ಮಹಾರಾಷ್ಟ್ರದಲ್ಲಿ ಮತ್ತೆ ಕೇಸರಿ ಕಹಳೆ: ಸ್ಥಳೀಯ ಸಂಸ್ಥೆಗಳಲ್ಲಿ ವಿಪಕ್ಷಗಳನ್ನು ಧೂಳಿಪಟಗೈದ ಬಿಜೆಪಿ
x

ಮಹಾರಾಷ್ಟ್ರದಲ್ಲಿ ಮತ್ತೆ ಕೇಸರಿ ಕಹಳೆ: ಸ್ಥಳೀಯ ಸಂಸ್ಥೆಗಳಲ್ಲಿ ವಿಪಕ್ಷಗಳನ್ನು ಧೂಳಿಪಟಗೈದ ಬಿಜೆಪಿ

ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಹಾಯುತಿ ಮೈತ್ರಿಕೂಟದ ಭರ್ಜರಿ ಜಯಭೇರಿ. 266 ಪುರಸಭೆಗಳಲ್ಲಿ ಬಿಜೆಪಿಯ ಪ್ರಾಬಲ್ಯ ಹೇಗಿದೆ? ವಿಪಕ್ಷಗಳ ಸೋಲಿಗೆ ಕಾರಣವೇನು? ಇಲ್ಲಿದೆ ಸಂಪೂರ್ಣ ವಿವರ.


Click the Play button to hear this message in audio format

ಮಹಾರಾಷ್ಟ್ರದ ರಾಜಕೀಯದಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ಒಕ್ಕೂಟವಾದ 'ಮಹಾಯುತಿ' ತನ್ನ ಪಾರಮ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ (ನಗರ ಪಂಚಾಯತ್​ ಹಾಗೂ ಪುರಸಭೆ ) ಚುನಾವಣೆಯಲ್ಲಿ ದೇವೇಂದ್ರ ಫಡ್ನವೀಸ್ ನೇತೃತ್ವದ ಮೈತ್ರಿಕೂಟ ಭರ್ಜರಿ ಜಯಭೇರಿ ಬಾರಿಸಿದೆ. ಈ ಮೂಲಕ ಮುಂಬರುವ ಪ್ರತಿಷ್ಠಿತ ಬಿಎಂಸಿ (ಬೃಹನ್ಮುಂಬಯಿ ಮಹಾನಗರ ಪಾಲಿಕೆ ) ಚುನಾವಣೆಗೂ ಮುನ್ನ ವಿರೋಧ ಪಕ್ಷಗಳಿಗೆ ಪ್ರಬಲ ಎಚ್ಚರಿಕೆ ರವಾನಿಸಿದೆ.

ಭಾನುವಾರ (ಡಿ.21) ಪ್ರಕಟವಾದ 246 ಪುರಸಭೆಗಳು ಮತ್ತು 42 ನಗರ ಪಂಚಾಯತ್‌ಗಳ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಸಿಂಹಪಾಲು ಪಡೆದಿದೆ.ಈ ಚುನಾವಣೆಗಳು ರಾಜ್ಯದ ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳ ನಾಡಿಮಿಡಿತವನ್ನು ಅರಿಯಲು ಪ್ರಮುಖ ದಿಕ್ಸೂಚಿಯಾಗಿದ್ದವು. ಒಟ್ಟು 6,859 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ 3,100ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಶಿವಸೇನೆ (ಶಿಂಧೆ ಬಣ), ಸುಮಾರು 600 ಸ್ಥಾನಗಳಲ್ಲಿ ಮುನ್ನಡೆ ಪಡೆದಿದ್ದರೆ, ಎನ್‌ಸಿಪಿ (ಅಜಿತ್ ಪವಾರ್ ಬಣ) 200ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಗಳಿಸಿದೆ. ಉದ್ಧವ್ ಠಾಕ್ರೆ ಶಿವಸೇನೆ 145, ಶರದ್ ಪವಾರ್ ಅವರ ಎನ್‌ಸಿಪಿ 122 ಮತ್ತು ಕಾಂಗ್ರೆಸ್ 105 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ಒಟ್ಟು ಸ್ಥಳೀಯ ಸಂಸ್ಥೆಗಳ ಪೈಕಿ ಮಹಾಯುತಿ ಮೈತ್ರಿಕೂಟ 241 ಕಡೆಗಳಲ್ಲಿ ತನ್ನ ಪ್ರಾಬಲ್ಯ ಮೆರೆದಿದ್ದರೆ, ಪ್ರತಿ ಪಕ್ಷಗಳ ಒಕ್ಕೂಟವಾದ ಮಹಾ ವಿಕಾಸ್ ಅಘಾಡಿ ಕೆಲವು ಕಡೆಗಳಲ್ಲಿ ಮಾತ್ರ ಸ್ಪರ್ಧೆ ಒಡ್ಡಿದೆ.

ಒಂದು ದಶಕದ ನಂತರದ ಪರೀಕ್ಷೆ

ಸುಮಾರು 10 ವರ್ಷಗಳ ಸುದೀರ್ಘ ಅವಧಿಯ ನಂತರ ಮಹಾರಾಷ್ಟ್ರದಲ್ಲಿ ಈ ಪ್ರಮಾಣದ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದಿದೆ. ಡಿಸೆಂಬರ್ 2 ಮತ್ತು 20ರಂದು ಎರಡು ಹಂತಗಳಲ್ಲಿ ಮತದಾನ ನಡೆದಿತ್ತು. 2024ರ ವಿಧಾನಸಭಾ ಚುನಾವಣೆಯಲ್ಲಿನ ತಮ್ಮ ಭರ್ಜರಿ ಜಯದ ಅಲೆಯನ್ನೇ ಬಿಜೆಪಿ ಮೈತ್ರಿಕೂಟ ಇಲ್ಲಿಯೂ ಮುಂದುವರಿಸಿದೆ. ಸಾಮಾನ್ಯವಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತದಾರರು ಆಡಳಿತರೂಢ ಪಕ್ಷದತ್ತ ಒಲವು ತೋರುತ್ತಾರೆ ಎಂಬ ರಾಜಕೀಯ ಪಂಡಿತರ ಲೆಕ್ಕಾಚಾರ ಇಲ್ಲಿ ನಿಜವಾಗಿದೆ.

ವಿಪಕ್ಷಗಳ ವೈಫಲ್ಯಕ್ಕೆ ಕಾರಣವೇನು?

ರಾಜ್ಯದಲ್ಲಿನ ಕೃಷಿ ಬಿಕ್ಕಟ್ಟು ಮತ್ತು ಗ್ರಾಮೀಣ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಮಹಾಯುತಿಗೆ ಪ್ರಬಲ ಪೈಪೋಟಿ ನೀಡಲು ವಿರೋಧ ಪಕ್ಷಗಳಿಗೆ ಉತ್ತಮ ಅವಕಾಶವಿತ್ತು. ಆದರೆ, ಮಹಾ ವಿಕಾಸ್ ಅಘಾಡಿ ಒಕ್ಕೂಟದಲ್ಲಿನ ಸಮನ್ವಯದ ಕೊರತೆ ಎದ್ದು ಕಾಣುತ್ತಿತ್ತು. ಪ್ರತಿಯೊಂದು ಪಕ್ಷವೂ ತಮ್ಮ ತಮ್ಮ ಭದ್ರಕೋಟೆಗಳ ರಕ್ಷಣೆಗೆ ಮಾತ್ರ ಸೀಮಿತವಾಗಿದ್ದವು.

ಆಡಳಿತ ಪಕ್ಷದಲ್ಲಿ 'ಬಿಜೆಪಿ ದೊಡ್ಡಣ್ಣನಂತೆ ವರ್ತಿಸುತ್ತಿದೆ' ಎಂಬ ಸಣ್ಣಪುಟ್ಟ ಅಪಸ್ವರಗಳಿದ್ದರೂ, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಇಬ್ಬರು ಉಪಮುಖ್ಯಮಂತ್ರಿಗಳು ಒಗ್ಗಟ್ಟಿನ ಪ್ರದರ್ಶನ ನೀಡಿದರು. ಇದು ಮತದಾರರ ಮೇಲೆ ಸಕಾರಾತ್ಮಕ ಪರಿಣಾಮ ಬೀರಿತು.

ಬಿಎಂಸಿ ಚುನಾವಣೆಗೆ ವೇದಿಕೆ ಸಜ್ಜು

ಈ ಫಲಿತಾಂಶದ ಮಹತ್ವ ಇರುವುದು 2026ರ ಜನವರಿಯಲ್ಲಿ ನಡೆಯಲಿರುವ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಚುನಾವಣೆಯ ದೃಷ್ಟಿಯಿಂದ. ದೇಶದ ಅತ್ಯಂತ ಶ್ರೀಮಂತ ಮಹಾನಗರ ಪಾಲಿಕೆಯ ಚುಕ್ಕಾಣಿ ಹಿಡಿಯಲು ಬಿಜೆಪಿ ಹವಣಿಸುತ್ತಿದ್ದು, ಗ್ರಾಮೀಣ ಭಾಗದ ಈ ಫಲಿತಾಂಶ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬಿದೆ. ಈ ಗೆಲುವು ಮುಂಬೈ ಮಹಾನಗರದ ಮತದಾರರ ಮೇಲೂ ಪ್ರಭಾವ ಬೀರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

Read More
Next Story