ಆರೋಗ್ಯ ತುರ್ತುಪರಿಸ್ಥಿತಿ; ದೆಹಲಿ ವಾಯು ಮಾಲಿನ್ಯದ ಹಾದಿಯಲ್ಲಿ ರಾಜಧಾನಿ ಬೆಂಗಳೂರು
ಧೂಳು ತುಂಬಿದ ರಸ್ತೆಗಳು ಮತ್ತು ವಾಹನಗಳ ಸಂಖ್ಯೆಯಲ್ಲಿನ ವಿಪರೀತ ಹೆಚ್ಚಳದಿಂದಾಗಿ, ಬೆಂಗಳೂರಿನ ಹದಗೆಡುತ್ತಿರುವ ವಾಯು ಮಾಲಿನ್ಯವನ್ನು ಆರೋಗ್ಯ ತುರ್ತುಸ್ಥಿತಿ ಮತ್ತು ಆಡಳಿತಾತ್ಮಕ ಸವಾಲು ಎಂದು ಹೇಳಲಾಗಿದೆ.

ಬೆಂಗಳೂರಿನಲ್ಲಿ ಗಾಳಿಯ ಗುಣಮಟ್ಟ ಕುಸಿಯುತ್ತಿದೆ.
ಒಂದೆಡೆ ಐಟಿ ಕ್ಷೇತ್ರದ ಬೆಳವಣಿಗೆ, ಮತ್ತೊಂದೆಡೆ ಉಸಿರಾಡಲು ಕಷ್ಟವಾಗುತ್ತಿರುವ ಕಲುಷಿತ ಗಾಳಿ. ಎಂದಿನಂತೆ ಸುಖಕರ ಹವಾಮಾನಕ್ಕೆ ಹೆಸರುವಾಸಿಯಾದ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಾಯು ಮಾಲಿನ್ಯದ ಬಿಕ್ಕಟ್ಟು ಈಗ ಆತಂಕಕಾರಿ ಮಟ್ಟಕ್ಕೆ ತಲುಪಿದೆ. ರಾಜ್ಯ ಸರ್ಕಾರ ಈಗಾಲೇ ಎಚ್ಚೆತ್ತುಕೊಳ್ಳದಿದ್ದರೆ, ದೆಹಲಿಯಂತಹ ಅಪಾಯಕಾರಿ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂದು ತಜ್ಞರ ಹಾಗೂ ಪರಿಸರ ಪ್ರೇಮಿಗಳು ಎಚ್ಚರಿಕೆ!
ಧೂಳು ತುಂಬಿದ ರಸ್ತೆಗಳು ಮತ್ತು ವಾಹನಗಳ ಸಂಖ್ಯೆಯಲ್ಲಿನ ವಿಪರೀತ ಹೆಚ್ಚಳದಿಂದಾಗಿ, ಬೆಂಗಳೂರಿನ ಹದಗೆಡುತ್ತಿರುವ ವಾಯು ಮಾಲಿನ್ಯವನ್ನು ಆರೋಗ್ಯ ತುರ್ತುಸ್ಥಿತಿ ಮತ್ತು ಆಡಳಿತಾತ್ಮಕ ಸವಾಲು ಎರಡೂ ಎಂದು ಗುರುತಿಸಲಾಗಿದೆ. ಈ ನಿಟ್ಟಿನಲ್ಲಿ ತುರ್ತು ಮತ್ತು ಸಮನ್ವಯದ ಕ್ರಮಗಳ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನೇ ದಿನೇ ಹೆಚ್ಚುತ್ತಿರುವ ವಾಹನ ದಟ್ಟಣೆ ಮತ್ತು ಅದರಿಂದ ಉಂಟಾಗುತ್ತಿರುವ ವಾಯು ಮಾಲಿನ್ಯದ ಕುರಿತು ನಾಗರಿಕ ವಲಯದಲ್ಲಿ ತೀವ್ರ ಚರ್ಚೆಗಳು ನಡೆಯುತ್ತಿವೆ. ವಾಹನಗಳ ಸಂಖ್ಯೆ ಬಹುತೇಕ ಜನಸಂಖ್ಯೆಗೆ ಸಮನಾಗಿರುವುದು ಮತ್ತು ನಗರದಲ್ಲಿ ಹೆಚ್ಚುತ್ತಿರುವ ನಿರ್ಮಾಣ ಚಟುವಟಿಕೆಗಳು ಈ ಸಮಸ್ಯೆಗೆ ಪ್ರಮುಖ ಕಾರಣಗಳಾಗಿವೆ. ಖಾಸಗಿ ವಾಹನಗಳ ಬಳಕೆಯನ್ನು ಕಡಿಮೆಗೊಳಿಸಿ, ಮಾಲಿನ್ಯವನ್ನು ನಿಯಂತ್ರಿಸಬೇಕಾದರೆ ಸರ್ಕಾರವು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂಬುವುದು ತಜ್ಞರ ಅಭಿಪ್ರಾಯ.
ಬಿಎಂಟಿಸಿ ಬಸ್‌ಗಳ ಪ್ರಾಮುಖ್ಯತೆ
ಈ ಕುರಿತು ʻದ ಫೆಡರಲ್ ಕರ್ನಾಟಕʼದೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಪರಿಸರ ತಜ್ಞ, ಸಂಶೋಧಕ ಸುಧೀರ್ ಹೆಚ್.ಎಸ್. ಅವರು, ಸಾರ್ವಜನಿಕ ಸಾರಿಗೆಯನ್ನು ಸುಧಾರಿಸಲು ಹಲವು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಮೆಟ್ರೋಗೆ ಹೋಲಿಸಿದರೆ, ಸಾಮಾನ್ಯ ಮತ್ತು ಮಧ್ಯಮ ವರ್ಗದ ಜನರಿಗೆ ಬಿಎಂಟಿಸಿ ಬಸ್‌ಗಳು ಹೆಚ್ಚು ಅವಶ್ಯಕವಾಗಿವೆ. ಸದ್ಯಕ್ಕೆ, ಮೆಟ್ರೋ ಸಂಪರ್ಕವು ನಗರದ ಎಲ್ಲೆಡೆ ತಲುಪಿಲ್ಲ ಮತ್ತು ಅದರ ನಿರ್ಮಾಣ ಹಂತಗಳು ಪೂರ್ಣಗೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಬಿಎಂಟಿಸಿ ಬಸ್ ಮಾರ್ಗಗಳನ್ನು ತರ್ಕಬದ್ಧಗೊಳಿಸಬೇಕು. ಕೆ.ಆರ್. ಮಾರುಕಟ್ಟೆಗೆ ಹೋಗುವಂತಹ ಹಳೆಯ ಅಥವಾ 'ಲೆಗಸಿ' ಮಾರ್ಗಗಳನ್ನು ಪರಿಷ್ಕರಿಸಬೇಕು. ಪ್ರಯಾಣವನ್ನು ಹೆಚ್ಚು ಪರಿಣಾಮಕಾರಿಯಾಗಿಸಲು, ಪ್ರಮುಖ ಸ್ಥಳಗಳನ್ನು ನೇರವಾಗಿ ಸಂಪರ್ಕಿಸುವಂತಹ ಪಾಯಿಂಟ್-ಟು-ಪಾಯಿಂಟ್ ಸಂಪರ್ಕದ ಹೊಸ ಮಾರ್ಗಗಳನ್ನು ಸೃಷ್ಟಿಸಬೇಕು. ಪ್ರಸ್ತುತವಿರುವ ಬಸ್‌ಗಳನ್ನು ಮರುಸಂಘಟಿಸಿ, ಮಾರ್ಗಗಳನ್ನು ಪರಿಷ್ಕರಿಸಿದರೆ ಪ್ರಯಾಣದ ಸಮಯವನ್ನು ಕಡಿಮೆ ಮಾಡಬಹುದು ಮತ್ತು ದಕ್ಷತೆಯನ್ನು ಹೆಚ್ಚಿಸಬಹುದು ಇದರಿಂದ ವಾಯುಮಾಲಿನ್ಯ ತಡೆಗಟ್ಟಬಹುದು ಎಂದು ಅವರು ಅಭಿಪ್ರಾಯಟ್ಟರು.
ಖಾಸಗಿ ವಾಹನ ಬಳಕೆಗೆ ನಿಯಂತ್ರಣ ಅಗತ್ಯ
ಖಾಸಗಿ ವಾಹನಗಳ ಬಳಕೆಗೆ ನಿಯಂತ್ರಣ ಹೇರುವುದು ಅವಶ್ಯಕ. ಯಾವುದೇ ನಾಗರಿಕರು ಅನಾವಶ್ಯಕವಾಗಿ ದುಬಾರಿ ಇಂಧನ ಖರ್ಚು ಮಾಡಿ, ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳಲು ಬಯಸುವುದಿಲ್ಲ. ಉತ್ತಮ ಸಾರ್ವಜನಿಕ ಸಾರಿಗೆ ಇದ್ದರೆ, ಜನರು ಖಂಡಿತವಾಗಿಯೂ ಅದನ್ನು ಬಳಸಲು ಮನಸ್ಸು ಮಾಡುತ್ತಾರೆ. ಖಾಸಗಿ ವಾಹನಗಳ ಬಳಕೆಯನ್ನು ಕಡಿಮೆ ಮಾಡಲು, ಅಂತರರಾಷ್ಟ್ರೀಯ ನಗರಗಳಾದ ಲಂಡನ್ ಮತ್ತು ಸಿಂಗಾಪುರದ ಮಾದರಿಯಲ್ಲಿ ದಟ್ಟಣೆ ಶುಲ್ಕ ಮತ್ತು ಹೆಚ್ಚುವರಿ ತೆರಿಗೆ ವಿಧಿಸುವ ಬಗ್ಗೆ ಸರ್ಕಾರ ಚಿಂತಿಸಬೇಕು ಎಂದು ಸುಧೀರ್ ಸಲಹೆ ನೀಡಿದರು.
ಸಾರ್ವಜನಿಕ ಸಾರಿಗೆ ದಕ್ಷ ಮತ್ತು ಸುಲಭವಾಗಿದ್ದರೆ, ದ್ವಿಚಕ್ರ ವಾಹನದಲ್ಲಿ ಬೇಗ ಹೋಗಬೇಕಾದ ಅನಿವಾರ್ಯತೆ ಇರುವುದಿಲ್ಲ. ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣದ ಸಮಯವನ್ನು ಕಡಿಮೆ ಮಾಡಿದರೆ, ಜನರು ಸ್ವಯಂಪ್ರೇರಿತರಾಗಿ ಅದನ್ನು ಬಳಸುತ್ತಾರೆ ಎಂದು ಅವರು ಅಭಿಪ್ರಾಯಪಟ್ಟರು.
ಬೆಂಗಳೂರಿನಲ್ಲಿ ವಾಹನ ದಟ್ಟಣೆ ಮತ್ತು ಮಾಲಿನ್ಯ ಸಮಸ್ಯೆ ಹೆಚ್ಚಾಗಲು ಸ್ವಂತ ಬಳಕೆಯ ವಾಹನಗಳ ಹೆಚ್ಚಳವೇ ಮೂಲ ಕಾರಣ. ಸಾರ್ವಜನಿಕ ಸಾರಿಗೆ ಸುಲಭವಾಗಿ ಲಭ್ಯವಿಲ್ಲದ ಕಾರಣ ಜನರು ದ್ವಿಚಕ್ರ ವಾಹನ ಮತ್ತು ಕಾರುಗಳನ್ನು ಅವಲಂಬಿಸುವುದು ಅನಿವಾರ್ಯವಾಗಿದೆ. ಸರ್ಕಾರವು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಸಾರ್ವಜನಿಕ ಸಾರಿಗೆಗೆ ಹೆಚ್ಚಿನ ಮಹತ್ವ ನೀಡಬೇಕು. ಬಸ್ ಮತ್ತು ಮೆಟ್ರೋ ವ್ಯವಸ್ಥೆಗಳು ಚೆನ್ನಾಗಿದ್ದಲ್ಲಿ ನಗರದ ಸಂಚಾರ ದಟ್ಟಣೆಯನ್ನು ಸುಲಭವಾಗಿ ನಿಭಾಯಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸಿ, ಬಿಎಂಟಿಸಿ ಬಸ್‌ಗಳ ಮೇಲೆ ಹೆಚ್ಚು ಗಮನ ಹರಿಸಿದರೆ ಮಾಲಿನ್ಯ ಮತ್ತು ದಟ್ಟಣೆಯನ್ನು ಕಡಿಮೆ ಮಾಡಬಹುದು. ಈ ಬಗ್ಗೆ ಸರ್ಕಾರವು ಸೂಕ್ತ ಯೋಜನೆ ರೂಪಿಸಿ, ಕ್ರಮ ಕೈಗೊಳ್ಳಬೇಕು ಎಂದು ಸಂಶೋಧಕ ಸುಧೀರ್ ಅವರು ಒತ್ತಿ ಹೇಳಿದ್ದಾರೆ.
ಬೆಂಗಳೂರಿನ ಗಾಳಿ ಗುಣಮಟ್ಟ Vs ದೆಹಲಿ, ಮುಂಬೈ, ಚೆನ್ನೈ
ದೆಹಲಿಯು ಈ ಎಲ್ಲ ನಗರಗಳಲ್ಲಿ ಅತ್ಯಂತ ಕಲುಷಿತವಾಗಿದೆ. ಅದರಲ್ಲೂ ಚಳಿಗಾಲದಲ್ಲಿ ಹೆಚ್ಚಾಗಿ 'ತೀವ್ರ' ಮತ್ತು 'ಅಪಾಯಕಾರಿ' ವರ್ಗಗಳಲ್ಲಿ ದಾಖಲಾಗುತ್ತದೆ. ಬೆಂಗಳೂರು, ಸಮುದ್ರಕ್ಕೆ ಹತ್ತಿರದಲ್ಲಿಲ್ಲದಿದ್ದರೂ, ಅದರ ಹವಾಮಾನ ಮತ್ತು ಭೂಗೋಳದಿಂದಾಗಿ ದೆಹಲಿಗಿಂತ ಉತ್ತಮ ಗಾಳಿಯನ್ನು ಹೊಂದಿದೆ. ಆದರೆ, ಹೆಚ್ಚಿದ ವಾಹನ ದಟ್ಟಣೆ ಮತ್ತು ನಿರ್ಮಾಣ ಕಾರ್ಯಗಳಿಂದಾಗಿ ಇಲ್ಲಿನ AQI ಸಹ ಹೆಚ್ಚಾಗಿ 'ಮಧ್ಯಮ' ಅಥವಾ 'ಅನಾರೋಗ್ಯಕರ' ಮಟ್ಟಕ್ಕೆ ತಲುಪುತ್ತಿದೆ.
ಮುಂಬೈ ಮತ್ತು ಚೆನ್ನೈ ಇವು ಕರಾವಳಿಯ ನಗರಗಳಾಗಿರುವುದರಿಂದ, ಸಮುದ್ರದ ಗಾಳಿಯು ಮಾಲಿನ್ಯಕಾರಕಗಳನ್ನು ಬೇಗನೆ ಚದುರಿಸಲು ಸಹಾಯ ಮಾಡುತ್ತದೆ. ಹಾಗಿದ್ದರೂ, ಅವುಗಳ AQI ಸಹ ಆಗಾಗ್ಗೆ ಮಧ್ಯಮ ಅಥವಾ ಅನಾರೋಗ್ಯಕರ ಮಟ್ಟದಲ್ಲಿಯೇ ಇರುತ್ತದೆ.
ಬೆಂಗಳೂರಿನ ವಾಯು ಮಾಲಿನ್ಯಕ್ಕೆ ಶೇ. 70ರಷ್ಟು ವಾಹನಗಳೇ ಕಾರಣ
ಬೆಂಗಳೂರು ಈ ಬಿಕ್ಕಟ್ಟಿಗೆ ಏಕೈಕ ಮತ್ತು ದೊಡ್ಡ ಕಾರಣವೆಂದರೆ, ನಗರಾಭಿವೃದ್ಧಿಯ ಪ್ರಮುಖ ವಲಯ ಸಾರಿಗೆ ಕ್ಷೇತ್ರ. ತಜ್ಞರ ವರದಿಗಳ ಪ್ರಕಾರ, ನಗರದ ಒಟ್ಟು ವಾಯು ಮಾಲಿನ್ಯದ ಪ್ರಮಾಣದಲ್ಲಿ ಶೇ. 60 ರಿಂದ 70 ರಷ್ಟು ಮಾಲಿನ್ಯಕ್ಕೆ ವಾಹನಗಳೇ ನೇರ ಕಾರಣವಾಗಿವೆ.
ಬೆಂಗಳೂರಿನಲ್ಲಿ ಈಗಾಗಲೇ ಕೋಟಿಗೂ ಹೆಚ್ಚು ವಾಹನಗಳು (ಸುಮಾರು 1.2 ಕೋಟಿಗೂ ಹೆಚ್ಚು) ನೋಂದಣಿಯಾಗಿದ್ದು, ಪ್ರತಿ ದಿನ ಸರಾಸರಿ 2,500 ರಿಂದ 3,000 ಹೊಸ ವಾಹನಗಳು ರಸ್ತೆಗಿಳಿಯುತ್ತಿವೆ. ಈ ಅತಿರೇಕದ ಹೆಚ್ಚಳವು ರಸ್ತೆಗಳ ಮೇಲಿನ ಹೊರೆ ಹೆಚ್ಚಿಸಿ, ಪರಿಸರ ಸಮತೋಲನವನ್ನು ಕದಡುತ್ತಿದೆ.
ದಟ್ಟಣೆಯೇ ಮಾಲಿನ್ಯ ಹೆಚ್ಚಳಕ್ಕೆ ಕಾರಣ
ಬೆಂಗಳೂರಿನಲ್ಲಿ ಸರ್ವೇಸಾಮಾನ್ಯವಾಗಿರುವ ಭಾರಿ ಸಂಚಾರ ದಟ್ಟಣೆ ಈ ಮಾಲಿನ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. ವಾಹನಗಳು ಟ್ರಾಫಿಕ್ ಜಾಮ್ನಲ್ಲಿ ನಿಂತಾಗ ಅಥವಾ ನಿಧಾನವಾಗಿ ಚಲಿಸುವಾಗ, ಎಂಜಿನ್‌ಗಳು ನಿಷ್ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತವೆ. ಇದರಿಂದ ಸಾಮಾನ್ಯ ವೇಗದಲ್ಲಿ ಚಲಿಸುವುದಕ್ಕಿಂತ ಪ್ರತಿ ಕಿಲೋಮೀಟರ್‌ಗೆ ಹೆಚ್ಚು ವಿಷಕಾರಿ ಹೊಗೆ ಹೊರಸೂಸಲ್ಪಡುತ್ತದೆ. ಇದು ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿದೆ.
ಬೆಂಗಳೂರಿನಲ್ಲಿ ಪ್ರತಿದಿನ ಸುಮಾರು 2100 ವಾಹನಗಳ ನೋಂದಣಿಯಾಗುತ್ತದೆ ಎಂದು ಇಲಾಖೆಯ ಅಂಕಿ ಅಂಶಗಳು ತಿಳಿಸುತ್ತವೆ. ಬೆಂಗಳೂರಿನಲ್ಲಿ ಒಟ್ಟು ಸುಮಾರು 1.4 ಕೋಟಿ ಜನರು ವಾಸಿಸುತ್ತಿದ್ದಾರೆ. ಆದರೆ ನಗರದಲ್ಲಿ ಒಟ್ಟು ವಾಹನಗಳ ಸಂಖ್ಯೆ 1.19 ಕೋಟಿ ಇವೆ.
ಕಳೆದ ಅಕ್ಟೋಬರ್ ಹಬ್ಬದ ಸೀಸನ್ ಮಾರಾಟ ಮತ್ತು ಕೇಂದ್ರ ಸರ್ಕಾರವು ಜಾರಿಗೊಳಿಸಿದ ಇತ್ತೀಚಿನ ಜಿಎಸ್‌ಟಿ ಕಡಿತದ ಹಿನ್ನೆಲೆ ಪ್ರತಿದಿನ ಸರಾಸರಿ 2,774 ಹೊಸ ವಾಹನಗಳು ಸೇರ್ಪಡೆಯಾಗಿದ್ದು, ನಗರದಲ್ಲಿ ವಾಹನ ನೋಂದಣಿ ಸಂಖ್ಯೆ ತೀವ್ರ ಏರಿಕೆ ಕಂಡಿತ್ತು. ಸೆಪ್ಟೆಂಬರ್‌ನಲ್ಲಿ 56,831 ವಾಹನಗಳು ನೋಂದಣಿಯಾಗಿದ್ದರೆ, ಅಕ್ಟೋಬರ ಅದು 86,014ಕ್ಕೆ ಜಿಗಿದಿದೆ. ಇತ್ತೀಚಿನ ವರ್ಷಗಳಲ್ಲಿ ಕಂಡುಬಂದ ಮಾಸಿಕ ಏರಿಕೆಗಳಲ್ಲಿ ಇದು ಅತ್ಯಂತ ತೀವ್ರವಾದ ಹೆಚ್ಚಳವಾಗಿದೆ. ಈ ದೈನಂದಿನ ಸೇರ್ಪಡೆಯಲ್ಲಿ ಸುಮಾರು 1,900 ದ್ವಿಚಕ್ರ ವಾಹನಗಳು ಮತ್ತು 500ಕ್ಕೂ ಹೆಚ್ಚು ಕಾರುಗಳಾಗಿದ್ದವು. 350ಸಿಸಿವರೆಗಿನ ದ್ವಿಚಕ್ರ ವಾಹನಗಳು ಮತ್ತು ಸಣ್ಣ ಕಾರುಗಳ ಮೇಲಿನ ತೆರಿಗೆಯನ್ನು ಶೇ. 28ರಿಂದ ಶೇ. 18ಕ್ಕೆ ಇಳಿಸಿದ ಕಾರಣ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಗೆ ಮುಂದಾಗಿದ್ದರು.
ವಾಹನಗಳ ನೋಂದಣಿ ಏರಿಕೆಯು ಬಲವಾದ ಗ್ರಾಹಕ ವಿಶ್ವಾಸವನ್ನು ಸೂಚಿಸುತ್ತಿದ್ದರೂ, ಇದು ನಗರದ ದೀರ್ಘಕಾಲದ ಸಂಚಾರ ದಟ್ಟಣೆಯನ್ನು ಮತ್ತಷ್ಟು ಉಲ್ಬಣಗೊಳಿಸಿದೆ.
ಸದ್ಯ ಬೆಂಗಳೂರು ನಗರದಲ್ಲಿ ಒಟ್ಟು 1.2 ಕೋಟಿ ನೋಂದಾಯಿತ ವಾಹನಗಳಿದ್ದು, ಇದರಲ್ಲಿ 83.8 ಲಕ್ಷ ದ್ವಿಚಕ್ರ ವಾಹನಗಳು ಮತ್ತು 24 ಲಕ್ಷ ಕಾರುಗಳು ಸೇರಿವೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬೇಡಿಕೆಗೆ ತಕ್ಕಂತೆ ಬೆಳೆಯದ ಕಾರಣ, ಹೆಚ್ಚಿನ ಪ್ರಯಾಣಿಕರು ಖಾಸಗಿ ವಾಹನಗಳತ್ತ ಮುಖ ಮಾಡುತ್ತಿದ್ದಾರೆ.
ನಗರವು ಅರಿತಿರುವುದಕ್ಕಿಂತ ಹೆಚ್ಚು ಕಲುಷಿತವಾಗಿದೆ
'ಅನ್ಬಾಕ್ಸಿಂಗ್ ಬೆಂಗಳೂರು' ಎಂಬ ಕಂಟೆಂಟ್ ಕ್ರಿಯೇಟರ್ ಮಾಡಿದ ಸ್ವತಂತ್ರ ವಿಶ್ಲೇಷಣೆಯ ವಿಡಿಯೋವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಬಿಕ್ಕಟ್ಟಿನ ಪ್ರಮಾಣವನ್ನು ಬಹಿರಂಗಪಡಿಸಿದೆ. ವಿಡಿಯೋದಲ್ಲಿ, ನಗರದ ಸರಾಸರಿ PM2.5 ಮಟ್ಟವು 40 ರ ಆಸುಪಾಸಿನಲ್ಲಿದೆ ಎಂದು ಎಚ್ಚರಿಸಲಾಗಿದೆ. ಇದು 'ಮಧ್ಯಮ' ವರ್ಗ ಎಂದು ಅಧಿಕೃತವಾಗಿ ವರ್ಗೀಕರಿಸಲ್ಪಟ್ಟರೂ, ಆರೋಗ್ಯಕ್ಕೆ ದೂರವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಯು PM2.5 ಮಟ್ಟವನ್ನು 5 ಕ್ಕಿಂತ ಕಡಿಮೆ ಇರಬೇಕು ಎಂದು ಶಿಫಾರಸು ಮಾಡಿದರೆ, ಭಾರತೀಯ ಸುರಕ್ಷತಾ ಮಿತಿಗಳು 40 ರವರೆಗಿನ ಮಟ್ಟವನ್ನು ಸ್ವೀಕಾರಾರ್ಹ ಎಂದು ಪರಿಗಣಿಸುತ್ತವೆ. ಆದರೆ, ಈ ವರ್ಷ ಹಲವು ಬಾರಿ ಬೆಂಗಳೂರಿನ PM2.5 ಮಟ್ಟವು 200 ನ್ನು ತಲುಪಿದೆ. ಇಂತಹ ಮಟ್ಟವು ಯುರೋಪ್ ಅಥವಾ ಜಪಾನ್ ದೇಶಗಳಲ್ಲಿ 'ತೀವ್ರ ಆರೋಗ್ಯ ಅಪಾಯ'ವೆಂದು ಪರಿಗಣಿಸಿ ತುರ್ತು ಪರಿಸ್ಥಿತಿ ಘೋಷಿಸಲಾಗುತ್ತದೆ.
PM2.5 ಮಟ್ಟ ಎಂದರೇನು?
ನಾವು ಉಸಿರಾಡುವ ಗಾಳಿಯಲ್ಲಿ ತೇಲಾಡುವ ಘನ ಮತ್ತು ದ್ರವ ಕಣಗಳ ಮಿಶ್ರಣವನ್ನೇ ಸಾಮಾನ್ಯವಾಗಿ ಕಣಕಣಗಳು (Particulate Matter - PM) ಎಂದು ಕರೆಯಲಾಗುತ್ತದೆ. ಇವುಗಳನ್ನು ಅವುಗಳ ಗಾತ್ರದ ಆಧಾರದ ಮೇಲೆ ಒರಟು, ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಎಂದು ಮುಖ್ಯವಾಗಿ ಮೂರು ವಿಧಗಳಾಗಿ ವರ್ಗೀಕರಿಸಲಾಗಿದೆ.
ಗಾಳಿಯ ಗುಣಮಟ್ಟವನ್ನು ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುವ ಅತಿ ಸೂಕ್ಷ್ಮ ಕಣವೇ PM2.5. ಈ ಕಣಗಳು 2.5 ಮೈಕ್ರೋಮೀಟರ್‌ಗಳಿಗಿಂತ ಕಡಿಮೆ ವ್ಯಾಸವನ್ನು ಹೊಂದಿರುತ್ತವೆ. ಇದರ ಗಾತ್ರವನ್ನು ಹೋಲಿಕೆ ಮಾಡುವುದಾದರೆ, ಇದು ಮಾನವ ಕೂದಲಿನ ದಪ್ಪಕ್ಕಿಂತ ಸುಮಾರು ನೂರು ಪಟ್ಟು ಹೆಚ್ಚು ತೆಳ್ಳಗಿರುತ್ತದೆ. ತಮ್ಮ ಅತಿ ಕಡಿಮೆ ಗಾತ್ರದ ಕಾರಣ, ಈ ಕಣಗಳು ಗಾಳಿಯಲ್ಲಿ ಹೆಚ್ಚು ಕಾಲ ತೇಲಾಡುತ್ತವೆ.
PM2.5 ಕಣಗಳು ಮುಖ್ಯವಾಗಿ ಇಂಧನ ದಹನ ಮತ್ತು ವಾತಾವರಣದಲ್ಲಿ ನಡೆಯುವ ರಾಸಾಯನಿಕ ಕ್ರಿಯೆಗಳ ಪರಿಣಾಮವಾಗಿ ರೂಪುಗೊಳ್ಳುತ್ತವೆ. ವಾಹನಗಳಿಂದ ಹೊರಸೂಸುವ ಹೊಗೆ, ಕೈಗಾರಿಕೆಗಳು ಮತ್ತು ಕಲ್ಲಿದ್ದಲು ವಿದ್ಯುತ್ ಸ್ಥಾವರಗಳಿಂದ ಬರುವ ಮಾಲಿನ್ಯವು ಇದರ ಪ್ರಮುಖ ಮೂಲಗಳಾಗಿವೆ. ಇದರ ಜೊತೆಗೆ, ಕಾಡಿನ ಬೆಂಕಿಯಂತಹ ನೈಸರ್ಗಿಕ ಪ್ರಕ್ರಿಯೆಗಳು ಸಹ ಗಾಳಿಯಲ್ಲಿ PM2.5 ಪ್ರಮಾಣ ಹೆಚ್ಚಳಕ್ಕೆ ಕಾರಣವಾಗುತ್ತದೆ. ಗಾಳಿಯ ಗುಣಮಟ್ಟದ ಮೇಲೆ ನೇರ ಪರಿಣಾಮ ಬೀರುವ PM2.5 ಕಣಗಳು ಮಾನವನ ಆರೋಗ್ಯಕ್ಕೆ ಅಪಾಯಕಾರಿಯಾಗಿದೆ.
35 ವರ್ಷಗಳ ದತ್ತಾಂಶದ ಅಪಾಯಕಾರಿ ಪ್ರವೃತ್ತಿ
ಕಳೆದ 35 ವರ್ಷಗಳ PM2.5 ದತ್ತಾಂಶದ ವಿಶ್ಲೇಷಣೆಯಲ್ಲಿ ಪ್ರತಿ ವರ್ಷ ಮಾಲಿನ್ಯದ ಮಟ್ಟವು ಸ್ವಲ್ಪಮಟ್ಟಿಗೆ ಹದಗೆಡುತ್ತಿರುವುದು ಕಂಡುಬಂದಿದೆ. ನಗರವು ಇಂದಿಗೂ 'ದೆಹಲಿಗಿಂತ ಉತ್ತಮ'ವಾಗಿರಬಹುದು, ಆದರೆ ಈಗ 'ಬೀಜಿಂಗ್ನಷ್ಟೇ ಕೆಟ್ಟದಾಗಿದೆ' ಎಂದು ವರದಿಯೊಂದು ತಿಳಿಸಿದೆ. ಉದಾಹರಣೆಗೆ, 2013ರ ಬೀಜಿಂಗ್‌ನ 'ಏರ್ಪೋಕ್ಯಾಲಿಪ್ಸ್' ಅನ್ನು ಉಲ್ಲೇಖಿಸಲಾಗಿದೆ, ಆಗ AQI ಪದೇ ಪದೇ 500 ತಲುಪಿತ್ತು. ನಂತರ ಚೀನಾ ಕಟ್ಟುನಿಟ್ಟಿನ ಕ್ರಮಗಳ ಮೂಲಕ ಮಾಲಿನ್ಯವನ್ನು ಶೇ. 60ರಷ್ಟು ಕಡಿಮೆ ಮಾಡಿದೆ.
ರಸ್ತೆ, ವಾಹನ, ನಿರ್ಮಣ ಕಟ್ಟಡಗಳೇ ಮಾಲಿನ್ಯಕ್ಕೆ ಕಾರಣ
ಬೆಂಗಳೂರಿನ ವಾಯು ಮಾಲಿನ್ಯಕ್ಕೆ ಬಹುತೇಕ ಸಂಪೂರ್ಣವಾಗಿ ಮಾನವ ನಿರ್ಮಿತ ಕಾರಣಗಳೇ ಇದ್ದು, ಅದರಲ್ಲಿ ಪ್ರಮುಖವಾಗಿ ರಸ್ತೆ ಸಂಚಾರ ಕಾರಣವಾಗಿದೆ. ನಗರದ PM2.5 ಮಾಲಿನ್ಯದ ಶೇ. 64 ರಷ್ಟು ವಾಹನಗಳಿಂದಲೇ ಬರುತ್ತಿದೆ. ಇದು ಪ್ರಮುಖ ಭಾರತೀಯ ನಗರಗಳಲ್ಲಿ ಅತಿ ಹೆಚ್ಚು.ನಗರದಲ್ಲಿ 1.23 ಕೋಟಿ ನೋಂದಾಯಿತ ವಾಹನಗಳಿದ್ದು, ಅದರಲ್ಲಿ 84 ಲಕ್ಷ ದ್ವಿಚಕ್ರ ವಾಹನಗಳಿವೆ ಮತ್ತು ಪ್ರತಿದಿನ 2,563 ಹೊಸ ವಾಹನಗಳು ಸೇರ್ಪಡೆಯಾಗುತ್ತಿವೆ. ಹದಗೆಟ್ಟ ರಸ್ತೆಗಳಲ್ಲಿ ನಿಧಾನವಾಗಿ ಸಾಗುವ ವಾಹನಗಳು, ಸಿಗ್ನಲ್‌ಗಳಲ್ಲಿ ನಿರಂತರವಾಗಿ ಆಗಿ ನಿಲ್ಲುವುದು ಮತ್ತು ಕಿರಿದಾದ ಲೇನ್ಗಳಲ್ಲಿ ಸಾಗುವ ಟ್ರಕ್ಗಳಿಂದ ಹೊಗೆ ಮತ್ತು ಧೂಳಿನ ಹೊರಸೂಸುವಿಕೆ ಹೆಚ್ಚುತ್ತಿದೆ. ಹಾಗೂ ಇತ್ತೀಚೆಗೆ ಚಿಕ್ಕ ಕುಟುಂಬಗಳೂ ಸಣ್ಣ ಸೈಟ್‌ನಲ್ಲಿ ಎರಡು, ಮೂರು ಮಹಡಿಗಳ ಕಟ್ಟಡಗಳನ್ನು ಕಟ್ಟುತ್ತಿರುವುದು, ಮೆಟ್ರೋ ಕಾಮಗಾರಿಗಳು ಹಾಗೂ ಮರಗಳು, ಸರಂಗ ಮಾರ್ಗ, ಪ್ಲೈಓವರ್ ರಸ್ತೆಗಳು ಕೂಡ ಈ ಮಾಲಿನ್ಯಕ್ಕೆ ಕಾರಣ ಎಂದು ʻದ ಫೆಡರಲ್ ಕರ್ನಾಟಕʼಕ್ಕೆ ಬೆಂಗಳೂರು ವಿವಿಯ ನಿವೃತ್ತ ಭೂವಿಜ್ಞಾನ ಪ್ರಾಧ್ಯಾಪಕ, ಪ್ರೊ.ರೇಣುಕಾಪ್ರಸಾದ್ ತಿಳಿಸಿದರು.
ನಗರದ ಮಾಲಿನ್ಯದ ಶೇ. 24 ರಷ್ಟು ನಿರ್ಮಾಣ ಕಾರ್ಯ ಮತ್ತು ರಸ್ತೆ ಧೂಳಿನಿಂದ ಉಂಟಾಗುತ್ತದೆ. ಮೆಟ್ರೋ ಕಾಮಗಾರಿ ನಡೆಯಬೇಕಾದರೆ ಆಳದವರೆಗೆ ಕೊರೆಯಬೇಕಾಗುತ್ತದೆ. ಅದಲ್ಲದೆ ಜನರಿಗೆ ಈ ಬಗ್ಗೆ ಅರಿವೂ ಕೂಡ ಮೂಡುತ್ತಿಲ್ಲ ಎಂದು ಅವರು ತಿಳಿಸಿದರು.
ಆರೋಗ್ಯದ ಮೇಲೆ ದುಷ್ಪರಿಣಾಮ
ವೈದ್ಯರು ಹೇಳುವಂತೆ, ಮಾಲಿನ್ಯದ ಹಾನಿ ಕೇವಲ ಕೆಮ್ಮು, ನೆಗಡಿಗಿಂತಲೂ ಹೆಚ್ಚಾಗಿದೆ. ಕಲುಷಿತ ಕಣಗಳು ಶ್ವಾಸಕೋಶ, ರಕ್ತ ಮತ್ತು ಮೆದುಳನ್ನು ಪ್ರವೇಶಿಸಿ ಉರಿಯೂತವನ್ನು ಉಂಟುಮಾಡುತ್ತವೆ. ಇದರಿಂದ ಅಲರ್ಜಿ, ಆಸ್ತಮಾ, ಉಬ್ಬಸ ಮತ್ತು ಹೃದಯರಕ್ತನಾಳದ ಸಮಸ್ಯೆಗಳು ಮಕ್ಕಳಲ್ಲಿ ಮತ್ತು ಹಿರಿಯರಲ್ಲಿ ಹೆಚ್ಚುತ್ತಿವೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ತಜ್ಞರ ಸಮಿತಿ ರಚನೆಗೆ ಡಿಸಿಎಂ ಸೂಚನೆ
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯವನ್ನು ನಿಯಂತ್ರಿಸಲು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಕ್ಷಣದ ಕ್ರಮಕ್ಕೆ ಮುಂದಾಗಿದ್ದಾರೆ. ಭವಿಷ್ಯದಲ್ಲಿ ನಗರವು ದೆಹಲಿಯಂತಹ ಗಂಭೀರ ವಾಯು ಮಾಲಿನ್ಯದ ಬಿಕ್ಕಟ್ಟನ್ನು ಎದುರಿಸಬಹುದು ಎಂಬ ಎಚ್ಚರಿಕೆ ಹಿನ್ನೆಲೆಯಲ್ಲಿ, ಅವರು ಮುಖ್ಯ ಕಾರ್ಯದರ್ಶಿಯವರಿಗೆ ಉನ್ನತ ಮಟ್ಟದ ತಜ್ಞರ ಸಮಿತಿಯನ್ನು ರಚಿಸುವಂತೆ ಸೂಚನೆ ನೀಡಿದ್ದಾರೆ.
ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು ಡಿಸಿಎಂ ಅವರಿಗೆ ಬರೆದ ಪತ್ರದಲ್ಲಿ ಈ ಕುರಿತು ಆತಂಕ ವ್ಯಕ್ತಪಡಿಸಿದ್ದರು. ಪ್ರಸ್ತುತ ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕ (AQI) ಬಹುತೇಕ 'ಮಧ್ಯಮ' ವರ್ಗದಲ್ಲಿ (50-70) ಇದ್ದರೂ, ನಗರದಲ್ಲಿರುವ ಸುಮಾರು 1.47 ಕೋಟಿ ಜನಸಂಖ್ಯೆಗೆ 1.2-1.23 ಕೋಟಿ ನೋಂದಾಯಿತ ವಾಹನಗಳಿವೆ. ಪ್ರತಿದಿನ ಸರಾಸರಿ 2,563 ಹೊಸ ವಾಹನಗಳು ರಸ್ತೆಗೆ ಸೇರುತ್ತಿದ್ದು, ಈ ವೇಗ ಮುಂದುವರಿದರೆ ಮುಂದಿನ 5-10 ವರ್ಷಗಳಲ್ಲಿ ಮಾಲಿನ್ಯದ ಮಟ್ಟ 'ತೀವ್ರ' ಹಂತಕ್ಕೆ ತಲುಪಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ, ಪರಿಸರ ವಿಜ್ಞಾನ, ಸಂಚಾರ ಮತ್ತು ಸಾರ್ವಜನಿಕ ಆರೋಗ್ಯ ಕ್ಷೇತ್ರದ ತಜ್ಞರನ್ನು ಒಳಗೊಂಡಿರುವ ಸಮಿತಿಯು ಮುಂದಿನ ದಶಕದ ಮಾಲಿನ್ಯ ನಿಯಂತ್ರಣದ ಮಾರ್ಗಸೂಚಿ ಮತ್ತು 'ಸಮಗ್ರ ಸ್ವಚ್ಛ-ವಾಯು ಕ್ರಿಯಾ ಯೋಜನೆ' ಯನ್ನು ರೂಪಿಸಲಿದೆ.

