ಗದ್ದುಗೆ ಗುದ್ದಾಟ| ಅಧಿಕಾರ ಹಸ್ತಾಂತರ ಗೊಂದಲ; ಒಕ್ಕಲಿಗ-ಕುರುಬ ಸಮುದಾಯಗಳಿಗೆ ವ್ಯಾಪಿಸಿದ ತಿಕ್ಕಾಟ

ಅಧಿಕಾರ ಹಂಚಿಕೆ ಒಪ್ಪಂದ ಮಾತುಗಳು ಮುನ್ನೆಲೆಗೆ ಬಂದ ಕೂಡಲೇ ಡಿಸಿಎಂ ಡಿ.ಕೆ. ಶಿವಕುಮಾರ್‌ ಬೆಂಬಲಕ್ಕೆ ಒಕ್ಕಲಿಗರ ಮಹಾಸಂಸ್ಥಾನ ಮಠ ಧಾವಿಸಿದ್ದು, ಸಿದ್ದರಾಮಯ್ಯನವರ ನೆರವಿಗೆ ಕುರುಬ ಜನಾಂಗ ಧಾವಿಸಿದೆ.

Update: 2025-11-27 09:46 GMT

ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಕಾಗಿನೆಲೆ ಪೀಠದ ನಿರಂಜನಾನಂದ ಪುರಿ ಶ್ರೀಗಳು

ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳು ಜೋರಾಗುತ್ತಿರುವ ಬೆನ್ನಲ್ಲೇ ಸಿಎಂ ಹಾಗೂ ಡಿಸಿಎಂ ಬೆಂಬಲಿಸಿ ಮಠಗಳು ಕೂಡ ರಾಜಕೀಯ ಅಖಾಡಕ್ಕೆ ಧುಮುಕಿವೆ.

ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರಿಗೆ ಸಿಎಂ ಪಟ್ಟ ಕಟ್ಟುವಂತೆ ಒಕ್ಕಲಿಗರ ಮಹಾಸಂಸ್ಥಾನ ಮಠದ ನಿರ್ಮಲಾನಂದ ನಾಥ ಸ್ವಾಮೀಜಿ ಅವರು ಕಾಂಗ್ರೆಸ್‌ ನಾಯಕರನ್ನು ಒತ್ತಾಯಿಸಿದ ಮರುದಿನವೇ ಸಿದ್ದರಾಮಯ್ಯ ಪರವಾಗಿ ಕುರುಬ ಸಮುದಾಯ ವಕಾಲತು ವಹಿಸಿಕೊಂಡಿದೆ. 

ಸಿಎಂ ಹಾಗೂ ಡಿಸಿಎಂ ನಡುವಿನ ಕುರ್ಚಿ ಕಾದಾಟದ ಅಂಗಳಕ್ಕೆ ಒಕ್ಕಲಿಗ ಹಾಗೂ ಕುರುಬ ಸಮುದಾಯದ ಮಠಾಧೀಶರು ಇಳಿಯುವ ಮೂಲಕ ರಾಜ್ಯ ರಾಜಕೀಯಕ್ಕೆ ಹೊಸ ತಿರುವು ಸಿಕ್ಕಿದೆ. ಸಿಎಂ ಸಿದ್ದರಾಮಯ್ಯ ಅವರನ್ನೇ ಪದವಿಯಲ್ಲಿ ಮುಂದುವರಿಸಲು ಆಗ್ರಹಿಸಿ ಕುರುಬ ಸಮುದಾಯದ ಸಂಘಟನೆಗಳು ನೇರ ಹೋರಾಟಕ್ಕೆ ಇಳಿಯಲು ಸಜ್ಜಾಗಿವೆ. 

ಕುರುಬ ಸಂಘದ ಸಭೆ ನಾಳೆ?

ಡಿ.ಕೆ. ಶಿವಕುಮಾರ್‌ ಬೆಂಬಲಕ್ಕೆ ಒಕ್ಕಲಿಗ ಮಹಾಸಂಸ್ಥಾನ ನಿಂತಿರುವುದಕ್ಕೆ ಪರ್ಯಾಯವಾಗಿ ಹೋರಾಟ ರೂಪಿಸಲು ಸಲುವಾಗಿ ಚರ್ಚಿಸಲು ಕುರುಬ ಸಂಘಟನೆಗಳ ಸಭೆ ನಾಳೆ ನಡೆಯಲಿದೆ. ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಲ್ಲಿ ಮುಂದುವರೆಸಬೇಕು ಎಂಬ ನಿರ್ಣಯ ಕೈಗೊಳ್ಳುವ ಸಾಧ್ಯತೆ ದಟ್ಟವಾಗಿವೆ.

ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡಿದರೆ ನೇರ ಹೋರಾಟಕ್ಕೆ ಇಳಿಯುವುದು, ರಾಜ್ಯವ್ಯಾಪಿ ಪ್ರತಿಭಟನೆ, ದೆಹಲಿ ಯಾತ್ರೆ ಸೇರಿದಂತೆ ಹಲವು ಹೋರಾಟದ ಮಾದರಿಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಅದೇ ರೀತಿ ಸಮುದಾಯದ ಮಠಾಧೀಶರನ್ನು ಹೋರಾಟಕ್ಕೆ ಆಹ್ವಾನಿಸಿ, ಸಿದ್ದರಾಮಯ್ಯ ಪರ ನಿಲ್ಲಲು ಕೋರಲಾಗುವುದು. ಬುಧವಾರವಷ್ಟೇ ನಿರ್ಮಲಾನಂದ ನಾಥ ಸ್ವಾಮೀಜಿ ಹೇಳಿಕೆಗೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಆಕ್ಷೇಪ ವ್ಯಕ್ತಪಡಿಸಿದ್ದರು.

"ಮಠಾಧೀಶರು ಹೇಳಿದ ತಕ್ಷಣ ಮುಖ್ಯಮಂತ್ರಿ ಮಾಡಲು ಸಂವಿಧಾನದಲ್ಲಿ ಅವಕಾಶ ಇದೆಯಾ ?, ಮುಖ್ಯಮಂತ್ರಿ ಬದಲಾವಣೆ ಅಥವಾ ಆಯ್ಕೆ ಶಾಸಕರಿಗಿರುವ ಅಧಿಕಾರ. ಮುಖ್ಯಮಂತ್ರಿ ಯಾರು ಆಗಬೇಕು ಎನ್ನುವುದನ್ನು ಶಾಸಕರು ನಿರ್ಣಯ ಮಾಡುತ್ತಾರೆ. ಈ ವಿಚಾರದಲ್ಲಿ ಮಠಾಧೀಶರು ಮಧ್ಯ ಪ್ರವೇಶ ಮಾಡುವುದು ಸೂಕ್ತವಲ್ಲ ಎಂದು ನಿರ್ಮಲಾನಂದ ನಾಥ ಸ್ವಾಮೀಜಿ ಅವರಿಗೆ ತಿರುಗೇಟು ನೀಡಿದ್ದರು.   

ಪರಸ್ಪರ ಸಮುದಾಯಗಳ ಪ್ರತಿರೋಧ?

ಒಕ್ಕಲಿಗ ಸಮುದಾಯದ ಸ್ವಾಮೀಜಿ ಅವರು ಡಿ.ಕೆ. ಶಿವಕುಮಾರ್ ಪರ ಮಾತನಾಡಿದ್ದರು. ಇದಕ್ಕೆ ಪ್ರತಿಯಾಗಿ ಕುರುಬ ಸಮುದಾಯವೂ ಸಿದ್ದರಾಮಯ್ಯ ಪರವಾಗಿ ಅಖಾಡಕ್ಕೆ ಧುಮುಕುವ ಮುನ್ಸೂಚನೆ ನೀಡಿರುವುದು ಪಕ್ಷದ ಒಳಜಗಳವಾಗಿರದಂತೆ ಸಮುದಾಯಗಳ ನಡುವಿನ ಸಂಘರ್ಷಕ್ಕೂ ಕಾರಣವಾಗಬಹುದು ಎನ್ನಲಾಗಿದೆ.  

ಗೊಂದಲ ಪರಿಹಾರಕ್ಕೆ ಮುಂದಾಗದ ಹೈಕಮಾಂಡ್‌ 

ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ನಡುವಿನ ಅಧಿಕಾರ ಹಸ್ತಾಂತರದ ಕುರಿತು ಶೀತಲ ಸಮರ ನಡೆಯುತ್ತಿದೆ. ಆದರೆ, ಇದುವರೆಗೂ ಸಿಎಂ ಬದಲಾವಣೆ ಕುರಿತು ಹೈಕಮಾಂಡ್‌ ನಾಯಕರು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಇತರೆ ನಾಯಕರ ಜೊತೆ ಚರ್ಚಿಸಿ ಇನ್ನಷ್ಟೇ ತೀರ್ಮಾನ ಕೈಗೊಳ್ಳಬೇಕಿದೆ.

ಆದಿಚುಂಚನಗಿರಿ ಶ್ರೀ ಹೇಳಿದ್ದೇನು ?

ಹಾಸನ ಜಿಲ್ಲೆ ಕುಂದೂರು ಮಠದ ಸುಬ್ರಹ್ಮಣ್ಯ ಸ್ವಾಮಿ ರಥೋತ್ಸವದಲ್ಲಿ ಪಾಲ್ಗೊಂಡು ಮಾಧ್ಯಮದವರೊಂದಿಗೆ ಬುಧವಾರ(ನ.26) ಮಾತನಾಡಿದ್ದ ಆದಿ ಚುಂಚನಗಿರಿ ಮಹಾ ಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಡಿಸಿಎಂ ಡಿ.ಕೆ. ಶಿವಕುಮಾರ್ ಮಠದ ಭಕ್ತರು. ಅವರು ಮುಖ್ಯಮಂತ್ರಿ ಆಗಬೇಕೆಂಬ ಬಯಕೆ ಮಠದ ಭಕ್ತರಲ್ಲಿದೆ. ಕಳೆದ 2.5 ವರ್ಷದಿಂದ ನಾವೂ ನೀರೀಕ್ಷೆಯಲಿದ್ದೇವೆ. ಆದರೆ ಈಗಿನ ಬೆಳವಣಿಗೆಗಳನ್ನು ಗಮನಿಸಿದರೆ ಕೆಲವು ವ್ಯತ್ಯಾಸಗಳಾಗಿರುವುದು ಕಂಡು ಬರುತ್ತಿವೆ ಎಂದು ಹೇಳಿದ್ದರು.

ವಿಧಾನಸಭೆ ಚುನಾವಣೆ ಸಮಯದಿಂದಲೇ ಡಿ.ಕೆ. ಶಿವಕುಮಾರ್‌ ಪಕ್ಷವನ್ನು ಮುನ್ನಡೆಸಿ ಅಧಿಕಾರಕ್ಕೆ ತಂದಿದ್ದಾರೆ. ಪಕ್ಷ ಅಧಿಕಾರಕ್ಕೆ ಬಂದ ನಂತರ ಹಲವು ನಾಯಕರ ಆಂತರಿಕ ಅಸಮಾಧಾನ ಮತ್ತು ಅಹವಾಲುಗಳನ್ನು ತಮ್ಮ ಬಳಿ ಹೇಳಿಕೊಂಡಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ಆಗುತ್ತಿರುವ ರಾಜಕೀಯ ಬೆಳವಣಿಗೆಗಳನ್ನು ಗಮನಿಸುತ್ತಿದ್ದೇನೆ. ರಾಜ್ಯವನ್ನಾಳಲು ಹಲವು ನಾಯಕರನ್ನು ಸಮುದಾಯ ನೀಡಿದೆ. ಕಳೆದ ಚುನಾವಣೆಯಲ್ಲಿ ನಮ್ಮವರೇ ಮುಖ್ಯಮಂತ್ರಿ ಆಗಲಿದ್ದಾರೆ ಎಂಬ ಆಶಾಭಾವನೆಯಿಂದ ಜನ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದರು. ಆದರೆ, ಈಗಿನ ಬೆಳವಣಿಗೆಗಳು ನೋಡಿದರೆ ಅದು ಈಡೇರುವಂತೆ ಕಾಣುತ್ತಿಲ್ಲ. ಈ ಕುರಿತು ಕಾಂಗ್ರೆಸ್ ಹೈಕಮಾಂಡ್ ಸೂಕ್ತ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದ್ದರು.

Tags:    

Similar News