
ಬಂಗಾಳದಲ್ಲಿ ನನ್ನನ್ನು ಮುಟ್ಟಿದರೆ ಇಡೀ ದೇಶವನ್ನೇ ಅಲ್ಲಾಡಿಸುತ್ತೇನೆ: ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಗುಡುಗು
ಮತುವಾ ಸಮುದಾಯವನ್ನುದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ಪೌರತ್ವ ತಿದ್ದುಪಡಿ ಕಾಯ್ದೆ (CAA) ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಿದರು.
ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯ ವಿಚಾರವಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. "ಬಂಗಾಳದಲ್ಲಿ ನನ್ನನ್ನಾಗಲಿ ಅಥವಾ ನನ್ನ ಜನರನ್ನಾಗಲಿ ಗುರಿಯಾಗಿಸಿದರೆ, ನಾನು ಸುಮ್ಮನಿರುವುದಿಲ್ಲ. ಇಡೀ ದೇಶವನ್ನೇ ಅಲ್ಲಾಡಿಸುತ್ತೇನೆ (Shake the nation)," ಎಂದು ಮಮತಾ ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ಬೊಂಗಾಂವ್‌ನಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಂಬರುವ ಚುನಾವಣೆಯ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಯಿಂದ ಅರ್ಹರ ಹೆಸರುಗಳನ್ನು ಕೈಬಿಡುವ ಕುತಂತ್ರ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ಕೇಂದ್ರದ ಚುನಾವಣಾ ಆಯೋಗಕ್ಕೆ (EC) ನಿರ್ದೇಶನಗಳನ್ನು ನೀಡುತ್ತಿದೆ ಎಂದು ಮಮತಾ ಗಂಭೀರ ಆರೋಪ ಮಾಡಿದ್ದಾರೆ. "ಚುನಾವಣಾ ಆಯೋಗದ ಕೆಲಸ ನಿಷ್ಪಕ್ಷಪಾತವಾಗಿರಬೇಕು, ಅದು 'ಬಿಜೆಪಿ ಆಯೋಗ'ದಂತೆ ವರ್ತಿಸಬಾರದು. ಮತದಾರರ ಪಟ್ಟಿಯಿಂದ ಒಬ್ಬನೇ ಒಬ್ಬ ಅರ್ಹ ಮತದಾರನ ಹೆಸರನ್ನು ತೆಗೆದುಹಾಕಲು ಆಯೋಗಕ್ಕೆ ಅಧಿಕಾರವಿಲ್ಲ," ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಬಿಹಾರದಲ್ಲಿ ಬಿಜೆಪಿ ಆಡಿದ ಆಟ ಬಂಗಾಳದಲ್ಲಿ ನಡೆಯುವುದಿಲ್ಲ. ಚುನಾವಣೆ ಮುಗಿದ ನಂತರ ನಾನು ದೇಶಾದ್ಯಂತ ಸಂಚರಿಸಿ ಹೋರಾಟ ನಡೆಸುತ್ತೇನೆ ಎಂದು ದೀದಿ ಸವಾಲು ಹಾಕಿದ್ದಾರೆ.
ಸಿಎಎ ಮತ್ತು ಮತುವಾ ಸಮುದಾಯಕ್ಕೆ ಎಚ್ಚರಿಕೆ
ಮತುವಾ ಸಮುದಾಯವನ್ನುದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ಪೌರತ್ವ ತಿದ್ದುಪಡಿ ಕಾಯ್ದೆ (CAA) ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಿದರು. "ಚುನಾವಣೆ ಹತ್ತಿರ ಬರುತ್ತಿದ್ದಂತೆ ಅವರು ಧರ್ಮದ ಆಧಾರದ ಮೇಲೆ ಫಾರ್ಮ್‌ಗಳನ್ನು ಹಂಚುತ್ತಿದ್ದಾರೆ. ನೀವು ಸಿಎಎ ಅಡಿಯಲ್ಲಿ ಅರ್ಜಿ ಸಲ್ಲಿಸಿ, 'ನಾನು ಬಾಂಗ್ಲಾದೇಶಿ ಪ್ರಜೆ, ಈಗ ಭಾರತೀಯನಾಗಲು ಬಯಸುತ್ತೇನೆ' ಎಂದು ಘೋಷಿಸಿಕೊಂಡರೆ, ನೀವಾಗಿಯೇ ವಿದೇಶಿಯರು ಎಂದು ಒಪ್ಪಿಕೊಂಡಂತಾಗುತ್ತದೆ. ಇದರಿಂದ ಭವಿಷ್ಯದಲ್ಲಿ ತೊಂದರೆಯಾಗಬಹುದು. ಸಾಮಾಜಿಕ ಜಾಲತಾಣಗಳನ್ನು ನಂಬಿ ನಿಮ್ಮ ಭವಿಷ್ಯ ಹಾಳುಮಾಡಿಕೊಳ್ಳಬೇಡಿ," ಎಂದು ಕಿವಿಮಾತು ಹೇಳಿದರು.
ಹೆಲಿಕಾಪ್ಟರ್ ರದ್ದು: ಪಿತೂರಿ ಆರೋಪ
ತಮ್ಮ ರ್ಯಾಲಿಗೆ ತೆರಳದಂತೆ ತಡೆಯಲು ಬಿಜೆಪಿ ಕುತಂತ್ರ ನಡೆಸಿದೆ ಎಂದು ಮಮತಾ ದೂರಿದ್ದಾರೆ. "ನನ್ನ ಹೆಲಿಕಾಪ್ಟರ್ ಹಾರಾಟವನ್ನು ರದ್ದುಗೊಳಿಸಿದ್ದು ಒಂದು ಪಿತೂರಿ. ಆದರೂ ನಾನು ರಸ್ತೆ ಮಾರ್ಗವಾಗಿ ಇಲ್ಲಿಗೆ ಬಂದಿದ್ದೇನೆ. ಬಿಜೆಪಿ ಎಷ್ಟೇ ಸರ್ಕಾರಿ ಏಜೆನ್ಸಿಗಳನ್ನು ಬಳಸಿಕೊಂಡರೂ ನನ್ನನ್ನು ಸೋಲಿಸಲು ಸಾಧ್ಯವಿಲ್ಲ," ಎಂದು ಅವರು ಗುಡುಗಿದರು. ಬಂಗಾಳದಲ್ಲಿ ಡಿಸೆಂಬರ್ 4ರೊಳಗೆ ಮತದಾರರು ತಮ್ಮ ವಿವರಗಳನ್ನು ಸಲ್ಲಿಸಬೇಕಿದ್ದು, ಡಿಸೆಂಬರ್ 9ರಂದು ಕರಡು ಪಟ್ಟಿ ಪ್ರಕಟವಾಗಲಿದೆ.

