ಇಂಡಿಗೋ ರದ್ದು ರಾದ್ಧಾಂತ; ಮತ್ತೆ 400 ಕ್ಕೂ ಹೆಚ್ಚು ವಿಮಾನಗಳು ಕ್ಯಾನ್ಸಲ್!
ಪೈಲಟ್‌ಗಳ ಕರ್ತವ್ಯ ಅವಧಿ ಮತ್ತು ಲ್ಯಾಂಡಿಂಗ್ ಮಿತಿಗೆ ಸಂಬಂಧಿಸಿದಂತೆ ಡಿಜಿಸಿಎ ಜಾರಿಗೊಳಿಸಿರುವ ಹೊಸ ನಿಯಮಕ್ಕೆ ಏರ್ಲೈನ್ಸ್ ಪೈಲಟ್ ಅಸೋಸಿಯೇಷನ್ ಆಫ್ ಇಂಡಿಯಾ (ALPA) ಭಾರೀ ವಿರೋಧ ವ್ಯಕ್ತಪಡಿಸಿದೆ.
ದೇಶದ ಅತಿ ದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ವಿಮಾನ ರದ್ದು ರಾದ್ಧಾಂತ ಶನಿವಾರ(ಡಿ.6) ಕೂಡ ಮುಂದುವರಿದಿದೆ. ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಾಲ್ಕು ವಿಮಾನ ನಿಲ್ದಾಣಗಳಲ್ಲಿ 400 ಕ್ಕೂ ಹೆಚ್ಚು ವಿಮಾನಗಳನ್ನು ಇಂಡಿಗೋ ರದ್ದುಗೊಳಿಸಿದೆ. ದೇಶಾದ್ಯಂತ ಪೈಲಟ್‌ಗಳ ವಾರದ ವಿಶ್ರಾಂತಿಗೆ ಸಂಬಂಧಿಸಿದಂತೆ ಹೊಸ ನಿಯಮದ ಅನುಷ್ಠಾನವನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ತಾತ್ಕಾಲಿಕವಾಗಿ ಹಿಂಪಡೆದಿರುವ ಬೆನ್ನಲ್ಲೇ ಈ ಘಟನೆ ವರದಿಯಾಗಿದೆ.
ಇದರಲ್ಲಿ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 124 ವಿಮಾನಗಳು (ಹೊರಡಬೇಕಾಗಿದ್ದ 63 ಹಾಗೂ ಆಗಮಿಸಬೇಕಾಗಿದ್ದ 61 ವಿಮಾನಗಳು) ಮುಂಬೈ ವಿಮಾನ ನಿಲ್ದಾಣದಲ್ಲಿ 109, ದೆಹಲಿ ವಿಮಾನ ನಿಲ್ದಾಣದಿಂದ 106 ಹಾಗೂ ಹೈದರಾಬಾದ್ ವಿಮಾನ ನಿಲ್ದಾಣದಿಂದ 66 ವಿಮಾನಗಳ ಹಾರಾಟ ರದ್ದುಗೊಳಿಸಲಾಗಿದೆ.
ಕ್ಷಮೆಯಾಚಿಸಿದ ಇಂಡಿಗೋ ಸಿಇಒ
ಇನ್ನು ಶುಕ್ರವಾರ(ಡಿ.5) ದೇಶದ ವಿವಿಧ ವಿಮಾನ ನಿಲ್ದಾಣಗಳಲ್ಲಿ 1000 ಕ್ಕೂ ಹೆಚ್ಚು ವಿಮಾನಗಳು ರದ್ದುಗೊಂಡಿದ್ದವು. ದೇಶಾದ್ಯಂತ ಇಷ್ಟು ದೊಡ್ಡ ಮಟ್ಟದಲ್ಲಿ ಸಮಸ್ಯೆಯಾಗುತ್ತಿದ್ದರೂ ಮೂರು ದಿನಗಳ ಕಾಲ ಸುಮ್ಮನಿದ್ದ ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್ ಶುಕ್ರವಾರ ವಿಡಿಯೊ ಸಂದೇಶವೊಂದನ್ನು ಹರಿಬಿಟ್ಟು ಕ್ಷಮೆಯಾಚಿಸಿದ್ದರು. ಅಲ್ಲದೇ ಶನಿವಾರ ರದ್ದುಗೊಳ್ಳಲಿರುವ ವಿಮಾನಗಳ ಸಂಖ್ಯೆ ಕಡಿಮೆಯಾಗುವ ನಿರೀಕ್ಷೆ ಇದೆ ಎಂದು ಭರವಸೆ ವ್ಯಕ್ತಪಡಿಸಿದ್ದರು.
ಹೊಸ ನಿಯಮಕ್ಕೆ ತಾತ್ಕಾಲಿಕ ಬ್ರೇಕ್ ಹಾಕಿದ DGCA
ಪೈಲಟ್‌ಗಳ ಕರ್ತವ್ಯ ಅವಧಿ ಮತ್ತು ಲ್ಯಾಂಡಿಂಗ್ ಮಿತಿಗೆ ಸಂಬಂಧಿಸಿದಂತೆ ಡಿಜಿಸಿಎ ಜಾರಿಗೊಳಿಸಿರುವ ಹೊಸ ನಿಯಮಕ್ಕೆ ಏರ್ಲೈನ್ಸ್ ಪೈಲಟ್ ಅಸೋಸಿಯೇಷನ್ ಆಫ್ ಇಂಡಿಯಾ (ALPA) ಭಾರೀ ವಿರೋಧ ವ್ಯಕ್ತಪಡಿಸಿದೆ. ಡಿಜಿಸಿಎ ಇಂಡಿಗೋಗೆ ನೀಡಿದ ಆಯ್ದ ಮತ್ತು ಅಸುರಕ್ಷಿತ ಪರಿಹಾರ ಕ್ರಮ ನಿಯಂತ್ರಕ ಸಮಾನತೆಯನ್ನು ನಾಶಪಡಿಸುವುದಲ್ಲದೆ, ಲಕ್ಷಾಂತರ ಪ್ರಯಾಣಿಕರನ್ನು ಹೆಚ್ಚಿನ ಅಪಾಯಕ್ಕೆ ಸಿಲುಕಿಸಿದೆ ಎಂದು ಇಂಡಿಗೋ ಹೇಳಿದೆ. ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ನಿಯಂತ್ರಕವು ನ್ಯಾಯಾಲಯದ ಆದೇಶವನ್ನು ಅಕ್ಷರಶಃ ಎತ್ತಿಹಿಡಿಯಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದು ಆಲ್ಪಾ ಇಂಡಿಯಾ ಹೇಳಿದೆ.
ಆಲ್ಪಾ ಇಂಡಿಯಾದ ಒತ್ತಡಕ್ಕೆ ಮಣಿದ ನಾಗರಿಕ ವಿಮಾನಯಾನ ಸಚಿವಾಲಯವು ಆಲ್ಪಾ ಮತ್ತು ಇತರ ಪೈಲಟ್ ಸಂಘಗಳೊಂದಿಗೆ ಸಭೆ ಕರೆದಿತ್ತು. ಸಭೆಯ ನಂತರ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಡಿಜಿಸಿಎ ಇಂಡಿಗೋಗೆ ಕೆಲವೊಂದು ವಿನಾಯಿತಿ ನೀಡಿದೆ. ತನ್ನ ನಿರ್ಧಾರವನ್ನು ಸದ್ಯ ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ ಎಂದು ಘೋಷಿಸಿದೆ.
ಏನಿದು ಡಿಜಿಸಿಎ ಹೊಸ ನಿಯಮ?
ಕೇಂದ್ರ ನಾಗರಿಕ ವಿಮಾನಯಾನ ಸಂಸ್ಥೆ 2024ರಲ್ಲಿ ಪೈಲಟ್‌ಗಳಿಗೆ ಹೊಸ ನಿಯಮವನ್ನು ಪರಿಚಯಿಸಿ, ಮಾರ್ಚ್‌ನೊಳಗೆ ಅದನ್ನು ಅನುಷ್ಠಾನಗೊಳಿಸುವ ಉದ್ದೇಶ ಹೊಂದಿತ್ತು. ಪೈಲಟ್‌ಗಳ ಕರ್ತವ್ಯ ಅವಧಿಯನ್ನು 12 ರಿಂದ6 ಗಂಟೆಯಿಂದ 12 ರಿಂದ 5ಗಂಟೆಗೆ ಮತ್ತು ರಾತ್ರಿ ಲ್ಯಾಂಡಿಂಗ್ ಮಿತಿಯನ್ನು ಕೂಡ 2ಕ್ಕೆ ಇಳಿಸಿ ಡಿಜಿಸಿಎ ಹೊಸ ನಿಯಮವನ್ನು ಜಾರಿಗೊಳಿಸಿತ್ತು.
ಡಿಜಿಸಿಎ ನಿರ್ಧಾರಕ್ಕೆ ವಿಮಾನಯಾನ ಸಂಸ್ಥೆಗಳ ವಿರೋಧ
ಅಂದೇ ಇಂಡಿಗೋ, ಏರ್ ಇಂಡಿಯಾ ಸೇರಿದಂತೆ ಬಹುತೇಕ ಎಲ್ಲಾ ವಿಮಾನಯಾನ ಸಂಸ್ಥೆಗಳು ಈ ಹೊಸ ನಿಯಮವನ್ನು ಬಲವಾಗಿ ವಿರೋಧಿಸಿತ್ತು. ವಿಮಾನಯಾನ ಸಂಸ್ಥೆಗೆ ಹೆಚ್ಚುವರಿ ಸಿಬ್ಬಂದಿಯ ಅವಶ್ಯಕತೆ ಇರುವುದರಿಂದ ಈ ಹೊಸ ನಿಯಮವನ್ನು ಜಾರಿಗೊಳಿಸಲು ಇನ್ನಷ್ಟು ಕಾಲಾವಕಾಶ ಬೇಕಾಗಿದೆ ಎಂದು ವಾದಿಸಿತ್ತು. ಇತ್ತೀಚಿನ ಎಫ್‌ಡಿಟಿಎಲ್ ಮಾನದಂಡಗಳು, ವಾರದ ವಿಶ್ರಾಂತಿ ಅವಧಿಯನ್ನು 48 ಗಂಟೆಗಳವರೆಗೆ ಹೆಚ್ಚಿಸುವುದು, ರಾತ್ರಿ ಸಮಯವನ್ನು ವಿಸ್ತರಿಸುತ್ತದೆ. ಅಲ್ಲದೇ ರಾತ್ರಿ ಅವಧಿಯಲ್ಲಿ ಲ್ಯಾಂಡಿಂಗ್ ಅವಕಾಶವನ್ನು 6ರಿಂದ 2ಕ್ಕೆ ಇಳಿಸುತ್ತದೆ. ಇದನ್ನು ಟಾಟಾ ಗ್ರೂಪ್ ಮಾಲೀಕತ್ವದ ಏರ್ ಇಂಡಿಯಾ ಕೂಡ ವಿರೋಧ ವ್ಯಕ್ತಪಡಿಸಿತ್ತು. ಆದಾಗ್ಯೂ ಮೊದಲ ಹಂತ ಹೊಸ ನಿಯಮಗಳು ಜುಲೈನಲ್ಲಿ ಜಾರಿಗೊಂಡಿತ್ತು. ರಾತ್ರಿ ಸಮಯ ಲ್ಯಾಂಡಿಂಗ್ ಅವಕಾಶವನ್ನು 2ಕ್ಕೆ ಇಳಿಸಿರುವ ಎರಡನೇ ಹಂತದ ನಿಯಮಗಳನ್ನು ನವೆಂಬರ್‌ನಲ್ಲಿ ಜಾರಿಗೊಳಿಸಲಾಗಿತ್ತು.