'7 ಯುದ್ಧಗಳನ್ನು ನಿಲ್ಲಿಸಿದ್ದೇನೆ, ನೊಬೆಲ್ ಪ್ರಶಸ್ತಿ ನೀಡದಿದ್ದರೆ ಅಮೆರಿಕಕ್ಕೆ ಅವಮಾನ': ಡೊನಾಲ್ಡ್ ಟ್ರಂಪ್

ನೊಬೆಲ್​ ಯಾವುದೇ ಕೆಲಸ ಮಾಡದ' ವ್ಯಕ್ತಿಗೆ ಹೋಗುತ್ತದೆ. ಯುದ್ಧವನ್ನು ಪರಿಹರಿಸಲು ಡೊನಾಲ್ಡ್ ಟ್ರಂಪ್ ಅವರ ಮನಸ್ಸು ಹೇಗೆ ಕೆಲಸ ಮಾಡಿತು ಎಂದು ಪುಸ್ತಕ ಬರೆದ ಲೇಖಕನಿಗೆ ಈ ಪ್ರಶಸ್ತಿ ಸಿಗಬಹುದು ಎಂದು ಟ್ರಂಪ್​ ವ್ಯಂಗ್ಯವಾಡಿದ್ದಾರೆ.

Update: 2025-10-01 04:37 GMT

ಡೊನಾಲ್ಡ್‌ ಟ್ರಂಪ್‌

Click the Play button to listen to article

"ಏಳು ಜಾಗತಿಕ ಯುದ್ಧವನ್ನು ಕೊನೆಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ನಂತರವೂ ತಮಗೆ ನೊಬೆಲ್ ಶಾಂತಿ ಪ್ರಶಸ್ತಿ ಲಭಿಸದಿದ್ದರೆ ಅದು ತಮ್ಮ ದೇಶಕ್ಕೆ ಮಾಡಿದ ದೊಡ್ಡ ಅವಮಾನವಾಗಲಿದೆ," ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಂಡಿದ್ದಾರೆ.

ಕ್ವಾಂಟಿಕೋದಲ್ಲಿ ಅಮೆರಿಕದ ಉನ್ನತ ಸೇನಾ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ತಮ್ಮ 20 ಅಂಶಗಳ ಶಾಂತಿ ಯೋಜನೆಯು ಗಾಝಾದಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷವನ್ನು ಕೊನೆಗೊಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಯೋಜನೆ ಯಶಸ್ವಿಯಾದರೆ, ತಾವು ಬಗೆಹರಿಸಿದ ಜಾಗತಿಕ ಸಂಘರ್ಷಗಳ ಸಂಖ್ಯೆ ಎಂಟಕ್ಕೆ ಏರಲಿದೆ. "ಎಂಟು ತಿಂಗಳಲ್ಲಿ ಎಂಟು ಯುದ್ಧಗಳನ್ನು ನಿಲ್ಲಿಸುವುದು ಉತ್ತಮ ಸಾಧನೆ," ಎಂದು ಅವರು ಹೇಳಿದರು.

ತಮಗೆ ನೊಬೆಲ್ ಶಾಂತಿ ಪ್ರಶಸ್ತಿ ಸಿಗುವ ಬಗ್ಗೆ ತಮಗೇ ವಿಶ್ವಾಸವಿಲ್ಲ ಎಂದು ಟ್ರಂಪ್ ಇದೇ ವೇಳೆ ವ್ಯಂಗ್ಯವಾಡಿದ್ದಾರೆ. "ಈ ಪ್ರತಿಷ್ಠಿತ ಪ್ರಶಸ್ತಿಯು ಬಹುಶಃ 'ಯಾವುದೇ ಕೆಲಸ ಮಾಡದ' ವ್ಯಕ್ತಿಗೆ ಹೋಗುತ್ತದೆ. ಯುದ್ಧವನ್ನು ಪರಿಹರಿಸಲು ಡೊನಾಲ್ಡ್ ಟ್ರಂಪ್ ಅವರ ಮನಸ್ಸು ಹೇಗೆ ಕೆಲಸ ಮಾಡಿತು ಎಂದು ಪುಸ್ತಕ ಬರೆದ ಲೇಖಕನಿಗೆ ಈ ಪ್ರಶಸ್ತಿ ಸಿಗಬಹುದು," ಎಂದು ಅವರು ಹೇಳಿದರು.

"ನನಗೆ ವೈಯಕ್ತಿಕವಾಗಿ ಪ್ರಶಸ್ತಿ ಬೇಡ, ಆದರೆ ನನ್ನ ದೇಶಕ್ಕೆ ಅದು ಸಿಗಬೇಕು. ಏಕೆಂದರೆ ಇಂತಹ ಸಾಧನೆಯನ್ನು ಹಿಂದೆ ಯಾರೂ ಮಾಡಿಲ್ಲ. ಪ್ರಶಸ್ತಿ ನೀಡದಿದ್ದರೆ ಅದು ನಮ್ಮ ದೇಶಕ್ಕೆ ಮಾಡಿದ ದೊಡ್ಡ ಅವಮಾನ," ಎಂದು ಟ್ರಂಪ್ ಪುನರುಚ್ಚರಿಸಿದರು.

ಟ್ರಂಪ್ ಅವರ ಈ ಹೇಳಿಕೆಗಳು, ಅವರು ಇತ್ತೀಚೆಗೆ ಪ್ರಕಟಿಸಿದ 20 ಅಂಶಗಳ ಗಾಝಾ ಶಾಂತಿ ಯೋಜನೆಯ ಹಿನ್ನೆಲೆಯಲ್ಲಿ ಬಂದಿವೆ. ಈ ಯೋಜನೆಗೆ ಇಸ್ರೇಲ್ ಈಗಾಗಲೇ ಒಪ್ಪಿಗೆ ಸೂಚಿಸಿದೆ. ಹಮಾಸ್ ಸಂಘಟನೆಯು ಈ ಪ್ರಸ್ತಾಪವನ್ನು ಒಪ್ಪಿಕೊಳ್ಳಲು '3 ರಿಂದ 4 ದಿನಗಳ' ಗಡುವು ನೀಡಿದ್ದು, ಇಲ್ಲದಿದ್ದರೆ 'ಅತ್ಯಂತ ಕೆಟ್ಟ ಅಂತ್ಯ' ಎದುರಿಸಬೇಕಾಗುತ್ತದೆ ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

Tags:    

Similar News