ರಾಜ್ಯದಲ್ಲಿ 3 ಸಾವಿರ ಮೆ.ವ್ಯಾ. ಸೌರ ವಿದ್ಯುತ್ ಉತ್ಪಾದನೆಗೆ ತಯಾರಿ: ಪಿಎಂ ಕುಸುಮ್-ಸಿ ಯೋಜನೆಯಡಿ ಮಹತ್ವದ ಹೆಜ್ಜೆ
'ಪಿಎಂ ಕುಸುಮ್-ಸಿ' ಯೋಜನೆಯಡಿ ಬರೋಬ್ಬರಿ 3000 ಮೆಗಾವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಯೋಜನೆಗಳನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ ಎಂದು ಇಂಧನ ಸಚಿವ ಕೆ. ಜೆ. ಜಾರ್ಜ್ ತಿಳಿಸಿದ್ದಾರೆ.
ರೈತರ ಪಂಪ್‌ಸೆಟ್‌ಗಳಿಗೆ ಹಗಲು ಹೊತ್ತಿನಲ್ಲಿ ನಿರಂತರ ಹಾಗೂ ಸಮರ್ಪಕ ವಿದ್ಯುತ್ ಪೂರೈಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಲಿರುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ 'ಪಿಎಂ ಕುಸುಮ್-ಸಿ' ಯೋಜನೆಯಡಿ ರಾಜ್ಯದಲ್ಲಿ ಬರೋಬ್ಬರಿ 3000 ಮೆಗಾವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಯೋಜನೆಗಳನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಉದ್ದೇಶಿಸಿದೆ ಎಂದು ಇಂಧನ ಸಚಿವ ಕೆ. ಜೆ. ಜಾರ್ಜ್ ತಿಳಿಸಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಸದಸ್ಯ ಟಿ. ಎನ್. ಜವರಾಯಿ ಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವರು, ಯೋಜನೆಯ ಪ್ರಸ್ತುತ ಸ್ಥಿತಿಗತಿ ಹಾಗೂ ಪ್ರಗತಿಯ ಸಂಪೂರ್ಣ ವಿವರವನ್ನು ಸದನದ ಮುಂದಿಟ್ಟರು. ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವಾಲಯದಿಂದ ರಾಜ್ಯಕ್ಕೆ ಹಂಚಿಕೆಯಾಗಿರುವ ಪಂಪ್‌ಸೆಟ್‌ಗಳ ಗುರಿಗೆ ಅನುಗುಣವಾಗಿ ಈ ಬೃಹತ್ ಪ್ರಮಾಣದ ವಿದ್ಯುತ್ ಉತ್ಪಾದನೆಗೆ ನೀಲನಕ್ಷೆ ರೂಪಿಸಲಾಗಿದೆ. ರಾಜ್ಯದಲ್ಲಿ ಪಿಎಂ ಕುಸುಮ್ ಯೋಜನೆಯ ಅನುಷ್ಠಾನ ಭರದಿಂದ ಸಾಗಿದ್ದು, ಪ್ರಸ್ತುತ 415 ವಿವಿಧ ಸ್ಥಳಗಳಲ್ಲಿ ಒಟ್ಟು 2592 ಮೆಗಾವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಘಟಕ ಸ್ಥಾಪನೆಗೆ ಈಗಾಗಲೇ ಕಾರ್ಯಾದೇಶ ನೀಡಲಾಗಿದೆ. ಇನ್ನುಳಿದ ಸುಮಾರು 410 ಮೆಗಾವ್ಯಾಟ್ ಸಾಮರ್ಥ್ಯದ ಯೋಜನೆಗಳಿಗೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.
ಕಾರ್ಯಾದೇಶ ನೀಡಲಾಗಿರುವ ಯೋಜನೆಗಳ ಪೈಕಿ ಈಗಾಗಲೇ 213 ಮೆಗಾವ್ಯಾಟ್ ಸಾಮರ್ಥ್ಯದ ಘಟಕಗಳು ಪೂರ್ಣಗೊಂಡು ಅನುಷ್ಠಾನಗೊಂಡಿವೆ. 1190 ಮೆಗಾವ್ಯಾಟ್ ಸಾಮರ್ಥ್ಯದ ಕಾಮಗಾರಿಗಳು ವಿವಿಧ ಹಂತದ ಪ್ರಗತಿಯಲ್ಲಿದ್ದು, 1189 ಮೆಗಾವ್ಯಾಟ್ ಸಾಮರ್ಥ್ಯದ ಯೋಜನೆಗಳನ್ನು ಇನ್ನಷ್ಟೇ ಕೈಗೆತ್ತಿಕೊಳ್ಳಬೇಕಿದೆ. ಯೋಜನೆಗೆ ಅಗತ್ಯವಿರುವ ಭೂಮಿಯ ಲಭ್ಯತೆಯೇ ಪ್ರಮುಖ ಸವಾಲಾಗಿದ್ದು, ಇದನ್ನು ಪರಿಹರಿಸಲು ಸರ್ಕಾರ ಪರ್ಯಾಯ ಮಾರ್ಗಗಳನ್ನು ಕಂಡುಕೊಂಡಿದೆ. ಖಾಸಗಿ ಅಥವಾ ಸರ್ಕಾರಿ ಜಮೀನು ಲಭ್ಯವಿಲ್ಲದ ಪಕ್ಷದಲ್ಲಿ, ಸಂಬಂಧಪಟ್ಟ ಪ್ರಾಧಿಕಾರಗಳ ಅನುಮೋದನೆ ಪಡೆದು ಕೆರೆ ಅಂಗಳದ ಜಮೀನುಗಳನ್ನು ಗುರುತಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ಪರಿಸರಕ್ಕೆ ಯಾವುದೇ ಹಾನಿಯಾಗದಂತೆ ಎಚ್ಚರವಹಿಸಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಅಲ್ಲದೆ, ವಿದ್ಯುತ್ ಉಪಕೇಂದ್ರಗಳ ಬಳಿ ಸರ್ಕಾರಿ ಜಮೀನು ಲಭ್ಯವಿದ್ದಲ್ಲಿ, ಅದನ್ನು ಆದ್ಯತೆಯ ಮೇರೆಗೆ ಈ ಸೌರ ಯೋಜನೆಗೆ ಕಾಯ್ದಿರಿಸಲು ಕಂದಾಯ ಮತ್ತು ಇಂಧನ ಇಲಾಖೆಗಳು ಜಂಟಿ ಸುತ್ತೋಲೆಯನ್ನು ಈಗಾಗಲೇ ಹೊರಡಿಸಿವೆ ಎಂದು ವಿವರಿಸಿದರು.
ಸೌರ ವಿದ್ಯುತ್ ಯೋಜನೆಗಾಗಿ ಕಂದಾಯ ಇಲಾಖೆಯಿಂದ ಇಂಧನ ಇಲಾಖೆಗೆ ವರ್ಗಾಯಿಸಲಾದ ಅಥವಾ ಕಾಯ್ದಿರಿಸಲಾದ ಸರ್ಕಾರಿ ಜಮೀನುಗಳಿಗೆ ನಿರ್ದಿಷ್ಟ ಉಪಯೋಗ ದರವನ್ನು ನಿಗದಿಪಡಿಸಲಾಗಿದೆ. ಪ್ರತಿ ಎಕರೆಗೆ ವಾರ್ಷಿಕ 25 ಸಾವಿರ ರೂ. ದರ ನಿಗದಿಪಡಿಸಲಾಗಿದ್ದು, ಪ್ರತಿ ಎರಡು ವರ್ಷಗಳಿಗೊಮ್ಮೆ ಮೂಲ ದರದ ಮೇಲೆ ಶೇ. 5ರಷ್ಟು ಏರಿಕೆ ಮಾಡಲಾಗುತ್ತದೆ. ಸೌರ ಅಭಿವೃದ್ಧಿದಾರರಿಂದ ಸಂಗ್ರಹವಾಗುವ ಈ ಹಣವನ್ನು ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಅಡಿಯಲ್ಲಿ ಬಳಸಿಕೊಂಡು, ಆಯಾ ಭಾಗದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸರ್ಕಾರಿ ಆದೇಶ ಹೊರಡಿಸಲಾಗಿದೆ. ಯೋಜನೆಯಲ್ಲಿ ಎದುರಾಗುವ ಅಡಚಣೆಗಳನ್ನು ನಿವಾರಿಸಲು ಕಾಲಕಾಲಕ್ಕೆ ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ವಿದ್ಯುತ್ ದುರ್ಬಳಕೆಗೆ ಕಡಿವಾಣ ಹಾಕಲು ಕ್ರಮ
ರಾಜ್ಯದಲ್ಲಿ ವಿದ್ಯುತ್ ಕಳ್ಳತನ ಮತ್ತು ದುರ್ಬಳಕೆಯನ್ನು ತಡೆಗಟ್ಟಲು ಇಂಧನ ಇಲಾಖೆ ಕಠಿಣ ಕ್ರಮಗಳಿಗೆ ಮುಂದಾಗಿದ್ದು, ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಪ್ರಬಲವಾದ 'ಜಾಗೃತ ದಳ'ವನ್ನು ರಚಿಸುವ ಮೂಲಕ ವಿದ್ಯುತ್ ಕಳ್ಳರ ಮೇಲೆ ಹದ್ದಿನ ಕಣ್ಣಿಡಲಾಗಿದೆ ಎಂದು ಇಂಧನ ಸಚಿವ ಕೆ. ಜೆ. ಜಾರ್ಜ್ ತಿಳಿಸಿದ್ದಾರೆ.
ವಿಧಾನ ಪರಿಷತ್ತಿನ ಕಲಾಪದಲ್ಲಿ ಸದಸ್ಯ ಸೂರಜ್ ರೇವಣ್ಣ ಪ್ರಶ್ನೆಗೆ ಉತ್ತರಿಸಿದ ಸಚಿವರು, ವಿದ್ಯುತ್ ಸೋರಿಕೆ ತಡೆಯಲು ಸರ್ಕಾರ ಕೈಗೊಂಡಿರುವ ವ್ಯವಸ್ಥಿತ ಕ್ರಮಗಳ ಕುರಿತು ಸಮಗ್ರ ಮಾಹಿತಿ ನೀಡಿದರು. ವಿದ್ಯುತ್ ಕಳ್ಳತನವನ್ನು ಪತ್ತೆಹಚ್ಚಲು ಪೊಲೀಸ್ ಇಲಾಖೆ ಮತ್ತು ಇಂಧನ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತಂಡಗಳನ್ನು ರಚಿಸಲಾಗಿದೆ. ವಿದ್ಯುತ್ ಸರಬರಾಜು ಕಂಪನಿಗಳ ಜಾಗೃತ ದಳ ಘಟಕದ ನೇತೃತ್ವವನ್ನು ಪೊಲೀಸ್ ಅಧೀಕ್ಷಕರು ಅಥವಾ ಪೊಲೀಸ್ ಉಪ ಅಧೀಕ್ಷಕರು ಹಾಗೂ ಕಾರ್ಯನಿರ್ವಾಹಕ ಇಂಜಿನಿಯರ್ (ವಿಚಕ್ಷಣ ದಳ) ಅವರು ಜಂಟಿಯಾಗಿ ವಹಿಸಿಕೊಳ್ಳಲಿದ್ದಾರೆ ಎಂದರು.
ಜಿಲ್ಲಾ ಮಟ್ಟದಲ್ಲಿಯೂ ಈ ವ್ಯವಸ್ಥೆಯನ್ನು ಬಲಪಡಿಸಲಾಗಿದ್ದು, ಪ್ರತಿ ಜಿಲ್ಲೆಯ ಜಾಗೃತ ದಳ ಪೊಲೀಸ್ ಠಾಣೆಗಳಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಅಥವಾ ಸಬ್-ಇನ್ಸ್‌ಪೆಕ್ಟರ್‌ಗಳ ಜೊತೆಗೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮತ್ತು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈ ದಳವು ಸ್ಥಳೀಯ ಎಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ನಿಕಟ ಸಂಪರ್ಕ ಮತ್ತು ಸಮನ್ವಯದೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಅನಿರೀಕ್ಷಿತ ದಾಳಿ ಮತ್ತು ವಿದ್ಯುತ್ ಕಡಿತ
ಕೇವಲ ದೂರು ಬಂದಾಗ ಮಾತ್ರವಲ್ಲದೆ, ಜಾಗೃತ ದಳವು ಸ್ವಯಂಪ್ರೇರಿತವಾಗಿ ಕಾರ್ಯಪ್ರವೃತ್ತವಾಗಿರುತ್ತದೆ. ನಿಯಮಿತವಾಗಿ ತಪಾಸಣೆ ನಡೆಸುವುದು ಮತ್ತು ಅನಿರೀಕ್ಷಿತ ದಾಳಿಗಳನ್ನು ನಡೆಸುವ ಮೂಲಕ ಅಕ್ರಮಗಳಿಗೆ ಕಡಿವಾಣ ಹಾಕಲಾಗುತ್ತಿದೆ. ದಾಳಿಯ ವೇಳೆ ವಿದ್ಯುತ್ ಕಳ್ಳತನ ಕಂಡುಬಂದ ತಕ್ಷಣ ಸ್ಥಳೀಯ ಸಿಬ್ಬಂದಿಯ ಮೂಲಕ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುತ್ತದೆ ಮತ್ತು ಸ್ಥಳದಲ್ಲೇ ಪ್ರಕರಣ ದಾಖಲಿಸಿಕೊಳ್ಳಲಾಗುತ್ತದೆ. ಅಲ್ಲದೆ, ಪ್ರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಶೇಷ ದಾಳಿ ದಳಗಳನ್ನು ರಚಿಸಲಾಗಿದ್ದು, ಇವುಗಳ ಮೂಲಕ ಸಾಮೂಹಿಕ ತಪಾಸಣೆಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.
ಕಠಿಣ ಕಾನೂನು ಕ್ರಮ ಮತ್ತು ವಿಶೇಷ ನ್ಯಾಯಾಲಯ
ವಿದ್ಯುತ್ ಕಳ್ಳತನದ ಪ್ರಕರಣಗಳಲ್ಲಿ ಕಾನೂನು ಕ್ರಮಗಳು ಹೇಗಿರುತ್ತವೆ ಎಂಬುದನ್ನು ಸ್ಪಷ್ಟಪಡಿಸಿದ ಸಚಿವರು, "ಭಾರತೀಯ ವಿದ್ಯುಚ್ಛಕ್ತಿ ಕಾಯಿದೆ 2003ರ ಅಡಿಯಲ್ಲಿ ಕಠಿಣ ಕ್ರಮಗಳನ್ನು ಜರುಗಿಸಲಾಗುತ್ತಿದೆ. ತನಿಖೆಯ ನಂತರ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ನಿಬಂಧನೆಗಳ ಪ್ರಕಾರ ತಪ್ಪಿತಸ್ಥರಿಗೆ ಭಾರೀ ದಂಡ ವಿಧಿಸಲಾಗುತ್ತದೆ. ವಿಶೇಷವೆಂದರೆ, ಸೆಕ್ಷನ್ 135ರ ಅಡಿಯಲ್ಲಿ ದಾಖಲಾಗುವ ಗಂಭೀರ ಸ್ವರೂಪದ ಪ್ರಕರಣಗಳ ತ್ವರಿತ ವಿಲೇವಾರಿಗಾಗಿ ವಿಶೇಷ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಸಲಾಗುತ್ತದೆ. ಈ ಮೂಲಕ ರಾಜ್ಯದಲ್ಲಿ ವಿದ್ಯುತ್ ಕಳ್ಳತನಕ್ಕೆ ಕಡಿವಾಣ ಹಾಕಿ, ಇಲಾಖೆಗೆ ಆಗುತ್ತಿರುವ ಆರ್ಥಿಕ ನಷ್ಟವನ್ನು ತಡೆಯಲು ಸರ್ಕಾರ ಬದ್ಧವಾಗಿದೆ ಎಂದು ಮಾಹಿತಿ ನೀಡಿದರು.