BIFFes-2025 : ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ತೆರೆ ಸರಿಯಲು ಕ್ಷಣಗಣನೆ
BIFFes ನ ಹದಿನಾರನೇ ಅವೃತ್ತಿಗೆ ತೆರೆ ಮೇಲೇಳಲು ಕ್ಷಣಗಣನೆ ಆರಂಭವಾಗಿದೆ. ಭಾನುವಾರದಿಂದ ಓರಾಯನ್ ಮಾಲ್ ನ 11 ತೆರೆಗಳಲ್ಲಿ , ಡಾ ರಾಜ್ ಕುಮಾರ್ ಸಭಾಂಗಣ ಮತ್ತು ಸುಚಿತ್ರಾ ಫಿಲಂ ಸೋಸೈಟಿಯಲ್ಲಿ ಚಿತ್ರಗಳ ಪ್ರದರ್ಶನ ಆರಂಭವಾಗುತ್ತದೆ.;
ಅಂತಾರಾಷ್ಟ್ರೀಯ ಸಿನಿಮಾ ನಿರ್ಮಾಪಕರ ಸಂಘಟನೆಗಳ ಒಕ್ಕೂಟ Federation of International Film Producers Association (FIAPF) ನಿಂದ ಅಧಿಕೃತವಾಗಿ ಅಂಗೀಕೃತವಾಗಿರುವ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (BIFFes-2025)ನ ಹದಿನಾರನೇ ಆವೃತ್ತಿಯ ಉದ್ಘಾಟನೆ ಶನಿವಾರ. ಆದರೂ ಜನ ಬಯಸುವ ಚಿತ್ರಗಳ ಪ್ರದರ್ಶನ ಆರಂಭವಾಗುವುದು ಭಾನುವಾರ ಬೆಳಗಿನಿಂದ.
ಅದಕ್ಕೆ ಮುನ್ನ ಈಗಾಗಲೇ ನೊಂದಾಯಿಸಿಕೊಂಡಿರುವವರು ಮಾಡಬೇಕಿರುವುದು ಇಷ್ಟು; ಬೆಳಿಗ್ಗೆ ಓರಾಯನ್ ಮಾಲ್ ತಲುಪಿ ಅಲ್ಲಿ ಹೆಸರು ನೊಂದಾಯಿಸಿಕೊಂಡು ಅಧಿಕೃತ ಕಾರ್ಡ್ ಪಡೆದವರು ಆವರಣದಲ್ಲಿ ತೆರೆಯುವ ಕೌಂಟರ್ ಗಳ ಬಳಿ ಹೋಗಿ ತಮ್ಮ ಕಾರ್ಡ್ ಗಳನ್ನು ತೋರಿಸಿ, ಅಲ್ಲಿ ಕೊಡುವ catalogue ಮತ್ತು ಪ್ರದರ್ಶನಗೊಳ್ಳುವ ಚಿತ್ರಗಳ ವಿವರಗಳಿರುವ ಪುಟ್ಟ ಪುಸ್ತಿಕೆ ಇರುವ ಚೀಲವನ್ನು ಪಡೆದುಕೊಳ್ಳಬೇಕು.
ನಂತರ ಅವರು ತಮ್ಮ ಆಯ್ಕೆಯ ಚಿತ್ರಗಳನ್ನು ವೀಕ್ಷಿಸಬಹುದು ಎಂದು ವಾರ್ತಾ ಮತ್ತು ಪ್ರಚಾರ ಇಲಾಖೆಯ ಆಯುಕ್ತ ಹೇಮಂತ ನಿಂಬಾಳ್ಕರ್, ದ ಫೆಡರಲ್ ಕರ್ನಾಟಕದೊಂದಿಗೆ ಮಾತನಾಡಿ ಸ್ಪಷ್ಟಪಡಿಸಿದ್ದಾರೆ. ಕಳೆದ ಬಾರಿಯಂತೆ ಗೊಂದಲವಾಗದಂತೆ ಎಲ್ಲ ಎಚ್ಚರಿಕೆಯನ್ನು ಕೈಗೊಳ್ಳಲಾಗಿದೆ. ಸಿನಿಮಾ ಪ್ರೀತಿಸುವವರಿಗೆ ಯಾವುದೇ ತೊಂದರೆಯಾಗದಂತೆ ಎಲ್ಲ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾದ ಸಾಧು ಕೋಕಿಲ ಸ್ಪಷ್ಟಪಡಿಸಿದ್ದಾರೆ.
ಶಿವರಾಜ್ ಕುಮಾರ್ ಅವರಿಂದ ಪುಸ್ತಕ ಬಿಡುಗಡೆ
ಶನಿವಾರ ಸಂಜೆ ವಿಧಾನ ಸೌಧದ ಪೂರ್ವದ್ವಾರದ ಮೆಟ್ಟಿಲುಗಳಿಗಂಟಿದಂತಿರುವ ವೇದಿಕೆಯ ಮೇಲೆ ಚಿತ್ರೋತ್ಸವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಅವರ ಜೊತೆಯಲ್ಲಿ ವಿಶೇಷ ಅತಿಥಿಯಾಗಿ ಕೇಂದ್ರದ ಹಣಕಾಸು ಮತ್ತು ಕಾರ್ಪೋರೇಟ್ ವ್ಯವಹಾರಗಳ ಸಚಿವರಾದ ನಿರ್ಮಲಾ ಸೀತಾರಾಮನ್ ಇರುತ್ತಾರೆ. ಕನ್ನಡದ ಹಿರಿಯ ನಟ ಡಾ. ಶಿವರಾಜ್ ಕುಮಾರ್ ಅವರು ಕರ್ನಾಟಕ ಚಲನಚಿತ್ರ ಅಕಾಡೆಮಿ ಹೊರತಂದಿರುವ ಕನ್ನಡ ಚಿತ್ರರಂಗ ಕುರಿತ ನಾಲ್ಕು ಪುಸ್ತಕಗಳು ಹಾಗೂ ಭಾರತೀಯ ಚಿತ್ರರಂಗದ ದಿಗ್ಗಜರಲ್ಲಿ ಒಬ್ಬರಾದ ಗಿರೀಶ್ ಕಾರ್ನಾಡ್ ಅವರ ಮೇಲೆ ಬರೆದಿರುವ ಮತ್ತೊಂದು ಪುಸ್ತಕ ಹಾಗೂ ಚಲನಚಿತ್ರೋತ್ಸವದ ಕೈಪಿಡಿಯನ್ನು ಬಿಡುಗಡೆ ಮಾಡಲಿದ್ದಾರೆ.
ಕೊರಗು ನಿವಾರಿಸುವ ಸಿನಿಮಾವಕಾಶ
ಕೆಲವು ಸಿನಿಮಾಗಳನ್ನು ಡಾ ರಾಜ್ ಕುಮಾರ್ ಭವನ ಮತ್ತು ಬನಶಂಕರಿಯ ಸುಚಿತ್ರ ಫಿಲಂ ಸೊಸೈಟಿಯಲ್ಲಿ ತೋರಿಸಲಾಗುವುದು ಎಂದು ಕಲಾತ್ಮಕ ನಿರ್ದೇಶಕ ಎನ್ ವಿದ್ಯಾಶಂಕರ ಹೇಳಿದ್ದಾರೆ. “ನೊಂದಾವಣೆ ಆರಂಭಗೊಂಡ ಮೂರೇ ದಿನದಲ್ಲಿ ಈಗಾಗಲೇ ಮೂರು ಸಾವಿರಕ್ಕೂ ಹೆಚ್ಚ ಮಂದಿ ಚಿತ್ರ ನೋಡಲು ತಮ್ಮ ಹೆಸರುಗಳನ್ನು ನೊಂದಾಯಿಸಿಕೊಂಡಿದ್ದಾರೆ. ಭಾನುವಾರದಿಂದ ಮುಂದಿನ ಶನಿವಾರದವರೆಗೂ, ಓರಾಯನ್ ಮಾಲ್‌ನಲ್ಲಿ ಸಿನಿಮಾ ಸಂತೆಯಂಥ ವಾತಾವರಣ ಕಾಣಲು ಸಿಗುತ್ತದೆ.
ಜಗತ್ತಿನ ಚಿತ್ರೋತ್ಸವದ ಆಯ್ದ ʻಹೂರಣʼದಂಥ ಸಿನಿಮಾಗಳು
ದ ಫೆಡರಲ್ ಕರ್ನಾಟಕ ಈಗಾಗಲೇ, ಈ ಆವೃತ್ತಿಯಲ್ಲಿ ಪ್ರದರ್ಶನಗೊಳ್ಳು ಚಿತ್ರಗಳ ಬಗ್ಗೆ ವಿವರವಾದ ವರದಿಯನ್ನು ಪ್ರಕಟಿಸಿದೆ. ಅವುಗಳ ಹೊರತಾಗಿಯೂ, ಪ್ರೇಕ್ಷಕರು ನೋಡಲಿಚ್ಛಿಸುವ ಇನ್ನಷ್ಟು ಚಿತ್ರಗಳ ಬಗ್ಗೆ ಇಲ್ಲಿ ವಿವರ ನೀಡಲಾಗಿದೆ. ಕಾರ್ಲೋವರಿ, ಬರ್ಲಿನ್, ಕಾನ್, ವೆನಿಸ್, ಮ್ಯೂನಿಚ್, ಷಿಕಾಗೋ, ಟೊರಾಂಟೋ, ರೋಮ್, ಹಾಂಗ್ಕಾಂಗ್, ಮಾಂಟೆಕಾರ್ಲೋ, ಮ್ಯಾನ್ಹೇಮ್-ಹೈಡಲ್ ಬರ್ಗ್, ಸ್ಯಾನ್ ಸೆಬೆಸ್ಟಿಯನ್, ಸಿಂಗಪೂರ್, ಟೋಕಿಯೋ, ಅಥೆನ್ಸ್, ಸಾವ್ ಪ್ಯಾವ್ಲೋ, ಗೊತೇಬರ್ಗ್, ತ್ರಿಬೆಕ್ಕಾ, ಲೊಕಾರ್ನೋ, ಮೆಲ್ಬೋರ್ನ್, ಸಿಟ್ಗೇಟ್ ಕ್ಯಾಟನೋನಿಯನ್, ಪಿಂಗ್ಯೋ, ಸಿನೆಹೊರಾಯಿಜನ್, ನ್ಯೂಫೆಸ್ಟ್ (ನ್ಯೂಯಾರ್ಕ್), ವಾರ್ಸಾ, ಮಲಾಗಾ ಸ್ಪ್ಯಾನಿಷ್, ಮಾಂಟ್ರಿಯಲ್, ವ್ಯಾಲಡೋಲಿಡ್, ಲಂಡನ್, ವ್ಯಾಂಕೋವಾರ್, ಹಾಗೂ, ಆಸ್ಕರ್ ಪ್ರಶಸ್ತಿಗಾಗಿ ಸ್ಪರ್ಧಿಸಿದ ಹಲವು ಚಿತ್ರಗಳು Biffes ನ ಈ ಆವೃತ್ತಿಯಲ್ಲಿ ಪ್ರೇಕ್ಷಕರು ವೀಕ್ಷಿಸಬಹುದು.
ಫಿಪ್ರೆಸ್ಕಿ ಆಯ್ಕೆ
ಫಿಪ್ರೆಸ್ಕಿ ವಿಮರ್ಶಕರ ಒಕ್ಕೂಟದ (FIPRESCI International Federation of Film Critics) ಆಯ್ಕೆಯಾದ ನಾರ್ವೆಯ Lija Ingolfsdottir ಅವರ Loveble ̧ Maryam Moghaddam ಅವರ My Favourite Cake ̧ Boris Lorkine ಅವರ Souleymanés Story̧ ರುಮೇನಿಯಾದ Bogdan Muresanu ಅವರ The New Year That Never Came ̧ ವಿಯೆಟ್ನಾಮ್ ನ Truong Min Quy ಅವರ Viet And Nam ಐಸ್ಲ್ಯಾಂಡ್ ನ Runar Runarsson ಅವರ When the Light Breaks ̧ ಕೆನಡಾದ Meryam Joobeur ಅವರ Who Do I Belong To ಚಿತ್ರಗಳನ್ನು ವೀಕ್ಷಿಸಲು ಇಚ್ಛಿಸುವವರಿಗೆ ಇದೊಂದು ಅವಕಾಶ ಎನ್ನಿಸುತ್ತದೆ.
ನಿರ್ದಿಷ್ಟ ದೇಶಾಧಾರಿತ ಸಿನಿಮಾ
ನಿರ್ದಿಷ್ಟ ದೇಶ (Country Focus) ಬ್ರೆಜಿಲ್ ಮತ್ತು ಜಾರ್ಜಿಯಾ ಮೇಲೆ ಕೇಂದ್ರೀಕೃತವಾಗಿದ್ದು. ಆ ದೇಶಗಳ Marcelo Botta ಅವರ Betania , Fernando Combra ರ Carnival is Over ̧ Juliyana Rojas ಅವರ Cidede Campo ̧ Pedro Freire ಅವರ Malu ̧ Marianna Brennand ಅವರ Manas ̧ Dea Kulumbegshvili ಅವರ April ̧ Levin Akin ಅವರ Crossing ̧ Tato Kotetishivili ಅವರ Holy Electricity ̧ George Sikharulidze ಅವರ Panopticon ̧ Rusudan Glurjidze ಅವರ The Antique ಚಿತ್ರಗಳ ಪ್ರದರ್ಶನವಿರುತ್ತದೆ.
ಈ ಚಿತ್ರಗಳ ಹೊರತಾಗಿ ಕನ್ನಡ ಸಿನಿಮಾದ, ಭಾರತೀಯ ಸಿನಿಮಾದ ಹಾಗೂ ಸಮಕಾಲೀನ ಸಿನಿಮಾ ವಿಭಾಗದಲ್ಲಿ ನೋಡಬಹುದಾದ ಅತಿ ಮುಖ್ಯವಾದ ನೂರಕ್ಕೂ ಹೆಚ್ಚು ಸಿನಿಮಾಗಳಿವೆ. ಅವುಗಳನ್ನು ಆಯ್ದು ಪಟ್ಟಿ ಮಾಡುವುದು ಕಷ್ಟವಾದ ಕೆಲಸ. ಚಿತ್ರೋತ್ಸವ ನೀಡುವ ಪುಸ್ತಿಕೆಯಲ್ಲಿ ಅವುಗಳ ವಿವರ ಮತ್ತು ತಾರಗಣ, ನಿರ್ದೇಶಕ ಎಲ್ಲದರ ಬಗ್ಗೆಯೂ ವಿವರಗಳಿರುವುದರಿಂದ ಇಲ್ಲಿ ಅವುಗಳ ಬಗ್ಗೆ ವಿವರಗಳನ್ನು ನೀಡಿಲ್ಲ.
OTT ಕುರಿತ ಚರ್ಚೆ, ʻಅಮರನ್ʼ ತಂಡದೊಂದಿಗೆ ಮಾತುಕತೆ
ಚಿತ್ರ ನಿರ್ಮಾಣದ ಪಟ್ಟುಗಳನ್ನು ಕಲಿತುಕೊಳ್ಳುವ ತಿಳಿದುಕೊಳ್ಳುವ ಅರ್ಥಮಾಡಿಕೊಳ್ಳುವ ಬಯಸುವವರಿಗೆ ಮೊದಲೇ ತಿಳಿಸಿದಂತೆ ಸಾಕಷ್ಟು ಅವಕಾಶ ಕಲ್ಪಿಸಲಾಗಿದೆ. ಚಿತ್ರರಂಗ ಎದುರಿಸುತ್ತಿರುವ ನೂರಾರು ಸವಾಲುಗಳು, ತಾಂತ್ರಿಕ ಕಾರಣಗಳಿಗಾಗಿ ವಿಕಸನಗೊಂಡು ಹೊಸ ಆಯಾಮಗಳನ್ನು ಪಡೆದುಕೊಳ್ಳುತ್ತಿರುವ ಚಿತ್ರ ನಿರ್ಮಾಣ, ಓಟಿಟಿ (OTT) ವೇದಿಕೆಯು ಚಿತ್ರರಂಗದ ಮೇಲೆ ಮಾಡಿರುವ ಪರಿಣಾಮ ಕುರಿತು, ಚಿತ್ರರಂಗದ ಪ್ರಮುಖರಾದ ಶಿಜು ಪ್ರಭಾಕರನ್, ಸುಗತ ಮುಖರ್ಜಿ, ಮುಖೇಶ್ ಆರ್ ಮೆಹ್ತಾ ಹಾಗೂ ಬಲವಂತ್ ಸಿಂಗ್ ಅವರು ಸಾರ್ವಜನಿಕವಾಗಿ Master Class Sectionನಲ್ಲಿ ಚರ್ಚಿಸಲಿದ್ದಾರೆ. ಇದರ ಉಪಯೋಗ ಸದ್ಯಕ್ಕಂತೂ ಕನ್ನಡ ಚಿತ್ರರಂಗಕ್ಕೆ ಇದ್ದೇ ಇದೆ. ಚಿತ್ರರಂಗದ ಮೇಲೆ ಕೃತಕ ಬುದ್ದಿಮತ್ತೆ (Artificial Intelligence) ಕುರಿತು Whisling Woods Technical Team ತಿಳುವಳಿಕೆ ಕೊಡಲಿದೆ. ಛಾಯಾಗ್ರಹಣದ ಹೊಸ ಲೋಕದ ಮೇಲೆ ಎಸ್. ರವಿ ವರ್ಮನ್ ಅವರು ಬೆಳಕು ಚೆಲ್ಲಲಿದ್ದಾರೆ. ಇತ್ತೀಚೆಗೆ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಸೃಷ್ಟಿಸಿದ ಚಿತ್ರ ʻಅಮರನ್ʼ ಚಿತ್ರಕ್ಕೆ ಸಂಬಂದಿಸಿದಂತೆ ಚಿತ್ರ ತಂಡದೊಂದಿಗೆ ಮಾತುಕತೆ ನಡೆಯಲಿದೆ. ʼಚಲನಚಿತ್ರರಂಗದಲ್ಲಿ ಮಹಿಳೆʼ ಕುರಿತ ಚರ್ಚೆಯಲ್ಲಿ ಖ್ಯಾತ ನಟಿ ರಮ್ಯ ಹಾಗೂ ನಂದಿನಿ ರೆಡ್ಡಿ ಭಾಗವಹಿಸಲಿದ್ದಾರೆ.
ʻಸತಿ ಸುಲೋಚನʼ ಸಂಭ್ರಮ ಮತ್ತು ಮತ್ತೆ ʻಸತಿ ಸುಲೋಚನʼ
ಮತ್ತೊಂದು ಮುಖ್ಯವಾದ ಸಂಗತಿಯೆಂದರೆ, ಈ ಮಾರ್ಚಿ 3ಕ್ಕೆ ಕನ್ನಡ ಚಿತ್ರರಂಗ ತೊಂಭತ್ತೊಂದನೇ ವರ್ಷಕ್ಕೆ ಪಾದಾರ್ಪಣೆ ಮಾಡಲಿದೆ. ಮೊದಲ ಮಾತಿನ ಚಿತ್ರ ʻಸತಿ ಸುಲೋಚನʼದಿಂದ ಲೆಕ್ಕ ಹಿಡಿಯಲಾಗುತ್ತದೆ. ಈ ಸಂದರ್ಭಕ್ಕಾಗಿ ʻಸತಿ ಸುಲೋಚನʼ ಚಿತ್ರದ ನಾಯಕ ಸುಬ್ಬಯ್ಯ ನಾಯ್ಡು ಅವರ ಮೊಮ್ಮಗ ಸೃಜನ್ ಲೋಕೇಶ್ ಇರುತ್ತಾರೆ. ಇದೇ ಸಂದರ್ಭದಲ್ಲಿ ಈ ಚಿತ್ರದ ಗೀತೆಗಳನ್ನು ಲಕ್ಷ್ಮಣದಾಸ್ ಹಾಡಲಿದ್ದಾರೆ. ಈ ಚಿತ್ರದ ನಿರ್ದೇಶಕರಾದ ವೈ.ವಿ. ರಾವ್ ಹಾಗೂ ಸಾಹಿತ್ಯ ರಚನಕಾರರಾದ ಬೆಳ್ಳಾವೆ ನರಹರಿ ಶಾಸ್ತ್ರಿ ಅವರ ಮೊಮ್ಮಕ್ಕಳು ಕೂಡ ಈ ಸಂದರ್ಭದಲ್ಲಿ ಹಾಜರಿರುತ್ತಾರೆ. ಇದೇ ಸಂದರ್ಭದಲ್ಲಿ ಭಾರತದ ಮೊದಲ ʼಚಲನಚಿತ್ರ ʼರಾಜಾ ಹರಿಶ್ಚಂದ್ರʼ ನಿರ್ಮಿಸಿದ ದಾದಾ ಸಾಹೇಬ್ ಫಾಲ್ಕೆ (1913) ಆ ಸಂದರ್ಭದ ಚಿತ್ರವನ್ನು ʼಹರಿಶ್ಚಂದ್ರಚಿ ಫ್ಯಾಕ್ಟರಿʼ ಎಂಬ ಚಿತ್ರವನ್ನು ಚಿತ್ರವನ್ನು ನಿರ್ಮಿಸಲಾಯಿತು. ಈಗ ʻಸತಿ ಸುಲೋಚನʼ ವನ್ನು ಅದೇ ರೀತಿ ರೂಪಿಸುವ ಪ್ರಯತ್ನವೊಂದು ನಡೆಯುತ್ತಿದೆ ಎನ್ನಲಾಗುತ್ತಿದೆ. ಕನ್ನಡದ ಖ್ಯಾತ ನಿರ್ದೇಶಕರೊಬ್ಬರು ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ ಎಂಬ ಸುದ್ದಿ ದಟ್ಟವಾಗಿ ಹರಡಿದೆ. ಬಹುಶಃ ಈ ಬಗ್ಗೆ ಮಾರ್ಚಿ 3 ರಂದು ಪ್ರಕಟಣೆ ಹೊರಬಿದ್ದರೂ ಆಶ್ಚರ್ಯ ಪಡಬೇಕಿಲ್ಲ.