ಜಮೀನು ಹಂಚಿಕೆಯಲ್ಲಿ ಅಕ್ರಮ- ವಿಪಕ್ಷ ನಾಯಕ ಆರ್ ಅಶೋಕ್‌ಗೆ ಬಿಗ್ ರಿಲೀಫ್
ಬಗರ್ ಹುಕುಂ (Bagair Hukum) ಜಮೀನು ಹಂಚಿಕೆಯಲ್ಲಿ ಅಕ್ರಮ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆರ್.ಅಶೋಕ್ ಅವರಿಗೆ ಬಿಗ್ ರಿಲೀಫ್ ನೀಡಿದೆ.
ಜಮೀನು ಹಂಚಿಕೆಯಲ್ಲಿ ಅಕ್ರಮ ಎಸಗಿದ ಆರೋಪ ಎದುರಿಸುತ್ತಿರುವ ವಿಪಕ್ಷ ನಾಯಕ ಆರ್. ಅಶೋಕ್‌ಗೆ ಬಿಗ್ ರಿಲೀಫ್ ಸಿಕ್ಕಿದೆ. ಬಗರ್ ಹುಕುಂ (Bagair Hukum) ಜಮೀನು ಹಂಚಿಕೆಯಲ್ಲಿ ಅಕ್ರಮ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶವೊಂದು ಹೊರಡಿಸಿದ್ದು, ಅಶೋಕ್ ಅವರ ವಿರುದ್ಧ ಎಸಿಬಿ ದಾಖಲಿಸಿದ್ದ ಎಫ್‌ಐಆರ್ ಅನ್ನು ಕೋರ್ಟ್ ರದ್ದು ಪಡಿಸಿದೆ. ಆ ಮೂಲಕ ಸುಮಾರು ಏಳು ವರ್ಷಗಳ ಹಿಂದಿನ ಪ್ರಕರಣದಲ್ಲಿ ಅಶೋಕ್‌ಗೆ ರಿಲೀಫ್ ಸಿಕ್ಕಿದೆ.
ಕೋರ್ಟ್ ಆದೇಶದಲ್ಲೇನಿದೆ?
ನ್ಯಾ. ಸಂಜಯ್ ಕರೋಲ್ ನೇತೃತ್ವದ ದ್ವಿಸದಸ್ಯ ಪೀಠ ಇದೊಂದು ರಾಜಕೀಯ ಪ್ರೇರಿತ ಎಫ್‌ಐಆರ್ ಎಂದು ತೀರ್ಪಿನಲ್ಲಿ ಉಲ್ಲೇಖಿಸಿದೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ವಿಪುಲ್ ಎಂ. ಪಂಚೋಲಿ ಅವರ ಪೀಠವು, ಅಶೋಕ ವಿರುದ್ಧ ವಿಚಾರಣೆಗೆ ಪೂರ್ವಾನುಮತಿ ಪಡೆದಿರಲಿಲ್ಲ ಹಾಗೂ ದುರುದ್ದೇಶದಿಂದ ಪ್ರಕರಣ ದಾಖಲಿಸಲಾಗಿದೆ ಎಂದು ಅಭಿಪ್ರಾಯಪಟ್ಟಿದೆ.
'ಮೇಲ್ಮನವಿ ಸಲ್ಲಿಸಿದವರ ವಿರುದ್ಧದ ಕ್ರಮಗಳು ಮೇಲ್ನೋಟಕ್ಕೆ ರಾಜಕೀಯ ಪ್ರೇರಿತವಾಗಿವೆ ಮತ್ತು ಆ ಮೂಲಕ ದುರುದ್ದೇಶದಿಂದ ಕೂಡಿದೆ. ಮೇಲ್ಮನವಿ ಸಲ್ಲಿಸಿರುವ ಅಶೋಕ್ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.
ಅಕ್ರಮಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮೂರು ದೂರುಗಳನ್ನು ಸಲ್ಲಿಸಿದ್ದಾರೆ. ಮೊದಲ ಎರಡು ದೂರುಗಳಲ್ಲಿ ಸಾಕಷ್ಟು ಸಾಕ್ಷ್ಯಗಳ ಕೊರತೆ ಕಂಡುಬಂದಿದೆ ಅಶೋಕ ಅವರ ಮೇಲ್ಮನವಿಯನ್ನು ಅಂಗೀಕರಿಸಿದ ನ್ಯಾಯಪೀಠವು, ಎಫ್‌ಐಆರ್ ರದ್ದುಗೊಳಿಸಲು ನಿರಾಕರಿಸಿದ ಕರ್ನಾಟಕ ಹೈಕೋರ್ಟ್‌ನ 2018ರ ಸೆಪ್ಟೆಂಬರ್ ತೀರ್ಪನ್ನು ರದ್ದುಗೊಳಿಸಿದೆ.
ಏನಿದು ಪ್ರಕರಣ?
ಆರ್. ಅಶೋಕ್ ಬಗರ್ ಹುಕುಂ ಅಧ್ಯಕ್ಷರಾಗಿದ್ದ ವೇಳೆ ಅಕ್ರಮವಾಗಿ ಜಮೀನು ಹಂಚಿಕೆ ಮಾಡಿದ್ದರು ಎಂದು 2018 ರಲ್ಲಿ ಕಾಂಗ್ರೆಸ್ ಸರ್ಕಾರ ಆರೋಪಿಸಿತ್ತು. ಇದರೆ ಬೆನ್ನಲ್ಲೇ ಎಸಿಬಿಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಬಡ ರೈತರಿಗೆ ಮೀಸಲಿಟ್ಟಿದ್ದ ಜಮೀನನ್ನು ಅಶೋಕ ಅವರು ಬಗರ್‌ಹುಕುಂ ಸಮಿತಿಯ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಮೇಯರ್, ಮಾಜಿ ಮೇಯರ್ ಹಾಗೂ ಮಾಜಿ ಉಪ ಮೇಯರ್‌ಗಳಿಗೆ ಹಂಚಿಕೆ ಮಾಡಿದ್ದರು ಎಂದು ಕರ್ನಾಟಕ ಸರ್ಕಾರ ದೂರಿತ್ತು.
1998ರಿಂದ 2006ರವರೆಗೆ ಅಶೋಕ ಅವರು ಬೆಂಗಳೂರು ದಕ್ಷಿಣ ತಾಲ್ಲೂಕು ಬಗರ್ ಹುಕುಂ ಭೂ-ಸಕ್ರಮೀಕರಣ ಸಮಿತಿ ಅಧ್ಯಕ್ಷರಾಗಿದ್ದರು. ಈ ವೇಳೆ ಅವರು ಕಾನೂನುಬಾಹಿರವಾಗಿ ಅನರ್ಹ ಫಲಾನುಭವಿಗಳಿಗೆ ಜಮೀನು ಮಂಜೂರು ಮಾಡಿದ್ದಾರೆ' ಎಂದು ಆರೋಪಿಸಿ ಎ.ಆನಂದ ಎಂಬುವವರು ಎಸಿಬಿಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಎಸಿಬಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.
ಹೈಕೋರ್ಟ್ ಮೆಟ್ಟಿಲೇರಿದ್ದ ಅಶೋಕ್
ಜಮೀನು ಹಂಚಿಕೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಇದು ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ರಾಜಕೀಯ ದುರುದ್ದೇಶದಿಂದ ಪ್ರೇರಿತವಾಗಿದೆ. ಆದ್ದರಿಂದ ರದ್ದುಪಡಿಸಬೇಕು ಎಂದು ಕೋರಿ ಅಶೋಕ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಅವರ ಅರ್ಜಿಯನ್ನು ತಿರಸ್ಕರಿಸಿದ ಹೈಕೋರ್ಟ್, ತನಿಖೆ ಮುಂದುವರಿಸಲು ಎಸಿಬಿಗೆ ಸೂಚನೆ ನೀಡುತ್ತು. ಇದನ್ನು ಪ್ರಶ್ನಿಸಿ ಅಶೋಕ ಅವರು ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.
ಏನಿದು ಬಗರ್ ಹುಕುಂ ಯೋಜನೆ?
ಬಗರ್ ಹುಕುಂ ಎಂದರೆ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಸಾಗುವಳಿ ಮಾಡುತ್ತಿರುವ ಬಡವರಿಗೆ ಅಥವಾ ಭೂಮಿ ಇಲ್ಲದ ರೈತರಿಗೆ ಸಕ್ರಮಗೊಳಿಸಿ, ಆ ಭೂಮಿಯ ಹಕ್ಕುಪತ್ರ ನೀಡುವ ಕರ್ನಾಟಕ ಸರ್ಕಾರದ ಯೋಜನೆಯಾಗಿದೆ. ಈ ಯೋಜನೆ ಅಡಿ ಭೂಮಿಯ ಅರ್ಜಿಗಳನ್ನು ಸುಲಭವಾಗಿ ವಿಲೇವಾರಿ ಮಾಡಲು ಮತ್ತು ಕೃಷಿ ಚಟುವಟಿಕೆಗಳನ್ನು ಪರಿಶೀಲಿಸಲು ಸರ್ಕಾರ ಬಗರ್ ಹುಕುಂ ಅಪ್ಲಿಕೇಶನ್ ಅನ್ನೂ ಬಿಡುಗಡೆ ಮಾಡಿದೆ.