ಗೃಹಲಕ್ಷ್ಮಿ ಗದ್ದಲ| ಪ್ರತಿಪಕ್ಷಗಳು ಗೃಹ "ಲಕ್ಷ್ಮೀ" ಹೆಬ್ಬಾಳ್ಕರ್ ನಡೆ ಟೀಕಿಸಿದ್ದೇಕೆ ?
ಗೃಹಲಕ್ಷ್ಮಿ ಯೋಜನೆಯ ಫೆಬ್ರವರಿ, ಮಾರ್ಚ್ ತಿಂಗಳ ಕಂತು ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು. ನಾನು ಮಹಿಳೆ ಎಂಬ ಕಾರಣಕ್ಕೆ ಪ್ರತಿಪಕ್ಷಗಳು ಯೋಜನೆಯನ್ನು ಟೀಕಿಸುತ್ತಿವೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಆರೋಪಿಸಿದ್ದಾರೆ.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
ರಾಜ್ಯದಲ್ಲಿ ಪ್ರತಿ ಮನೆಯ ಯಜಮಾನಿ ಖಾತೆಗೆ ಇಲ್ಲಿಯವರೆಗೂ ಒಟ್ಟು 54,800 ಕೋಟಿ ರೂ. ಹಣ ಜಮೆ ಮಾಡಲಾಗಿದೆ. ಇದು ಅತ್ಯಂತ ಯಶಸ್ವಿ ಯೋಜನೆ. ಆದರೆ, ನಾನು ಮಹಿಳೆ ಎಂಬ ಕಾರಣದಿಂದ ಪ್ರತಿಪಕ್ಷಗಳು ಯೋಜನೆ ಟೀಕಿಸುತ್ತಿವೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಆರೋಪಿಸಿದರು.
ಬುಧವಾರ (ಡಿ.17) ವಿಧಾನಸಭೆಯಲ್ಲಿ ಮಾತನಾಡಿದ ಅವರು, ಇಲ್ಲಿಯವರೆಗೂ 23 ಕಂತು ಜಮೆ ಮಾಡಲಾಗಿದೆ. ಇಷ್ಟು ಮಾಹಿತಿ ನೀಡಿದರೂ ವಿಪಕ್ಷಗಳು ಪದೇ ಪದೇ ಫೆಬ್ರವರಿ, ಮಾರ್ಚ್ ತಿಂಗಳ ಹಣ ಹಾಕಿದ್ದೀರಾ ಎಂದು ಕೇಳುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಹಣವನ್ನು ತಲುಪಿಸುವ ಕೆಲಸ ಮಾಡುತ್ತೇವೆ. ನಾನು ಜವಾಬ್ದಾರಿ ಸ್ಥಾನದಲ್ಲಿ ಇದ್ದೇನೆ. ಸದನವನ್ನು ದಾರಿ ತಪ್ಪಿಸುವ ಕೆಲಸ ಮಾಡುವುದಿಲ್ಲಎಂದು ತಿಳಿಸಿದರು.
ಆರ್ಥಿಕ ಇಲಾಖೆ ಜೊತೆ ಮಾತನಾಡುತ್ತೇನೆ. ಹಣ ಜಮೆ ಮಾಡಲು ಹೇಳುತ್ತೇನೆ. ಹಾಗೆಂದು, ಬೇರೆಡೆ ಹಣ ವರ್ಗಾವಣೆಯಾಗಿದೆ ಎಂದಲ್ಲ. ಈ ವಿಷಯದಲ್ಲಿ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ತಿಳಿಸಿದರು.
ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಕ್ಕೆ ನಿಂತ ಡಿಸಿಎಂ
ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿ, ಎರಡು ತಿಂಗಳು ಹಣ ಹಾಕಿಲ್ಲ ಎಂಬುದು ನಿಜ. ಅದು ಬೇಕು ಎಂದು ಆಗಿರುವುದಲ್ಲ. ವಿಪಕ್ಷಗಳು ಸರ್ಕಾರ ದಿವಾಳಿಯಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾದ ಕೋಟ್ಯಂತರ ರೂ. ಬಾಕಿ ಉಳಿಸಿಕೊಂಡಿದೆ. ಹಾಗೆಂದರೆ ಕೇಂದ್ರ ಸರ್ಕಾರ ದಿವಾಳಿಯಾಗಿದೆ ಎಂದು ನಾವು ಹೇಳಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಸಚಿವರು ಸದನಕ್ಕೆ ಮಾಹಿತಿ ನೀಡಿದಾಗ ನಾನೂ ಹಾಜರಿದ್ದೆ. ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದೇನೆ. ಸೆಪ್ಟೆಂಬರ್‌ವರೆಗೂ ಹಣ ಜಮೆಯಾಗಿದೆ ಎಂದು ತಿಳಿಸಿದ್ದಾರೆ. ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಕೂಡ ಸ್ಪಷ್ಟನೆ ಕೊಟ್ಟಿದ್ದಾರೆ. ಕೇಂದ್ರ ಸರ್ಕಾರ ಭದ್ರ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಘೋಷಣೆ ಮಾಡಿತ್ತು. ಜಲ ಜೀವನ್ ಯೋಜನೆ ಗೆ ಹಣ ಕೊಟ್ಟಿಲ್ಲ. ನಮ್ಮ ಗ್ಯಾರಂಟಿಗಳನ್ನು ನಕಲು ಮಾಡಿ ಬೇರೆ ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸುತ್ತಿದೆ ಎಂದು ತಿಳಿಸಿದರು.
ಪ್ರತಿಪಕ್ಷಗಳಿಂದ ಸಭಾತ್ಯಾಗ
ಸಮಾಜದಲ್ಲಿ ಪುರುಷರಷ್ಟೇ ಮಹಿಳೆಯರು ಸಮಾನರು. ಪುರುಷ ಅಥವಾ ಮಹಿಳೆ ಎಂದು ಸದನದ ರೂಲ್‌ಬುಕ್‌ನಲ್ಲಿ ಇಲ್ಲ, ಮಂತ್ರಿ ಎಂದು ಇದೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಉತ್ತರವನ್ನು ನಾವು ಒಪ್ಪುವುದಿಲ್ಲ. ಎರಡು ತಿಂಗಳ ಹಣವನ್ನು ಯಾವಾಗ ಕೊಡುತ್ತೇವೆ ಎಂದು ಮಾಹಿತಿ ನೀಡಿಲ್ಲ. ಗೃಹಲಕ್ಷ್ಮಿ ಬಗ್ಗೆ ಮಾಹಿತಿ ಕೇಳಿದರೆ ಕೊಟ್ಟಿದ್ದೇವೆ ಎಂದು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಇದು ಇಡೀ ಸದನಕ್ಕೆ ಆದ ಅಗೌರವ. ಪ್ರತೀ ತಿಂಗಳು 2,480 ಕೋಟಿ ರೂ. ಗೃಹಲಕ್ಷ್ಮಿ ಹಣ ಕೊಡಬೇಕು. ಎರಡು ತಿಂಗಳಿಗೆ 5 ಸಾವಿರ ಕೋಟಿ ಆಗಲಿದೆ. ಗೃಹಲಕ್ಷ್ಮಿ ಹಣ ಬರಲಿದೆ ಎಂದು ಮಹಿಳೆಯರು ಕಾಯುತ್ತಿದ್ದಾರೆ. ನಮಗೆ ಉತ್ತರ ನೀಡಬೇಕು ಇಲ್ಲವೇ ಸಭಾತ್ಯಾಗ ಮಾಡಲಾಗುವುದು ಎಂದು ವಿಪಕ್ಷ ನಾಯಕ ಆರ್. ಅಶೋಕ್ ತಿಳಿಸಿದರು.
ಸಚಿವರು ಇದು ಉತ್ತಮ ಯೋಜನೆ ಎಂದು ಹೇಳುತ್ತಾರೆ. ಆದರೆ ಎರಡು ತಿಂಗಳ ಹಣ ಹಾಕಿಲ್ಲ. ಕೊಡಲು ನಮ್ಮಬಳಿ ಹಣ ಇಲ್ಲ. ಸರ್ಕಾರ ದಿವಾಳಿಯಾಗಿದೆ ಎಂದು ಹೇಳಲಿ. ತಮ್ಮ ತಪ್ಪನ್ನ ಒಪ್ಪಿಕೊಳ್ಳಲಿ. ಈಗ ಹಣ ಹಾಕಿ ಸದನಕ್ಕೆ ಬಂದಿದ್ದೇನೆ ಎಂದು ಹೇಳಿದ್ದರೆ ಒಪ್ಪುತ್ತಿದ್ದೆವು. ಆದರೆ ಸಚಿವರು ಹಾಗೇಯೇ ಬಂದು ಹಣ ಕೊಟ್ಟಿಲ್ಲ ಎಂದು ಹೇಳುತ್ತಿದ್ದಾರೆ. ಇದು ಸರ್ಕಾರ ದಿವಾಳಿಯಾಗಿದೆ ಎಂಬುದರ ಸೂಚನೆ ಎಂದರು.