
ದಟ್ಟ ಮಂಜಿನಿಂದ ಆವರಿಸಿದ ಬೆಂಗಳೂರು; 81 ವಿಮಾನಗಳ ಹಾರಾಟ ವ್ಯತ್ಯಯ
ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಟ್ಟ ಮಂಜಿನಿಂದಾಗಿ 81 ವಿಮಾನಗಳ ಹಾರಾಟದಲ್ಲಿ ವಿಳಂಬವಾಗಿದೆ. ಒಟ್ಟು ವಿಳಂಬವಾದ ವಿಮಾನಗಳಲ್ಲಿ 33 ವಿಮಾನಗಳು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ನಿಗದಿಪಡಿಸಿದ 15 ನಿಮಿಷಗಳ ಮಿತಿ ದಾಟಿವೆ.
ಮುಂಜಾನೆ ದಟ್ಟ ಮಂಜು ಕವಿದ ಪರಿಣಾಮ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ಒಟ್ಟು 81 ವಿಮಾನಗಳ ಹಾರಾಟ ವಿಳಂಬವಾಗಿದೆ. ಬೆಳಿಗ್ಗೆ 4.44 ರಿಂದ 8 ಗಂಟೆಯ ನಡುವೆ ಗೋಚರತೆ ಕಡಿಮೆಯಾದ ಕಾರಣದಿಂದ ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದೆ ಎಂದು ತಿಳಿದುಬಂದಿದೆ.
ಒಟ್ಟು 81 ವಿಮಾನಗಳ ಹಾರಾಟದಲ್ಲಿ ಗರಿಷ್ಠ 69 ನಿಮಿಷಗಳಷ್ಟು ವಿಳಂಬವಾಗಿದೆ. 33 ವಿಮಾನಗಳು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ನಿಗದಿಪಡಿಸಿದ 15 ನಿಮಿಷಗಳ ಮಿತಿಯನ್ನು ದಾಟಿವೆ.
ಅದೇ ಅವಧಿಯಲ್ಲಿ ಎರಡು ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಗಿದೆ. ಬೆಳಿಗ್ಗೆ 7.21 ಕ್ಕೆ ಮಂಗಳೂರಿನಿಂದ ಬೆಂಗಳೂರಿಗೆ ಬರಬೇಕಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ (IX 2923) ಚೆನ್ನೈಗೆ ತಿರುಗಿಸಲ್ಪಟ್ಟರೆ, 7.47 ಕ್ಕೆ ದೆಹಲಿಯಿಂದ ಬೆಂಗಳೂರಿಗೆ ಬಂದ ಏರ್ ಇಂಡಿಯಾ ವಿಮಾನವನ್ನು (AI 2653) ಕೊಚ್ಚಿನ್‌ಗೆ ಕಳುಹಿಸಲಾಯಿತು.
ಪ್ರಸ್ತುತ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆಗಳು ಸಹಜ ಸ್ಥಿತಿಗೆ ಮರಳಿದ್ದರೂ ಮುಂಜಾನೆ ಮಂಜಿನ ವಿಳಂಬದಿಂದಾಗಿ ಪ್ರಯಾಣಿಕರು ಪರದಾಡುವಂತಾಯಿತು. ಬೆಂಗಳೂರಿನಲ್ಲಿ ದಿನವಿಡೀ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಶ್ರೀಲಂಕಾ ಬಳಿ ಇರುವ ಬಂಗಾಳಕೊಲ್ಲಿಯಲ್ಲಿ ಪರಿಚಲನೆಯು ಪ್ರಾದೇಶಿಕ ಹವಾಮಾನದ ಮೇಲೆ ಪರಿಣಾಮ ಬೀರಬಹುದಾದರೂ ಮುಂದಿನ ಏಳು ದಿನಗಳವರೆಗೆ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆ ಕಡಿಮೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಗುರುವಾರ ನಗರದಾದ್ಯಂತ ಸಾಮಾನ್ಯವಾಗಿ ಮೋಡ ಕವಿದ ಆಕಾಶ ಇರಲಿದ್ದು, ಆಯ್ದ ಪ್ರದೇಶಗಳಲ್ಲಿ ಬೆಳಗಿನ ಜಾವ ಮಂಜು ಕಂಡುಬಂದಿತ್ತು.

