ಗದ್ದುಗೆ ಗುದ್ದಾಟ| ಡಿಕೆಶಿಯ ʼಕೊಟ್ಟ ಮಾತುʼ ಪೋಸ್ಟ್‌; ಸಿಎಂ-ಡಿಸಿಎಂ ಮಧ್ಯೆ ಟ್ವೀಟ್‌ ವಾರ್‌

ಶಕ್ತಿ ಯೋಜನೆಯು ನಮ್ಮ ರಾಜ್ಯದ ಮಹಿಳೆಯರಿಗೆ 600 ಕೋಟಿಗೂ ಹೆಚ್ಚು ಉಚಿತ ಪ್ರವಾಸಗಳನ್ನು ತಲುಪಿಸಿದೆ ಎಂದು ಘೋಷಿಸಲು ಹೆಮ್ಮೆಪಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

Update: 2025-11-27 14:25 GMT

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಸಂದೇಶ

Click the Play button to listen to article

ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಗೊಂದಲವು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಮಧ್ಯೆ ಟ್ವೀಟ್‌ ವಾರ್‌ ಆರಂಭಕ್ಕೆ ಕಾರಣವಾಗಿದೆ. ಇದುವರೆಗೆ ಸಭೆ, ಹೇಳಿಕೆಗಳ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದ ಇಬ್ಬರು ನಾಯಕರು ಈಗ ಸಾಮಾಜಿಕ ಜಾಲತಾಣದಲ್ಲೂ ಏಟು-ಎದಿರೇಟು ಎನ್ನುವಂತೆ ಪೋಸ್ಟ್‌ ಹಾಕುತ್ತಿದ್ದಾರೆ.  

ಗುರುವಾರ(ನ.27) ಬೆಳಿಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್‌ ತಮ್ಮ ಎಕ್ಸ್‌ ಖಾತೆಯಲ್ಲಿ "ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡಶಕ್ತಿ!" ಎಂದು ಹೇಳಿಕೆ ನೀಡಿದ್ದರು. ಇದೀಗ ಸಿಎಂ ಸಿದ್ದರಾಮಯ್ಯ ಅವರು ಅದೇ ಪದಗಳನ್ನು ಉಲ್ಲೇಖಿಸಿ ತಮ್ಮ ಎಕ್ಸ್‌ ಖಾತೆಯಲ್ಲಿ "ಒಂದು ಮಾತು ಜಗತ್ತಿಗೆ ಉತ್ತಮವಾಗದ ಹೊರತು ಅದು ಶಕ್ತಿಯಲ್ಲ" ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.

ಸಿಎಂ ಸಿದ್ದರಾಮಯ್ಯನವರ ಟ್ವಿಟ್‌ನಲ್ಲಿ ಏನಿದೆ ?

ಸಿಎಂ ತಮ್ಮ ಟ್ವಿಟ್‌ನಲ್ಲಿ" ಶಕ್ತಿ ಯೋಜನೆಯು ನಮ್ಮ ರಾಜ್ಯದ ಮಹಿಳೆಯರಿಗೆ 600 ಕೋಟಿಗೂ ಹೆಚ್ಚು ಉಚಿತ ಪ್ರವಾಸಗಳನ್ನು ತಲುಪಿಸಿದೆ ಎಂದು ಘೋಷಿಸಲು ಹೆಮ್ಮೆಪಡುತ್ತೇನೆ. ಸರ್ಕಾರವನ್ನು ರಚಿಸಿದ ಮೊದಲ ತಿಂಗಳಿನಿಂದಲೇ ನಾವು ನಮ್ಮ ಭರವಸೆಗಳನ್ನು ಕಾರ್ಯರೂಪಕ್ಕೆ ತಂದಿದ್ದೇವೆ" ಎಂದು ತಿಳಿಸಿದ್ದಾರೆ.

* ಶಕ್ತಿ - 600 ಕೋಟಿಗೂ ಹೆಚ್ಚು ಉಚಿತ ಪ್ರವಾಸಗಳು, ದುಡಿಯುವ ಮಹಿಳೆಯರಿಗೆ ಘನತೆ ಮತ್ತು ಚಲನಶೀಲತೆಯನ್ನು ಪುನಃಸ್ಥಾಪಿಸುವುದು.

* ಗೃಹ ಲಕ್ಷ್ಮಿ - 1.24 ಕೋಟಿ ಮಹಿಳಾ ನೇತೃತ್ವದ ಕುಟುಂಬಗಳಿಗೆ ಸಬಲೀಕರಣ.

* ಯುವ ನಿಧಿ - 3 ಲಕ್ಷಕ್ಕೂ ಹೆಚ್ಚು ಯುವಕರಿಗೆ ಭದ್ರತೆ ಮತ್ತು ಭರವಸೆಯೊಂದಿಗೆ ಬೆಂಬಲ ನೀಡಲಾಗಿದೆ.

* ಅನ್ನ ಭಾಗ್ಯ 2.0 - 4.08 ಕೋಟಿ ನಾಗರಿಕರಿಗೆ ಆಹಾರ ಭದ್ರತೆ.

* ಗೃಹ ಜ್ಯೋತಿ - 1.64 ಕೋಟಿ ಕುಟುಂಬಗಳಿಗೆ ಉಚಿತ ವಿದ್ಯುತ್.

ನನ್ನ ಮೊದಲ ಅವಧಿಯಲ್ಲಿ (2013–18), 165 ಭರವಸೆಗಳಲ್ಲಿ 175(ಶೇ.95) ಭರವಸೆಗಳನ್ನು ಈಡೇರಿಸಿದ್ದೇವೆ. ಪ್ರಸ್ತುತ ಅವಧಿಯಲ್ಲಿ, 593 ಭರವಸೆಗಳಲ್ಲಿ 243 ಕ್ಕೂ ಹೆಚ್ಚು ಭರವಸೆಗಳು ಈಗಾಗಲೇ ಪೂರ್ಣಗೊಂಡಿವೆ. ಉಳಿದಿರುವ ಪ್ರತಿಯೊಂದು ಭರವಸೆಯನ್ನು ಬದ್ಧತೆ, ವಿಶ್ವಾಸಾರ್ಹತೆ ಮತ್ತು ಕಾಳಜಿಯೊಂದಿಗೆ ಪೂರೈಸಲಾಗುತ್ತದೆ ಎಂದು ಹೇಳಿದ್ದಾರೆ.

ಕರ್ನಾಟಕದ ಜನರು ನೀಡಿದ ಜನಾದೇಶವು ಒಂದು ಕ್ಷಣವಲ್ಲ, ಐದು ಪೂರ್ಣ ವರ್ಷಗಳ ಜವಾಬ್ದಾರಿಯಾಗಿದೆ. ನಾನು ಸೇರಿದಂತೆ ಕಾಂಗ್ರೆಸ್ ಪಕ್ಷವು ನಮ್ಮ ಜನರ ಪರವಾಗಿ ಸಹಾನುಭೂತಿ, ಸ್ಥಿರತೆ ಮತ್ತು ಧೈರ್ಯದಿಂದ ನಡೆದುಕೊಳ್ಳುತ್ತಿದೆ. ಕರ್ನಾಟಕಕ್ಕೆ ನಮ್ಮ ಮಾತು ಒಂದು ಘೋಷಣೆಯಲ್ಲ, ಅದು ನಮಗೆ ಜಗತ್ತನ್ನು ಅರ್ಥೈಸುತ್ತದೆ ಎಂದು ತಿಳಿಸಿದ್ದಾರೆ.

ಡಿಸಿಎಂ ಡಿಕೆಶಿ ಟ್ವಿಟ್‌ನಲ್ಲಿ ಏನಿತ್ತು?

ಡಿಸಿಎಂ ಡಿ.ಕೆ. ಶಿವಕುಮಾರ್‌ ತಮ್ಮ ಸಾಮಾಜಿಕ ಜಾಲತಾಣ ʼಎಕ್ಸ್‌ʼನಲ್ಲಿ "ಪದ ಶಕ್ತಿಯೇ ವಿಶ್ವ ಶಕ್ತಿ. ಜಗತ್ತಿನ ಅತಿದೊಡ್ಡ ಶಕ್ತಿ ಎಂದರೆ ಕೊಟ್ಟ ಮಾತು ಉಳಿಸಿಕೊಳ್ಳುವುದು. ನ್ಯಾಯಾಧೀಶರಾಗಲಿ, ಅಧ್ಯಕ್ಷರಾಗಲಿ ಅಥವಾ ನಾನು ಸೇರಿದಂತೆ ಬೇರೆ ಯಾರೇ ಆಗಿರಲಿ, ಎಲ್ಲರೂ ಹೇಳಿದಂತೆ ನಡೆಯಬೇಕು" ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಹೈಕಮಾಂಡ್‌ಗೆ ಎಚ್ಚರಿಕೆ ನೀಡುವಂತೆ ಪೋಸ್ಟ್‌ ಮಾಡಿದ್ದರು.  

Tags:    

Similar News