ಹೊಸ ವರ್ಷಾಚರಣೆಗೆ ಪಟಾಕಿ ಸಿಡಿಸುವಂತಿಲ್ಲ…ಸರ್ಕಾರದಿಂದ ಗೈಡ್‌ಲೈನ್ಸ್‌

ಈ ಬಾರಿ ಹೊಸ ವರ್ಷಾಚರಣೆಗೆ ರಾಜ್ಯ ಸರ್ಕಾರ ಕೆಲವೊಂದು ಕಠಿಣ ಕಾನೂನು ಜಾರಿಗೊಳಿಸಲು ಮುಂದಾಗಿದೆ. ಇದಕ್ಕಾಗಿಯೇ 19 ನಿಯಮಗಳ ಮಾರ್ಗಸೂಚಿಯೊಂದನ್ನು ಬಿಡುಗಡೆ ಮಾಡಿದೆ.

Update: 2025-12-17 02:19 GMT
ಹೊಸ ವರ್ಷಕ್ಕೆ ಹೊಸ ನಿಯಮ
Click the Play button to listen to article

ಹೊಸ ವರ್ಷಾಚರಣೆಗೆ ಕೌಂಟ್‌ಡೌನ್‌ ಶುರುವಾಗಿದೆ. ಆದರೆ ಈ ಬಾರಿ ಸಂಭ್ರಮಾಚರಣೆಗೆ ರಾಜ್ಯ ಸರ್ಕಾರ ಕೆಲವೊಂದು ಕಠಿಣ ಕಾನೂನು ಜಾರಿಗೊಳಿಸಲು ಮುಂದಾಗಿದೆ. ಇದಕ್ಕಾಗಿಯೇ 19 ನಿಯಮಗಳ ಮಾರ್ಗಸೂಚಿಯೊಂದನ್ನು ಬಿಡುಗಡೆ ಮಾಡಿದೆ. ಇತ್ತೀಚೆಗೆ ಗೋವಾದ ನೈಟ್‌ಕ್ಲಬ್‌ನಲ್ಲಿ ನಡೆದ ಅಗ್ನಿ ದುರಂತದಿಂದ ಸರ್ಕಾರ ಎಚ್ಚೆತ್ತುಕೊಂಡಿದ್ದು, ಮುಂಜಾಗೃತಾ ಕ್ರಮವಾಗಿ ಈ ನಿಯಮಗಳನ್ನು ಜಾರಿಗೊಳಿಸಿದೆ. ನಿಯಮದ ಪ್ರಕಾರ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಾರ್, ರೆಸ್ಟೋರೆಂಟ್, ಪಬ್‌ಗಳಲ್ಲಿ ಪಟಾಕಿ ಬ್ಯಾನ್ ಮಾಡಲಾಗಿದೆ. ಯಾವುದೇ ರೀತಿಯ ಪಟಾಕಿ ಸಿಡಿಸಿ ಹೊಸ ವರ್ಷ ಆಚರಿಸುವಂತಿಲ್ಲ.

ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ಅಂದರೆ ಸಾಕು ಸಂಭ್ರಮಾಚರಣೆ ಅದ್ದೂರಿಯಾಗಿಯೇ ಇರುತ್ತದೆ. ಭಾರೀ ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ. 31ರಂದು ಹೊಸ ವರ್ಷ ಬರಮಾಡಿಕೊಳ್ಳುವ ಸಂಭ್ರಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಾಗೃತಿ ವಹಿಸಲು ಈ ಗೈಡ್ ಲೈನ್ಸ್ ರಿಲೀಸ್ ಮಾಡಲಾಗಿದೆ.

ಮಾರ್ಗಸೂಚಿಯಲ್ಲಿರುವ 19 ಅಂಶಗಳು

1. ಹೊಸ ವರ್ಷದ ಕಾರ್ಯಕ್ರಮಗಳಿಗೆ ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಪಡೆಯುವುದು ಕಡ್ಡಾಯ.

2. ಹೊಸ ವರ್ಷಾಚರಣೆಗೆ ಸಮಯವನ್ನು ನಿಗದಿ ಪಡಿಸಬೇಕು.

3. ಕಡ್ಡಾಯವಾಗಿ ಧ್ವನಿವರ್ದಕ ಪರವಾನಿಗೆ ಪಡೆದುಕೊಳ್ಳಬೇಕು. ಅಲ್ಲದೇ ನಿಗದಿತ ಶಬ್ದದ ಮಿತಿ ಇರಬೇಕು.

4. ಸ್ಥಳಾವಕಾಶಕ್ಕೆ ತಕ್ಕಂತೆ ಟಿಕೆಟ್/ಪಾಸ್‌ಗಳನ್ನು ವಿತರಿಸಬೇಕು ಹಾಗೂ ನೆಲಮಹಡಿ, ಪಾರ್ಕಿಂಗ್ ಸ್ಥಳಗಳು, ಟೆರೆಸ್‌ನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವಂತಿಲ್ಲ.

5. ಕಾರ್ಯಕ್ರಮದ ಸ್ಥಳಗಳಲ್ಲಿ ಸ್ಕ್ರೀನ್‌ಗಳನ್ನು ಸಾರ್ವಜನಿಕರಿಗೆ ಕಾಣುವಂತೆ ಸ್ಕ್ರೀನಿಂಗ್ ಮಾಡಬಾರದು.

6. ಕಾರ್ಯಕ್ರಮಕ್ಕೆ ಬರುವವರ ತಪಾಸಣೆ ನಡೆಸುವುದು ಕಡ್ಡಾಯ. ಸಂಶಯಾಸ್ಪದ ವಸ್ತು/ ವ್ಯಕ್ತಿಗಳು ಕಂಡು ಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕು.

7. ಅಗ್ನಿ ನಂದಿಸುವ ವಸ್ತುಗಳನ್ನ ಅಳವಡಿಸಿಕೊಳ್ಳಬೇಕು, ನಿರ್ಗಮನ ದ್ವಾರಗಳು ದೊಡ್ಡದಾಗಿರಬೇಕು.

8. ಕಾರ್ಯಕ್ರಮದ ನಡೆಯುವ ಪ್ರತಿ ಜಾಗದಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿ 30 ದಿನಗಳವರೆಗೆ ಸ್ಟೋರೆಜ್ ಮಾಡಬೇಕು.

9. ಮಾದಕ ವಸ್ತುಗಳ ಬಳಕೆ‌ ಕಂಡು ಬಂದರೆ ತಕ್ಷಣವೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬೇಕು. ಪೊಲೀಸರೇ ದಾಳಿ ನಡೆಸಿದಾಗ ಸಿಕ್ಕಿಬಿದ್ದರೆ ಕಾರ್ಯಕ್ರಮದ ಕಟ್ಟಡದ ಮಾಲೀಕರು/ಮ್ಯಾನೇಜರ್‌ ವಿರುದ್ಧ ಕೇಸ್.

10. ಸಾರ್ವಜನಿಕರ ವಾಹನಗಳಿಗೆ ತಮ್ಮ ಪಾರ್ಕಿಂಗ್ ಸ್ಥಳದಲ್ಲಿಯೇ ವ್ಯವಸ್ಥೆ ಮಾಡಿಸಬೇಕು.

11. ಹೊಸ ವರ್ಷಾಚರಣೆಯ ಕಾರ್ಯಕ್ರಮಗಳಿಗೆ ಸೆಲೆಬ್ರಿಟಿಗಳು, ಡಿಜೆಗಳು, ನಟ ನಟಿಯರನ್ನ ಆಹ್ವಾನಿಸಿದ್ದಲ್ಲಿ ಅವರ ಮಾಹಿತಿಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ನೀಡಬೇಕು.

12. ಪಾರ್ಕಿಂಗ್ ಸ್ಥಳ ಮತ್ತು ಮಹಿಳೆಯರಿರುವ ಸ್ಥಳಗಳ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಖಾಸಗಿ ಭದ್ರತಾ ಸಿಬ್ಬಂದಿಗಳನ್ನ ನೇಮಿಸಬೇಕು.

13. ಸೆಕ್ಯೂರಿಟಿ ಸಿಬ್ಬಂದಿ ಹಾಗೂ ಬೌನ್ಸರ್‌ಗಳನ್ನು ನಿಯೋಜಿಸಿಕೊಳ್ಳುವ ಏಜೆನ್ಸಿಗಳು ‘PSARA’ ದಲ್ಲಿ ನೊಂದಣಿ ಮಾಡಬೇಕು.

14. ಪಾರ್ಟಿ ವೇಳೆ ಇರುವ ಕೆಲಸಗಾರರ ಮಾಹಿತಿಯನ್ನ ಧೃಡೀಕೃತ ಐ.ಡಿ ಕಾರ್ಡ್‌ನೊಂದಿಗೆ ನೀಡಬೇಕು.

15. ಲೈಸೆನ್ಸ್ ಇಲ್ಲದ ಔಟ್ ಡೋರ್ ಸ್ಥಳಗಳಲ್ಲಿ ಮದ್ಯ ಸರಬರಾಜಿಗೆ ಅವಕಾಶವಿಲ್ಲ.

16. ಹೋಟೆಲ್‌ಗಳ ರೂಮ್‌ಗಳಲ್ಲಿ ಗುಂಪು ಸೇರಿ ನಿಯಮ ಬಾಹಿರವಾಗಿ ಖಾಸಗಿ ಪಾರ್ಟಿ ನಡೆಸಲು ಅವಕಾಶ ನೀಡಬಾರದು.

17. ಕಾರ್ಯಕ್ರಮದ ಸ್ಥಳದಲ್ಲಿ ಗಲಾಟೆ ನಡೆದಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು.

18. ಕಾರ್ಯಕ್ರಮದ ವೇಳೆ ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ.

19. ಯಾವುದೇ ಅಹಿತಕರವಾದ ಘಟನೆಗಳು ನಡೆಯದಂತೆ ಕ್ರಮಗಳನ್ನು ಕೈಗೊಳ್ಳಬೇಕು.

ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ

ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯುವ ಉದ್ದೇಶದಿಂದ ಈ ನಿಯಮಗಳನ್ನು ಜಾರಿಗೊಳಿಸಲಾಗುತ್ತಿದೆ. ಈ ನಿಯಮಗಳು ಉಲ್ಲಂಘನೆಯಾದಲ್ಲಿ ಕಠಿಣ ಕ್ರಮ ಜರುಗಿಸುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

Tags:    

Similar News