ಒಳ ಮೀಸಲು ಸಮೀಕ್ಷೆಯಲ್ಲಿ ಎಸ್‌ಸಿ ಪಟ್ಟಿಗೆ ಲಿಂಗಾಯತ ಬೇಡ ಜಂಗಮ ಸೇರ್ಪಡೆ: ಖರ್ಗೆ ಆಕ್ರೋಶ
ಖರ್ಗೆ ಅವರ ಆಕ್ರೋಶವನ್ನು ಗಮನಿಸಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಕ್ಷಣ ಅವರ ಬಳಿಗೆ ಬಂದು ಅವರ ಮಾತುಗಳನ್ನು ಆಲಿಸಿದರು.;
ಒಳಮೀಸಲಾತಿ ಕಲ್ಪಿಸುವ ಉದ್ದೇಶದಿಂದ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿ ನಡೆಸುತ್ತಿರುವ ಜಾತಿ ಸಮೀಕ್ಷೆಯಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ) ಪಟ್ಟಿಯಲ್ಲಿ ಲಿಂಗಾಯತ ಬೇಡ ಜಂಗಮ ಸಮುದಾಯವೂ ಸೇರ್ಪಡೆಗೊಳ್ಳುತ್ತಿರುವ ಬಗ್ಗೆ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಸಮರ್ಪಣೆ ಸಂಕಲ್ಪ" ಸಮಾವೇಶದಲ್ಲಿ ಮಾತನಾಡಿದ ಅವರು, "ಒಳಮೀಸಲಾತಿ ಕೊಡಲು ಸರ್ಕಾರ ಎಸ್‌ಸಿ ಸಮೀಕ್ಷೆ ನಡೆಸುತ್ತಿದೆ. ಒಳಮೀಸಲಾತಿಗೆ ನಾನೆಂದೂ ವಿರೋಧ ಮಾಡಿಲ್ಲ. ಆದರೆ ಲಿಂಗಾಯತ ಸಮುದಾಯದಲ್ಲಿರುವ ಬೇಡ ಜಂಗಮರನ್ನು ನೀವು ಎಸ್‌ಸಿ ಪಟ್ಟಿಗೆ ಸೇರಿಸುತ್ತಿದ್ದೀರಿ. ನಾಲ್ಕು ಲಕ್ಷ ಜನ ಎಸ್‌ಸಿ ಪಟ್ಟಿಗೆ ಹೇಗೆ ಬಂದರು" ಎಂದು ಸರ್ಕಾರವನ್ನು ಪ್ರಶ್ನಿಸಿದರು.
ಖರ್ಗೆ ಅವರ ಆಕ್ರೋಶವನ್ನು ಗಮನಿಸಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಕ್ಷಣ ಅವರ ಬಳಿಗೆ ಬಂದು ಅವರ ಮಾತುಗಳನ್ನು ಆಲಿಸಿದರು.
ಮಾತು ಮುಂದುವರಿಸಿದ ಖರ್ಗೆ, "ಲಿಂಗಾಯತರಲ್ಲಿನ ಬಡ ವರ್ಗದವರಿಗೆ ನಾವು ಅಗತ್ಯ ಬಿದ್ದರೆ ಪ್ರೋತ್ಸಾಹ ನೀಡೋಣ. ಆದರೆ ಬೇಡ ಜಂಗಮರು ತಾವು ಎಸ್‌ಸಿ ಎಂದು ತೋರಿಸುವುದು ತಪ್ಪು. ಸುಳ್ಳು ಜಾತಿ ಪತ್ರ ನೀಡುವವರನ್ನು ಒಳ ಹಾಕಬೇಕು. ಸರ್ಕಾರ ಇದರ ಬಗ್ಗೆ ಗಮನಹರಿಸಬೇಕು" ಎಂದು ಆಗ್ರಹಿಸಿದರು.
"ಬೇಡ ಜಂಗಮರು ತಾವು ಎಸ್‌ಸಿ ಎಂದು ತೋರಿಸಿಕೊಳ್ಳುವುದು ಆಸ್ಪೃಶ್ಯ ಸಮುದಾಯಗಳ ವಿರೋಧಿ, ದಲಿತ ವಿರೋಧಿ ನಡೆ," ಎಂದು ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದರು.
ಸಮೀಕ್ಷೆಯ ಗುರಿಯೇನು?
ಪರಿಶಿಷ್ಟ ಜಾತಿಗಳ (ಎಸ್‌ಸಿ) ಒಳಮೀಸಲಾತಿ ಜಾರಿಗಾಗಿ ನಿಖರವಾದ ದತ್ತಾಂಶ ಸಂಗ್ರಹಿಸಲು ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ಏಕಸದಸ್ಯ ಆಯೋಗ ರಚಿಸಲಾಗಿದೆ. ಈ ಸಮಿತಿಯು ಸುಪ್ರೀಂ ಕೋರ್ಟ್ ಆದೇಶದಂತೆ ಎಸ್‌ಸಿ ಒಳಗಿನ **101 ಉಪಜಾತಿಗಳ ವೈಜ್ಞಾನಿಕ ವರ್ಗೀಕರಣ**ಕ್ಕಾಗಿ ಸಮೀಕ್ಷೆ ನಡೆಸುತ್ತಿದೆ.
2025ರ ಮೇ 5 ರಿಂದ ಆರಂಭವಾದ ಈ ಸಮೀಕ್ಷೆಯು ಮನೆ-ಮನೆ ಭೇಟಿ, ವಿಶೇಷ ಶಿಬಿರಗಳು ಮತ್ತು ಆನ್‌ಲೈನ್ ಸ್ವಯಂ ಘೋಷಣೆಯ ಮೂಲಕ ಮಾಹಿತಿ ಸಂಗ್ರಹಿಸುತ್ತಿದೆ. ಶಾಸಕರು ಮತ್ತು ಸಂಘಟನೆಗಳ ಕೋರಿಕೆಯಂತೆ ಸಮೀಕ್ಷೆಯ ಅವಧಿಯನ್ನು ಮೇ 25 ರವರೆಗೆ ವಿಸ್ತರಿಸಲಾಗಿದ್ದು, ಆನ್‌ಲೈನ್ ನೋಂದಣಿಗೆ ಮೇ 28ರವರೆಗೆ ಅವಕಾಶವಿದೆ.
ಈ ಸಮೀಕ್ಷೆಯಲ್ಲಿ ಇದುವರೆಗೆ 73.72% ಪ್ರಗತಿ ಯಾಗಿದ್ದು, 18,96,285 ಎಸ್‌ಸಿ ಕುಟುಂಬಗಳ ಮಾಹಿತಿ ಸಂಗ್ರಹಿಸಲಾಗಿದೆ. ಆದಿ ಕರ್ನಾಟಕ, ಆದಿ ದ್ರಾವಿಡ ಇತ್ಯಾದಿ ಜಾತಿಗಳ ಹೆಸರಿನ ಬದಲು **ನಿಖರವಾದ ಉಪಜಾತಿ ಗುರುತಿಸುವಂತೆ ನಾಗಮೋಹನ್ ದಾಸ್ ಸೂಚಿಸಿದ್ದಾರೆ.
ಸಂಗ್ರಹಿಸಿದ ಈ ದತ್ತಾಂಶವನ್ನು ವಿಶ್ಲೇಷಿಸಿ, ಸಾಮಾಜಿಕ ನ್ಯಾಯ ಒದಗಿಸಲು ಒಳಮೀಸಲಾತಿಯ ವರ್ಗೀಕರಣಕ್ಕೆ ಶಿಫಾರಸು ಮಾಡಲಾಗುತ್ತದೆ. ಸಮೀಕ್ಷೆಗೆ ಸಹಕರಿಸದಿದ್ದರೆ ನೀರು, ವಿದ್ಯುತ್ ಸಂಪರ್ಕ ಕಡಿತದ ಎಚ್ಚರಿಕೆಯನ್ನೂ ನೀಡಲಾಗಿದೆ. 60 ದಿನಗಳಲ್ಲಿ ಅಂತಿಮ ವರದಿ ಸಲ್ಲಿಸುವ ಗುರಿಯಿದ್ದು, ಇದು ಎಸ್‌ಸಿ ಸಮುದಾಯಕ್ಕೆ ನ್ಯಾಯಯುತ ಮೀಸಲಾತಿ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.