ಲಿವ್-ಇನ್ ಸಂಬಂಧಕ್ಕೂ ಐಪಿಸಿ ಸೆಕ್ಷನ್ 498A ಅನ್ವಯ; ಹೈಕೋರ್ಟ್
'ಪತಿ' ಎಂಬ ಪದವು ಕಾನೂನುಬದ್ಧ ಮದುವೆಯಾದ ಪುರುಷನಿಗೆ ಮಾತ್ರ ಸೀಮಿತವಲ್ಲ. ಕ್ರೌರ್ಯದ ಅಂಶಗಳು ಸಾಬೀತಾದಲ್ಲಿ ಲಿವ್-ಇನ್ ಸಂಬಂಧದ ಪಾಲುದಾರರಿಗೂ ಅನ್ವಯವಾಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಕರ್ನಾಟಕ ಹೈಕೋರ್ಟ್
ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ ʼ498ಎʼ ನಲ್ಲಿ ಬಳಸಿರುವ ಪತಿ ಎಂಬ ಪದವು ಕೇವಲ ಕಾನೂನುಬದ್ಧ ವಿವಾಹಕ್ಕೆ ಮಾತ್ರ ಸೀಮಿತವಾಗಿಲ್ಲ. ರದ್ದಾದ ಅಥವಾ ಲಿವ್-ಇನ್ ಸಂಬಂಧಗಳಿಗೂ ಅನ್ವಯಿಸಲಿದೆ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ಶಿವಮೊಗ್ಗದ ವೈದ್ಯರ ಕುಟುಂಬವೊಂದು ಐಪಿಸಿ ಸೆಕ್ಷನ್ 498 ಎ, 494, 504, 506ಅಡಿ ಪ್ರಕರಣಗಳ ವಿಚಾರಣೆಗೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ವಿವಾಹದ ಸ್ವರೂಪದ ಸಂಬಂಧಗಳಿಗೂ ಕ್ರೌರ್ಯದ ವಿಚಾರದಲ್ಲಿ ಐಪಿಸಿ ಸೆಕ್ಷನ್ 498ಎ ಅನ್ವಯವಾಗಲಿದೆ ಎಂದು ಹೇಳಿ ನ್ಯಾಯಮೂರ್ತಿ ಸೂರಜ್ ಗೋವಿಂದ್ರಾಜ್ ಅವರು ಅರ್ಜಿ ವಜಾ ಮಾಡಿದರು.
ದೂರುದಾರೆಯೊಂದಿಗೆ ಅರ್ಜಿದಾರರ (ವೈದ್ಯರ ಕುಟುಂಬದ ಸದಸ್ಯ) ವಿವಾಹವು ಕಾನೂನಾತ್ಮಕವಾಗಿ ಅಮಾನ್ಯವಾಗಿದೆ. ಇದು ಐಪಿಸಿ ಸೆಕ್ಷನ್ 498ಎ ಗೆ ಅನ್ವಯಿಸುವುದಿಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು. ಅರ್ಜಿದಾರ ವ್ಯಕ್ತಿ ಈಗಾಗಲೇ ವಿವಾಹಿತ. ಹಾಗಾಗಿ ಲಿವ್ ಇನ್ ಸಂಬಂಧದಲ್ಲಿದ್ದ ದೂರುದಾರೆಯ ಗಂಡ ಎಂದು ಪರಿಗಣಿಸಲಾಗದು. ಹಾಗಾಗಿ 498ಎ ಅಡಿ ಪ್ರಕರಣ ದಾಖಲಿಸುವಂತಿಲ್ಲ ಎಂದು ವಾದಿಸಿದ್ದರು. ಈ ವಾದವನ್ನು ಮಾನ್ಯ ಮಾಡದ ನ್ಯಾಯಾಲಯವು ಅರ್ಜಿ ವಜಾಗೊಳಿಸಿತು.
ಅರ್ಜಿದಾರರು ತಮ್ಮ ವಿವಾಹದ ವಿಷಯ ಮರೆಮಾಚಿ ದೂರುದಾರ ಮಹಿಳೆಯೊಂದಿಗೆ ಲಿವ್ ಇನ್ ಸಂಬಂಧದಲ್ಲಿ ಇದ್ದರು ಎಂಬುದನ್ನು ನ್ಯಾಯಮೂರ್ತಿಗಳು ಗಮನಿಸಿ, ಈ ಆದೇಶ ನೀಡಿದರು. 'ಪತಿ' ಎಂಬ ಪದವು ಕಾನೂನುಬದ್ಧ ಮದುವೆಯಾದ ಪುರುಷನಿಗೆ ಮಾತ್ರ ಸೀಮಿತವಲ್ಲ. ಕ್ರೌರ್ಯದ ಅಂಶಗಳು ಸಾಬೀತಾದಲ್ಲಿ ಲಿವ್-ಇನ್ ಸಂಬಂಧದ ಪಾಲುದಾರರಿಗೂ ಅನ್ವಯವಾಗುತ್ತದೆ. ಮದುವೆಗೆ ಕಾನೂನು ಮಾನ್ಯತೆ ಇಲ್ಲದಿದ್ದರೂ ಲಿವ್ ಇನ್ ಸಂಬಂಧದ ಸ್ವರೂಪ ಮತ್ತು ಸಾರವೇ ಮುಖ್ಯ ಎಂದು ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅಭಿಪ್ರಾಯಪಟ್ಟರು.
ದೂರುದಾರೆ ಹಾಗೂ ಅರ್ಜಿದಾರ ವೈದ್ಯರು ಒಂದು ವರ್ಷದ ಅವಧಿಯವರೆಗೆ ಒಟ್ಟಿಗೆ ವಾಸಿಸುತ್ತಿದ್ದರು. ವೈವಾಹಿಕ ಜವಾಬ್ದಾರಿಗಳನ್ನು ಪೂರೈಸಿದ್ದರು. ಸಮಾಜಕ್ಕೆ ತಮ್ಮನ್ನು ದಂಪತಿ ಎಂದು ಪರಿಚಯಿಸಿಕೊಂಡಿದ್ದರು. ಅರ್ಜಿದಾರ ವೈದ್ಯರು ಆಕೆಯ ಕುಟುಂಬದಿಂದ ಸಾಕಷ್ಟು ಚಿನ್ನ, ನಗದು ಪಡೆದಿದ್ದರು. ಕಿರುಕುಳದಲ್ಲಿ ಆಕೆಯನ್ನು ಸುಟ್ಟುಹಾಕಲು ಪ್ರಯತ್ನಿಸಿದ ಆರೋಪವೂ ಸೇರಿದೆ. ಹೀಗಿರುವಾಗ ಪ್ರಕರಣಕ್ಕೆ ತಡೆ ನೀಡಲು ಸಾಧ್ಯವಿಲ್ಲ ಎಂದು ಹೇಳಿ ಅರ್ಜಿ ವಜಾಗೊಳಿಸಿದರು.
2019 ರಿಂದ ಶಿವಮೊಗ್ಗ ಮತ್ತು ಬೆಂಗಳೂರು ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಸೆಕ್ಷನ್ 498A (ಕ್ರೌರ್ಯ), ಸೆಕ್ಷನ್ 494 (ದ್ವಿಪತ್ನಿತ್ವ), ಮತ್ತು ಸೆಕ್ಷನ್ 504, 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿನ ಪ್ರಕರಣಗಳ ವಿಚಾರಣೆಗೆ ತಡೆ ಕೋರಿ ಶಿವಮೊಗ್ಗ ಮೂಲದ ವೈದ್ಯರು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ರದ್ದುಗೊಳಿಸಲು ನಿರಾಕರಿಸಿ, ಶಿವಮೊಗ್ಗ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣವನ್ನು ಬೆಂಗಳೂರಿಗೆ ವರ್ಗಾಯಿಸುವಂತೆ ನಿರ್ದೇಶನ ನೀಡಿದರು.