ವಿಜಯೋತ್ಸವದ ವೇಳೆ ಘೋರ ದುರಂತ; ಅಗ್ನಿ ಅವಘಡದಲ್ಲಿ ನೂತನ ಕೌನ್ಸಿಲರ್ ಸೇರಿದಂತೆ 16 ಜನರಿಗೆ ಗಾಯ
ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಪ್ರಕಟವಾದ ನಂತರ, ನೂತನವಾಗಿ ಆಯ್ಕೆಯಾದ ಕೌನ್ಸಿಲರ್‌ಗಳು ಮತ್ತು ಪಕ್ಷದ ಕಾರ್ಯಕರ್ತರು ಖಂಡೇರಾಯ ದೇವರಿಗೆ 'ಭಂಡಾರ' ಅರ್ಪಿಸಲು ದೇವಸ್ಥಾನದ ಬಳಿ ಮೆರವಣಿಗೆ ನಡೆಸಿದ್ದಾರೆ.
ಮಹಾರಾಷ್ಟ್ರದ ಪುಣೆ ಜಿಲ್ಲೆಯ ಜೇಜುರಿ ದೇವಸ್ಥಾನದ ಮೆಟ್ಟಿಲುಗಳ ಬಳಿ ಭಾನುವಾರ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣಾ ವಿಜಯೋತ್ಸವದ ಸಂದರ್ಭದಲ್ಲಿ, ಅರಿಶಿನಕ್ಕೆ (ಭಂಡಾರ) ಬೆಂಕಿ ಹೊತ್ತಿಕೊಂಡ ದೊಡ್ಡ ದುರಂತವೊಂದು ಸಂಭವಿಸಿದೆ. ಪರಿಣಾಮ ಎನ್‌ಸಿಪಿ (NCP) ಪಕ್ಷದ ನೂತನ ಚುನಾಯಿತ ಕೌನ್ಸಿಲರ್ ಸೇರಿದಂತೆ ಕನಿಷ್ಠ 16 ಜನರು ಗಾಯಗೊಂಡಿದ್ದಾರೆ.
ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಪ್ರಕಟವಾದ ನಂತರ, ನೂತನವಾಗಿ ಆಯ್ಕೆಯಾದ ಕೌನ್ಸಿಲರ್‌ಗಳು ಮತ್ತು ಪಕ್ಷದ ಕಾರ್ಯಕರ್ತರು ಖಂಡೇರಾಯ ದೇವರಿಗೆ 'ಭಂಡಾರ' ಅರ್ಪಿಸಲು ದೇವಸ್ಥಾನದ ಬಳಿ ಮೆರವಣಿಗೆ ನಡೆಸಿದ್ದಾರೆ. ಆಗ ಅವರ ಬೆಂಬಲಿಗರು ಅತಿ ದೊಡ್ಡ ಮಟ್ಟದಲ್ಲಿ ಜಮಾಯಿಸಿದ್ದರು.
ದೇವಸ್ಥಾನದ ಬಳಿ ಉರಿಯುತ್ತಿದ್ದ ದೀಪದ ಮೇಲೆ ಸ್ವಲ್ಪ 'ಭಂಡಾರ' ಬಿದ್ದಿದ್ದರಿಂದ ಬೆಂಕಿ ಹೊತ್ತಿಕೊಂಡಿತು ಎಂದು ಪುಣೆ (ಗ್ರಾಮಾಂತರ) ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಗಿಲ್ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಪುಣೆಯ ಬಾರಾಮತಿ ಸಂಸದೆ ಸುಪ್ರಿಯಾ ಸುಳೆ, ಈ 'ಭಂಡಾರ' ಕಲಬೆರಕೆಯಾಗಿತ್ತು ಎಂದು ಆರೋಪಿಸಿದ್ದಾರೆ. "ಈ ಘಟನೆಯು ಅತ್ಯಂತ ದುರಂತ ಮತ್ತು ದುರದೃಷ್ಟಕರವಾಗಿದೆ. ಘಟನೆಗೆ ಸಂಬಂಧಿಸಿದಂತೆ ನಾನು ವಿವರವಾದ ಮಾಹಿತಿಯನ್ನು ಸಂಗ್ರಹಿಸಿದ್ದೇನೆ ಮತ್ತು ನಿರಂತರವಾಗಿ ಆಡಳಿತದೊಂದಿಗೆ ಸಂಪರ್ಕದಲ್ಲಿದ್ದೇನೆ," ಎಂದು ಅವರು ಮರಾಠಿ ಭಾಷೆಯಲ್ಲಿ ಎಕ್ಸ್ (X) ನಲ್ಲಿ ಬರೆದುಕೊಂಡಿದ್ದಾರೆ.
ಘಟನೆ ವಿಡಿಯೊ ಇಲ್ಲಿದೆ
ಮಹಾರಾಷ್ಟ್ರ ಸ್ಥಳೀಯ ಚುನಾವಣೆ
ಮಹಾರಾಷ್ಟ್ರದ ರಾಜಕೀಯದಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ಒಕ್ಕೂಟವಾದ 'ಮಹಾಯುತಿ' ತನ್ನ ಪಾರಮ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ (ನಗರ ಪಂಚಾಯತ್ ಹಾಗೂ ಪುರಸಭೆ ) ಚುನಾವಣೆಯಲ್ಲಿ ದೇವೇಂದ್ರ ಫಡ್ನವೀಸ್ ನೇತೃತ್ವದ ಮೈತ್ರಿಕೂಟ ಭರ್ಜರಿ ಜಯಭೇರಿ ಬಾರಿಸಿದೆ.
ಭಾನುವಾರ (ಡಿ.21) ಪ್ರಕಟವಾದ 246 ಪುರಸಭೆಗಳು ಮತ್ತು 42 ನಗರ ಪಂಚಾಯತ್‌ಗಳ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಸಿಂಹಪಾಲು ಪಡೆದಿದೆ. ಈ ಚುನಾವಣೆಗಳು ರಾಜ್ಯದ ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳ ನಾಡಿಮಿಡಿತವನ್ನು ಅರಿಯಲು ಪ್ರಮುಖ ದಿಕ್ಕೂಚಿಯಾಗಿದ್ದವು. ಒಟ್ಟು 6,859 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ 3,100ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಶಿವಸೇನೆ (ಶಿಂಧೆ ಬಣ), ಸುಮಾರು 600 ಸ್ಥಾನಗಳಲ್ಲಿ ಮುನ್ನಡೆ ಪಡೆದಿದ್ದರೆ, ಎನ್‌ಸಿಪಿ (ಅಜಿತ್ ಪವಾರ್ ಬಣ) 200ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಗಳಿಸಿದೆ. ಉದ್ಧವ್ ಠಾಕ್ರೆ ಶಿವಸೇನೆ 145, ಶರದ್ ಪವಾರ್ ಅವರ ಎನ್‌ಸಿಪಿ 122 ಮತ್ತು ಕಾಂಗ್ರೆಸ್ 105 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಒಟ್ಟು ಸ್ಥಳೀಯ ಸಂಸ್ಥೆಗಳ ಪೈಕಿ ಮಹಾಯುತಿ ಮೈತ್ರಿಕೂಟ 241 ಕಡೆಗಳಲ್ಲಿ ತನ್ನ ಪ್ರಾಬಲ್ಯ ಮೆರೆದಿದ್ದರೆ, ಪ್ರತಿ ಪಕ್ಷಗಳ ಒಕ್ಕೂಟವಾದ ಮಹಾ ವಿಕಾಸ್ ಅಘಾಡಿ ಕೆಲವು ಕಡೆಗಳಲ್ಲಿ ಮಾತ್ರ ಸ್ಪರ್ಧೆ ಒಡ್ಡಿದೆ.