ಗದ್ದುಗೆ ಗುದ್ದಾಟ| ʼಮಾತೇ ಮಾಣಿಕ್ಯʼ ಎಂದ ಡಿಕೆಶಿ ಮಾತಿನ ಮರ್ಮವೇನು; ಇದು ನೆನಪೋಲೆಯೋ, ಎಚ್ಚರಿಕೆಯೋ?

ನ್ಯಾಯಾಧೀಶರಾಗಲಿ, ಅಧ್ಯಕ್ಷರಾಗಲಿ ಅಥವಾ ನಾನು ಸೇರಿದಂತೆ ಬೇರೆ ಯಾರೇ ಆಗಿರಲಿ, ಎಲ್ಲರೂ ಹೇಳಿದಂತೆ ನಡೆಯಬೇಕು. ಪದ ಶಕ್ತಿಯೇ ವಿಶ್ವ ಶಕ್ತಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Update: 2025-11-27 09:07 GMT
Click the Play button to listen to article

ಕರ್ನಾಟಕದಲ್ಲಿ ಸರ್ಕಾರ ರಚನೆ ಸಂದರ್ಭದಲ್ಲಿ ನಡೆದಿತ್ತು ಎನ್ನಲಾದ ಅಧಿಕಾರ ಹಂಚಿಕೆ ಒಪ್ಪಂದದ ವಿಚಾರ ಮುನ್ನೆಲೆಗೆ ಬಂದಿದೆ. ನಾಲ್ಕೈದು ಜನರ ನಡುವೆ ರಹಸ್ಯ ಮಾತುಕತೆ ನಡೆದಿರುವುದು ನಿಜ, ಆದರೆ, ಅದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದ ಡಿ.ಕೆ. ಶಿವಕುಮಾರ್‌ ಈಗ ಅದೇ ವಿಚಾರ ಪ್ರಸ್ತಾಪಿಸಿ ಸಿಎಂ ಸಿದ್ದರಾಮಯ್ಯ ಹಾಗೂ ಹೈಕಮಾಂಡ್‌ ನಾಯಕರಿಗೆ ಟಾಂಗ್‌ ನೀಡಿದ್ದಾರೆ.

"ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ" ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡುವ ಮೂಲಕ ಕೊಟ್ಟ ಮಾತಿನಂತೆ ನಡೆಯಿರಿ ಎಂಬ ಪಕ್ಷದ ನಾಯಕರನ್ನು ಆಗ್ರಹಿಸಿದ್ದಾರೆ. ಅಧಿಕಾರ ಹಂಚಿಕೆ ಒಪ್ಪಂದದ ಚರ್ಚೆಗಳು ಹಾಗೂ ನಾಯಕತ್ವ ಬದಲಾವಣೆ ಗೊಂದಲಗಳ ನಡುವೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರ ಈ ಹೇಳಿಕೆ ತೀವ್ರ ಕುತೂಹಲ ಮೂಡಿಸಿದೆ.

ಸಾಮಾಜಿಕ ಜಾಲತಾಣ ʼಎಕ್ಸ್‌ʼನಲ್ಲಿ "ಪದ ಶಕ್ತಿಯೇ ವಿಶ್ವ ಶಕ್ತಿ. ಜಗತ್ತಿನ ಅತಿದೊಡ್ಡ ಶಕ್ತಿ ಎಂದರೆ ಕೊಟ್ಟ ಮಾತು ಉಳಿಸಿಕೊಳ್ಳುವುದು. ನ್ಯಾಯಾಧೀಶರಾಗಲಿ, ಅಧ್ಯಕ್ಷರಾಗಲಿ ಅಥವಾ ನಾನು ಸೇರಿದಂತೆ ಬೇರೆ ಯಾರೇ ಆಗಿರಲಿ, ಎಲ್ಲರೂ ಹೇಳಿದಂತೆ ನಡೆಯಬೇಕು" ಎಂದು ಪೋಸ್ಟ್‌ ಮಾಡಿದ್ದಾರೆ.  

ಹೈಕಮಾಂಡ್‌, ಸಿಎಂಗೆ ಎಚ್ಚರಿಕೆಯೇ?

ಕಳೆದ ಕೆಲ ದಿನಗಳಿಂದ ಐದು ವರ್ಷ ನಾನೇ ಸಿಎಂ ಎಂದು ಸಿದ್ದರಾಮಯ್ಯ ಹೇಳಿಕೊಳ್ಳುತ್ತಿದ್ದಾರೆ. ಸಿಎಂ ಆಪ್ತ ವಲಯದ ಸಚಿವರು, ಶಾಸಕರು ಕೂಡ ಹೋದ ಕಡೆಯಲ್ಲೆಲ್ಲಾ ಸಿದ್ದರಾಮಯ್ಯ ಪರ ಬ್ಯಾಟಿಂಗ್‌ ಮಾಡುತ್ತಿದ್ದಾರೆ. ಆದರೂ ಧೃತಿಗೆಡದ ಡಿ.ಕೆ. ಶಿವಕುಮಾರ್‌ ಅವರು ಪ್ರತಿ ಹಂತದಲ್ಲೂ ಹೈಕಮಾಂಡ್‌ ಮಾತೇ ಅಂತಿಮ ಎನ್ನುತ್ತಾ ಸಂಯಮ ಕಾಯ್ದುಕೊಂಡಿದ್ದರು. ಆದರೆ, ಈಗ ಸಿದ್ದರಾಮಯ್ಯ ಅವರು ಎರಡೂವರೆ ವರ್ಷದ ಅಧಿಕಾರ ಪೂರ್ಣಗೊಳಿಸುತ್ತಿದ್ದಂತೆ ಅಧಿಕಾರ ಹಂಚಿಕೆ ಒಪ್ಪಂದದ ವಿಚಾರವನ್ನು ಹೈಕಮಾಂಡ್‌ ಮುಂದಿಟ್ಟು, ನಾಯಕತ್ವ ಬದಲಿಸುವಂತೆ ಪಟ್ಟು ಹಿಡಿದಿದ್ದಾರೆ. ಡಿಕೆಶಿ ಮಾತುಗಳಿಗೆ ಹೈಕಮಾಂಡ್‌ ನಾಯಕರು ಯಾವುದೇ ಹೇಳಿಕೆ ನೀಡದೇ ಮೌನ ವಹಿಸಿರುವುದು ಶಿವಕುಮಾರ್‌ ಅವರನ್ನು ಕೆರಳಿಸಿದೆ.

ಟ್ವೀಟ್‌ ಬಗ್ಗೆ ಉಲ್ಟಾ ಹೊಡೆದ ಡಿಸಿಎಂ

ಅಧಿಕಾರ ಹಂಚಿಕೆ ಕುರಿತು ನಾನು ಯಾವುದೇ ಪೋಸ್ಟ್‌ ಮಾಡಿಲ್ಲ ಎಂದು ಹೇಳುವ ಮೂಲಕ ಡಿಸಿಎಂ ಡಿ.ಕೆ. ಶಿವಕುಮಾರ್‌ ಉಲ್ಟಾ ಹೊಡೆದಿದ್ದಾರೆ. ಗುರುವಾರ(ನ.27) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಕೊಟ್ಟ ಮಾತಿನ ವಿಚಾರ ಎಲ್ಲೂ ಮಾತನಾಡಿಲ್ಲ. ನಾನು ಯಾವುದೇ ಪೋಸ್ಟ್ ಮಾಡಿಲ್ಲ. ಹೈಕಮಾಂಡ್ ಕರೆ ಮಾಡಿದಾಗ ಸಿಎಂ ಮತ್ತು ನಾನು‌ ಮಾತನಾಡಿಕೊಂಡು ದೆಹಲಿಗೆ ಹೋಗುತ್ತೇವೆ ಎಂದು ತಿಳಿಸಿದ್ದಾರೆ.

ಐದು ವರ್ಷವೂ ಸಿದ್ದರಾಮಯ್ಯ ಸಿಎಂ: ಜಮೀರ್‌

ಅಧಿಕಾರ ಹಂಚಿಕೆ ಕುರಿತು ಚರ್ಚೆಗಳಾಗುತ್ತಿರುವ ವೇಳೆಯಲ್ಲೇ ಸಿಎಂ ಆಪ್ತ ಸಚಿವ ಜಮೀರ್ ಅಹಮದ್ ಖಾನ್, ಸಿಎಂ ಕುರ್ಚಿ ಖಾಲಿಯಿಲ್ಲ. 2028 ರವರೆಗೂ ಸಿದ್ದರಾಮಯ್ಯನವರೇ ಸಿಎಂ ಆಗಿ ಮುಂದುವರೆಯುತ್ತಾರೆ. ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ. ಹೈಕಮಾಂಡ್ ತೀರ್ಮಾನಕ್ಕೆ ಬದ್ದರಾಗಿದ್ದೇವೆ ಎಂದು ತಿಳಿಸಿದ್ದಾರೆ.

ಈ ಹಿಂದೆಯೂ ಜಮೀರ್‌ ಅವರು ಸಿಎಂ ಸ್ಥಾನ ಖಾಲಿ ಇಲ್ಲ, ಡಿ.ಕೆ. ಶಿವಕುಮಾರ್‌ ಅವರಿಗೂ ಸಿಎಂ ಆಗುವ ಆಸೆಯಿದೆ. ಅವರು ೨೦೨೮ಕ್ಕೆ ಮುಖ್ಯಮಂತ್ರಿಯಾಗಲಿ ಎಂದು ಹೇಳಿದ್ದರು.

ಹೈಕಮಾಂಡ್‌ನಿಂದ ಗೊಂದಲಕ್ಕೆ ಶೀಘ್ರ ತೆರೆ: ಹೆಬ್ಬಾಳ್ಕರ್‌

ನಾಯಕತ್ವ ಬದಲಾವಣೆ ಹಾಗೂ ಸಚಿವ ಸಂಪುಟ ಪುನಾರಚನೆ ಬಗ್ಗೆ ಹೈಕಮಾಂಡ್‌ ನಾಯಕರು ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹಿರಿಯರಿದ್ದು ಆದಷ್ಟು ಬೇಗ ಗೊಂದಲಗಳಿಗೆ ತೆರೆ ಎಳೆಯುತ್ತಾರೆ. ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲರೂ ಬದ್ದರಾಗಿದ್ದೇವೆ. ಅಧಿಕಾರ ಹಂಚಿಕೆ ಬಗ್ಗೆ ನಮಗೆ ಕಲ್ಪನೆಯೂ ಇಲ್ಲ. ಡಿಸಿಎಂ ಡಿ.ಕೆ. ಶಿವಕುಮಾರ್ ಸಾಮಾಜಿಕ ಜಾಲತಾಣ ʼಎಕ್ಸ್‌ʼ ನಲ್ಲಿ ಸಂದೇಶವನ್ನು ನಾನೂ ಗಮನಿಸಿದ್ದೇನೆ. ಇದರ ಬಗ್ಗೆ ಅವರೇ ಸ್ಪಷ್ಟನೆ ನೀಡಲಿದ್ದಾರೆ ಎಂದು ಹೇಳಿದರು.

Tags:    

Similar News