BIFFes | ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಬೆಂಗಳೂರು ಸಜ್ಜು
x
ರಾಜ್ ಕಪೂರ್‌

BIFFes | ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಬೆಂಗಳೂರು ಸಜ್ಜು

ಬಹು ನಿರೀಕ್ಷಿತ BIFFes ನ ಹದಿನಾರನೇ ಆವೃತ್ತಿಗೆ ಮಾರ್ಚ್‌ 1ರಂದು ಚಾಲನೆ ಸಿಗಲಿದೆ. ಈ ಚಿತ್ರೋತ್ಸವದಲ್ಲಿ 60 ದೇಶಗಳ 200ಕ್ಕೂ ಹೆಚ್ಚು ಚಿತ್ರಗಳ ಒಟ್ಟು 400 ಪ್ರದರ್ಶನವಿರುತ್ತದೆ. ಈ ಚಿತ್ರಗಳು ಓರಾಯನ್‌ ಮಾಲ್ ನ ಹನ್ನೊಂದು ತೆರೆಗಳೂ ಸೇರಿದಂತೆ ಒಟ್ಟು ಹದಿಮೂರು ತೆರೆಗಳಲ್ಲಿ ಪ್ರದರ್ಶನಗೊಳ್ಳಲಿದೆ.


ಸಿನಿಮಾ ಪ್ರಿಯರು ಮತ್ತು ಸಿನಿಮಾ ಅಧ್ಯಯನ ಮಾಡುವ ಸಮುದಾಯ ಬಹು ದಿನಗಳಿಂದ ನಿರೀಕ್ಷಿಸುತ್ತಿರುವ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (Bengaluru International Film Festival-BIFFes) ಆರಂಭಕ್ಕೆ ದಿನಗಣನೆ ಆರಂಭವಾಗಿದೆ. BIFFesಮಾರ್ಚ್‌ 1ರಿಂದ 8ರವರೆಗೆ ಒಂದು ವಾರಗಳ ಕಾಲ ನಡೆಯಲಿದೆ.

ಬೆಂಗಳೂರಿನಲ್ಲಿ ಜಗತ್ತು

ಇದೊಂದು ಜಾಗತಿಕ ಸಿನಿಮಾ ಹಬ್ಬ. ವಿಶ್ವದ ಸುಮಾರು 60ಕ್ಕೂ ಹೆಚ್ಚು ದೇಶಗಳಿಂದ, ದೇಶದ ಸಿನಿಮಾ ನಿರ್ಮಿಸುವ ಸಣ್ಣ, ಅತಿ ಸಣ್ಣ ಪ್ರದೇಶಗಳಿಂದ ಆಯ್ಕೆ ಮಾಡಿದ ಚಿತ್ರಗಳ 400ಕ್ಕೂ ಹೆಚ್ಚು ಪ್ರದರ್ಶನ ಒಂದು ವಾರ ಕಾಲ ಸಿನಿಪ್ರಿಯರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲಿದೆ. ಅಮೆರಿಕಾ, ಬ್ರಿಟನ್‌, ಜರ್ಮನಿ, ಫ್ರಾನ್ಸ್‌, ಕೊರಿಯಾ ಪೋಲೆಂಡ್‌, ಬ್ರೆಜಿಲ್‌, ಜಾರ್ಜಿಯಾ, ಬೆಲ್ಜಿಯಂ, ನೇದರ್ಲೆಂಡ್‌, ಫಿನ್ಲ್ಯಾಂಡ್‌, ಇರಾನ್‌, ಅರ್ಜೆಂಟಿನಾ, ಕೆನಡಾ, ಡೆನ್ಮಾರ್ಕ್‌, ಗ್ರೀಸ್‌, ರಷ್ಯಾ, ಫಿಲಿಪೀನ್ಸ್‌, ರುಮೇನಿಯಾ, ಜಪಾನ್‌, ಸ್ಪೈನ್‌, ಇಂಡೋನೀಸಿಯಾ, ಇಟಲಿ, ಮೊದಲಾದ ದೇಶಗಳ ಅತ್ಯುತ್ತಮ ಚಲನಚಿತ್ರಗಳು, ಸಮಕಾಲೀನ ವಿಶ್ವ ಸಿನಿಮಾ ವಿಭಾಗದ ಮೂಲಕ “ಬೆಂಗಳೂರಿನಲ್ಲಿ ಜಗತ್ತು” ಎನ್ನುವ ಶೀರ್ಷಿಕೆಯಡಿಯಲ್ಲಿ ಈ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ.

ಈ ಚಿತ್ರಗಳು ಬೆಂಗಳೂರಿನ ಓರಾಯನ್‌ ಮಾಲ್‌ ಸಿನಿಮಾ ಕಾಂಪ್ಲೆಕ್ಸ್‌ ನಲ್ಲಿರುವ 11 ತೆರೆಗಳೂ ಸೇರಿದಂತೆ, ಚಾಮರಾಜ ಪೇಟೆಯಲ್ಲಿರುವ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘ, ಬನಶಂಕರಿಯಲ್ಲಿರುವ ಸುಚಿತ್ರ ಸಿನಿಮಾ ಅಕಾಡೆಮಿಗಳಲ್ಲಿ ಪ್ರದರ್ಶನಗೊಳ್ಳಲಿದೆ. ಈ ಚಿತ್ರೋತ್ಸವದಲ್ಲಿ ಪ್ರತಿದಿನ ಸುಮಾರು 12000 ಚಿತ್ರ ಪ್ರೇಮಿಗಳ, ತಾವು ನೋಡುವ ಚಿತ್ರಗಳಲ್ಲಿ ಮಗ್ನರಾಗಲಿದ್ದಾರೆ. ಅಷ್ಟೆ ಅಲ್ಲ ಚಿತ್ರೋತ್ಸವದ ಸಂದರ್ಭದಲ್ಲಿ ನಡೆಯುವ ಕಲಿಕಾ ಶಿಬಿರಗಳಲ್ಲಿ ಸಿನಿಮಾ ನಿರ್ಮಾಣ, ತಾಂತ್ರಿಕ ಸಂಗತಿಗಳು ಇತ್ತೀಚಿನ Artificial Intelligence ನಂಥ ಸಂಗತಿಗಳ ಬಗ್ಗೆ ಸಿನಿಮಾ ತಜ್ಞರ ತಿಳುವಳಿಕೆಯನ್ನು ಹಂಚಲಿದೆ. ಇದಕ್ಕಾಗಿಯೇ Master Classes ವಿಭಾಗ ಸಜ್ಜಾಗಿದೆ. ಚಲನಚಿತ್ರ ನಿರ್ದೇಶಕ ರಾಜಕುಮಾರ್‌ ಪೆರಿಯಾಸ್ವಾಮಿ, ಮುಖೇಶ್‌ ಮೆಹ್ತಾ, ಥೈಲ್ಯಾಂಡ್‌ ನ ಸಿನಿಮಾ ನಿರ್ದೇಶಕ ರೇಮಾಂಡ್‌ ಪಠಾಣ್‌ ವಿರೂಂಗನ್‌ ಈ ಕಾರ್ಯಾಗಾರದಲ್ಲಿ ತಮ್ಮ ತಿಳಿವಳಿಕೆಯನ್ನು ಹಂಚಿಕೊಳ್ಳಲಿದ್ದಾರೆ.

ವಿವಿಧತೆಯೊಂದಿಗಿನ ವಿಶ್ವ ಶಾಂತಿಯ ಹೆಗ್ಗಳಿಕೆ

ದೇಶದಲ್ಲಿ International Federation of Film Produces Associations (FIAPF) ನಿಂದ ಮನ್ನಣೆ ಪಡೆದ ಕೆಲವೇ ಚಿತ್ರೋತ್ಸವಗಳಲ್ಲಿ BIFFesಕೂಡ ಒಂದು ಎಂಬುದು ಹೆಗ್ಗಳಿಕೆಯ ಸಂಗತಿ. ಮತ್ತೊಂದು ಸಂಗತಿ ಎಂದರೆ, ದೇಶದಲ್ಲಿ ಅತಿ ಹೆಚ್ಚು ಚಿತ್ರಗಳನ್ನು ನಿರ್ಮಾಣ ಮಾಡುತ್ತಿರುವ ರಾಜ್ಯಗಳ ಪೈಕಿ ಕರ್ನಾಟಕ ಒಂದಾಗಿದ್ದು, ಬೆಂಗಳೂರು ಈಗ ವಿಶ್ವ ಚಿತ್ರರಂಗದ ಭೂಪಟದಲ್ಲಿ ಮಹತ್ವದ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಹಾಗಾಗಿ ಕನ್ನಡದ ನೆಲ, ಜಲ, ಸಂಸ್ಕೃತಿ , ನುಡಿಯ ಹಿರಿಮೆಯನ್ನು ಎತ್ತಿಹಿಡಿಯುವ ಹಲವು ಚಿತ್ರಗಳು ಈ BIFFesನ ಆವೃತ್ತಿಯಲ್ಲಿ ಪ್ರದರ್ಶನಗೊಳ್ಳಲಿದೆ. ಹಾಗಾಗಿ ಈ ಆವೃತ್ತಿಯ ಘೋಷ ವಾಕ್ಯವೇ “Universal Peace in Diversity” (ಸರ್ವಜನಾಂಗದ ಶಾಂತಿಯ ತೋಟ )

ಪ್ರಮುಖ ಆಕರ್ಷಣೆ ಏನು?

Biffesನ 16ನೇ ಆವೃತ್ತಿ ಕೆಲವು ಕಾರಣಗಳಿಂದ ಸಿನಿಮಾ ಪ್ರಿಯರನ್ನು ಆಕರ್ಷಿಸಲಿದೆ. ಈ ಬಾರಿಯ ಚಿತ್ರೋತ್ಸವದಲ್ಲಿ ಒಟ್ಟು 14 ವಿಭಾಗಗಳಲ್ಲಿ ಇನ್ನೂರಕ್ಕೂ ಹೆಚ್ಚು ಚಿತ್ರಗಳು ಪ್ರದರ್ಶನಗೊಳ್ಳಲಿದೆ. ಸ್ಪರ್ಧಾತ್ಮಕ ವಿಭಾಗದಲ್ಲಿ ಆಯ್ಕೆಯಾಗಿರುವ ಏಷಿಯಾ, ಚಿತ್ರಭಾರತಿ (ಭಾರತೀಯ ಚಿತ್ರಗಳು) ಕನ್ನಡ ಚಿತ್ರಗಳು ಪ್ರಶಸ್ತಿಗಾಗಿ ಸ್ಪರ್ಧಿಸಲಿವೆ. ಈ ಮೂರು ವಿಭಾಗಗಳನ್ನು ಹೊರತು ಪಡಿಸಿದರೆ, ಸಮಕಾಲೀನ ವಿಶ್ವ ಸಿನಿಮಾ, ಜನಪ್ರಿಯ ಮನರಂಜನೆಯ ಕನ್ನಡ ಸಿನಿಮಾಗಳು, FIPRSC-ವಿಮರ್ಶಕರ ವಿಭಾಗದ ಚಿತ್ರಗಳು, ಚಿತ್ರರಂಗದ ಖ್ಯಾತರ ಬದುಕನ್ನು ಆಧರಿಸಿದ ಬಯೋಪಿಕ್‌ ಗಳು, ನಿರ್ದಿಷ್ಟ ದೇಶವೊಂದರ ಅತಿಮುಖ್ಯ ಚಿತ್ರಗಳು, ಮರೆಯಾಗುತ್ತಿರುವ ಭಾರತೀಯ ಭಾಷಾ ಚಿತ್ರಗಳು, ನಿರ್ದೇಶಕರ, ಕಲಾವಿದರ ತಂತ್ರಜ್ಞಾನಿಗಳ ಕುರಿತ ಪುನರಾವಲೋಕನ ಚಿತ್ರಗಳು, ಸಂಸ್ಕರಿಸಿ-ಸಂರಕ್ಷಿಸಿದ ಚಿತ್ರಗಳು, ಶತಮಾನ ಕಂಡ ಹಿರಿಯ ಚಿತ್ರ ಜೀವಿಗಳ ಚಿತ್ರಗಳು, ಅಗಲಿದ ಹಿರಿಯರಿಗೆ ಶ್ರದ್ಧಾಂಜಲಿ ಅರ್ಪಿಸುವಂಥ ಅವರ ಚಿತ್ರಗಳು, ಪ್ರದರ್ಶನಗೊಳ್ಳಲಿವೆ.

ರಾಜ್ ಕಪೂರ್‌, ರಿತ್ವಿಕ್‌ ಘಟಕ್‌ ಹಾಗೂ ಕೆ ಎಸ್‌ ಅಶ್ವತ್ಥ್‌ ಚಿತ್ರಗಳ ಪ್ರದರ್ಶನ

ಈ ವರ್ಷ ಭಾರತೀಯ ಚಿತ್ರರಂಗದ ಮೂವರ ದಿಗ್ಗಜರ ಶತಮಾನೋತ್ಸವ ದೇಶಾದ್ಯಂತ ನಡೆಯುತ್ತಿದೆ. ಭಾರತ ಚಿತ್ರರಂಗದ ಶೋಮನ್‌ ಎಂದೇ ಕರೆಸಿಕೊಂಡು, ಭಾರತದಲ್ಲಷ್ಟೇ ಅಲ್ಲದೇ ವಿದೇಶಗಳಲ್ಲಿಯೂ ಅದರಲ್ಲಿಯೂ ರಷ್ಯಾ ದೇಶದಲ್ಲಿ ಬಹುಖ್ಯಾತಿ ಗಳಿಸಿದ ಫಾಲ್ಕೆ ಪ್ರಶಸ್ತಿ ಪುರಸ್ಕೃತ ನಿರ್ದೇಶಕ, ನಿರ್ಮಾಪಕ ಕಲಾವಿರ ರಾಜ್‌ ಕಪೂರ್‌ ಅವರ ಶತಮಾನೋತ್ಸವದ ನೆನಪಿಗಾಗಿ ಅವರ ಕೆಲವು ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಇದರೊಂದಿಗೆ ಕನ್ನಡ ನೆಲದ ಆದರೆ, ಬಾಲಿವುಡ್‌ ಅನ್ನು ಆಳಿದ ಗುರುದತ್‌ ಅವರ ಚಿತ್ರಗಳ ಪ್ರದರ್ಶನವೂ ಇರುತ್ತದೆ. 91ವರ್ಷ ಪೂರೈಸಿರುವ ಕನ್ನಡ ಚಿತ್ರರಂಗದ ಅತಿಮುಖ್ಯ ಕಲಾವಿದರ ಪೈಕಿ ಒಬ್ಬರಾದ ಕೆ.ಎಸ್‌. ಅಶ್ವತ್ಥ್‌ ಅವರ ಶತಮಾನೋತ್ಸವದ ಅಂಗವಾಗಿ ಅವರ ಚಿತ್ರಗಳನ್ನು ಪ್ರದರ್ಶಿಸಲಾಗುವುದು. ಅತಿಮುಖ್ಯವಾಗಿ ಭಾರತೀಯ ಚಿತ್ರರಂಗದ ಅತ್ಯಂತ ಪ್ರಜ್ಞಾವಂತ ಚಿತ್ರ ನಿರ್ದೇಶಕ ಎಂದೇ ಖ್ಯಾತರಾದ ರಿತ್ವಿಕ್‌ ಘಟಕ್‌ ಅವರ ಶತಮಾನೋತ್ಸವದ ಸಂದರ್ಭದಲ್ಲಿ ಅವರ ಒಂದು ಕಲಾತ್ಮಕ ಕಲಾಕೃತಿಯಂಥ ಚಿತ್ರವನ್ನು ಪ್ರದರ್ಶಿಸಲಾಗುತ್ತದೆ.

ʻಗರಂ ಹವಾʼ ಮತ್ತು ʼಪಲ್ಲವಿʼ

ತಮ್ಮ ಕಲಾತ್ಮಕ ಚಿತ್ರಗಳ ಮೂಲಕ ಭಾರತೀಯ ಚಿತ್ರರಂಗದಲ್ಲಿ ಹೊಸ ಅಲೆಯೊಂದನ್ನು ಸೃಷ್ಟಿಸಿದ ಖ್ಯಾತಿಯ ಶ್ಯಾಮ್‌ ಬೆನಗಲ್‌ ಇತ್ತೀಚೆಗೆ ನಮ್ಮನ್ನಗಲಿದ್ದಾರೆ. ಮೂಲತಃ ಅವರು ಕನ್ನಡ ನೆಲದವರು. ಅವರ ಚಿತ್ರಗಳನ್ನು ಕೂಡ ಶ್ರದ್ಧಾಂಜಲಿ ವಿಭಾಗದಲ್ಲಿ ಪ್ರದರ್ಶಿಸಲಾಗುತ್ತದೆ. ಹಾಗೆಯೇ ಈ ವರ್ಷಕ್ಕೆ ಐವತ್ತು ವರ್ಷ ತುಂಬಲಿರುವ ಎಂ.ಎಸ್‌ ಸತ್ಯು ಅವರ ʼಗರಂ ಹವಾʼ ಹಾಗೂ ಕನ್ನಡದ ಖ್ಯಾತ ಲೇಖಕ, ಕವಿ, ಚಿತ್ರನಿರ್ದೇಶಕ, ನಟ ಹಾಗೂ ಪತ್ರಕರ್ತರಾದ ಪಿ. ಲಂಕೇಶ್‌ ಅವರ ʻಪಲ್ಲವಿʼ ಚಿತ್ರವನ್ನು ಪ್ರದರ್ಶಿಸಲಾಗುತ್ತದೆ.

ಚಿತ್ರೋತ್ಸವದ ಜಾಲತಾಣದಲ್ಲಿ ಪ್ರತಿನಿಧಿಗಳ ನೊಂದಣಿ ಕಾರ್ಯಕ್ರಮವನ್ನು ಇಂದಿನಿಂದ ಆರಂಭಿಸಲಾಗಿದೆ. ಆಸಕ್ತರು ಚಿತ್ರೋತ್ಸವ ಜಾಲತಾಣಕ್ಕೆ ಹೋಗಿ (biffe.org) ನೀತಿ ನಿಯಮಗಳನ್ನು ಅನುಸರಿಸಿ ನೊಂದಾವಣಿ ಶುಲ್ಕ ಪಾವತಿಸಿ, ನೊಂದಾಯಿಸಿಕೊಳ್ಳಬಹುದು. ಸಾರ್ವಜನಿಕರಿಗೆ ಪ್ರತಿನಿಧಿ ನೊಂದಾವಣಿ ಶುಲ್ಕ ರೂ. 800, ಚಿತ್ರೋದ್ಯಮದ ಸದಸ್ಯರು, ವಿದ್ಯಾರ್ಥಿಗಳು, ಚಿತ್ರ ಸಮಾಜದ ಸದಸ್ಯರಿಗೆ ಹಿರಿಯ ನಾಗರಿಕರಿಗೆ ರೂ. 400. onlineನಲ್ಲಿ ನೊಂದಾಯಿಸಿಕೊಂಡ ಪ್ರತಿನಿಧಿಗಳು ಫೆಬ್ರುವರಿ 18ರಿಂದ, ಕರ್ನಾಟಕ ಚಲನಚಿತ್ರ ಆಕಾಡೆಮಿ, ನಂದಿನಿ ಲೇಔಟ್‌ ಹಾಗೂ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಶಿವಾನಂದ ಸರ್ಕಲ್‌ ನಲ್ಲಿ ತಮ್ಮ ಪ್ರತಿನಿಧಿ ಕಾರ್ಡ್ ಗಳನ್ನು ಪಡೆದುಕೊಳ್ಳಬಹುದು ಎಂದು ವ್ಯವಸ್ಥಾಪಕ ಮಂಡಳಿ ತಿಳಿಸಿದೆ.

Read More
Next Story