ಬಿಗಡಾಯಿಸಿದ ಭಾರತ-ಬಾಂಗ್ಲಾ ಸಂಬಂಧ-ವೀಸಾ ಸೇವೆ ಸ್ಥಗಿತ; ರಾಯಭಾರ ಕಚೇರಿ ಬಂದ್!
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಉದ್ವಿಗ್ನತೆಯಿಂದಾಗಿ ದೆಹಲಿ ಮತ್ತು ತ್ರಿಪುರಾದಲ್ಲಿ ವೀಸಾ ಸೇವೆಗಳನ್ನು ಬಾಂಗ್ಲಾದೇಶ ಸ್ಥಗಿತಗೊಳಿಸಿದೆ.
ಕಳೆದ ಕೆಲವು ದಿನಗಳಿಂದ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರ, ಗಲಭೆಯ ಬಿಸಿ ಭಾರತಕ್ಕೂ ತಟ್ಟಿದೆ. ಶೇಖ್ ಹಸೀನಾ ಪಲಾಯಣದ ಬಳಿಕ ಹದಗೆಟ್ಟಿದ್ದ ಭಾರತ-ಬಾಂಗ್ಲಾದೇಶದ ಸಂಬಂಧ ಇದೀಗ ಮತ್ತಷ್ಟು ಬಿಗಡಾಯಿಸಿದೆ. ಉಭಯ ರಾಷ್ಟ್ರಗಳ ನಡುವಿನ ಸಂಬಂಧವು ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ಈಗ ಬಾಂಗ್ಲಾದೇಶವು ದೆಹಲಿಯಲ್ಲಿರುವ ತನ್ನ ಹೈಕಮಿಷನ್ ಮತ್ತು ತ್ರಿಪುರಾದಲ್ಲಿರುವ ಮಿಷನ್‌ನಲ್ಲಿ ವೀಸಾ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ಅನಿವಾರ್ಯ ಕಾರಣ ಎಂದ ಬಾಂಗ್ಲಾ
"ಅನಿವಾರ್ಯ ಸಂದರ್ಭಗಳಿಂದಾಗಿ" ಮುಂದಿನ ಸೂಚನೆ ಬರುವವರೆಗೂ ದೆಹಲಿಯ ಬಾಂಗ್ಲಾದೇಶ ಹೈಕಮಿಷನ್‌ನ ಎಲ್ಲಾ ಕಾನ್ಸುಲರ್ ಮತ್ತು ವೀಸಾ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಕಚೇರಿಯ ಹೊರಗೆ ನೋಟಿಸ್ ಅಂಟಿಸಲಾಗಿದೆ. ತ್ರಿಪುರಾದಲ್ಲಿ ಪ್ರತಿಭಟನೆಗಳು ನಡೆದ ಬೆನ್ನಲ್ಲೇ ಅಲ್ಲಿನ ಸಹಾಯಕ ಹೈಕಮಿಷನ್ ಕೂಡ ಇದೇ ರೀತಿಯ ನಿರ್ಧಾರ ಕೈಗೊಂಡಿದೆ. ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ವೀಸಾ ಪ್ರಕ್ರಿಯೆ ನಡೆಸುತ್ತಿದ್ದ ಖಾಸಗಿ ಸಂಸ್ಥೆಯೂ ತನ್ನ ಕಾರ್ಯಾಚರಣೆಯನ್ನು ನಿಲ್ಲಿಸಿದೆ.
ಬಾಂಗ್ಲಾದೇಶದಲ್ಲಿ ಭುಗಿಲೆದ್ದ ಹಿಂಸಾಚಾರ
ಕಳೆದ ವಾರ ವಿದ್ಯಾರ್ಥಿ ನಾಯಕ ಶರೀಫ್ ಉಸ್ಮಾನ್ ಹಾದಿ ಸಾವಿನ ನಂತರ ಬಾಂಗ್ಲಾದೇಶದಲ್ಲಿ ಮತ್ತೆ ಅಶಾಂತಿ ಮೂಡಿದೆ. ಪ್ರತಿಭಟನಾಕಾರರು ಭಾರತದ ವಿರುದ್ಧವೂ ತಮ್ಮ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಈ ಮಧ್ಯೆ, ಮೈಮೆನ್‌ಸಿಂಗ್‌ನಲ್ಲಿ ದೀಪು ಚಂದ್ರ ದಾಸ್ ಎಂಬ ಹಿಂದೂ ವ್ಯಕ್ತಿಯ ಹತ್ಯೆಯಾಗಿದೆ. ಚಿತ್ತಗಾಂಗ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಮೇಲೆ ದಾಳಿ ನಡೆಸಲು ಯತ್ನಿಸಿದ ಹಿನ್ನೆಲೆಯಲ್ಲಿ, ಭಾರತವು ಈಗಾಗಲೇ ಅಲ್ಲಿನ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಿದೆ.
ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA) ಬಾಂಗ್ಲಾದೇಶದ ರಾಯಭಾರಿ ರಿಯಾಜ್ ಹಮೀದುಲ್ಲಾ ಅವರಿಗೆ ಸಮನ್ಸ್ ನೀಡಿ, ಢಾಕಾದಲ್ಲಿರುವ ಭಾರತೀಯ ಮಿಷನ್ ಸುತ್ತಮುತ್ತ ನಡೆಯುತ್ತಿರುವ ಉಗ್ರಗಾಮಿ ಸಂಘಟನೆಗಳ ಚಟುವಟಿಕೆಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ. "ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಇತ್ತೀಚಿನ ಘಟನೆಗಳ ಬಗ್ಗೆ ಸಮಗ್ರ ತನಿಖೆ ನಡೆಸಿಲ್ಲ ಅಥವಾ ಭಾರತದೊಂದಿಗೆ ಅರ್ಥಪೂರ್ಣ ಪುರಾವೆಗಳನ್ನು ಹಂಚಿಕೊಂಡಿಲ್ಲ ಎಂಬುದು ದುರದೃಷ್ಟಕರ" ಎಂದು ಭಾರತ ಕಿಡಿಕಾರಿದೆ.
ಸೋಮವಾರ ಮತ್ತೊಬ್ಬನಿಗೆ ಗುಂಡೇಟು
ವಿದ್ಯಾರ್ಥಿ ನಾಯಕನ ಹತ್ಯೆ ಉಸ್ಮಾನ್ ಹದಿ ಹತ್ಯೆ ಬೆನ್ನಲ್ಲೇ ಧಗ ಧಗಿಸುತ್ತಿರುವ ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಕಾರ್ಮಿಕ ನಾಯಕನ ಮೇಲೆ ಗುಂಡಿನ ದಾಳಿ ನಡೆದಿದೆ. ನ್ಯಾಷನಲ್ ಸಿಟಿಜನ್ಸ್ ಪಾರ್ಟಿಯ (NCP) ಹಿರಿಯ ಕಾರ್ಮಿಕ ನಾಯಕರೊಬ್ಬನ ಮೇಲೆ ಸೋಮವಾರ ಖುಲ್ನಾದಲ್ಲಿ ಗುಂಡಿನ ದಾಳಿ ನಡೆದಿದೆ.
ಎನ್‌ಸಿಪಿ ಕಾರ್ಮಿಕ ಸಂಘಟನೆಯ ಕೇಂದ್ರ ನಾಯಕ 42 ವರ್ಷದ ಮೊಹಮ್ಮದ್ ಮತಾಲೆಬ್ ಸಿಕಂದರ್ ಎಂಬಾತನನ್ನು ಖುಲ್ನಾದ ಸೋನಾದಂಗಾ ಪ್ರದೇಶದ ಮನೆಯೊಂದರಲ್ಲಿ ಮಧ್ಯಾಹ್ನ 12.15 ರ ಸುಮಾರಿಗೆ ತಲೆಗೆ ಗುಂಡು ಹಾರಿಸಲಾಗಿದೆ. ಸಿಕಂದರ್ ಅವರು ಪಕ್ಷದ ಕಾರ್ಮಿಕ ವಿಭಾಗವಾದ 'ಜಾತಿಯ ಶ್ರಮಿಕ್ ಶಕ್ತಿ'ಯ ಕೇಂದ್ರ ಸಂಘಟಕ ಮತ್ತು ಖುಲ್ನಾ ವಿಭಾಗೀಯ ಸಂಚಾಲಕರಾಗಿದ್ದಾನೆ. ಇನ್ನು ಗುಂಡೇಟು ತಗುಲಿ ಗಂಭೀರವಾಗಿ ಗಾಯಗೊಂಡಿರುವ ಆತ ಜೀವನ್ಮರಣದ ನಡುವೆ ಹೋರಾಡುತ್ತಿದ್ದಾನೆ ಎನ್ನಲಾಗಿದೆ.