ಇಂಡಿಗೋಗೆ ಕೇಂದ್ರದ ಚಾಟಿ: ಹಣ ವಾಪಸ್‌ಗೆ ಆದೇಶ, ದುಪ್ಪಟ್ಟು ಟಿಕೆಟ್ ದರಕ್ಕೂ ಕಡಿವಾಣ!

ವಿಮಾನ ಪ್ರಯಾಣಿಕರ ಸಹಾಯಕ್ಕೆ ಧಾವಿಸಿರುವ ನಾಗರಿಕ ವಿಮಾನಯಾನ ಸಚಿವಾಲಯ, ನಾಳೆ ರಾತ್ರಿ 8 ಗಂಟೆಯೊಳಗೆ ರದ್ದುಗೊಂಡಿರುವ ವಿಮಾನಗಳ ಟಿಕೆಟ್ ದರವನ್ನು ಪ್ರಯಾಣಿಕರಿಗೆ ರೀಫಂಡ್ ಮಾಡುವಂತೆ ಇಂಡಿಗೋಗೆ ಆದೇಶಿಸಿದೆ. ಅಲ್ಲದೇ ಇಂಡಿಗೋ ವಿಮಾನಗಳ ರದ್ದು ಬೆನ್ನಲ್ಲೇ ಕೆಲವು ವಿಮಾನಯಾನ ಸಂಸ್ಥೆಗಳು ವಿಮಾನ ಟಿಕೆಟ್ ದರವನ್ನು ಹೆಚ್ಚಿನ ದರಗಳನ್ನು ವಿಧಿಸುತ್ತಿರುವ ಬಗ್ಗೆ ಗಂಭೀರವಾಗಿ ಪರಿಗಣಿಸಿರುವ ನಾಗರಿಕ ವಿಮಾನಯಾನ ಸಚಿವಾಲಯ ವಿಮಾನ ಟಿಕೆಟ್‌ ದರಗಳ ಮಿತಿಯನ್ನು ನಿಗದಿಪಡಿಸಿದೆ.

Update: 2025-12-06 13:37 GMT
Click the Play button to listen to article

ಕಳೆದ ಕೆಲವು ದಿನಗಳಿಂದ ಇಂಡಿಗೋ ವಿಮಾನಯಾನ ಸಂಸ್ಥೆಯ ಸರಣಿ ವಿಮಾನಗಳು ರದ್ದಾಗುತ್ತಿದ್ದು, ಸಾವಿರಾರು ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲಿ ಪರದಾಡುವಂತಾಗಿದೆ. ಈ ಬಿಕ್ಕಟ್ಟಿನ ಸಮಯದಲ್ಲಿ ಪ್ರಯಾಣಿಕರ ನೆರವಿಗೆ ಧಾವಿಸಿರುವ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ಇಂಡಿಗೋ ಸಂಸ್ಥೆಗೆ ಕಠಿಣ ಆದೇಶವೊಂದನ್ನು ಹೊರಡಿಸಿದ್ದು, ರದ್ದುಗೊಂಡಿರುವ ವಿಮಾನಗಳ ಟಿಕೆಟ್ ಹಣವನ್ನು ನಾಳೆ ರಾತ್ರಿ 8 ಗಂಟೆಯೊಳಗೆ ಪ್ರಯಾಣಿಕರಿಗೆ ಕಡ್ಡಾಯವಾಗಿ ಮರುಪಾವತಿ (Refund) ಮಾಡುವಂತೆ ಸೂಚನೆ ನೀಡಿದೆ.

ಕೇವಲ ಟಿಕೆಟ್ ಹಣವಷ್ಟೇ ಅಲ್ಲದೆ, ಪ್ರಯಾಣಿಕರ ಲಗೇಜ್ ಅಥವಾ ಬ್ಯಾಗೇಜ್‌ಗಳನ್ನು ಮುಂದಿನ ಎರಡು ದಿನಗಳೊಳಗಾಗಿ ಸುರಕ್ಷಿತವಾಗಿ ಅವರಿಗೆ ತಲುಪಿಸಬೇಕು ಎಂದು ಸರ್ಕಾರ ತಾಕೀತು ಮಾಡಿದೆ. ಒಂದು ವೇಳೆ ಹಣ ಮರುಪಾವತಿ ಪ್ರಕ್ರಿಯೆಯಲ್ಲಿ ವಿಳಂಬವಾದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಅಲ್ಲದೆ, ರದ್ದಾದ ವಿಮಾನದ ಬದಲು ಬೇರೆ ದಿನಾಂಕಕ್ಕೆ ಪ್ರಯಾಣವನ್ನು ಮರುನಿಗದಿ ಮಾಡಲು ಬಯಸುವ ಪ್ರಯಾಣಿಕರಿಂದ ಯಾವುದೇ ರೀತಿಯ ಹೆಚ್ಚುವರಿ ಶುಲ್ಕವನ್ನು ವಿಧಿಸುವಂತಿಲ್ಲ ಎಂದು ಕೇಂದ್ರ ಸರ್ಕಾರ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಟಿಕೆಟ್ ದರಗಳ ಮೇಲೆ ಮೂಗುದಾರ

ಇಂಡಿಗೋ ಕಾರ್ಯಾಚರಣೆಯ ಅಡಚಣೆಯಿಂದಾಗಿ ಉಂಟಾಗಿರುವ ದೊಡ್ಡ ಪ್ರಮಾಣದ ವಿಮಾನ ರದ್ದತಿಯ ಲಾಭವನ್ನು ಪಡೆಯಲು ಕೆಲವು ವಿಮಾನಯಾನ ಸಂಸ್ಥೆಗಳು ಕೊನೆಯ ಕ್ಷಣದಲ್ಲಿ ದುಪ್ಪಟ್ಟು ದರ ವಿಧಿಸುತ್ತಿರುವುದನ್ನು ಸಚಿವಾಲಯ ಗಂಭೀರವಾಗಿ ಪರಿಗಣಿಸಿದೆ. ಪ್ರಯಾಣಿಕರ ಹಿತದೃಷ್ಟಿಯಿಂದ ಇದೀಗ ವಿಮಾನ ಟಿಕೆಟ್ ದರಗಳಿಗೆ ಮಿತಿ (Price Cap) ಹೇರಲಾಗಿದೆ. ಸರ್ಕಾರದ ಪರಿಷ್ಕೃತ ಆದೇಶದ ಪ್ರಕಾರ, 500 ಕಿ.ಮೀ ವರೆಗಿನ ವಿಮಾನ ಪ್ರಯಾಣಕ್ಕೆ 7,500 ರೂ. ಮತ್ತು 1,500 ಕಿ.ಮೀ ಗಿಂತ ಹೆಚ್ಚಿನ ದೂರದ ಪ್ರಯಾಣಕ್ಕೆ ಗರಿಷ್ಠ 18,000 ರೂ.ಗಿಂತ ಹೆಚ್ಚು ಶುಲ್ಕ ವಿಧಿಸುವಂತಿಲ್ಲ ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.

ದರ ಮಿತಿಯ ಷರತ್ತುಗಳು

ಈ ದರ ಮಿತಿಯು ಯುಡಿಎಫ್ (UDF), ಪಿಎಸ್‌ಎಫ್ (PSF) ಮತ್ತು ಇತರೆ ತೆರಿಗೆಗಳನ್ನು ಹೊರತುಪಡಿಸಿದ ಮೊತ್ತವಾಗಿದೆ. ಆದರೆ, ಬಿಸಿನೆಸ್ ಕ್ಲಾಸ್ ಅಥವಾ ಆರ್‌ಸಿಎಸ್-ಉಡಾನ್ ವಿಮಾನಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ. ಇಂಡಿಗೋ ವಿಮಾನಗಳ ಕಾರ್ಯಾಚರಣೆ ಸಹಜ ಸ್ಥಿತಿಗೆ ಮರಳುವವರೆಗೆ ಅಥವಾ ಸರ್ಕಾರದ ಮುಂದಿನ ಪರಿಶೀಲನೆಯವರೆಗೆ ಈ ದರ ಮಿತಿ ಜಾರಿಯಲ್ಲಿರುತ್ತದೆ. ಎಲ್ಲಾ ವಿಮಾನಯಾನ ಸಂಸ್ಥೆಗಳು ಈ ಆದೇಶವನ್ನು ಪಾಲಿಸಲೇಬೇಕೆಂದು ಸಚಿವಾಲಯ ಎಚ್ಚರಿಸಿದೆ. 

Tags:    

Similar News