ಭ್ರೂಣಹತ್ಯೆ ತಡೆಗೆ ಎಲ್ಲ ಜಿಲ್ಲೆಗಳಲ್ಲಿ ಪ್ರತ್ಯೇಕ ನೋಡಲ್ ಅಧಿಕಾರಿ ನೇಮಕ: ದಿನೇಶ್ ಗಂಡೂರಾವ್
ಬೆಳಗಾವಿ ಅಧಿವೇಶನದಲ್ಲಿ ಪರಿಷತ್ತಿನಲ್ಲಿ ಸದಸ್ಯ ಸಿ.ಟಿ.ರವಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮತ್ತು ಕೆಲ ಆಸ್ಪತ್ರೆಗಳಲ್ಲಿಯೇ ಗಂಡು ಸಂತಾನವು ಗರಿಷ್ಟ ಪ್ರಮಾಣದಲ್ಲಿ ದಾಖಲಾಗುತ್ತಿರುವುದು ಗುಪ್ತಚರ ದಾಳಿಯ ಮೂಲಕ ಬೆಳಕಿಗೆ ಬಂದಿದೆ.
ದಿನೇಶ್ ಗುಂಡೂರಾವ್
ರಾಜ್ಯಾದ್ಯಂತ ಭ್ರೂಣಹತ್ಯೆ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಈ ನಿಟ್ಟಿನಲ್ಲಿ ಎಲ್ಲ ಜಿಲ್ಲೆಗಳಲ್ಲಿ ಪ್ರತ್ಯೇಕ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗಂಡೂರಾವ್ ಅವರು ತಿಳಿಸಿದರು. ಈ ಮೂಲಕ ಭ್ರೂಣ ಹತ್ಯೆ ತಡೆಗೆ ಕ್ರಮಗಳನ್ನು ಬಿಗಿಗೊಳಿಸುತ್ತಿದ್ದೇವೆ ಎಂದು ಅವರು ಹೇಳಿದರು.
ಬೆಳಗಾವಿ ಅಧಿವೇಶನದಲ್ಲಿ ಪರಿಷತ್ತಿನಲ್ಲಿ ಸದಸ್ಯ ಸಿ.ಟಿ.ರವಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮತ್ತು ಕೆಲ ಆಸ್ಪತ್ರೆಗಳಲ್ಲಿಯೇ ಗಂಡು ಸಂತಾನವು ಗರಿಷ್ಠ ಪ್ರಮಾಣದಲ್ಲಿ ದಾಖಲಾಗುತ್ತಿರುವುದು ಗುಪ್ತಚರ ದಾಳಿಯ ಮೂಲಕ ಬೆಳಕಿಗೆ ಬಂದಿದೆ. ಯಾವ ತಾಲೂಕಿನಲ್ಲಿ ಗಂಡು-ಹೆಣ್ಣಿನ ಅನುಪಾತ ಹೆಚ್ಚುತ್ತಿದೆ, ಯಾವ ಆಸ್ಪತ್ರೆಯಲ್ಲಿ ಏನಾಗುತ್ತಿದೆ ಎನ್ನುವಂತಹ ಅಂಶಗಳ ಮೇಲೆ ಸೂಕ್ತ ಮೇಲ್ವಿಚಾರಣೆ ನಡೆಸಿ, ಅಂತಹ ಜಾಲವನ್ನು ಹತ್ತಿಕ್ಕಲು ಕ್ರಮವಹಿಸುವುದಾಗಿ ಅವರು ತಿಳಿಸಿದರು.
ಪಿ.ಸಿ. ಮತ್ತು ಪಿ.ಎನ್.ಡಿ.ಟಿ. ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ 2024-25 ನೇ ಸಾಲಿನಲ್ಲಿ ಬಸ್ ಬ್ರ್ಯಾಡಿಂಗ್, ಟ್ರೈನ್ ಬ್ರ್ಯಾಡಿಂಗ್, ರ್ಹೋಡಿಂಗ್ಸ್ ಗೋಡೆ ಬರಹ, ರೇಡಿಯೋ ಜಿಂಗಲ್ಸ್, ಮತ್ತು ಟಿ.ವಿ. ಸ್ಪಾಟ್ಸ್ ಮುಖಾಂತರ ಸಾರ್ವಜನಿಕರಿಗೆ ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆಯ ಕುರಿತು ಅರಿವು ಮೂಡಿಸಲಾಗುತ್ತಿದೆ. ಅಲ್ಲದೆ, ಪಿ.ಸಿ. & ಪಿ.ಎನ್.ಡಿ.ಟಿ. ಕಾಯ್ದೆಯ ಬಗ್ಗೆ ರಾಜ್ಯ ಮಟ್ಟದಿಂದ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಕಾಲಕಾಲಕ್ಕೆ ಅರಿವು ಮೂಡಿಸುವ ಕಾರ್ಯಾಗಾರವನ್ನು ಕೂಡ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ರಾಜ್ಯದಲ್ಲಿ ಇತ್ತೀಚೆಗೆ ಭ್ರೂಣ ಹತ್ಯೆ ಮತ್ತು ಲಿಂಗ ಪತ್ತೆ ಹಗರಣಗಳು ಮತ್ತೆ ಮುನ್ನೆಲೆಗೆ ಬಂದಿದ್ದು, ಆರೋಗ್ಯ ಇಲಾಖೆ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆಗಳನ್ನು ನಡೆಸಿ ಹಲವು ಜಾಲಗಳನ್ನು ಭೇದಿಸಿದ್ದರು. ಈ ಕೃತ್ಯಗಳು ರಾಜ್ಯದಾದ್ಯಂತ ಅದರಲ್ಲೂ ವಿಶೇಷವಾಗಿ ಮೈಸೂರು, ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಭಾಗಗಳಲ್ಲಿ ನಡೆಯುತ್ತಿರುವುದು ಬೆಳಕಿಗೆ ಬಂದಿತ್ತು.
ಲಿಂಗ ಪತ್ತೆ ಜಾಲ
ಕಳೆದ ಕೆಲವು ತಿಂಗಳುಗಳಲ್ಲಿ ಮೈಸೂರು ಜಿಲ್ಲೆಯು ಅಕ್ರಮ ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ಪ್ರಕರಣಗಳ ಪ್ರಮುಖ ಕೇಂದ್ರಬಿಂದುವಾಗಿದೆ. ಅಕ್ಟೋಬರ್ 2025 ರಲ್ಲಿ ಮೈಸೂರಿನಲ್ಲಿ ತೋಟದ ಮನೆಯೊಂದರಲ್ಲಿ ಅಕ್ರಮವಾಗಿ ಲಿಂಗ ಪತ್ತೆ ಮಾಡಿ ಭ್ರೂಣ ಹತ್ಯೆ ನಡೆಸುತ್ತಿದ್ದ ಜಾಲವೊಂದನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿ ಒಬ್ಬ ಮಹಿಳೆ ಸೇರಿ ಮೂವರನ್ನು ಬಂಧಿಸಿದ್ದರು. ಈ ವೇಳೆ, ಭ್ರೂಣ ಹತ್ಯೆಗೆ ಬೇಕಾದ ಕಿಟ್‌ಗಳು, ಔಷಧಿಗಳು ಹಾಗೂ 3 ಲಕ್ಷರೂ ಹೆಚ್ಚು ನಗದನ್ನು ವಶಪಡಿಸಿಕೊಂಡಿದ್ದರು.
ಕರ್ನಾಟಕಕ್ಕೆ ಹೊಂದಿಕೊಂಡಿರುವ ನೆರೆ ರಾಜ್ಯಗಳಲ್ಲಿಯೂ ಕರ್ನಾಟಕದ ತಾಯಂದಿರ ಭ್ರೂಣ ಹತ್ಯೆ ನಡೆಯುತ್ತಿರುವ ಆತಂಕಕಾರಿ ವಿಷಯ ಇತ್ತೀಚೆಗೆ ಬಯಲಾಗಿತ್ತು. ಸೆಪ್ಟೆಂಬರ್‌ನಲ್ಲಿ ಕರ್ನಾಟಕ ಆರೋಗ್ಯ ಇಲಾಖೆಯ ಅಧಿಕಾರಿಗಳು, ಆಂಧ್ರಪ್ರದೇಶದ ಅಧಿಕಾರಿಗಳ ಸಹಯೋಗದೊಂದಿಗೆ ಸ್ಟಿಂಗ್ ಆಪರೇಷನ್ ನಡೆಸಿ ಅಂತರ್-ರಾಜ್ಯ ಹೆಣ್ಣು ಭ್ರೂಣ ಹತ್ಯೆ ಯತ್ನವನ್ನು ವಿಫಲಗೊಳಿಸಿದ್ದರು. ಐದು ತಿಂಗಳ ಗರ್ಭಿಣಿಯೊಬ್ಬರು ಭ್ರೂಣವು ಹೆಣ್ಣು ಎಂದು ತಿಳಿದು ವೈದ್ಯಕೀಯ ಗರ್ಭಪಾತಕ್ಕೆ ಮುಂದಾಗಿದ್ದರು. ಆಂಧ್ರದ ಗುಂತಕಲ್‌ನಲ್ಲಿ ಈ ಅಕ್ರಮ ಕೃತ್ಯ ನಡೆಯುತ್ತಿತ್ತು.