
ಉಸ್ಮಾನ್ ಹದಿ ಬೆನ್ನಲ್ಲೇ ಮತ್ತೊಬ್ಬ ನಾಯಕನ ತಲೆಗೆ ಗುಂಡೇಟು; ಹೊತ್ತಿ ಉರಿಯುತ್ತಿದೆ ಬಾಂಗ್ಲಾ
ನ್ಯಾಷನಲ್ ಸಿಟಿಜನ್ಸ್ ಪಾರ್ಟಿಯ (NCP) ಹಿರಿಯ ಕಾರ್ಮಿಕ ನಾಯಕರೊಬ್ಬನ ಮೇಲೆ ಸೋಮವಾರ ಖುಲ್ನಾದಲ್ಲಿ ಗುಂಡಿನ ದಾಳಿ ನಡೆದಿದೆ.
ವಿದ್ಯಾರ್ಥಿ ನಾಯಕನ ಹತ್ಯೆ ಬೆನ್ನಲ್ಲೇ ಧಗ ಧಗಿಸುತ್ತಿರುವ ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಕಾರ್ಮಿಕ ನಾಯಕನ ಮೇಲೆ ಗುಂಡಿನ ದಾಳಿ ನಡೆದಿದೆ. ನ್ಯಾಷನಲ್ ಸಿಟಿಜನ್ಸ್ ಪಾರ್ಟಿಯ (NCP) ಹಿರಿಯ ಕಾರ್ಮಿಕ ನಾಯಕರೊಬ್ಬನ ಮೇಲೆ ಸೋಮವಾರ ಖುಲ್ನಾದಲ್ಲಿ ಗುಂಡಿನ ದಾಳಿ ನಡೆದಿದೆ. ವಿದ್ಯಾರ್ಥಿ ನಾಯಕ ಶರೀಫ್ ಉಸ್ಮಾನ್ ಹದಿ ಹತ್ಯೆಯ ಖಂಡಿಸಿ ನಡೆಯುತ್ತಿದ್ದ ದೇಶಾದ್ಯಂತ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಈ ಘಟನೆ ಸಂಭವಿಸಿದೆ.
ಘಟನೆಯ ವಿವರ
ಎನ್‌ಸಿಪಿ ಕಾರ್ಮಿಕ ಸಂಘಟನೆಯ ಕೇಂದ್ರ ನಾಯಕ 42 ವರ್ಷದ ಮೊಹಮ್ಮದ್ ಮತಾಲೆಬ್ ಸಿಕಂದರ್ ಎಂಬಾತನನ್ನು ಖುಲ್ನಾದ ಸೋನಾದಂಗಾ ಪ್ರದೇಶದ ಮನೆಯೊಂದರಲ್ಲಿ ಮಧ್ಯಾಹ್ನ 12.15 ರ ಸುಮಾರಿಗೆ ತಲೆಗೆ ಗುಂಡು ಹಾರಿಸಲಾಗಿದೆ. ಸಿಕಂದರ್ ಅವರು ಪಕ್ಷದ ಕಾರ್ಮಿಕ ವಿಭಾಗವಾದ 'ಜಾತಿಯ ಶ್ರಮಿಕ್ ಶಕ್ತಿ'ಯ ಕೇಂದ್ರ ಸಂಘಟಕ ಮತ್ತು ಖುಲ್ನಾ ವಿಭಾಗೀಯ ಸಂಚಾಲಕರಾಗಿದ್ದಾನೆ. ಇನ್ನು ಗುಂಡೇಟು ತಗುಲಿ ಗಂಭೀರವಾಗಿ ಗಾಯಗೊಂಡಿರುವ ಆತ ಜೀವನ್ಮರಣದ ನಡುವೆ ಹೋರಾಡುತ್ತಿದ್ದಾನೆ ಎನ್ನಲಾಗಿದೆ.
ವಿದ್ಯಾರ್ಥಿ ನಾಯಕ ಹಾದಿ ಹತ್ಯೆ ಮತ್ತು ಪ್ರತಿಭಟನೆ
ಕೆಲ ದಿನಗಳ ಹಿಂದಷ್ಟೇ ವಿದ್ಯಾರ್ಥಿ ನಾಯಕ ಶರೀಫ್ ಉಸ್ಮಾನ್ ಹದಿ ಹತ್ಯೆಯಾಗಿತ್ತು. ಇದು ಬಾಂಗ್ಲಾದೇಶದಾದ್ಯಂತ ಭಾರಿ ಅಶಾಂತಿಗೆ ಕಾರಣವಾಗಿದೆ. ಕಳೆದ ವರ್ಷದ ಜುಲೈ ದಂಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮತ್ತು ಭಾರತ ವಿರೋಧಿ ನಿಲುವು ಹೊಂದಿದ್ದ ಹದಿಯನ್ನು ಡಿ.12 ರಂದು ಢಾಕಾದ ಬಿಜೋಯ್‌ನಗರದಲ್ಲಿ ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಾಗ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು.
ತೀವ್ರವಾಗಿ ಗಾಯಗೊಂಡಿದ್ದ ಹಾದಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ವಿಮಾನದ ಮೂಲಕ ಕರೆದೊಯ್ಯಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಡಿಸೆಂಬರ್ 18 ರಂದು ಅವರು ಮೃತಪಟ್ಟಿದ್ದ.
ಹದಿ ಹಿನ್ನೆಲೆ
ಹದಿ ಅವರು 'ಇಂಕ್ವಿಲಾಬ್ ಮಂಚ' (ಕ್ರಾಂತಿಕಾರಿ ವೇದಿಕೆ) ವಕ್ತಾರನಾಗಿದ್ದ ಮತ್ತು ಫೆಬ್ರವರಿ 2026 ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದ್ದ. ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಭಾರತಕ್ಕೆ ಪಲಾಯನ ಮಾಡಿದ ನಂತರ, ಬಾಂಗ್ಲಾದೇಶದ ಆಂತರಿಕ ರಾಜಕೀಯದಲ್ಲಿ ಭಾರತದ ಪಾತ್ರವನ್ನು ಹದಿ ಕಟುವಾಗಿ ಟೀಕಿಸುತ್ತಿದ್ದ.
ಹದಿ ಸಾವಿನ ನಂತರ ಢಾಕಾದ ಶಾಬಾಗ್ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ನ್ಯಾಯಕ್ಕಾಗಿ ಆಗ್ರಹಿಸುತ್ತಿರುವ ಪ್ರತಿಭಟನಾಕಾರರು ಶೀಘ್ರವಾಗಿ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ಎಚ್ಚರಿಕೆ ನೀಡಿರುವ ಅಧಿಕಾರಿಗಳು, ಹಂತಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

