Chhattisgarh Passenger Train Collides with Goods Train, 5 Dead and 15 Injured
x
ನಿಂತಿರುವ ಗೂಡ್ಸ್‌ ರೈಲಿಗೆ ಡಿಕ್ಕಿಯಾಗಿರುವ ಪ್ಯಾಸೆಂಜರ್ ರೈಲು

ಛತ್ತೀಸ್‌ಗಢದಲ್ಲಿ ಗೂಡ್ಸ್ ರೈಲಿಗೆ ಪ್ಯಾಸೆಂಜರ್ ರೈಲು ಡಿಕ್ಕಿ; 5 ಸಾವು, 15 ಮಂದಿಗೆ ಗಾಯ

ಘಟನೆಯ ಮಾಹಿತಿ ಲಭ್ಯವಾದ ತಕ್ಷಣವೇ, ರೈಲ್ವೆ ಇಲಾಖೆ, ಸ್ಥಳೀಯ ಆಡಳಿತ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ತಂಡಗಳು ಸ್ಥಳಕ್ಕೆ ದೌಡಾಯಿಸಿ, ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿವೆ.


Click the Play button to hear this message in audio format

ಛತ್ತೀಸ್‌ಗಢದ ಬಿಲಾಸ್ಪುರ್ ಬಳಿ ಮಂಗಳವಾರ ಸಂಜೆ ಸಂಭವಿಸಿದ ಭೀಕರ ರೈಲು ದುರಂತದಲ್ಲಿ, ನಿಂತಿದ್ದ ಗೂಡ್ಸ್ ರೈಲಿಗೆ ಪ್ಯಾಸೆಂಜರ್ ರೈಲು ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ, ಕನಿಷ್ಠ ಐವರು ಸಾವನ್ನಪ್ಪಿದ್ದು, 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಸಂಜೆ ಸುಮಾರು 4 ಗಂಟೆಗೆ, ಕೋರ್ಬಾ ಜಿಲ್ಲೆಯ ಗೆವ್ರಾದಿಂದ ಬಿಲಾಸ್ಪುರ್‌ಗೆ ಹೊರಟಿದ್ದ MEMU (ಮೈನ್‌ಲೈನ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್) ಪ್ಯಾಸೆಂಜರ್ ರೈಲು, ಗಟೋರಾ ಮತ್ತು ಬಿಲಾಸ್ಪುರ್ ರೈಲ್ವೆ ನಿಲ್ದಾಣಗಳ ನಡುವೆ, ನಿಂತಿದ್ದ ಗೂಡ್ಸ್ ರೈಲಿಗೆ ಹಿಂದಿನಿಂದ ರಭಸವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ, ಪ್ಯಾಸೆಂಜರ್ ರೈಲಿನ ಇಂಜಿನ್ ಮತ್ತು ಮೊದಲ ಕೋಚ್ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು, ಗೂಡ್ಸ್ ರೈಲಿನ ವ್ಯಾಗನ್ ಮೇಲೆ ಹತ್ತಿದೆ.

ರಕ್ಷಣಾ ಕಾರ್ಯಾಚರಣೆ

ಘಟನೆಯ ಮಾಹಿತಿ ಲಭ್ಯವಾದ ತಕ್ಷಣವೇ, ರೈಲ್ವೆ ಇಲಾಖೆ, ಸ್ಥಳೀಯ ಆಡಳಿತ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ತಂಡಗಳು ಸ್ಥಳಕ್ಕೆ ದೌಡಾಯಿಸಿ, ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿವೆ. ಬಿಲಾಸ್ಪುರ್ ವಲಯ ಐಜಿ ಸಂಜೀವ್ ಶುಕ್ಲಾ ಅವರ ಪ್ರಕಾರ, "ಇಲ್ಲಿಯವರೆಗೆ ಐವರು ಮೃತಪಟ್ಟಿದ್ದು, 15 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಇನ್ನೂ ಇಬ್ಬರು ಬೋಗಿಯೊಳಗೆ ಸಿಲುಕಿದ್ದು, ಅವರನ್ನು ರಕ್ಷಿಸಲು ಗ್ಯಾಸ್ ಕಟ್ಟರ್‌ಗಳನ್ನು ಬಳಸಿ, ಬೋಗಿಯನ್ನು ಕತ್ತರಿಸಲಾಗುತ್ತಿದೆ. ಹೀಗಾಗಿ, ಸಾವಿನ ಸಂಖ್ಯೆ ಆರಕ್ಕೆ ಏರುವ ಸಾಧ್ಯತೆ ಇದೆ," ಎಂದು ಅವರು ತಿಳಿಸಿದ್ದಾರೆ.

ಗಾಯಾಳುಗಳನ್ನು ಬಿಲಾಸ್ಪುರ್‌ನ ಅಪೋಲೋ ಆಸ್ಪತ್ರೆ ಮತ್ತು ಛತ್ತೀಸ್‌ಗಢ ವೈದ್ಯಕೀಯ ವಿಜ್ಞಾನ ಸಂಸ್ಥೆ (CIMS) ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಸ್ಥಳದಲ್ಲಿ, ಮಗುವೊಂದನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ವರದಿಯಾಗಿದೆ. ನುಜ್ಜುಗುಜ್ಜಾದ ಬೋಗಿಯೊಳಗೆ ಸಿಲುಕಿರುವ ಗಾಯಾಳುಗಳಿಗೆ, ಸ್ಥಳದಲ್ಲೇ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

ಪರಿಹಾರ ಘೋಷಣೆ ಮತ್ತು ತನಿಖೆಗೆ ಆದೇಶ

ಈ ದುರಂತದ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿರುವ ಛತ್ತೀಸ್‌ಗಢದ ಉಪಮುಖ್ಯಮಂತ್ರಿ ಅರುಣ್ ಸಾವ್, ರಕ್ಷಣಾ ಕಾರ್ಯಾಚರಣೆಯು ಯುದ್ಧೋಪಾದಿಯಲ್ಲಿ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ರೈಲ್ವೆ ಇಲಾಖೆಯು ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ, ಗಂಭೀರವಾಗಿ ಗಾಯಗೊಂಡವರಿಗೆ 5 ಲಕ್ಷ ರೂಪಾಯಿ ಮತ್ತು ಸಣ್ಣಪುಟ್ಟ ಗಾಯಗಳಾದವರಿಗೆ 1 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.

ಅಪಘಾತಕ್ಕೆ ನಿಖರವಾದ ಕಾರಣವನ್ನು ಪತ್ತೆಹಚ್ಚಲು, ರೈಲ್ವೆ ಸುರಕ್ಷತಾ ಆಯುಕ್ತರ (Commissioner of Railway Safety) ಮಟ್ಟದಲ್ಲಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ. ಪ್ರಯಾಣಿಕರು ಮತ್ತು ಅವರ ಕುಟುಂಬದವರ ಅನುಕೂಲಕ್ಕಾಗಿ, ರೈಲ್ವೆ ಇಲಾಖೆಯು ಸಹಾಯವಾಣಿ ಸಂಖ್ಯೆಗಳನ್ನು ಸಹ ಬಿಡುಗಡೆ ಮಾಡಿದೆ.

Read More
Next Story