ಬೆಳೆಹಾನಿ ಪರಿಹಾರ: 1033.60 ಕೋಟಿ ರೂ. ಹೆಚ್ಚುವರಿ ಪ್ಯಾಕೇಜ್‌ ಘೋಷಿಸಿದ ಸರ್ಕಾರ

ಎಸ್‌ಡಿಆರ್‌ಎಫ್‌ ಮಾನದಂಡಗಳ ಪ್ರಕಾರ 14.24 ಲಕ್ಷ ರೈತರಿಗೆ ಸಬ್ಸಿಡಿಯಾಗಿ ಈಗಾಗಲೇ 1218.03 ಕೋಟಿ ರೂಪಾಯಿ ವಿತರಿಸಲಾಗಿದೆ. ಇದರ ಜೊತೆಗೆ ರಾಜ್ಯ ನಿಧಿಯಿಂದ 1033.60 ಕೋಟಿ ರೂಪಾಯಿಯನ್ನು ಹೆಚ್ಚುವರಿಯಾಗಿ ನೀಡಲಾಗುತ್ತಿದೆ.

Update: 2025-11-27 12:31 GMT
ಸಾಂದರ್ಭಿಕ ಚಿತ್ರ
Click the Play button to listen to article

ರಾಜ್ಯದಲ್ಲಿ ಮುಂಗಾರು ಅವಧಿಯಲ್ಲಿ ಭಾರೀ ಮಳೆ ಮತ್ತು ಪ್ರವಾಹದಿಂದ ಬೆಳೆಹಾನಿಗೊಳಗಾದ ರೈತರಿಗೆ ರಾಜ್ಯ ಸರ್ಕಾರ ಹೆಚ್ಚುವರಿ ಸಬ್ಸಿಡಿಗಾಗಿ 1033.60 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಿದೆ.

ಬೆಂಗಳೂರಿನಲ್ಲಿ ಗುರುವಾರ(ನ.27) ಬೆಳೆ ಹಾನಿ ಸಂಭವಿಸಿದ 14.24 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ ಒಟ್ಟು 1033.60 ಕೋಟಿ ರೂ. ಹೆಚ್ಚುವರಿ ಪರಿಹಾರ ಒದಗಿಸುವ ಕಾರ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿ ಮಾತನಾಡಿದರು. ರಾಜ್ಯ ಸರ್ಕಾರ ರೈತರ ಪರವಾಗಿದೆ. ಬೆಳೆ ಹಾನಿಗೊಳಗಾದ ರೈತರಿಗೆ ಹೆಚ್ಚಿನ ನೆರವು ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಇನ್‌ಪುಟ್‌ ಸಬ್ಸಿಡಿ ದರಗಳನ್ನು ಹೆಚ್ಚಿಸಿದೆ ಎಂದರು.

ಗರಿಷ್ಠ 2 ಹೆಕ್ಟೇರ್‌ಗೆ  ಸೀಮಿತವಾಗಿ, ಮಳೆಯಾಶ್ರಿತ ಬೆಳೆಗಳಿಗೆ ಹೆಕ್ಟೇರ್ ಒಂದಕ್ಕೆ 8,500 ರಿಂದ 17 ಸಾವಿರ ರೂ, ನೀರಾವರಿ ಬೆಳೆಗಳಿಗೆ ಹೆಕ್ಟೇರ್ ಒಂದಕ್ಕೆ 17 ಸಾವಿರದಿಂದ 25,500 ರೂ. ಬಹು ವಾರ್ಷಿಕ ಬೆಳೆಗಳಿಗೆ ಹೆಕ್ಟೇರ್ ಒಂದಕ್ಕೆ 22,500 ರೂ. ರಿಂದ 31 ಸಾವಿರ ರೂಪಾಯಿಗೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.

 2251.63 ಕೋಟಿ ರೂ. ರೈತರ ಖಾತೆಗೆ

ಎಸ್‌ಡಿಆರ್‌ಎಫ್‌ ಮಾನದಂಡಗಳ ಪ್ರಕಾರ 14.24 ಲಕ್ಷ ರೈತರಿಗೆ ಸಬ್ಸಿಡಿಯಾಗಿ ಈಗಾಗಲೇ 1218.03 ಕೋಟಿ ರೂಪಾಯಿ ವಿತರಿಸಲಾಗಿದೆ. ಇದರ ಜೊತೆಗೆ ರಾಜ್ಯ ನಿಧಿಯಿಂದ 1033.60 ಕೋಟಿ ರೂಪಾಯಿಯನ್ನು ಹೆಚ್ಚುವರಿಯಾಗಿ ನೀಡಲಾಗುತ್ತಿದೆ. ಒಟ್ಟಾರೆಯಾಗಿ ಪರಿಹಾರ ಪಾವತಿ ಪ್ರಕ್ರಿಯೆಯಲ್ಲಿರುವ ಪಾವತಿಗಳನ್ನು ಒಳಗೊಂಡಂತೆ 2251.63 ಕೋಟಿ ರೂಪಾಯಿಯನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಆಗಲಿದೆ ಎಂದರು.

82.56 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ

ಮುಂಗಾರು ಅವಧಿಯಲ್ಲಿ ದಾಖಲೆಯ 82.56 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಆದರೆ ಜೂನ್‌ನಿಂದ ಸೆಪ್ಟಂಬರ್ ಅವಧಿಯಲ್ಲಿ ಉಂಟಾದ ಅತಿವೃಷ್ಟಿಯಿಂದಾಗಿ 14.58 ಲಕ್ಷ ಹೆಕ್ಟೇರ್‌ಗಿಂತ ಹೆಚ್ಚಿನ ಪ್ರದೇಶದ ಬೆಳೆ ಹಾನಿ ಉಂಟಾಗಿದ್ದು, ಇದರಿಂದ ಅಂದಾಜು 10,748 ಕೋಟಿ ರೂಪಾಯಿ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಮುಖ್ಯವಾಗಿ ತೊಗರಿ ಬೇಳೆ 5.36 ಲಕ್ಷ ಹೆಕ್ಟೇರ್, ಹೆಸರು ಕಾಳು 2.63 ಲಕ್ಷ ಹೆಕ್ಟೇರ್, ಹತ್ತಿ 2.68 ಲಕ್ಷ ಹೆಕ್ಟೇರ್ ಮತ್ತು ಮೆಕ್ಕೆಜೋಳ 1.21 ಲಕ್ಷ ಹೆಕ್ಟೇರ್ ಹಾನಿಯಾಗಿದೆ.

ತೊಗರಿ ಮತ್ತು ಹತ್ತಿ ಬೆಳೆಗಳಿಗೆ ಹಾನಿ

ಒಂಭತ್ತು ಜಿಲ್ಲೆಗಳಲ್ಲಿ ಹೆಚ್ಚಿನ ಬೆಳೆ ಹಾನಿ ಉಂಟಾಗಿದೆ. ಮುಖ್ಯವಾಗಿ ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಬೆಳೆಗಳು ಕೊಯ್ಲಿನ ಹಂತಕ್ಕೆ ಬಂದ ಸಂದರ್ಭದಲ್ಲಿ ಭಾರೀ ಮಳೆಯಿಂದ ಹೆಚ್ಚಿನ ಹಾನಿ ಸಂಭವಿಸಿದೆ. ಕೃಷ್ಣಾ ಮತ್ತು ಭೀಮಾ ಜಲಾನಯನ ಪ್ರದೇಶಗಳಲ್ಲಿ ನಿರಂತರ ಒಳ ಹರಿವು ಹೆಚ್ಚಳದಿಂದ ಕಲಬುರಗಿ, ಯಾದಗಿರಿ ಮತ್ತು ಬೀದರ್‌ ಜಿಲ್ಲೆಗಳಲ್ಲಿ ತೊಗರಿ ಮತ್ತು ಹತ್ತಿ ಬೆಳೆಗಳಿಗೆ ಹೆಚ್ಚಿನ ಹಾನಿ ಉಂಟಾಗಿದೆ ಎಂದು ಮಾಹಿತಿ ನೀಡಿದರು.

ಬೆಳೆ ಹಾನಿಯನ್ನು ನಿಖರವಾಗಿ ಖಚಿತಪಡಿಸಲು ಜಂಟಿ ಸಮೀಕ್ಷೆ ನಡೆಸಿ ಹಾನಿಯನ್ನು ಅಂದಾಜಿಸಲಾಗಿದೆ. ಎಲ್ಲಾ ದತ್ತಾಂಶಗಳನ್ನು ಪರಿಹಾರ ತಂತ್ರಾಂಶದಲ್ಲಿ ದಾಖಲಿಸಲಾಗಿದ್ದು, ಭೂಮಿ ಮತ್ತು ಫ್ರೂಟ್ಸ್ ತಂತ್ರಾಂಶದಲ್ಲಿ ಸಂಯೋಜಿಸಲಾಗಿದೆ. ಬೆಳೆ ನಷ್ಟದ ಗ್ರಾಮವಾರು ಪಟ್ಟಿಯನ್ನು ಗ್ರಾಮ ಚಾವಡಿಗಳಲ್ಲಿ ಹಾಗೂ ಅಂತರ್ಜಾಲದಲ್ಲಿ ಪ್ರಕಟಿಸಿ, ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿ, ಬಳಿಕ ನಷ್ಟ ಅನುಭವಿಸಿದ ರೈತರ ಪಟ್ಟಿಯನ್ನು ಅಂತಿಮಗೊಳಿಸಿದ ಬಳಿಕ ಇನ್ಪುಟ್ ಸಬ್ಸಿಡಿಯನ್ನು ನೇರವಾಗಿ ರೈತರಿಗೆ ವರ್ಗಾಯಿಸುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದರು.

ಪ್ರಧಾನಿಗೆ ಮನವಿ

ನವೆಂಬರ್ 17ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಬೆಳೆ ಹಾನಿ ಪರಿಹಾರದಡಿಯಲ್ಲಿ 614.90 ಕೋಟಿ ರೂ. ಹಾಗೂ ಹಾನಿಗೊಳಗಾದ ಮೂಲಸೌಕರ್ಯಗಳನ್ನು ಸರಿಪಡಿಸಲು 1,521.67 ಕೋಟಿ ರೂ. ಪರಿಹಾರ ಒದಗಿಸಲು ಮನವಿ ಸಲ್ಲಿಸಲಾಗಿದೆ. ಬೆಳೆ ಹಾನಿ ಪರಿಶೀಲಿಸಲು ಕೇಂದ್ರ ಸರ್ಕಾರ ಅಂತರ ಸಚಿವಾಲಯದ ಕೇಂದ್ರ ತಂಡವನ್ನು ರಚಿಸಿದ್ದು, ಈ ತಂಡ ಶೀಘ್ರದಲ್ಲೇ ಕರ್ನಾಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ ಎಂದು ತಿಳಿಸಿದರು.

Tags:    

Similar News