ವೈರಲ್ ವಿಡಿಯೋ ಎಫೆಕ್ಟ್: ಮೊಟ್ಟೆಯಲ್ಲಿ ಕ್ಯಾನ್ಸರ್‌ಕಾರಕ ಅಂಶವಿದೆಯೇ? ಆರೋಗ್ಯ ಸಚಿವರು ಮತ್ತು ತಜ್ಞರ ಸ್ಪಷ್ಟನೆ ಇಲ್ಲಿದೆ

ಈ ಹಿಂದೆ ಸೆಪ್ಟೆಂಬರ್‌-ಅಕ್ಟೋಬರ್‌ನಲ್ಲಿ ಪರೀಕ್ಷೆಗೊಳಪಡಿಸಲಾದ 125 ಮೊಟ್ಟೆಯ ಸ್ಯಾಂಪಲ್‌ಗಳಲ್ಲಿ 123 ಮೊಟ್ಟೆಗಳ ಗುಣಮಟ್ಟ ಸರಿಯಿತ್ತು ಮತ್ತು ಕೇವಲ 2 ಮಾದರಿ ಮಾತ್ರ ಸರಿಯಿಲ್ಲ ಎಂದು ವರದಿ ಬಂದಿತ್ತು ಎಂದೂ ಸಚಿವರು ಮಾಹಿತಿ ನೀಡಿದರು.

Update: 2025-12-16 13:00 GMT
ದಿನೇಶ್‌ ಗುಂಡೂರಾವ್‌
Click the Play button to listen to article

ದೈನಂದಿನ ಆಹಾರದ ಪ್ರಮುಖ ಭಾಗವಾಗಿರುವ ಮೊಟ್ಟೆಯಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ 'ಜೆನೋಟಾಕ್ಸಿಕ್' ಅಂಶಗಳಿವೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದೆ. ನಿರ್ದಿಷ್ಟ ಬ್ರ್ಯಾಂಡ್‌ನ ಮೊಟ್ಟೆಗಳಲ್ಲಿ ನಿಷೇಧಿತ ಆಂಟಿಬಯಾಟಿಕ್‌ಗಳಿದ್ದು, ಅವು ಗಂಭೀರ ಆರೋಗ್ಯ ಸಮಸ್ಯೆಗೆ ದಾರಿಮಾಡಿಕೊಡುತ್ತವೆ ಎಂಬ ವಿಡಿಯೋವೊಂದು ಗ್ರಾಹಕರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮತ್ತು ವೈದ್ಯಕೀಯ ತಜ್ಞರು ಈ ಕುರಿತು ಮಹತ್ವದ ಸ್ಪಷ್ಟನೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ 'ಎಗಾಸ್‌' (Eggoz) ಸಂಸ್ಥೆಯ ಮೊಟ್ಟೆಗಳ ಕುರಿತು ಪ್ರಸ್ತಾಪಿಸಲಾಗಿದ್ದು, ಪ್ರಯೋಗಾಲಯದ ವರದಿಗಳನ್ನು ಉಲ್ಲೇಖಿಸಿ ಈ ಮೊಟ್ಟೆಗಳಲ್ಲಿ ಮನುಷ್ಯನ ಆರೋಗ್ಯಕ್ಕೆ ಹಾನಿಕಾರಕವಾದ ಅಂಶಗಳಿವೆ ಎಂದು ಹೇಳಲಾಗಿತ್ತು. ಇದು ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆ ಮತ್ತು ಭಯಕ್ಕೆ ಕಾರಣವಾಗಿತ್ತು.

ಈ ಗೊಂದಲದ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸಾರ್ವಜನಿಕರಿಗೆ ಅಭಯ ನೀಡಿದ್ದಾರೆ. ಮೊಟ್ಟೆಗಳಲ್ಲಿ ಕ್ಯಾನ್ಸರ್‌ಕಾರಕ ಅಂಶ ಪತ್ತೆಯಾಗಿರುವ ಕುರಿತ ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಈಗಾಗಲೇ ಆ ನಿರ್ದಿಷ್ಟ ಬ್ರ್ಯಾಂಡ್‌ನ ಮೊಟ್ಟೆಗಳನ್ನು ಪ್ರಯೋಗಾಲಯ ಪರೀಕ್ಷೆಗೆ ಒಳಪಡಿಸಿದೆ. ಎಗಾಸ್‌ ಸಂಸ್ಥೆಯ ಮೊಟ್ಟೆಯಲ್ಲಿ ಸೇವಿಸಬಾರದ ಆ್ಯಂಟಿ ಬಯೋಟಿಕ್‌ ಇರುವ ಬಗ್ಗೆ ದೂರು ಬಂದ ತಕ್ಷಣವೇ ಎಚ್ಚೆತ್ತುಕೊಂಡಿರುವ ಆರೋಗ್ಯ ಇಲಾಖೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳಿಗೆ ಈ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ಸ್ಪಷ್ಟ ಮಾಹಿತಿ ಪಡೆಯುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ವರದಿ ಬರುವ ತನಕ ಆತಂಕ ಬೇಡ

ವರದಿ ಬರುವವರೆಗೆ ಸಾರ್ವಜನಿಕರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬಾರದು ಎಂದು ಸಚಿವರು ಮನವಿ ಮಾಡಿದ್ದಾರೆ. ಮೊಟ್ಟೆಯು ಆರೋಗ್ಯಕ್ಕೆ ಅತ್ಯಂತ ಹಿತಕರವಾದ ಆಹಾರವಾಗಿದ್ದು, ಅನಗತ್ಯ ಗೊಂದಲಗಳು ಇರಬಾರದು ಎಂಬ ಕಾರಣಕ್ಕೆ ಈ ಪರೀಕ್ಷೆ ನಡೆಸಲಾಗುತ್ತಿದೆ. ಈ ಹಿಂದೆ ಸೆಪ್ಟೆಂಬರ್‌ ಮತ್ತು ಅಕ್ಟೋಬರ್ ತಿಂಗಳಲ್ಲಿ ನಡೆಸಲಾದ ಪರೀಕ್ಷೆಗಳ ಅಂಕಿಅಂಶವನ್ನು ತೆರೆದಿಟ್ಟ ಸಚಿವರು, ಅಂದು ಪರೀಕ್ಷಿಸಲಾದ 125 ಮೊಟ್ಟೆಗಳ ಸ್ಯಾಂಪಲ್‌ಗಳ ಪೈಕಿ 123 ಮೊಟ್ಟೆಗಳ ಗುಣಮಟ್ಟ ಅತ್ಯುತ್ತಮವಾಗಿತ್ತು, ಕೇವಲ 2 ಮಾದರಿಗಳಲ್ಲಿ ಮಾತ್ರ ದೋಷ ಕಂಡುಬಂದಿತ್ತು ಎಂದು ತಿಳಿಸುವ ಮೂಲಕ ಸದ್ಯದ ಆತಂಕವನ್ನು ತಣಿಸುವ ಪ್ರಯತ್ನ ಮಾಡಿದ್ದಾರೆ.

ಇನ್ನು ಈ ವೈಜ್ಞಾನಿಕ ವಿಚಾರದ ಬಗ್ಗೆ ಬೆಂಗಳೂರಿನ ಎಚ್‌ಸಿಜಿ ಕ್ಯಾನ್ಸರ್ ಆಸ್ಪತ್ರೆಯ ಸಲಹೆಗಾರ ವೈದ್ಯಕೀಯ ಆಂಕೊಲಾಜಿಸ್ಟ್ ಆಗಿರುವ ಡಾ. ಸ್ಮಿತಾ ಸಾಲ್ಡಾನಾ ಅವರು ಬೆಳಕು ಚೆಲ್ಲಿದ್ದಾರೆ. ವೈರಲ್ ವಿಡಿಯೋದಲ್ಲಿ ಪ್ರಸ್ತಾಪಿಸಲಾದ ನೈಟ್ರೊಫ್ಯೂರನ್‌ಗಳಂತಹ ವಸ್ತುಗಳನ್ನು ಕೆಲವೊಮ್ಮೆ ಕೋಳಿ ಸಾಕಾಣಿಕೆಯಲ್ಲಿ ಬಳಸಲಾಗುತ್ತದೆ ಎಂಬುದು ನಿಜ. ಈ ನೈಟ್ರೊಫ್ಯೂರನ್‌ಗಳ ಕೆಲವು ರಾಸಾಯನಿಕ ಉಪಉತ್ಪನ್ನಗಳು ಅಥವಾ ಮೆಟಾಬೊಲೈಟ್‌ಗಳು ದೀರ್ಘಕಾಲದವರೆಗೆ ಮಾನವ ದೇಹದಲ್ಲಿ ಉಳಿದುಕೊಳ್ಳುವ ಸಾಮರ್ಥ್ಯ ಹೊಂದಿದ್ದು, ಇವು ಡಿಎನ್‌ಎಗೆ ಹಾನಿ ಮಾಡುವ ಮತ್ತು ಜೆನೋಟಾಕ್ಸಿಕ್ ಸಾಮರ್ಥ್ಯವನ್ನು ಹೊಂದುವ ಸಾಧ್ಯತೆಗಳಿರುತ್ತವೆ ಎಂದು ಅವರು ವಿವರಿಸಿದ್ದಾರೆ.

ನೇರ ಕ್ಯಾನ್ಸರ್ ಬರುವುದಿಲ್ಲ

ಆದರೆ, ಇದೇ ಕಾರಣಕ್ಕೆ ಮೊಟ್ಟೆಗಳೇ ನೇರವಾಗಿ ಕ್ಯಾನ್ಸರ್ ಉಂಟುಮಾಡುತ್ತವೆ ಎಂದು ಭಾವಿಸುವುದು ತಪ್ಪು. ಮೊಟ್ಟೆಗಳು ಉತ್ತಮ ಗುಣಮಟ್ಟದ ಪ್ರೋಟೀನ್‌ನ ಮೂಲವಾಗಿದ್ದು, ಕ್ಯಾನ್ಸರ್ ರೋಗಿಗಳಿಗೂ ವೈದ್ಯರು ಇವುಗಳನ್ನು ಧೈರ್ಯವಾಗಿ ಶಿಫಾರಸು ಮಾಡುತ್ತಾರೆ. ನಿಷೇಧಿತ ವಸ್ತುಗಳ ಅಂಶಗಳು ಮಿತಿಮೀರಿದ ಪ್ರಮಾಣದಲ್ಲಿ ಇದ್ದರೆ ಮಾತ್ರ ಸಮಸ್ಯೆ ಉದ್ಭವಿಸುತ್ತದೆ. ವಿಶೇಷವಾಗಿ ಮಕ್ಕಳು ಮತ್ತು ಗರ್ಭಿಣಿಯರು ಕಡಿಮೆ ದೇಹದ ತೂಕ ಹಾಗೂ ಜರಾಯು ವರ್ಗಾವಣೆಯ ಕಾರಣದಿಂದ ಹಾನಿಕಾರಕ ಅಂಶಗಳಿಗೆ ಬೇಗನೆ ತುತ್ತಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ, ಪ್ರತಿದಿನ ಆರು ಅಥವಾ ಏಳು ಮೊಟ್ಟೆಗಳನ್ನು ತಿನ್ನುವ ಬದಲಿಗೆ ಮಿತವಾದ ಸೇವನೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಸೂಕ್ತ ಎಂದು ಡಾ. ಸ್ಮಿತಾ ಸಲಹೆ ನೀಡಿದ್ದಾರೆ.

ಆರೋಗ್ಯ ಇಲಾಖೆಯ ಪೋಷಣೆ ವಿಭಾಗದ ಉಪ ನಿರ್ದೇಶಕಿ ಡಾ. ಇಂದಿರಾ ಕಬಾಡೆ ಅವರು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದು, ಮಾರುಕಟ್ಟೆಯಲ್ಲಿರುವ ಎಲ್ಲಾ ಮೊಟ್ಟೆಗಳಲ್ಲೂ ಅಪಾಯಕಾರಿ ಅಂಶಗಳು ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನೈಸರ್ಗಿಕವಾಗಿ ಬೆಳೆಯುವ ಕೋಳಿಗಳ ಮೊಟ್ಟೆಗಳಲ್ಲಿ ಅಂತಹ ರಾಸಾಯನಿಕ ಅಂಶಗಳು ಪತ್ತೆಯಾಗುವುದಿಲ್ಲ. ಮೊಟ್ಟೆಯು ಪ್ರೋಟೀನ್ ಮತ್ತು ವಿಟಮಿನ್ ಒಳಗೊಂಡಿರುವ ಅತ್ಯಂತ ಪೌಷ್ಟಿಕ ಆಹಾರವಾಗಿದೆ. ಇಲಾಖೆಯಿಂದ ನಡೆಯುತ್ತಿರುವ ಪರೀಕ್ಷಾ ವರದಿ ಬಂದ ನಂತರವಷ್ಟೇ ಸತ್ಯಾಸತ್ಯತೆ ಹೊರಬೀಳಲಿದೆ ಎಂದು ಅವರು ತಿಳಿಸಿದ್ದಾರೆ.

ಒಟ್ಟಾರೆಯಾಗಿ, ವೈರಲ್ ಆಗಿರುವ ಸುದ್ದಿಗಳು ಜನರಲ್ಲಿ ಜಾಗೃತಿ ಮೂಡಿಸಲು ಸಹಕಾರಿಯಾಗಿದ್ದರೂ, ಗ್ರಾಹಕರು ಪರಿಶೀಲಿಸಿದ ಮತ್ತು ಅಧಿಕೃತ ಮಾಹಿತಿಯನ್ನು ಮಾತ್ರ ನಂಬಬೇಕು ಎಂಬುದು ತಜ್ಞರ ಒಕ್ಕೊರಲ ಅಭಿಪ್ರಾಯವಾಗಿದೆ. ಮಾರುಕಟ್ಟೆಯಲ್ಲಿ ಕ್ಯಾನ್ಸರ್‌ಕಾರಕ ಉತ್ಪನ್ನಗಳ ಮಾರಾಟವನ್ನು ತಡೆಯಲು ಸರ್ಕಾರದ ಹಸ್ತಕ್ಷೇಪ ಮತ್ತು ಕಠಿಣ ಕ್ರಮಗಳ ಅಗತ್ಯವಿದೆ ಎಂದು ತಜ್ಞರು ಪ್ರತಿಪಾದಿಸಿದ್ದಾರೆ. 

Tags:    

Similar News