ಗದ್ದುಗೆ ಗುದ್ದಾಟ| ʼಟ್ರಬಲ್‌ ಶೂಟರ್‌ʼ ಡಿಕೆಶಿ ಸಿಎಂ ಆಗುವ ಹಾದಿಯಲ್ಲಿ... ಸವಾಲುಗಳ ಎದುರು ಬಂಡೆ?

ರಾಜ್ಯ ಕಾಂಗ್ರೆಸ್‌ನಲ್ಲಿ ನಾಲ್ಕೂವರೆ ದಶಕದಿಂದ 'ಟ್ರಬಲ್ ಶೂಟರ್' ಆಗಿ ಕಾರ್ಯನಿರ್ವಹಿಸಿರುವ ಡಿ.ಕೆ. ಶಿವಕುಮಾರ್‌ ಪಕ್ಷ ಸಂಘಟನೆಯ ಚತುರ. ಹಠಮಾರಿ ಧೋರಣೆ, ಸಂಘಟನಾ ಸಾಮರ್ಥ್ಯ ಮತ್ತು ಸಂಕಷ್ಟ ನಿರ್ವಹಣಾ ಶೈಲಿಯಿಂದಲೇ ಹೈಕಮಾಂಡ್ ಬಳಿ ನಿಷ್ಠಾವಂತ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.

Update: 2025-11-28 02:30 GMT

ಡಿ.ಕೆ.ಶಿವಕುಮಾರ್‌

ಕಾಂಗ್ರೆಸ್ ಪಕ್ಷದ ಆಪದ್ಭಾಂಧವ, ಸಂದಿಗ್ಧ ಪರಿಸ್ಥಿತಿಗಳಲ್ಲಿ ʼಬಂಡೆʼಯಂತೆ ನಿಲ್ಲುವ ಡಿ.ಕೆ. ಶಿವಕುಮಾರ್‌ ಅವರು ರಾಜಕಾರಣಿ ಅಷ್ಟೇ ಅಲ್ಲ. ಪಕ್ಷದ ನಿಷ್ಠಾವಂತ ನಾಯಕರೂ ಕೂಡ ಹೌದು. ಮಾಜಿ ಮುಖ್ಯಮಂತ್ರಿ ದೇವರಾಜು ಅರಸು ಕಾಲದಿಂದಲೂ ಕಾಂಗ್ರೆಸ್ ಪಕ್ಷದ ಬೆಳವಣಿಗೆಗೆ ಹಗಲಿರುಳು ದುಡಿದವರು. ಕಳೆದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಹೆಗಲುಕೊಟ್ಟ ಡಿ.ಕೆ. ಶಿವಕುಮಾರ್‌ ಅವರು ಈಗ ನಾಯಕತ್ವ ಬದಲಾವಣೆಗಾಗಿ ಪಟ್ಟು ಹಿಡಿದಿದ್ದಾರೆ.

ರಾಜ್ಯ ಕಾಂಗ್ರೆಸ್‌ನಲ್ಲಿ ನಾಲ್ಕೂವರೆ ದಶಕದಿಂದ 'ಟ್ರಬಲ್ ಶೂಟರ್' ಆಗಿ ಕಾರ್ಯನಿರ್ವಹಿಸಿರುವ ಡಿ.ಕೆ. ಶಿವಕುಮಾರ್‌ ಪಕ್ಷ ಸಂಘಟನೆಯ ಚತುರ. ಹಠಮಾರಿ ಧೋರಣೆ, ಸಂಘಟನಾ ಸಾಮರ್ಥ್ಯ ಮತ್ತು ಸಂಕಷ್ಟ ನಿರ್ವಹಣಾ ಶೈಲಿಯಿಂದಲೇ ಹೈಕಮಾಂಡ್ ಬಳಿ ನಿಷ್ಠಾವಂತ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.

ಸಾಮಾನ್ಯ ಕಾರ್ಯಕರ್ತನಿಂದ ಹಿಡಿದು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ, ಉಪ ಮುಖ್ಯಮಂತ್ರಿ ಸ್ಥಾನದವರೆಗೆ ಅಧಿಕಾರ ನಡೆಸಿದ್ದಾರೆ. ಎಸ್‌. ಬಂಗಾರಪ್ಪ, ಎಸ್‌.ಎಂ.ಕೃಷ್ಣ ಅವರ ಅವಧಿಯಲ್ಲೂ ಸಚಿವರಾಗಿ ಸೇವೆ ಸಲ್ಲಿಸಿದ್ದರು. 2020ರ ಮಾರ್ಚ್‌ನಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ದ ಖ್ಯಾತಿ ಡಿ.ಕೆ. ಶಿವಕುಮಾರ್ ಅವರಿಗೆ ಸಲ್ಲುತ್ತದೆ.

ವಿದ್ಯಾರ್ಥಿ ನಾಯಕನಾಗಿ ರಾಜಕೀಯ ಆರಂಭ

ಡಿ.ಕೆ. ಶಿವಕುಮಾರ್ ಅವರು 1980 ರಲ್ಲಿ ವಿದ್ಯಾರ್ಥಿ ಸಂಘಟನೆಗಳ ಚುನಾವಣೆ ಮೂಲಕವೇ ರಾಜಕೀಯ ಪಯಣ ಆರಂಭಿಸಿದರು. ಡಿಕೆಶಿ ಹೋರಾಟದ ಪರಿ ಗಮನಿಸಿದ ಅಂದಿನ ಸಿಎಂ ದೇವರಾಜ ಅರಸು ಅವರು ಕಾಂಗ್ರೆಸ್‌ ಪಕ್ಷದ ಮೂಲಕ ರಾಜಕೀಯಕ್ಕೆ ಕರೆತಂದರು.

1985 ರಲ್ಲಿ ಮೈಸೂರು ಜಿಲ್ಲೆಯ ಸಾತನೂರು ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದರು. ಆದರೆ, ಜನತಾದಳದ ನಾಯಕ ಎಚ್.ಡಿ. ದೇವೇಗೌಡ ಅವರಿಂದ ಮೊದಲ ಪ್ರಯತ್ನದಲ್ಲೇ ಪರಾಭವಗೊಂಡರು. ಆದರೂ ಸುಮ್ಮನೆ ಕುಳಿತುಕೊಳ್ಳದ ಡಿ.ಕೆ.ಶಿವಕುಮಾರ್‌ ಅವರು 1987ರ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಸಾತನೂರಿನಿಂದ ಗೆದ್ದು ರಾಜಕೀಯಕ್ಕೆ ಪುನರ್ ಪ್ರವೇಶಿಸಿದರು.

1989 ರಲ್ಲಿ ಸಾತನೂರು ಕ್ಷೇತ್ರದಿಂದ ಮರು ಸ್ಪರ್ಧಿಸಿ ತಮ್ಮ 27ನೇ ವಯಸ್ಸಿಗೆ ವಿಧಾನಸಭೆ ಪ್ರವೇಶಿಸಿದರು. ನಂತರದ ಚುನಾವಣೆಗಳಲ್ಲಿ ಡಿಕೆಶಿಯ ಗೆಲುವಿನ ನಾಗಾಲೋಟ ಮುಂದುವರಿಯಿತು. ಶಿವಕುಮಾರ್‌ ಎದುರಿಸಿದ 10 ಚುನಾವಣೆಗಳಲ್ಲಿ ಎಂಟರಲ್ಲಿ ವಿಜಯ ಸಾಧಿಸಿದ್ದಾರೆ. 1994ರಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಗದಿದ್ದಾಗ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದು ಡಿಕೆಶಿ ಚಾಣಾಕ್ಷತೆಗೆ ಹಿಡಿದ ಕನ್ನಡಿಯಂತಿತ್ತು. 1999ರಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರನ್ನೂ ಸೋಲಿಸಿದ್ದರು. 2023ರಲ್ಲಿ ಕನಕಪುರದಿಂದ ಎದುರಾಳಿಯಾಗಿ ಸ್ಪರ್ಧಿಸಿದ್ದ ಆರ್.ಅಶೋಕ್ ಅವರನ್ನೂ ಪರಾಭವಗೊಳಿಸಿದ್ದರು.

ಕಾಂಗ್ರೆಸ್‌ ಪಾಲಿನ ʼಟ್ರಬಲ್‌ ಶೂಟರ್ʼ

2017ರಲ್ಲಿ ಗುಜರಾತ್‌ನಿಂದ ರಾಜ್ಯಸಭೆ ಆಯ್ಕೆಯಾಗುವ ಮೊದಲು 42 ಕಾಂಗ್ರೆಸ್‌ ಶಾಸಕರನ್ನು ಬೇರೆ ಪಕ್ಷಗಳಿಗೆ ಹೋಗದಂತೆ ತಡೆಯುವಲ್ಲಿ ಡಿ.ಕೆ. ಶಿವಕುಮಾರ್‌ ಯಶಸ್ವಿಯಾಗಿದ್ದರು. ಆದ್ದರಿಂದಲೇ ಅಹ್ಮದ್ ಪಟೇಲ್ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಾಧ್ಯವಾಯಿತು. ಆದರೆ, ಗುಜರಾತ್‌ ಶಾಸಕರನ್ನು ಬಿಡದಿಯ ಈಗಲ್‌ ಟನ್‌ ರೆಸಾರ್ಟ್‌ನಲ್ಲಿ ಇರಿಸಿಕೊಂಡಿದ್ದಾಗಲೇ ಐ.ಟಿ. ದಾಳಿ ಎದುರಿಸಬೇಕಾಯಿತು.

2018 ರಲ್ಲಿ ಕಾಂಗ್ರೆಸ್‌-ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಲ್ಲಿ ಡಿ.ಕೆ. ಶಿವಕುಮಾರ್‌ ಪ್ರಮುಖ ಪಾತ್ರ ವಹಿಸಿದ್ದರು. ದೇವೇಗೌಡರ ಕುಟುಂಬಕ್ಕೆ ಬದ್ಧವೈರಿಯಾಗಿದ್ದರೂ ಹೈಕಮಾಂಡ್ ಸೂಚನೆಗೆ ತಲೆಬಾಗಿ ಜೆಡಿಎಸ್ ಸಖ್ಯ ಬೆಳೆಸಿದರು. ಸರ್ಕಾರ ರಚನೆಯಾಗಿ ಒಂದೂವರೆ ವರ್ಷದ ಬಳಿಕ ಸರ್ಕಾರ ಪತನವಾಗುವ ಸಂದರ್ಭದಲ್ಲೂ ಮುಂಬೈನ ಬೀದಿಯಲ್ಲಿ ನಿಂತು ಅತೃಪ್ತ ಶಾಸಕರ ಮನವೊಲಿಕೆಗೆ ಡಿ.ಕೆ. ಶಿವಕುಮಾರ್ ಪ್ರಯತ್ನಿಸಿದ್ದ ಸನ್ನಿವೇಶ ಅವರ ಪಕ್ಷನಿಷ್ಠೆಗೆ ಸಾಕ್ಷಿಯಾಗಿತ್ತು.

2002ರಲ್ಲಿ ವಿಲಾಸರಾವ್ ದೇಶಮುಖ್ ಅವರು ಮಹಾರಾಷ್ಟ್ರದ ಸಿಎಂ ಆಗಿದ್ದ ಅವಧಿಯಲ್ಲಿ ಅವಿಶ್ವಾಸ ನಿರ್ಣಯ ಎದುರಿಸಿದ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಟ್ರಬಲ್‌ ಶೂಟರ್‌ ಆಗಿ ಕಾರ್ಯ ನಿರ್ವಹಿಸಿದರು. ಅವಿಶ್ವಾಸ ನಿರ್ಣಯ ಮಂಡನೆಯ ದಿನದವರೆಗೂ ಮಹಾರಾಷ್ಟ್ರದ ಶಾಸಕರನ್ನು ಬೆಂಗಳೂರು ಹೊರವಲಯದ ರೆಸಾರ್ಟ್ನಲ್ಲಿ ಒಂದು ವಾರದ ಭದ್ರತೆಯಲ್ಲಿ ನೋಡಿಕೊಂಡರು. ಇದರಿಂದ ಮಹಾರಾಷ್ಟ್ರ ಸರ್ಕಾರ ಆಡಳಿತ ಮುಂದುವರಿಸಿತು. ಡಿ.ಕೆ. ಶಿವಕುಮಾರ್‌ ಅವರ ಈ ನಡೆಯೇ ಅವರನ್ನು ಹೈಕಮಾಂಡ್ ಜತೆಗೆ ನಿಕಟ ಸಂಬಂಧ ಹೊಂದುವಂತೆ ಮಾಡಿತು.

2020 ರಲ್ಲಿ ದಿನೇಶ್ ಗುಂಡೂರಾವ್ ನಂತರ ಡಿ.ಕೆ. ಶಿವಕುಮಾರ್ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.

2022 ರಲ್ಲಿ ಗೋವಾ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಸೃಷ್ಟಿಯಾಗಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳಿದ್ದವು. ಅಲ್ಲಿ ಪಕ್ಷಾಂತರ ಪ್ರಕರಣಗಳು ಹೆಚ್ಚಿರುವ ಕಾರಣ ಕಾಂಗ್ರೆಸ್‌ ಹೈಕಮಾಂಡ್‌ ಕೂಡಲೇ ಡಿ.ಕೆ. ಶಿವಕುಮಾರ್‌ ಅವರನ್ನು ಗೋವಾಗೆ ಹೊರಡಲು ಸೂಚಿಸಿತು. ಆಗ ಡಿ.ಕೆ. ಶಿವಕುಮಾರ್‌ ಅವರು ಕೈ ಶಾಸಕರನ್ನು ದೇವಸ್ಥಾನಕ್ಕೆ ಕರೆದೋಯ್ದು ಆಣೆ ಪ್ರಮಾಣ ಮಾಡಿಸಿದ್ದರು. ಆದರೂ, ಕಾಂಗ್ರೆಸ್ ಅಧಿಕಾರ ಹಿಡಿಯಲು ಸಾಧ್ಯವಾಗಿರಲಿಲ್ಲ. ಆದರೂ, ಹೈಕಮಾಂಡ್‌ ಜೊತೆ ನಿಕಟ ಸಂಬಂಧ ಹೊಂದುವಲ್ಲಿ ಯಶಸ್ವಿಯಾಗಿದ್ದರು.

ವರಿಷ್ಠರಿಗೆ ನೀಡಿದ ಮಾತು ಉಳಿಸಿಕೊಂಡ ಡಿಕೆಶಿ

2023 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿಕೊಂಡು ಬರುತ್ತೇನೆ ಎಂದು ವರಿಷ್ಠರಿಗೆ ಕೊಟ್ಟ ಮಾತಿನಂತೆ ಡಿ.ಕೆ.ಶಿವಕುಮಾರ್‌ ಹಳ್ಳಿ ಹಳ್ಳಿಗೂ ಹೋಗಿ ಪಕ್ಷ ಸಂಘಟನೆ ಮಾಡಿದರು. ಅದರಂತೆ ಕಾಂಗ್ರೆಸ್‌ 135 ಸ್ಥಾನಗಳೊಂದಿಗೆ ಭರ್ಜರಿ ಗೆಲುವು ಸಾಧಿಸಿತು. ಫಲಿತಾಂಶ ಹೊರಬೀಳುತ್ತಿದ್ದಂತೆ ಡಿ.ಕೆ. ಶಿವಕುಮಾರ್‌ ಭಾವುಕರಾಗಿ, ಕರ್ನಾಟಕದ ಗೆಲುವನ್ನು ನಿಮಗೆ ಅರ್ಪಿಸುತ್ತಿದ್ದೇನೆ ಎಂದು ಹೈಕಮಾಂಡ್ ನಾಯಕರಿಗೆ ಹೇಳಿದ್ದರು. ಸರ್ಕಾರದಲ್ಲಿಉಪಮುಖ್ಯಮಂತ್ರಿ ಸ್ಥಾಕನ್ನೂ ಏರಿದರು. ಸಾಧಾರಣ ಕಾರ್ಯಕರ್ಯನಾಗಿ ರಾಜ್ಯಾಧ್ಯಕ್ಷ ಹುದ್ದೆಗೆ, ಅಲ್ಲಿಂದ ಡಿಸಿಎಂ ಸ್ಥಾನದ ಅಲಂಕರಿಸಲು ಸವೆಸಿದ ರಾಜಕೀಯ ಹಾದಿ ರೋಚಕವಾಗಿತ್ತು.

ಇದಕ್ಕೂ ಮುನ್ನ ಅನೇಕ ಹೋರಾಟಗಳ ಮುಂಚೂಣಿ ವಹಿಸಿಕೊಂಡಿದ್ದರು. ತವರೂರಿನಲ್ಲಿ ನಡೆದ ಮೇಕೆದಾಟು ಪಾದಯಾತ್ರೆ, ಚುನಾವಣೆ ಹೊಸ್ತಿಲಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಗಳ ಯಶಸ್ಸು ಅವರ ಸಂಘಟನಾ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಭಾರತ್ ಜೊಡೊ ಯಾತ್ರೆ ಸೇರಿದಂತೆ ಪಕ್ಷದ ಕಾರ್ಯಕ್ರಮಗಳು, ಹೋರಾಟಗಳಲ್ಲಿ ಹೆಗಲು ಕೊಟ್ಟು ದುಡಿದಿದ್ದಾರೆ.

ಶ್ರೀಮಂತ ರಾಜಕಾರಣಿ ಮೇಲೆ ಇಡಿ ದಾಳ

ಭಾರತದ ಅತ್ಯಂತ ಶ್ರೀಮಂತ ರಾಜಕಾರಣಿಗಳಲ್ಲಿ ಡಿ.ಕೆ. ಶಿವಕುಮಾರ್‌ ಒಬ್ಬರು. ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರಲ್ಲೇ ಶ್ರೀಮಂತ ಅಧ್ಯಕ್ಷರಾಗಿ ಶಿವಕುಮಾರ್ ಮೊದಲ ಸ್ಥಾನದಲ್ಲಿದ್ದಾರೆ. ಅವರ ಕುಟುಂಬದ ಒಟ್ಟು ಆಸ್ತಿ ಮೌಲ್ಯ 1,414 ಕೋಟಿ ಎಂದು ಘೋಷಿಸಿಕೊಂಡಿದ್ದಾರೆ.

ಅಕ್ರಮ ಆಸ್ತಿ ಆರೋಪದ ಹಿನ್ನೆಲೆಯಲ್ಲಿ 2019ರಲ್ಲಿ ಎರಡು ತಿಂಗಳು ಜೈಲುವಾಸ ಅನುಭವಿಸಿದ್ದರು. ಆ ಸಂದರ್ಭದಲ್ಲಿ ಸೋನಿಯಾ ಗಾಂಧಿ ಅವರು ಜೈಲಿಗೆ ಭೇಟಿ ನೀಡಿ ಡಿ.ಕೆ. ಶಿವಕುಮಾರ್‌ ಅವರಿಗೆ ಧೈರ್ಯ ತುಂಬಿದ್ದರು. ಎರಡು ತಿಂಗಳ ಬಳಿಕ ಡಿ.ಕೆ. ಶಿವಕುಮಾರ್ ಅವರು ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾದರು.

2018 ಸೆಪ್ಟೆಂಬರ್‌ ತಿಂಗಳಲ್ಲಿ ನವದೆಹಲಿಯ ಕರ್ನಾಟಕ ಭವನದ ಉದ್ಯೋಗಿ ಎ ಹನುಮಂತಯ್ಯ ಮತ್ತು ಇತರರ ವಿರುದ್ಧ ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿತು. ಅಲ್ಲಿ ದೊರೆತ ಭಾರೀ ಪ್ರಮಾಣದ ಹಣವು ಡಿ.ಕೆ.ಶಿವಕುಮಾರ್‌ ಅವರಿಗೆ ಸೇರಿತ್ತೆಂಬ ಸಂಗತಿಯನ್ನು ಜಾರಿ ನಿರ್ದೇಶನಾಲಯ ಕಂಡುಕೊಂಡಿತ್ತು.

ತೆರಿಗೆ ವಂಚನೆ ಮತ್ತು ಹವಾಲಾ ವ್ಯವಹಾರದ ಆರೋಪದ ಮೇಲೆ ಬೆಂಗಳೂರಿನ ನ್ಯಾಯಾಲಯದಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಇತರರ ವಿರುದ್ಧ ಆದಾಯ ತೆರಿಗೆ ಇಲಾಖೆ ಸಲ್ಲಿಸಿದ ಆರೋಪಪಟ್ಟಿ ಆಧರಿಸಿ ಇಡಿ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದರು.

ಪಕ್ಷ ಸಂಘಟನಾ ಹೊಣೆ

1985ರಿಂದ 2001ರವರೆಗೆ ಡಿ.ಕೆ. ಶಿವಕುಮಾರ್‌ ಅವರು ಕೆಪಿಸಿಸಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. 2008ರಿಂದ 2010ರವರೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಪಕ್ಷ ಸಂಘಟನೆ ಶ್ರಮಿಸಿದರು. ಇದೇ ವೇಳೆ ಕೆಪಿಸಿಸಿಯ ಪ್ರಚಾರ ಸಮಿತಿ ಅಧ್ಯಕ್ಷರಾಗಿಯೂ ಜವಾಬ್ದಾರಿ ನಿರ್ವಹಿಸಿದ್ದರು.

2020 ರಲ್ಲಿ ದಿನೇಶ್‌ ಗುಂಡೂರಾವ್‌ ಬಳಿಕ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್‌ ಅವರ ಅಧಿಕಾರ ವಹಿಸಿಕೊಂಡರು. ಅಂದಿನಿಂದ ರಾಜ್ಯದ ಮೂಲೆ ಮೂಲೆಯಲ್ಲಿ ಓಡಾಡಿ, ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡರು. ಪಕ್ಷದ ಆರ್ಥಿಕ ಶಕ್ತಿಯ ಬೆನ್ನೆಲುವಾದರು. ಚುನಾವಣೆಗಳಲ್ಲಿ ಯಾವುದೇ ಸಮಸ್ಯೆಯಾಗದಂತೆ ನಾಯಕರನ್ನು ಸಜ್ಜುಗೊಳಿಸಿದರು. ಕಾರ್ಯಕರ್ತರಿಗೆ ಸಂಘಟನಾತ್ಮಕ ಹುದ್ದೆಗಳನ್ನು ನೀಡುವ ಮೂಲಕ ಸೊರಗಿದ್ದ ಪಕ್ಷಕ್ಕೆ ಆಸರೆಯಾದರು. ಪ್ರತಿ ಜಿಲ್ಲೆಗಳಲ್ಲಿ ಕಾಂಗ್ರೆಸ್‌ ಭವನಗಳ ನಿರ್ಮಾಣಕ್ಕೂ ಈಗ ಪಣ ತೊಟ್ಟಿದ್ದಾರೆ.

ಪ್ರಬಲ ಒಕ್ಕಲಿಗ ನಾಯಕರಾಗಿ ಬೆಳೆಯಲು ಕಸರತ್ತು

ಒಕ್ಕಲಿಗ ಸಮುದಾಯದಲ್ಲಿ ಪ್ರಭಾವಿ ನಾಯಕರಾಗಿ ಬೆಳೆಯಲು ಡಿ.ಕೆ.ಶಿವಕುಮಾರ್‌ ಅವರು ಸಾಕಷ್ಟು ಶ್ರಮಿಸಿದರೂ ಪೂರ್ಣ ಪ್ರಮಾಣದಲ್ಲಿ ಸಾಧ್ಯವಾಗಿಲ್ಲ. ಮಾಜಿ ಪ್ರಧಾನಿ ದೇವೇಗೌಡರನ್ನು ಜನಾಂಗವು ಪ್ರಬಲ ನಾಯಕ ಎಂದು ಪರಿಗಣಿಸಿದೆ. ಈಗ ದೇವೇಗೌಡರು ವಯೋಮಾನದ ಕಾರಣ ರಾಜಕಾರಣದಲ್ಲಿ ತೊಡಗಿಸಿಕೊಳ್ಳುತ್ತಿಲ್ಲ. ಕುಮಾರಸ್ವಾಮಿ ಅವರನ್ನು ಸಮುದಾಯದ ಪ್ರಬಲ‌ ನಾಯಕನ್ನಾಗಿ ಬಿಂಬಿಸಲು ಪ್ರಯತ್ನಿಸಿದರೂ ಜೆಡಿಎಸ್ ಹಳೆ‌ ಮೈಸೂರು ಭಾಗದಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಇದೇ ಅವಕಾಶವನ್ನು ಬಳಸಿಕೊಂಡು ಡಿ.ಕೆ.ಶಿವಕುಮಾರ್ ಒಕ್ಕಲಿಗ ಸಮುದಾಯದ ನಾಯಕ ಎನಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಇದೇ ಕಾರಣಕ್ಕಾಗಿ ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ಬದ್ಧವೈರಿಗಳಂತಾಗಿದ್ದಾರೆ. ಹೀಗಿದ್ದರೂ ಡಿ.ಕೆ.ಶಿವಕುಮಾರ್ ಪ್ರಯತ್ನ ನಿಲ್ಲಿಸಿಲ್ಲ. ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದು ಈಗ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ. ಒಕ್ಕಲಿಗರ ಸಂಘ ಕೂಡ ಡಿ.ಕೆ.ಬೆಂಬಲಕ್ಕೆ ನಿಂತಿದೆ. ಇಲ್ಲಿ ಸಾಮೂದಾಯಿಕವಾಗಿ ಶಿವಕುಮಾರ್ ಅವರನ್ನು ಬೆಂಬಲಿಸಿದರೂ ಜನಾಂಗದ ನಾಯಕ ಎಂದು ಒಪ್ಪಿಕೊಳ್ಳುತ್ತಿಲ್ಲ. 

ಈ ಹಿಂದಿನ ಸಾತನೂರು ವಿಧಾನಸಭಾ ಕ್ಷೇತ್ರ ಹಾಗೂ ಹಾಲಿ ಕನಕಪುರ ಕ್ಷೇತ್ರದಿಂದ ಸತತ ಎಂಟನೇ ಬಾರಿ ಶಾಸಕರಾಗಿ ಆಯ್ಕೆಯಾದರೂ, ಸಾಕಷ್ಟು ಜನಪ್ರಿಯತೆ ಗಳಿಸಿದ್ದರೂ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಸಮುದಾಯವು ನೆರವಿಗೆ ಧಾವಿಸುತ್ತಿದೆ. ಉಳಿದಂತೆ ಸೈದ್ಧಾಂತಿಕ ವಿಚಾರಗಳಿಂದ ದೂರ ಉಳಿದಿದೆ.

ಇದಲ್ಲದೇ ಬಿಜೆಪಿಯಲ್ಲಿನ ಒಕ್ಕಲಿಗ ನಾಯಕರು ಕೂಡ ಸಮುದಾಯದ ನಾಯಕದ ಪಟ್ಟದ ವಿಚಾರದಲ್ಲಿ ಡಿ.ಕೆ. ಶಿವಕುಮಾರ್  ಅವರಿಂದ ಅಂತರ ಕಾಯ್ದುಕೊಂಡಿದ್ದಾರೆ. ಒಟ್ಟಾರೆ, ದೇವೇಗೌಡ ಅವರನ್ನು ಹೊರತುಪಡಿಸಿ ಈವರೆಗೂ ಯಾರನ್ನೂ ಸಮುದಾಯದ ಪ್ರಬಲ ಅಥವಾ ಪ್ರಭಾವಿ ನಾಯಕ ಎಂದು ಸ್ವೀಕರಿಸದಿರುವುದು ಡಿ.ಕೆ. ಶಿವಕುಮಾರ್ ಗೆ ಹಿನ್ನಡೆ ಉಂಟು ಮಾಡಿದೆ. 

ಡಿಕೆಶಿ-ಸಿದ್ದರಾಮಯ್ಯ ರಾಜಕೀಯ ನಿಫುಣತೆ ಹೇಗಿದೆ?

ಡಿ.ಕೆ. ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಹೋಲಿಕೆ ಮಾಡುವುದಾದರೆ ಸಿದ್ದರಾಮಯ್ಯ ಅವರು ಚುನಾವಣಾ ಚಾಣಕ್ಯರಂತೆ ವರ್ಚಸ್ಸಿರುವ ನಾಯಕ. ಆದರೆ, ಡಿ.ಕೆ. ಶಿವಕುಮಾರ್‌ ಅವರಿಗೆ ಜನರನ್ನು ಸರಾಗವಾಗಿ ಸೆಳೆಯುವ ನೈಫುಣ್ಯತೆ ಇಲ್ಲ. ಬದಲಾಗಿ ಶಿವಕುಮಾರ್‌ ಅವರು ಸಂಘಟನಾತ್ಮಕವಾಗಿ, ಆರ್ಥಿಕ ಸಂಪನ್ಮೂಲ ಕ್ರೂಢೀಕರಣ ವಿಚಾರದಲ್ಲಿ ಪ್ರವೀಣರು.

ಡಿ.ಕೆ. ಶಿವಕುಮಾರ್‌ ಅವರು ಸಮುದಾಯ ಮತ ಬ್ಯಾಂಕ್‌ ಇದ್ದರೆ, ಸಿದ್ದರಾಮಯ್ಯ ಅವರಿಗೆ ಅಹಿಂದ ವರ್ಗಗಳು ಬೆನ್ನಿಗಿವೆ. ಹಾಗಾಗಿ ಪ್ರಭಾವಿ ನಾಯಕರ ಸ್ಥಾನದಲ್ಲಿ ಸಿದ್ದರಾಮಯ್ಯ ಅವರು ಮೇಲ್ಪಂಕ್ತಿಯಲ್ಲಿ ನಿಲ್ಲುತ್ತಾರೆ. ಪ್ರಸ್ತುತ, ನಾಯಕತ್ವ ಬದಲಾವಣೆ ವಿಚಾರದಲ್ಲಿಇದೇ ಅಂಶಗಳ ಆಧಾರದ ಮೇಲೆ ಚರ್ಚೆಗಳು ಕೂಡ ಆರಂಭವಾಗಿವೆ. ಹೈಕಮಾಂಡ್‌ ಕೂಡ ಇಂತಹ ಸೂಕ್ಷ್ಮ ಸಂಗತಿಗಳನ್ನು ಪರಿಶೀಲಿಸುತ್ತಿದೆ.


Tags:    

Similar News