Bangalore University: ಅಭಿವೃದ್ಧಿ ಹೆಸರಿನಲ್ಲಿ ಜೀವವೈವಿಧ್ಯತೆ ತಾಣಕ್ಕೆ ಧಕ್ಕೆ, ಪರಿಸರವಾದಿಗಳಿಂದ ವಿರೋಧ
ಹಸಿರುಟ್ಟ ಕಾಡು, ಹಕ್ಕಿಗಳ ಚಿಲಿ-ಪಿಲಿಯಿಂದ ಸಹ್ಯಾದ್ರಿಯ ಪರಿಸರ ನೆನಪಿಸುವ ಸ್ಥಳ, ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣ. ಬೆಂಗಳೂರಿನ ಶ್ವಾಸತಾಣ ಎಂದೇ ಕರೆಯಲಾಗುವ ಈ ಕ್ಯಾಂಪಸ್‌ನಲ್ಲಿ ಅಭಿವೃದ್ದಿ ಹೆಸರಿನಲ್ಲಿ ಮರಗಳ ಹನನ ಆತಂಕ ಮೂಡಿಸಿದೆ. ಬೆಂಗಳೂರಿನಲ್ಲಿ ನೈಜ ಕಾಡು ಉಳಿದುಕೊಂಡಿರುವುದೇ ಬೆಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ. ಜ್ಞಾನಭಾರತಿ ಕ್ಯಾಂಪಸ್ ಒಟ್ಟು 1,112 ಎಕರೆ ಪ್ರದೇಶದಲ್ಲಿ ವಿಸ್ತರಿಸಿಕೊಂಡಿದ್ದು, ಅದನ್ನು ನೈಸರ್ಗಿಕ ಭೂಪ್ರದೇಶ ಮತ್ತು ಜೀವವೈವಿಧ್ಯತೆಯ ಸಂರಕ್ಷಣೆಯ ತಾಣವಾಗಿದೆ. ಶೈಕ್ಷಣಿಕ ಚಟುವಟಿಕೆಗಳ ಗಿಡಮರಗಳಿಂದ ಆವೃತವಾದ ಹಸಿರು ಕ್ಯಾಂಪಸ್ ಆಗಿದೆ. ಕೇಂದ್ರ ಸರ್ಕಾರದ ಪಿಎಂ-ಉಷಾ ಯೋಜನೆಯಡಿ ಒದಗಿಸಿರುವ 100 ಕೋಟಿ ರೂ.ಅನುದಾನದಲ್ಲಿ 60 ಕೋಟಿ ರೂ. ವೆಚ್ಚದ ಕಟ್ಟಡಗಳ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಅಂಬೇಡ್ಕರ್ ಥೀಮ್ ಪಾರ್ಕ್, ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿನ (ಯುವಿಸಿಇ) ಹೊಸ ಕ್ಯಾಂಪಸ್ ಸೇರಿ ವಿವಿಧ ನಿರ್ಮಾಣ ಯೋಜನೆಗಳಿಂದ ಜ್ಞಾನಭಾರತಿ ಕ್ಯಾಂಪಸ್‌ನ ಅರಣ್ಯ ಪ್ರದೇಶ ನಾಶವಾಗುತ್ತಿರುವುದರ ಜತೆಗೆ, ಅಲ್ಲಿನ ಜೀವವೈವಿಧ್ಯತೆ ಅಪಾಯಕ್ಕೆ ಸಿಲುಕುತ್ತಿದೆ ಎಂಬುದು ಪರಿಸರವಾದಿಗಳ ವಾದ.


