ವಿದ್ಯುತ್ ಬಿಲ್ ಪಾವತಿಗೆ ಮೀನು ಸಾಕಾಣಿಕೆ ಆದಾಯ ಬಳಕೆ: ಡಿಸಿಎಂ ಡಿ.ಕೆ. ಶಿವಕುಮಾರ್

ಪಂಪ್ ಮಾಡಿ ನೀರು ತುಂಬಿಸುವ ಕೆರೆಗಳಲ್ಲಿ ಮೀನು ಮರಿಗಳನ್ನು ಬಿಟ್ಟು, ಅವುಗಳನ್ನು ಬೆಳೆಸಿ ಹರಾಜು ಹಾಕುವ ಮೂಲಕ ಆದಾಯ ಗಳಿಸುವುದು ಸರ್ಕಾರದ ಉದ್ದೇಶವಾಗಿದೆ.

Update: 2025-12-17 04:36 GMT

ಡಿಸಿಎಂ ಡಿ.ಕೆ. ಶಿವಕುಮಾರ್

Click the Play button to listen to article

ರಾಜ್ಯದಲ್ಲಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಮತ್ತು ಕೆರೆಗಳಿಗೆ ಜೀವ ತುಂಬಲು ಸರ್ಕಾರ ಬೃಹತ್ ಯೋಜನೆಗಳನ್ನು ಹಮ್ಮಿಕೊಂಡಿದ್ದು, ವಿವಿಧ ರೀತಿಯಲ್ಲಿ ಕೆರೆಗಳಿಗೆ ನೀರು ತುಂಬಿಸಲು ಸುಮಾರು 40 ಸಾವಿರ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿದೆ. ಈ ಪೈಕಿ ಕೇವಲ ನೀರನ್ನು ಪಂಪ್ ಮಾಡಲು ಇಂಧನ ಇಲಾಖೆಯೊಂದೇ ಸುಮಾರು 3 ಸಾವಿರ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮಂಗಳವಾರ ನಡೆದ ಕೆರೆ ಸಂರಕ್ಷಣೆ ಜಾಗೃತಿ ಮತ್ತು "ನೀರಿದ್ದರೆ ನಾಳೆ" ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ರಾಜ್ಯದ ಜಲ ಸಂಪನ್ಮೂಲ ರಕ್ಷಣೆ, ವಿದ್ಯುತ್ ವೆಚ್ಚದ ನಿರ್ವಹಣೆ ಹಾಗೂ ಕೇಂದ್ರ ಸರ್ಕಾರದ ನಿಲುವಿನ ಕುರಿತು ಡಿಸಿಎಂ ಸವಿವರವಾಗಿ ಮಾತನಾಡಿದರು.

ವಿದ್ಯುತ್ ಬಿಲ್ ಪಾವತಿಗೆ ಮೀನುಗಾರಿಕೆ ಆದಾಯದ ಚಿಂತನೆ

ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳಿಗೆ ತಗಲುವ ವಿದ್ಯುತ್ ವೆಚ್ಚ ಮತ್ತು ಬಿಲ್ ಪಾವತಿ ಸರ್ಕಾರದ ಮುಂದಿರುವ ದೊಡ್ಡ ಸವಾಲಾಗಿದೆ. ವಿದ್ಯುತ್ ಸರಬರಾಜು ಮಾಡಿದ ಕಂಪನಿಗಳಿಗೆ ಸಕಾಲದಲ್ಲಿ ಬಿಲ್ ಕಟ್ಟದೇ ಇದ್ದರೆ, ಕಂಪನಿಗಳು ಸುಮಾರು ಶೇ.15 ರಷ್ಟು ಬಡ್ಡಿ ಸೇರಿಸಿ ನೀಡುತ್ತವೆ. ಈ ವಿಚಾರದ ಬಗ್ಗೆ ಸಿ.ಪಿ. ಯೋಗೇಶ್ವರ್ ಸೇರಿದಂತೆ ಹಲವು ಶಾಸಕರು ವಿಧಾನಸಭೆಯಲ್ಲಿ ಪ್ರಸ್ತಾಪ ಮುಂದಿಟ್ಟಿದ್ದಾರೆ ಮತ್ತು ಸರ್ಕಾರ ಉತ್ತರ ನೀಡಬೇಕಿದೆ ಎಂದು ಶಿವಕುಮಾರ್ ಹೇಳಿದರು.

ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಹೊಸ ಆಲೋಚನೆಯೊಂದನ್ನು ನಡೆಸಿದೆ. ಪಂಪ್ ಮಾಡಿ ನೀರು ತುಂಬಿಸುವ ಕೆರೆಗಳಲ್ಲಿ ಮೀನು ಮರಿಗಳನ್ನು ಬಿಟ್ಟು, ಅವುಗಳನ್ನು ಬೆಳೆಸಿ ಹರಾಜು ಹಾಕುವ ಮೂಲಕ ಆದಾಯ ಗಳಿಸುವುದು ಸರ್ಕಾರದ ಉದ್ದೇಶವಾಗಿದೆ. ಹೀಗೆ ಬರುವ ಆದಾಯದಿಂದ ವಿದ್ಯುತ್ ಬಿಲ್ ಪಾವತಿ ಮಾಡುವುದು ಹಾಗೂ ಕೆರೆಗಳ ನಿರ್ವಹಣೆ ಮಾಡುವ ಚಿಂತನೆ ಇದೆ ಎಂದು ಡಿಸಿಎಂ ವಿವರಿಸಿದರು.

ಉಚಿತ ವಿದ್ಯುತ್ ಹೊರೆ ಮತ್ತು ಅಂತರ್ಜಲದ ಆತಂಕ

ರಾಜ್ಯದಲ್ಲಿ ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಲು ಸರ್ಕಾರ ಸುಮಾರು 20 ಸಾವಿರ ಕೋಟಿ ಹಣವನ್ನು ಖರ್ಚು ಮಾಡುತ್ತಿದೆ. ಆದರೆ ಎಷ್ಟು ದಿನ ಹೀಗೆ ಸಹಾಯಧನ ನೀಡಲು ಸಾಧ್ಯ ಎಂಬ ಪ್ರಶ್ನೆಯೂ ಇದೆ. ರೈತರು 10 ಹೆಚ್‌ಪಿ ಮೋಟರ್ ಹಾಕಿ ನೀರು ತೆಗೆಯುತ್ತಿದ್ದು, ಸುಮಾರು 20 ಕಿಲೋಮೀಟರ್ ದೂರಕ್ಕೂ ನೀರನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ 30 ಲಕ್ಷ ಬೋರ್ ವೆಲ್‌ಗಳಿದ್ದು, ಇದರಿಂದ ಅಂತರ್ಜಲಕ್ಕೆ ಭಾರೀ ಹೊಡೆತ ಬೀಳುತ್ತಿದೆ. ಈ ಪರಿಸ್ಥಿತಿ ತಪ್ಪಬೇಕಾದರೆ ಕೆರೆಗಳಿಗೆ ನೀರು ತುಂಬಿಸಿ ರಕ್ಷಣೆ ಮಾಡುವುದೊಂದೇ ದಾರಿ ಎಂದು ಅವರು ಅಭಿಪ್ರಾಯಪಟ್ಟರು.

ಕೆರೆ ಬಳಕೆದಾರರ ಸಂಘಗಳಿಗೆ ಕಾಯಕಲ್ಪ

ಹಿಂದೆ ಎಚ್.ಕೆ. ಪಾಟೀಲ್ ಅವರು ನೀರಾವರಿ ಸಚಿವರಾಗಿದ್ದಾಗ ಕೆರೆ ನೀರು ಬಳಕೆದಾರರ ಸಂಘಗಳಿಗೆ ಹೊಸ ರೂಪ ನೀಡಿದ್ದರು, ಆದರೆ ಮಧ್ಯದಲ್ಲಿ ಅದು ನಿಂತು ಹೋಗಿತ್ತು. ಇದೀಗ ತಾನು ಹಾಗೂ ಸಚಿವ ಬೋಸರಾಜು ಅವರು ಸೇರಿ ಅದಕ್ಕೆ ಹೊಸ ರೂಪ ನೀಡಿದ್ದೇವೆ ಎಂದು ಶಿವಕುಮಾರ್ ತಿಳಿಸಿದರು. ಕೆರೆ ನೀರು ಬಳಕೆದಾರರ ಸಂಘಗಳಿಗೆ ಶಕ್ತಿ ತುಂಬುವ ಮತ್ತು ಆರ್ಥಿಕ ಸಹಾಯ ಮಾಡುವ ಅಗತ್ಯವಿದೆ. ಈಗಾಗಲೇ ನರೇಗಾ ಹಾಗೂ ಇತರೇ ಯೋಜನೆಗಳ ಅಡಿ ಕೆರೆ ಹೂಳು ತೆಗೆದು, ಒತ್ತುವರಿ ತೆರವು ಮಾಡಲು ಜಿಲ್ಲಾಡಳಿತ ಮತ್ತು ಸಣ್ಣ ನೀರಾವರಿ ಇಲಾಖೆ ಪ್ರಯತ್ನಿಸಿದೆ. ಈ ಸಂಘಗಳು ಯಾವುದೇ ಕೆರೆಗಳಾದರೂ ಅವು ನಮ್ಮ ಕೆರೆಗಳು ಎಂಬ ಭಾವನೆಯಿಂದ ರಕ್ಷಣೆ ಮಾಡಬೇಕು. ಬಳಕೆದಾರರ ಸಂಘ ನೀಡಿರುವ ಮನವಿಗಳನ್ನು ಪರಿಗಣಿಸಿ, ಅನುದಾನ ಹೆಚ್ಚಿಸುವ ಬಗ್ಗೆಯೂ ಸರ್ಕಾರ ಚಿಂತಿಸಲಿದೆ ಎಂದು ಭರವಸೆ ನೀಡಿದರು.

ಸೌರಶಕ್ತಿ ಯೋಜನೆ ಮತ್ತು ನೀರಿನ ಮಹತ್ವ

ಕೆರೆ ನೀರಿನ ಮೇಲೆ ತೇಲುವ ಸೋಲಾರ್ ಪ್ಲಾಂಟ್ (Floating Solar) ಅಳವಡಿಸುವ ಆಲೋಚನೆಯನ್ನು ಸಚಿವ ಬೋಸರಾಜು ಮಾಡಿದ್ದಾರೆ. ತಾನು ಕೂಡ ಇದನ್ನು ಪ್ರಯತ್ನ ನಡೆಸಿದ್ದೆ, ಆದರೆ ಅದು ಸುಲಭದ ಕೆಲಸವಲ್ಲ. ಸಣ್ಣ ನೀರಾವರಿ, ಗ್ರಾಮೀಣಾಭಿವೃದ್ಧಿ ಮತ್ತು ಜಲಸಂಪನ್ಮೂಲ ಇಲಾಖೆಗೆ ಸೇರಿದ ಕೆರೆಗಳನ್ನು ನಾವೆಲ್ಲರೂ ಸೇರಿ ಸಮಗ್ರವಾಗಿ ಉಳಿಸುವ ಆಲೋಚನೆ ಮಾಡುತ್ತಿದ್ದೇವೆ ಎಂದರು. ಕಾಲುವೆಗಳ ಕೊನೆ ಭಾಗಕ್ಕೆ ನೀರು ತಲುಪುತ್ತಿಲ್ಲವಾದ್ದರಿಂದ ಅದಕ್ಕೆ ಹೊಸ ಕಾನೂನು ತಂದಿದ್ದೇವೆ. ಎತ್ತಿನಹೊಳೆ ಯೋಜನೆ ಮೂಲಕ ಬಯಲುಸೀಮೆಗೆ ನೀರು ತರಲಾಗುತ್ತಿದ್ದು, ಇದಕ್ಕೆ ಈಗಾಗಲೇ 20 ಸಾವಿರ ಕೋಟಿ ಖರ್ಚಾಗಿದೆ. ಕೋಲಾರ, ಚಿಕ್ಕಬಳ್ಳಾಪುರ ಭಾಗದವರಿಗೆ ನೀರಿನ ಮಹತ್ವ ತಿಳಿದಿದೆ. ರಾಜ್ಯದ 48,848 ಕೆರೆಗಳನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರದ ಇಕ್ಕಳದಲ್ಲಿ ರಾಜ್ಯ

ನೀರಾವರಿ ಯೋಜನೆಗಳ ವಿಚಾರದಲ್ಲಿ ರಾಜ್ಯವು ಕೇಂದ್ರ ಸರ್ಕಾರದ ಇಕ್ಕಳದಲ್ಲಿ ಸಿಲುಕಿಕೊಂಡಿದೆ ಎಂದು ಡಿಸಿಎಂ ಅಸಮಾಧಾನ ವ್ಯಕ್ತಪಡಿಸಿದರು. ಕಾವೇರಿ, ಮಹದಾಯಿ, ತುಂಗಭದ್ರಾ, ಕೃಷ್ಣಾ ಹೀಗೆ ಹಲವಾರು ಹೋರಾಟಗಳನ್ನು ರಾಜ್ಯ ನಡೆಸುತ್ತಿದೆ. ಆದರೆ ಭದ್ರಾ ಮೇಲ್ದಂಡೆ, ಕೃಷ್ಣಾ ಮತ್ತು ಮಹದಾಯಿ ಯೋಜನೆಯಡಿ ಕೇಂದ್ರದ ಸಹಕಾರ ಸಿಗುತ್ತಿಲ್ಲ. ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳದ ಬಗ್ಗೆ ಕೇಂದ್ರ ಅಧಿಸೂಚನೆ ಹೊರಡಿಸಬೇಕು, ಮಹದಾಯಿಗೆ ಅರಣ್ಯ ಇಲಾಖೆ ಒಪ್ಪಿಗೆ ನೀಡಬೇಕು ಹಾಗೂ ಭದ್ರಾ ಮೇಲ್ದಂಡೆಗೆ ಘೋಷಿತ ಹಣವನ್ನು ನೀಡಬೇಕಿದೆ ಎಂದು ಒತ್ತಾಯಿಸಿದರು.

ಇನ್ನು ತುಂಗಭದ್ರಾ ಯೋಜನೆಯಡಿ ರಾಜ್ಯದ ಪಾಲಿನ ನೀರನ್ನು ಬಳಸಿಕೊಳ್ಳಲು ಸಮತೋಲಿತ ಜಲಾಶಯ ನಿರ್ಮಾಣ ಅಥವಾ ಪಂಪ್ ಮಾಡುವ ಅಗತ್ಯವಿದೆ. ಆದರೆ ಇದಕ್ಕೆ ಆಂಧ್ರ ಮತ್ತು ತೆಲಂಗಾಣದ ಒಪ್ಪಿಗೆ ಸಿಗಬೇಕಿದೆ. ಅವರಿಗೆ ನೀರು ಸಿಗುತ್ತಿರುವುದರಿಂದ ಅವರು ಸುಮ್ಮನಿದ್ದಾರೆ ಎಂದು ವಿವರಿಸಿದರು. ತಾವು ನೀರಿನ ವಿವಾದಗಳ ಕುರಿತು 'ನೀರಿನ ಹೆಜ್ಜೆ' ಪುಸ್ತಕ ಬರೆದಿದ್ದು, ಇಂದು ನೀರು ಮತ್ತು ಹಾಲಿನ ಬೆಲೆ ಒಂದೇ ಮಟ್ಟಕ್ಕೆ ಬಂದಿದೆ. ನಮಗೆ ನೀರೇ ಸರ್ವಸ್ವ ಎಂದು ಡಿ.ಕೆ. ಶಿವಕುಮಾರ್ ಮಾತು ಮುಗಿಸಿದರು.

Tags:    

Similar News