ನ್ಯಾಷನಲ್ ಹೆರಾಲ್ಡ್ ಕೇಸ್- ಇಡಿ ಕ್ರಮ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ
ಇಡಿ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ರಾಜ್ಯ ಸಚಿವ ಸಂಪುಟದ ಸಚಿವರು ಹಾಗೂ ಶಾಸಕರು ಭಾಗವಹಿಸಿದರು.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಕ್ರಮವನ್ನು ಖಂಡಿಸಿ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರ ಮತ್ತು ಜಾರಿ ನಿರ್ದೇಶನಾಲಯದ ವಿರುದ್ಧ ಬೆಳಗಾವಿಯ ಸುವರ್ಣಸೌಧದ ಆವರಣದ ಮಹಾತ್ಮ ಗಾಂಧಿ ಪ್ರತಿಮೆಯ ಮುಂದೆ ಭಾರಿ ಪ್ರತಿಭಟನೆ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ರಾಜ್ಯ ಸಚಿವ ಸಂಪುಟದ ಸಚಿವರು ಹಾಗೂ ಶಾಸಕರು ಈ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ ನಾಯಕರು, ಕೇಂದ್ರದ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಸಚಿವ ಎಂ.ಬಿ. ಪಾಟೀಲ್, ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದ ಅಡಿಯಲ್ಲಿ ಸ್ವಾಯತ್ತ ಸಂಸ್ಥೆಗಳನ್ನು ನಿರ್ಮಿಸಿದ್ದಾರೆ. ಆದರೆ ಬಿಜೆಪಿ ಸರ್ಕಾರ ಇವತ್ತು ಇಡಿ ಮತ್ತು ಐಟಿ ಸಂಸ್ಥೆಗಳನ್ನು ರಾಜಕೀಯ ಲಾಭಕ್ಕಾಗಿ ದುರುಪಯೋಗಪಡಿಸಿಕೊಳ್ಳುತ್ತಿದೆ. ಸತ್ಯ ಮತ್ತು ನ್ಯಾಯಕ್ಕೆ ಅಂತಿಮವಾಗಿ ನ್ಯಾಯಾಲಯದಲ್ಲಿ ಜಯ ಸಿಕ್ಕಿದೆ. ಬಿಜೆಪಿಯ ಸುಳ್ಳು ಕೇಸ್‍ಗಳು ಈಗ ಬಯಲಾಗಿವೆ. ಬಿಜೆಪಿ ಮೊದಲು ನಾಯಕರ ಮೇಲೆ ಸುಳ್ಳು ಕೇಸ್ ದಾಖಲಿಸುತ್ತದೆ, ನಂತರ ಅವರನ್ನೇ ತಮ್ಮ ಪಕ್ಷಕ್ಕೆ ಸೇರಿಸಿಕೊಂಡು ವಾಷಿಂಗ್ ಮೆಷಿನ್ ರೀತಿಯಲ್ಲಿ ಕ್ಲೀನ್ ಮಾಡುವ ಕೆಲಸ ಮಾಡುತ್ತಿದೆ. ಇಷ್ಟೇ ಅಲ್ಲದೆ, ಬಿಹಾರ ಚುನಾವಣೆಯಲ್ಲಿ ಹಣ ಹಂಚುವ ಮೂಲಕ ಬಿಜೆಪಿ ಗೆಲುವು ಸಾಧಿಸಿದೆ ಎಂದು ವಾಗ್ದಾಳಿ ನಡೆಸಿದರು.
ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ನ್ಯಾಯಾಲಯವು ಇಡಿಗೆ ಮಂಗಳಾರತಿ ಎತ್ತಿ ಛೀಮಾರಿ ಹಾಕಿದೆ. ಈ ಪ್ರಕರಣದ ಮೂಲಕ ಕಾಂಗ್ರೆಸ್ ನಾಯಕರ ವಿರುದ್ಧ ದ್ವೇಷದ ರಾಜಕಾರಣ ಮಾಡಲಾಗುತ್ತಿದೆ ಎಂಬುದು ಈಗ ಸಾಬೀತಾಗಿದೆ. ಇದೊಂದು ರಾಜಕೀಯ ಪ್ರೇರಿತ ಪ್ರಕರಣ ಎಂಬುವುದು ರುಜುವಾತಾಗಿದೆ. ಕೇವಲ ವಿರೋಧ ಪಕ್ಷಗಳನ್ನು ದಮನ ಮಾಡಲು ಇಡಿಯನ್ನು ಬಳಸಿಕೊಳ್ಳಲಾಗುತ್ತಿದೆ. ವಿಶೇಷ ನ್ಯಾಯಾಲಯವು ಈ ಪ್ರಕರಣವನ್ನು ವಜಾ ಮಾಡಿರುವುದು ಬಿಜೆಪಿ ಸರ್ಕಾರದ ಕಪಾಳಕ್ಕೆ ಹೊಡೆದಂತಿದೆ. ಪ್ರಜಾಪ್ರಭುತ್ವವನ್ನು ಹಾಳು ಮಾಡಲು ಇಡಿ ದಾಖಲಿಸುವ ಒಟ್ಟು ಕೇಸ್‌ಗಳಲ್ಲಿ ಶೇ. 95 ರಷ್ಟು ವಿರೋಧ ಪಕ್ಷದ ನಾಯಕರ ಮೇಲೆಯೇ ಇವೆ. ಬಿಜೆಪಿಗೆ ಸೇರಿದ ತಕ್ಷಣ ಅವರ ಮೇಲಿರುವ ಕೇಸ್‌ಗಳನ್ನು ವಜಾ ಮಾಡುತ್ತಿರುವುದು ಇವರ ದ್ವೇಷದ ರಾಜಕಾರಣಕ್ಕೆ ಸಾಕ್ಷಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಕರಣದ ಹಿನ್ನಲೆ ಏನು?
ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಮಾತೃ ಸಂಸ್ಥೆಯಾದ ಎಜೆಎಲ್ (AJL) ಅನ್ನು ವಂಚನೆಯ ಮೂಲಕ ಸ್ವಾಧೀನಪಡಿಸಿಕೊಳ್ಳಲು ಪಿತೂರಿ ನಡೆಸಲಾಗಿದೆ ಎಂಬುದು ಪ್ರಮುಖ ಆರೋಪ. ಎಫ್‌ಐಆರ್ ಪ್ರಕಾರ, ಕೋಲ್ಕತ್ತಾ ಮೂಲದ ಡೊಟೆಕ್ಸ್ ಮರ್ಚಂಡೈಸ್ ಎಂಬ ಶೆಲ್ ಕಂಪನಿಯು ಯಂಗ್ ಇಂಡಿಯನ್ ಸಂಸ್ಥೆಗೆ 1 ಕೋಟಿ ರೂಪಾಯಿಗಳನ್ನು ಒದಗಿಸಿದೆ ಎನ್ನಲಾಗಿದೆ. ಈ ಯಂಗ್ ಇಂಡಿಯನ್ ಸಂಸ್ಥೆಯಲ್ಲಿ ರಾಹುಲ್ ಮತ್ತು ಸೋನಿಯಾ ಗಾಂಧಿ ಶೇ. 76ರಷ್ಟು ಪಾಲು ಹೊಂದಿದ್ದಾರೆ. ಕೇವಲ 50 ಲಕ್ಷ ರೂಪಾಯಿ ಪಾವತಿಸಿ, ಸುಮಾರು 2,000 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದ ಎಜೆಎಲ್ ಕಂಪನಿಯನ್ನು ಯಂಗ್ ಇಂಡಿಯನ್ ತನ್ನ ತೆಕ್ಕೆಗೆ ತೆಗೆದುಕೊಂಡಿದೆ ಎಂದು ತನಿಖಾ ಸಂಸ್ಥೆಗಳು ಆರೋಪಿಸಿವೆ.
ಸ್ವಾತಂತ್ರ ಹೋರಾಟಗಾರ ಜವಾಹರಲಾಲ್ ನೆಹರು ಸ್ಥಾಪಿಸಿದ್ದ ನ್ಯಾಷನಲ್ ಹೆರಾಲ್ಡ್ ಪತ್ರಿಕೆ 2008ರಲ್ಲಿ ಆರ್ಥಿಕ ಸಂಕಷ್ಟದಿಂದ ಪ್ರಕಟಣೆ ನಿಲ್ಲಿಸಿತ್ತು. ಆ ವೇಳೆ ಎಜೆಎಲ್ ಕಂಪನಿಯು 90 ಕೋಟಿ ರೂ. ಸಾಲದಲ್ಲಿತ್ತು. ಈ ಸಾಲವನ್ನು ತೀರಿಸಲು ಕಾಂಗ್ರೆಸ್ ಪಕ್ಷ ನೆರವು ನೀಡಿತ್ತು. ನಂತರ ಸಾಲ ತೀರಿಸಲಾಗದ ಕಾರಣ ಅದನ್ನು ಷೇರುಗಳನ್ನಾಗಿ ಪರಿವರ್ತಿಸಿ, ಯಂಗ್ ಇಂಡಿಯನ್ ಕಂಪನಿಗೆ ವರ್ಗಾಯಿಸಲಾಯಿತು. ಈ ಮೂಲಕ ಯಂಗ್ ಇಂಡಿಯನ್ ಕಂಪನಿಯು ಎಜೆಎಲ್ ಬಹುಪಾಲು ಷೇರುಗಳನ್ನು ತನ್ನದಾಗಿಸಿಕೊಂಡಿತು ಎಂದು ಆರೋಪಿಸಲಾಗಿದೆ.
ಸುಬ್ರಮಣಿಯನ್ ಸ್ವಾಮಿ ಅವರು ದಾಖಲಿಸಿದ್ದ ಖಾಸಗಿ ದೂರು ಆಧರಿಸಿ ಪಟಿಯಾಲಾ ಹೌಸ್ ನ್ಯಾಯಾಲಯದ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನೀಡಿದ ಆದೇಶದ ಮೇರೆಗೆ 2021 ರಲ್ಲಿ ಇ.ಡಿ ತನಿಖೆ ಆರಂಭವಾಗಿತ್ತು.