ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ; ₹2.09 ಲಕ್ಷ ಮೌಲ್ಯದ ಮಾಲು ವಶ
ಡಿಸೆಂಬರ್ 13ರಂದು ಹೆಬ್ಬಾಳ ಪೊಲೀಸ್ ಠಾಣಾ ಅಧಿಕಾರಿಗಳಿಗೆ ಖಚಿತ ಮಾಹಿತಿ ಲಭಿಸಿತ್ತು. ಠಾಣಾ ವ್ಯಾಪ್ತಿಯ ವಿ.ನಾಗೇನಹಳ್ಳಿಯ ರೈಲ್ವೆ ಟ್ರ್ಯಾಕ್ ಬಳಿ ಇಬ್ಬರು ವ್ಯಕ್ತಿಗಳು ದ್ವಿಚಕ್ರ ವಾಹನದಲ್ಲಿ ಗಾಂಜಾ ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದರು.
ಸಾಂದರ್ಭಿಕ ಚಿತ್ರ
ನಗರದ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಿತ ಮಾದಕ ವಸ್ತುವಾದ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 2 ಕೆ.ಜಿ 93 ಗ್ರಾಂ ತೂಕದ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಸೆಂಬರ್ 13ರಂದು ಹೆಬ್ಬಾಳ ಪೊಲೀಸ್ ಠಾಣಾ ಅಧಿಕಾರಿಗಳಿಗೆ ಖಚಿತ ಮಾಹಿತಿ ಲಭಿಸಿತ್ತು. ಠಾಣಾ ವ್ಯಾಪ್ತಿಯ ವಿ.ನಾಗೇನಹಳ್ಳಿಯ ರೈಲ್ವೆ ಟ್ರ್ಯಾಕ್ ಬಳಿ ಇಬ್ಬರು ವ್ಯಕ್ತಿಗಳು ದ್ವಿಚಕ್ರ ವಾಹನದಲ್ಲಿ ಗಾಂಜಾ ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದರು. ಪೊಲೀಸರು, ಸ್ಥಳಕ್ಕೆ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ, ಆರೋಪಿಗಳು ಹಣ ಸಂಪಾದಿಸುವ ದುರುದ್ದೇಶದಿಂದ ಅಪರಿಚಿತ ವ್ಯಕ್ತಿಯೊಬ್ಬನಿಂದ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ, ಅದನ್ನು ಹೆಚ್ಚಿನ ಬೆಲೆಗೆ ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ.
ವಶಪಡಿಸಿಕೊಂಡ ಸೊತ್ತು
ಆರೋಪಿಗಳಿಂದ ಒಟ್ಟು 2,09,300 ರೂಪಾಯಿ ಮೌಲ್ಯದ ಸೊತ್ತುಗಳನ್ನು ಜಪ್ತಿ ಮಾಡಲಾಗಿದೆ. ಇದರಲ್ಲಿ 2 ಕೆ.ಜಿ 93 ಗ್ರಾಂ ಗಾಂಜಾ ಮತ್ತು ಒಂದು ದ್ವಿಚಕ್ರ ವಾಹನ ಸೇರಿದೆ. ಆರೋಪಿಗಳ ವಿರುದ್ಧ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಡಿಸೆಂಬರ್ 13 ರಂದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.