
ಸಾಂದರ್ಭಿಕ ಚಿತ್ರ
ಇಂಡಿಗೋ ಸಂಕಷ್ಟ: ಪುಣೆ-ಬೆಂಗಳೂರು ಸೇರಿ 6 ವಿಶೇಷ ರೈಲುಗಳ ಸಂಚಾರ
ಡಿಸೆಂಬರ್ 6ರಂದು ಪುಣೆ-ಎಸ್‌ಎಂವಿಟಿ ಬೆಂಗಳೂರು ನಡುವೆ ವಿಶೇಷ ರೈಲು ಸಂಚರಿಸಲಿದೆ ಎಂದು ಮಧ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸ್ವಪ್ನಿಲ್ ನೀಲ ಅವರು ತಿಳಿಸಿದ್ದಾರೆ.
ದೇಶಾದ್ಯಂತ ಇಂಡಿಗೋ ವಿಮಾನಯಾನ ಸಂಸ್ಥೆಯ ವಿಮಾನಗಳು ಸತತವಾಗಿ ರದ್ದಾಗುತ್ತಿರುವ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೆ ಮಹತ್ವದ ನಿರ್ಧಾರ ಕೈಗೊಂಡಿದೆ. ವಿಮಾನಗಳ ರದ್ದತಿಯಿಂದ ಉಂಟಾಗಿರುವ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಭಾಯಿಸಲು ಮತ್ತು ಪರ್ಯಾಯ ವ್ಯವಸ್ಥೆ ಕಲ್ಪಿಸಲು ಮಧ್ಯ ರೈಲ್ವೆ (ಸಿಆರ್) ಡಿಸೆಂಬರ್ 6 ಮತ್ತು 7 ರಂದು ಪ್ರಮುಖ ದೂರದ ಮಾರ್ಗಗಳಲ್ಲಿ ಆರು ವಿಶೇಷ ರೈಲುಗಳನ್ನು ಓಡಿಸಲು ಮುಂದಾಗಿದೆ.
ಮಧ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸ್ವಪ್ನಿಲ್ ನೀಲ ಅವರು ನೀಡಿರುವ ಮಾಹಿತಿಯ ಪ್ರಕಾರ, ಡಿಸೆಂಬರ್ 6ರಂದು ಪುಣೆ-ಎಸ್‌ಎಂವಿಟಿ ಬೆಂಗಳೂರು ನಡುವೆ ವಿಶೇಷ ರೈಲು ಸಂಚರಿಸಲಿದೆ. ಇದೇ ದಿನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (ಸಿಎಸ್‌ಎಂಟಿ)-ನವದೆಹಲಿ, ಲೋಕಮಾನ್ಯ ತಿಲಕ್ ಟರ್ಮಿನಸ್ (ಎಲ್‌ಟಿಟಿ)-ಲಕ್ನೋ ಮತ್ತು ನಾಗ್ಪುರ-ಸಿಎಸ್‌ಎಂಟಿ ಮಾರ್ಗಗಳಲ್ಲಿಯೂ ವಿಶೇಷ ರೈಲುಗಳು ಕಾರ್ಯಾಚರಣೆ ನಡೆಸಲಿವೆ. ಮುಂದುವರಿದು, ಡಿಸೆಂಬರ್ 7ರಂದು ಪುಣೆ-ನವದೆಹಲಿ ಮತ್ತು ಎಲ್‌ಟಿಟಿ-ಮಡ್ಗಾಂವ್ ಮಾರ್ಗಗಳಲ್ಲಿಯೂ ಹೆಚ್ಚುವರಿ ಸೇವೆ ಲಭ್ಯವಿರಲಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಹೆಚ್ಚುವರಿ ಬೋಗಿಗಳ ಅಳವಡಿಕೆ
ಕೇವಲ ವಿಶೇಷ ರೈಲುಗಳಲ್ಲದೆ, ರಾಷ್ಟ್ರಮಟ್ಟದಲ್ಲಿ ಅಸ್ತಿತ್ವದಲ್ಲಿರುವ ರೈಲುಗಳ ಸಾಮರ್ಥ್ಯವನ್ನೂ ಹೆಚ್ಚಿಸಲು ರೈಲ್ವೆ ಇಲಾಖೆ ಕ್ರಮ ಕೈಗೊಂಡಿದೆ. ಪ್ರಯಾಣದ ಹಠಾತ್ ಬೇಡಿಕೆಯನ್ನು ಪೂರೈಸಲು ಒಟ್ಟು 37 ರೈಲುಗಳಿಗೆ 116 ಹೆಚ್ಚುವರಿ ಬೋಗಿಗಳನ್ನು ಜೋಡಿಸಲಾಗಿದ್ದು, ಇವು ಸುಮಾರು 114 ಟ್ರಿಪ್‌ಗಳಲ್ಲಿ ಕಾರ್ಯಾಚರಣೆ ನಡೆಸಲಿವೆ. ಪಶ್ಚಿಮ ರೈಲ್ವೆ ಕೂಡ ಪ್ರಯಾಣಿಕರ ದಟ್ಟಣೆ ತಗ್ಗಿಸಲು ಮುಂಬೈ ಸೆಂಟ್ರಲ್-ನವದೆಹಲಿ ಎಕ್ಸ್‌ಪ್ರೆಸ್ ಮತ್ತು ಲಕ್ನೋ-ನವದೆಹಲಿ ಎಕ್ಸ್‌ಪ್ರೆಸ್ ರೈಲುಗಳಿಗೆ ಡಿಸೆಂಬರ್ 10 ರವರೆಗೆ ಹೆಚ್ಚುವರಿ ಎಸಿ ಬೋಗಿಗಳನ್ನು ಅಳವಡಿಸಲು ನಿರ್ಧರಿಸಿದೆ.
ವಿಮಾನ ರದ್ದತಿ ಬಿಸಿ ಮತ್ತು ಗಗನಕ್ಕೇರಿದ ದರ
ದೇಶದ ದೇಶೀಯ ವಿಮಾನಯಾನದಲ್ಲಿ ಸಿಂಹಪಾಲು ಹೊಂದಿರುವ ಇಂಡಿಗೋ ಸಂಸ್ಥೆಯು ಶುಕ್ರವಾರ ಒಂದೇ ದಿನ 1,000ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿದೆ. ಇದರಿಂದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ಲಭ್ಯವಿರುವ ವಿಮಾನಗಳ ಟಿಕೆಟ್ ದರಗಳು ಗಗನಕ್ಕೇರಿವೆ. ದುಬಾರಿ ದರ ಮತ್ತು ಆಸನಗಳ ಕೊರತೆಯಿಂದ ಕಂಗಾಲಾಗಿದ್ದ ಪ್ರಯಾಣಿಕರಿಗೆ ರೈಲ್ವೆ ಇಲಾಖೆಯು ತ್ವರಿತವಾಗಿ ಸ್ಪಂದಿಸಿರುವುದು ತುಸು ನಿರಾಳವುಂಟುಮಾಡಿದೆ.

