ಫೆಡರಲ್ ಸಮೀಕ್ಷೆ | ಕೇಸರಿ ಸುನಾಮಿಗೆ ಸಜ್ಜಾದ ಬಿಹಾರ ಮತ್ತು ಜಾರ್ಖಂಡ್

ಫೆಡರಲ್-ಪುತಿಯತಲೈಮುರೈ-ಆಪ್ಟ್ 2024ರ ಚುನಾವಣಾ ಪೂರ್ವ ಸಮೀಕ್ಷೆಯು ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ರಾಜಕೀಯ ಸುನಾಮಿ ಏಳಲಿದೆ ಎನ್ನುವುದನ್ನು ಖಚಿತಪಡಿಸಿದೆ.;

Update: 2024-02-20 13:42 GMT

ವಿರೋಧ ಪಕ್ಷ ಕಾಂಗ್ರೆಸ್‌ ತನ್ನ ಮತ ಗಳಿಕೆಯ ಪ್ರಮಾಣವನ್ನು ಹೆಚ್ಚಿಸಿಕೊಳ್ಳುವ ಸಾಧ್ಯತೆ ಇದ್ದರೂ, ಬಿಜೆಪಿಗೆ ಯಾವುದೇ ರೀತಿಯಲ್ಲೂ ಸರಿಸಾಟಿಯಾಗಲಾರದು ಎಂಬುದನ್ನು ಫೆಡರಲ್-ಪುತಿಯತಲೈಮುರೈ-ಆಪ್ಟ್ 2024 ರ ಚುನಾವಣಾ ಪೂರ್ವ ಸಮೀಕ್ಷೆಯು ಖಚಿತಪಡಿಸಿದೆ.

ಬಿಹಾರ ಮತ್ತು ಜಾರ್ಖಂಡ್‌ ರಾಜ್ಯಗಳಲ್ಲಿ ಬಿಜೆಪಿ ಆಡಿರುವ ರಾಜಕೀಯದಾಟವನ್ನು ಗಮನಿಸಿದರೆ, ಸಮೀಕ್ಷೆಯ ಫಲಿತಾಂಶ ಆಶ್ಚರ್ಯವನ್ನೇನೂ ಉಂಟುಮಾಡುವುದಿಲ್ಲ.

ಪ್ರಮುಖ ರಾಜಕೀಯ ಬೆಳವಣಿಗೆಯೊಂದರಲ್ಲಿ ಜೆಡಿ(ಯು), ಇತ್ತೀಚಿನವರೆಗಿದ್ದ ಆರ್ ಜೆ ಡಿ ಮತ್ತು ಕಾಂಗ್ರೆಸ್ ಘಟಬಂಧನ್ ಮೈತ್ರಿಯನ್ನು ಮುರಿದುಕೊಂಡು, ತಾನು ಈ ಹಿಂದೆ ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್‌ ಜತೆ ಕೈ ಜೋಡಿಸಿದೆ.

ನಾಲ್ಕೇ ವರ್ಷಗಳಲ್ಲಿ ಜೆಡಿ(ಯು) ರಾಜಕೀಯವಾಗಿ ಮತ್ತೆ ತಿರುಗಿ ಬಿಜೆಪಿಯೊಂದಿಗೆ ಕೈ ಜೋಡಿಸಿರುವುದು ಜೆ ಡಿ (ಯು) ನಾಯಕ ನಿತೀಶ್‌ ಕುಮಾರ್‌ ಬಲ್ಲವರಿಗೆ ದಿಗ್ಭ್ರಮೆಯನ್ನೇನೂ ಉಂಟುಮಾಡಿಲ್ಲ.

ಜಾರ್ಖಂಡ್ ನಲ್ಲಿ ಜಾರಿ ನಿರ್ದೇಶನಾಲಯ ಭ್ರಷ್ಟಾಚಾರ ಪ್ರಕರಣಗಳಲ್ಲಿ ಹೇಮಂತ್ ಸೊರೆನ್ ಅವರನ್ನು ಬಂಧಿಸಿತ್ತು. ಆನಂತರ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ)ದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಪ್ರಕ್ರಿಯೆ ವಿಳಂಬವಾಯಿತು. ಈ ನಡುವೆ ಬಿಜೆಪಿಯು ಸರ್ಕಾರವನ್ನು ರಚಿಸುತ್ತದೆ ಎಂಬ ಊಹಾಪೋಹಗಳು ಎದ್ದಿದ್ದವು. ಆಗ ಚಂಪೈ ಸೊರೆನ್ ಅವರು ಸಿಎಂ ಸ್ಥಾನಕ್ಕೆ ಏರಿದರು.

ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಎರಡು ರಾಜ್ಯಗಳಲ್ಲಿ ಬಿಜೆಪಿ ಯಶಸ್ವಿಯಾಗಲಿದೆಯೇ? ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.

ಫೆಡರಲ್-ಪುತಿಯಾತಲೈಮುರೈ-ಆಪ್ಟ್ 2024 ರ ಚುನಾವಣಾ ಪೂರ್ವ ಸಮೀಕ್ಷೆಯು ಲೋಕಸಭಾ ಚುನಾವಣೆಯಲ್ಲಿ ಬಿಹಾರ ಮತ್ತು ಜಾರ್ಖಂಡ್ ನಲ್ಲಿ ಬಿಜೆಪಿ ಬಹುತೇಕ ಸ್ಥಾನಗಳನ್ನು ತನ್ನ ಬುಟ್ಟಿಯಲ್ಲಿ ಹಾಕಿಕೊಳ್ಳಲಿದೆ ಎಂದು ಹೇಳುತ್ತಿದೆ. ಕಾಂಗ್ರೆಸ್‌ ಮತಗಳಿಕೆ ಗಣನೀಯವಾಗಿ ಹೆಚ್ಚಾಗಬಹುದು ಆದರೆ, ಅದು ಮತವಾಗಿ ಪರಿವರ್ತನೆಯಾಗುವ ಸಾಧ್ಯತೆ ಇಲ್ಲ ಎಂಬುದನ್ನು ತೀರಾ ಸ್ಪಷ್ಟವಾಗಿ ಹೇಳಿದೆ.




ಬಿಹಾರ: ಜೆಡಿಯು ಜಾರುತ್ತಿರುವಾಗಲೇ ಬಿಜೆಪಿಯ ಕಸರತ್ತು

ಶೇ 45 ರಷ್ಟು ಮತ ಹಂಚಿಕೆಯೊಂದಿಗೆ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಗೆಲುವು ಸಾಧಿಸಲಿದೆ ಎಂದು ಫೆಡರಲ್ ಸಮೀಕ್ಷೆ ಸೂಚಿಸುತ್ತದೆ. ಬಿಜೆಪಿಯ ಮಿತ್ರ ಪಕ್ಷ ಹಾಗೂ ಎನ್‌ ಡಿ ಎ ಮೈತ್ರಿಕೂಟದ ಭಾಗಿದಾರ ಪಕ್ಷವಾದ ಜೆ ಡಿ(ಯು) ಶೇ 18 ರಷ್ಟು ಮಾತ್ರ ಮತಗಳಿಸಲಿದೆ ಎಂದು ಸಮೀಕ್ಷೆ ಸೂಚಿಸುತ್ತದೆ. ಇದು ನಿತೀಶ್ ಕುಮಾರ್ ನೇತೃತ್ವದ ಜೆಡಿಯು 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಗಳಿಸಿದ ಶೇಕಡಾ 22 ರಷ್ಟು ಮತಗಳ ಕುಸಿತವನ್ನು ತೋರಿಸುತ್ತದೆ. 2019 ಕ್ಕೆ ಹೋಲಿಸಿದರೆ, ಆಗ ಗೆದ್ದಿದ್ದ 16 ಸ್ಥಾನಗಳಿಂದ ಕೇವಲ ಎರಡು ಸ್ಥಾನ ಗಳಿಸಿ ಭಾರೀ ಕುಸಿತ ಕಾಣಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ.

ಮತ್ತೊಂದೆಡೆ, ಕಾಂಗ್ರೆಸ್ ತನ್ನ ಮತ-ಪಾಲನ್ನು 2019 ರಲ್ಲಿ ಸುಮಾರು 8 ಪ್ರತಿಶತದಿಂದ ಈ ವರ್ಷ ಸುಮಾರು 12 ಪ್ರತಿಶತಕ್ಕೆ ಹೆಚ್ಚಿಸುವ ಸಾಧ್ಯತೆಯಿದೆ. ಅದರ ಮೈತ್ರಿ ಪಾಲುದಾರ, ಲಾಲು ಪ್ರಸಾದ್ ನೇತೃತ್ವದ ಆರ್ಜೆಡಿ, 2019 ರಲ್ಲಿ ಗಳಿಸಿದ್ದ ಸುಮಾರು ಶೇಕಡಾ 16 ರಷ್ಟು ಮತಗಳಿಂದ ಶೇಕಡಾ 10 ಕ್ಕೆ ಕುಸಿಯಲಿರುವ ಸಾಧ್ಯತೆಯನ್ನು ಸಮೀಕ್ಷೆ ಎತ್ತಿ ಹಿಡಿದಿದೆ.


ಫೆಡರಲ್ ಸಮೀಕ್ಷೆಯು ಬಿಹಾರದ 40 ಲೋಕಸಭಾ ಸ್ಥಾನಗಳಲ್ಲಿ 37 ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ, ಜೆಡಿಯು ಎರಡು ಮತ್ತು ಕಾಂಗ್ರೆಸ್ ಒಂದು ಸ್ಥಾನವನ್ನು ಪಡೆಯುತ್ತದೆ ಎಂದು ಭವಿಷ್ಯ ನುಡಿದಿದೆ.


ಜಾರ್ಖಂಡ್: ಸಂಪೂರ್ಣ ಬಿಜೆಪಿ ತೆಕ್ಕೆಗೆ

ಸಮೀಕ್ಷೆಯ ಅಂಕಿ ಅಂಶಗಳತ್ತ ಕಣ್ಣು ಹಾಯಿಸಿದರೆ ಬಿಜೆಪಿ ಈ ಬಾರಿ ಶೇ.65ಕ್ಕೂ ಹೆಚ್ಚು ಮತಗಳನ್ನು ಪಡೆಯುವ ನಿರೀಕ್ಷೆಯಿದೆ ಎಂದು ಫೆಡರಲ್ ಸಮೀಕ್ಷೆ ಹೇಳಿದೆ. ಇದು 2019ರಲ್ಲಿ ಅದು ಕಂಡ ಸುಮಾರು 52 ಶೇಕಡಾ ಮತ-ಗಳಿಕೆಗಿಂತ ಗಣನೀಯ ಹೆಚ್ಚಳವಾಗಿದೆ.



ಕಾಂಗ್ರೆಸ್ ತನ್ನ ಮತ-ಪಾಲನ್ನು ಶೇಕಡಾ 15.8 ರಿಂದ ಶೇಕಡಾ 16.4 ಕ್ಕೆ ಸ್ವಲ್ಪಮಟ್ಟಿಗೆ ಹೆಚ್ಚಿಸಿಕೊಳ್ಳಲಿದೆ. ಆದರೆ ಈ ಗಳಿಕೆ ಕಾಂಗ್ರೆಸ್ ಗೆ ಯಾವುದೇ ರೀತಿಯಲ್ಲೂ ಸ್ಥಾನಗಳನ್ನು ಗೆದ್ದುಕೊಳ್ಳಲು ನೆರವಾಗುವ ಸಾಧ್ಯತೆಗಳಿಲ್ಲ ಎಂದು ಸಮೀಕ್ಷೆ ಸೂಚಿಸುತ್ತದೆ.

ಪ್ರಸ್ತುತ ಜಾರ್ಖಂಡ್ ನಲ್ಲಿ ಸಮ್ಮಿಶ್ರ ಸರ್ಕಾರವನ್ನು ನಡೆಸುತ್ತಿರುವ ಜೆಎಂಎಂ, ಲೋಕಸಭೆ ಚುನಾವಣೆಯಲ್ಲಿ ತನ್ನ ಮತ-ಪಾಲನ್ನು ಸುಮಾರು ಅರ್ಧದಷ್ಟು ಕಳೆದುಕೊಳ್ಳುವ ಸಾಧ್ಯತೆಗಳಿವೆ. ಅಂದರೆ ಮತಗಳಿಕೆ 2019 ಕ್ಕೆ ಹೋಲಿಸಿರೆ ಶೇ 11.7 ರಿಂದ ಶೇ. 6 ಕ್ಕೆ ಕುಸಿಯಲಿರುವುದನ್ನು ಸಮೀಕ್ಷೆ ಖಚಿತಪಡಿಸಿದೆ.


ರಾಜ್ಯದಲ್ಲಿ ಕೇಸರಿ ಸುನಾಮಿ ಏಳಲಿದ್ದು ಜಾರ್ಖಂಡ್ ನ ಎಲ್ಲಾ 14 ಲೋಕಸಭಾ ಸ್ಥಾನಗಳನ್ನು ಬಿಜೆಪಿ ಗೆದ್ದುಕೊಳ್ಳಲಿದೆ ಎಂದು ದ ಫೆಡರಲ್ ಸಮೀಕ್ಷೆ ಹೇಳಿದೆ.

ಹಿಂದಿನ ಸಮೀಕ್ಷೆ-ಸಂಬಂಧಿತ ಲೇಖನ ಓದಲು ಇಲ್ಲಿ ಕ್ಲಿಕ್ ಮಾಡಿ.

Tags:    

Similar News