ ಹೊತ್ತಿನಲ್ಲಿಯೇ ಬಿಜೆಪಿ ಬಾಬರಿ ಮಸೀದಿ-ರಾಮಜನ್ಮಭೂಮಿ ವಿವಾದದ ಕಿಚ್ಚನ್ನು ಹೊತ್ತಿಸಿತು. ಆ ಮೂಲಕ ಮುಸ್ಲಿಮರೊಂದಿಗೆ ಮುಖಾಮುಖಿಯಾಗುವ ಕಡೆಗೆ ವಿವಾದವನ್ನು ವರ್ಗಾಯಿಸಲು ಪ್ರಯತ್ನಿಸಿ ಯಶಸ್ವಿಯಾಯಿತು. ಮಂದಿರ ನಿರ್ಮಾಣವನ್ನೇ ಮುಖ್ಯ ವಿಷಯವನ್ನಾಗಿ ಇರಿಸಿ 1990ರ ಸೆಪ್ಟೆಂಬರ್ನಲ್ಲಿ ಎಲ್.ಕೆ. ಅಡ್ವಾಣಿ ಅವರು ತಮ್ಮ ರಥಯಾತ್ರೆಯ ಮೂಲಕ ಕೈಗೊಂಡ ವಾಸ್ತವಿಕ ಯುದ್ಧದ ನಡುವೆ ಜಾತಿಯ ಸುತ್ತಲಿನ ಹೋರಾಟವು ಹಿನ್ನೆಲೆಗೆ ಸರಿಯಿತು.

ಅಧಿಕಾರಕ್ಕೆ ತಂದ ಆಂದೋಲನ

ಆ ಕಾಲಘಟ್ಟದಲ್ಲಿ ಕೆಲವು ಮುಸ್ಲಿಂ ನಾಯಕರು, ಹಿಂದುತ್ವ ಪಕ್ಷಕ್ಕೆ ಬೆಂಗಾವಲಾಗಿ ನಿಂತರು. ಹಿಂದುಳಿದ ಜಾತಿಗಳ ಮತ ಮತ್ತು ಬೆಂಬಲದ ಸಂಭವನೀಯ ನಷ್ಟವನ್ನು ಸರಿದೂಗಿಸಲು ರೂಪಿಸಲಾದ ಬಿಜೆಪಿಯ ಮಂದಿರ ಆಂದೋಲನಕ್ಕೆ ಈ ನಾಯಕರು ಒಂದು ಪಕ್ಷದ ರೀತಿಯಲ್ಲಿ ಕೆಲಸ ಮಾಡಿದರು. ಈ ಮುಸ್ಲಿಂ ನಾಯಕರ ಕಾರಣದಿಂದಲೇ ಬಿಜೆಪಿ ಯಶಸ್ವಿಯಾಗಲು ಸಾಧ್ಯವಾಯಿತು. ಅವರು ತಿಳಿದೋ ತಿಳಿಯದೆಯೋ ಬಿಜೆಪಿಯ ಯೋಜನೆಗೆ ಸಹಾಯ ಮಾಡಿದರು, ಇದು ಅವರನ್ನು ಹಿಂದೂ ಅಸಮಾಧಾನಕ್ಕೆ ಮೂಲವಾಗಿ ಸುಲಭವಾಗಿ ಬಳಸಿಕೊಳ್ಳಲು ಸಾಧ್ಯವಾಯಿತು.

ಈ ರೀತಿ ಬಿಜೆಪಿ ಜಾತಿ ವಿಭಜನೆಯನ್ನು ಮೀರಿ ನಿಂತಿತು ಮತ್ತು ಅದರ ಮಂದಿರ ಆಂದೋಲನವು ಅಂತಿಮವಾಗಿ ಅದನ್ನು ಅಧಿಕಾರಕ್ಕೆ ಬರಲು ಶಕ್ತಗೊಳಿಸಿತು.

ಈಗ ಕಬೀರ್ ಅವರು ಸ್ಪಷ್ಟವಾಗಿ ಅದೇ ಹಾದಿಯಲ್ಲಿದ್ದಾರೆ. ಒಮ್ಮೆ ಅವರ ಸಮುದಾಯದ ಆಯ್ದ ನಾಯಕತ್ವವು ಇದೇ ಹಾದಿ ಹಿಡಿದು, ಭಾರತೀಯ ಮುಸ್ಲಿಮರು ಎದುರಿಸಿದ ಅತ್ಯಂತ ಕೆಟ್ಟ ದುರಂತಗಳಲ್ಲಿ ಒಂದಕ್ಕೆ ಸಾಕ್ಷಿಯಾಗಿತ್ತು. ಬಿಜೆಪಿಯ, ಆರ್ಎಸ್ಎಸ್ನ ಮತ್ತು ಅದರ ಇತರ ಶಾಖೆಗಳ ಯಶಸ್ಸಿನ ಪ್ರತೀಕವಾಗಿ ಅಯೋಧ್ಯೆ ಎಷ್ಟೊಂದು ಸ್ಪಷ್ಟವಾಗಿ ಚಿತ್ರಿಸಲ್ಪಟ್ಟಿದೆಯೋ, ಅಷ್ಟೇ ಸ್ಪಷ್ಟವಾಗಿ ಅದು ಮುಸ್ಲಿಂ ನಾಯಕತ್ವದ ವೈಫಲ್ಯವನ್ನೂ ಸೂಚಿಸುತ್ತದೆ.

ಹಾಗಾಗಿ ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ತೃಣಮೂಲ ಕಾಂಗ್ರೆಸ್ ನಿಂದ ಕಬೀರ್ ಅವರನ್ನು ವಜಾ ಮಾಡದೇ ಅನ್ಯಮಾರ್ಗವಿಲ್ಲ. ಇಷ್ಟರ ನಡುವೆಯೂ ಕಬೀರ್ ಅವರು ಮುರ್ಷಿದಾಬಾದ್-ನ ಬೆಳ್ದಂಗಾ ಬಳಿ ಅವರ ಸ್ವಯಂಘೋಷಿತ ಬಾಬರಿ ಮಸೀದಿಗೆ ಅಡಿಗಲ್ಲನ್ನೂ ಹಾಕಿದರು.

ವೈಯಕ್ತಿಕ ಹಿತಾಸಕ್ತಿಯ ಹತಾಶ ಸ್ಥಿತಿ

ಆ ಮೂಲಕ ಅವರು ಇತಿಹಾಸವನ್ನು ಮರೆತು ಹಿಂದೆ ಏನಾಯಿತೋ ಅದೇ ರೀತಿಯಲ್ಲಿ ಕೋಮುವಾದಿ ರಾಜಕೀಯದ ಪ್ರಕ್ಷುಬ್ಧ ನೀರಿನಲ್ಲಿ ಮತ್ತೆ ಧುಮುಕಲು ಹಾಗೂ ಅದನ್ನು ಮರುಸೃಷ್ಟಿಸಲು ಹೊರಟಿದ್ದಾರೆ ಎಂಬುದು ಸಾಬೀತಾಯಿತು. ಇದು ಅವರ ಹತಾಶ ಸ್ಥಿತಿಯನ್ನು ತೋರಿಸುತ್ತದೆ. ಅವರಿಗೆ ತಾವು ಸೇರಿದ ಪಕ್ಷದ ಹಿತಾಸಕ್ತಿಗಳಿಗಿಂತ ಅಥವಾ ತಮ್ಮದೇ ಸಮುದಾಯ ಮತ್ತು ಸಮಾಜದ ಹಿತಾಸಕ್ತಿಗಿಂತ ತನ್ನ ವೈಯಕ್ತಿಕ ಮಹತ್ವಾಕಾಂಕ್ಷೆಯೇ ಮುಖ್ಯ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

ಮುಸ್ಲಿಮರು ಮತ್ತು ಇತರ ಹಿಂದುಳಿದ ವರ್ಗಗಳ ವಿಷಯಕ್ಕೆ ಬಂದರೆ, ದೇಶದ ಅನಾದಿ ಕಾಲದ ಜ್ಞಾನವನ್ನು ಆಧರಿಸಿದ ಮತ್ತು ಪೋಷಿಸುವ ಭಾರತದ ಆಧುನಿಕ ಸಾಂವಿಧಾನಿಕ ನೀತಿ ಸಂಹಿತೆಯನ್ನು ಆಹ್ವಾನಿಸುವುದು, ಅನುಸರಿಸುವುದು ಮತ್ತು ಅದರ ಮೇಲೆ ಅವಲಂಬಿತರಾಗುವುದು ಅವರ ಮುಂದಿರುವ ಕಾರ್ಯವಾಗಿದೆ. ಇದು ಅವರ ವೈಯಕ್ತಿಕ ಮತ್ತು ಸಾಮೂಹಿಕ ಸ್ಥಿತಿಯನ್ನು ಸುಧಾರಿಸಲು ತೆರೆದಿರುವ ಏಕೈಕ ಮಾರ್ಗವಾಗಿದೆ.

ಆದರೆ ಹಳೆಯ ಹಾಗೂ ವಿನಾಶಕಾರಿ ಮಂದಿರ-ಮಸೀದಿ ಕಲಹದಲ್ಲಿ ಸಿಲುಕಿಕೊಳ್ಳದಂತೆ ತಪ್ಪಿಸಲು ಬೇರೆ ಯಾವುದೇ ಆಯ್ಕೆ ಇಲ್ಲ. ಇಂತಹ ಕಲಹವು ಕಾಲಕಾಲಕ್ಕೆ ಬೇರೆ ಬೇರೆ ರೂಪಗಳಲ್ಲಿ, ಆದರೆ ಒಂದೇ ಉದ್ದೇಶದಿಂದ ಮುಂಚೂಣಿಗೆ ಬರುತ್ತಿದೆ ಅಥವಾ ಮರುಕಳಿಸುತ್ತಿದೆ. ಅದೇನೆಂದರೆ ಗತಕಾಲಕ್ಕೆ ಹಿಂದಿರುಗಿ, ಯಾವುದೇ ಬೆಲೆ ತೆತ್ತಾದರೂ ಚುನಾವಣೆಗಳಲ್ಲಿ ಗೆಲುವು ಸಾಧಿಸುವುದು.

ಈ ಅವಮಾನದ ಗಾಯಕ್ಕೆ ಉಪ್ಪು ಸವರುವಂತೆ ಕಬೀರ್ ಅವರು, 1992ರಲ್ಲಿ ಅಯೋಧ್ಯೆಯಲ್ಲಿ ಆಗಿರುವ ಧ್ವಂಸಕ್ಕೆ ಇದು ‘ಭಾವನಾತ್ಮಕ ಪರಿಹಾರ’ ಎಂದು ಕರೆದಿದ್ದಾರೆ. ಅಷ್ಟು ಮಾತ್ರವಲ್ಲದೆ ಈ ಮಸೀದಿಯನ್ನು ನಿರ್ಮಿಸಿ ಅದಕ್ಕೆ ಬಾಬರನ ಹೆಸರಿಡುವುದು ತಮ್ಮ ‘ಸಾಂವಿಧಾನಿಕ ಹಕ್ಕು’ ಎಂದೂ ಪ್ರತಿಪಾದಿಸಿದ್ದಾರೆ. ಇದು ಅವರ ಆವೇಶದ ಮಾತುಗಳಿಗೆ ಸೂಕ್ತವಾಗಬಹುದು. ಅದೇನೆ ಇರಲಿ ಇದು ಸಂವಿಧಾನದ ಮೂಲ ಚೈತನ್ಯಕ್ಕೆ ಧಕ್ಕೆ ಉಂಟುಮಾಡುತ್ತದೆ ಎಂಬುದು ಮಾತ್ರ ಸತ್ಯ. ಭಾರತೀಯರು ಕೋಟ್ಯಂತರ ಜನರಿಗೆ ಭರವಸೆಯ ಮತ್ತು ಘನತೆಯಿಂದ ಬದುಕುವುದಕ್ಕಾಗಿ ಸಂವಿಧಾನ ನಿಗದಿ ಮಾಡಿದ ಇತರ ಎಲ್ಲಾ ಶ್ಲಾಘನೀಯ ಗುರಿಗಳ ಜೊತೆಗೆ ಎಲ್ಲರ ನಡುವೆ ಐಕ್ಯತೆ ಮತ್ತು ಭ್ರಾತೃತ್ವವನ್ನು ಬಯಸುವ ನಿರ್ಧಾರದಿಂದ ಈ ಸಂವಿಧಾನವು ರೂಪುಗೊಂಡಿದೆ ಎಂಬುದನ್ನು ಮರೆಯಬಾರದು.

Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ದ ಫೆಡರಲ್‌ನ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್‌' ಇಂಗ್ಲಿಷ್‌ ಜಾಲತಾಣದಲ್ಲಿ ಪ್ರಕಟವಾಗಿದೆ.

Next Story